ಐಶ್ವರ್ಯ ರೈ
ಐಶ್ವರ್ಯ ರೈ
ನಮ್ ಐಶು ಅಂದರೆ ಸುಮ್ನೆ ಅಲ್ಲ. ಮಂಗಳೂರಿನ ತುಳು ಮಾತೃಭಾಷೆಯ ಕುಟುಂಬದಲ್ಲಿ 1973ರ ನವೆಂಬರ್ 1ರಂದು ಜನಿಸಿದ ಈಕೆ ಏರಿದ ಎತ್ತರ ಸಾಮಾನ್ಯದ್ದಲ್ಲ.
ಓದುವ ದಿನಗಳಲ್ಲಿ ಕೂಡ ಬುದ್ಧಿವಂತೆಯಾಗಿದ್ದ ಐಶ್ವರ್ಯ ಒಂಬತ್ತನೇ ತರಗತಿಯಲ್ಲಿ ಇರುವಾಗಲೇ ಮಾಡೆಲಿಂಗ್ ಲೋಕಕ್ಕೂ ಪರಿಚಿತಳಾದವಳು. ಡಾಕ್ಟರ್, ಆರ್ಕಿಟೆಕ್ಟ್ ಲೋಕಕ್ಕೆ ಹೋಗುವ ಆಶಯವನ್ನು ಹೊಂದಿದ್ದ ಈಕೆಯನ್ನು, ಮಾಡೆಲಿಂಗ್ ವಿಶ್ವ ಬೇರೆಯ ಪ್ರಸಿದ್ಧಿಯಲ್ಲಿ, ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪೆಪ್ಸಿ ಜಾಹೀರಾತಿನಲ್ಲಿ ಅಮೀರ್ ಖಾನ್ ಮುಂದೆ 'ನಾನು ಸಂಜನಾ' ಎಂದು ಬಂದ ಈಕೆಯ ಮೊದಲ ಪ್ರವೇಶವೇ, ಇದು 'ಸಾಮಾನ್ಯ ಪ್ರವೇಶವಲ್ಲ' ಎಂದು ಸೂಚಿಸುವ ಮೋಡಿ ಹೊಂದಿತ್ತು. ಆ ವೇಳೆಗಾಗಲೇ ಆಕೆ ಶಾಸ್ತ್ರೀಯ ನೃತ್ಯದಲ್ಲೂ ಗಣನೀಯ ಸಾಧನೆ ಮಾಡಿದ್ದಳು.
1994ರಲ್ಲಿ ವಿಶ್ವಸುಂದರಿ ಪ್ರಶಸ್ತಿ ಗೆದ್ದ ಐಶ್ವರ್ಯ ರೈ ಮುಂದೆ ಭಾರತೀಯ ಭಾಷಾ ಚಿತ್ರಲೋಕ ಮಾತ್ರವಲ್ಲದೆ, ವಿಶ್ವದೆಲ್ಲೆಡಯಿಂದ ನಟನೆ, ರಾಯಭಾರಿತ್ವಗಳ ಮನ್ನಣೆಗೆ ಪಾತ್ರರಾದರು.
ಐಶ್ವರ್ಯ ರೈ ಅವರು ಮೊದಲು ನಟಿಸಿದ್ದು 1997 ವರ್ಷದಲ್ಲಿ ಮಣಿರತ್ನಂ ನಿರ್ದೇಶಿತ ತಮಿಳು ಚಿತ್ರ 'ಇರುವರ್'. ಅದೇ ವರ್ಷ 'ಔರ್ ಪ್ಯಾರ್ ಹೋ ಗಯ' ಹಿಂದೀ ಚಲನಚಿತ್ರದಲ್ಲೂ ನಟಿಸಿದರು. 1998 ವರ್ಷದ 'ಜೀನ್ಸ್' ಅವರ ಮೊದಲ ಯಶಸ್ಸು.1999 ವರ್ಷದ 'ಹಮ್ ದಿಲ್ ದೆ ಚುಕೆ ಸನಮ್', 2002 ವರ್ಷದ 'ದೇವದಾಸ್' ಚಿತ್ರದ ಅಭಿನಯಗಳು ಅವರಿಗೆ ಪ್ರತಿಷ್ಟಿತ ಫಿಲಂಫೇರ್ ಪ್ರಶಸ್ತಿ ತಂದವು. 2000ದ ವರ್ಷದಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಕಂಡುಕೊಂಡೇನ್ ಕಂಡುಕೊಂಡೇನ್' ಚಿತ್ರದ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ರವೀಂದ್ರನಾಥ ಠಾಕೂರರ ಕಾದಂಬರಿ ಆಧಾರಿತ 'ಚೋಕೆರ್ ಬಾಲಿ', ಮಾನಸಿಕ ಒತ್ತಡಕ್ಕೆ ಸಿಲುಕಿದ ವ್ಯಕ್ತಿಯಾಗಿ ಅಭಿನಯಿಸಿದ 'ರೈನ್ ಕೋಟ್', ಬ್ರಿಟಿಷ್ ನಿರ್ಮಿತ 'ಪ್ರವೋಕ್ಡ್', ದಾದಿಯಾಗಿ ಅಭಿನಯಿಸಿದ 'ಗುಝಾರಿಷ್' ಇವರ ಅಭಿನಯ ಸಾಮರ್ಥ್ಯಕ್ಕೆ ಮೆಚ್ಚುಗೆ ಸಂದ ಹಲವು ಗಮನಾರ್ಹ ಚಿತ್ರಗಳು. 'ಮೊಹಬ್ಬತೆಯ್ನ್', 'ದೂಮ್ 2’, ‘ಗುರು', 'ಜೋಧಾ ಅಕ್ಬರ್', 'ಎಂಧೀರನ್', 'ಎ ದಿಲ್ ಹೈ ಮುಷ್ಕಿಲ್' ಮುಂತಾದವು ಇವರ ಕೆಲವು ಯಶಸ್ವೀ ಚಿತ್ರಗಳು. ವಿಶ್ವದ ಅನೇಕ ಪ್ರತಿಷ್ಟಿತ ಹೆಸರಿನ ವಸ್ತುಗಳಿಗೆ ಇವರು ಜಾಹೀರಾತುಗಳಲ್ಲಿ ಸದಾ ಬೇಡಿಕೆ ಹೊಂದಿದ್ದವರು.
2003 ವರ್ಷದಲ್ಲಿ ಐಶ್ವರ್ಯಾ ರೈ ಅವರು ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಜ್ಯೂರಿಗೆ ನೇಮಕಗೊಂಡ ಪ್ರಥಮ ಭಾರತೀಯರೆನಿಸಿದರು. ಭಾರತ ಸರ್ಕಾರದ ಪದ್ಮಶ್ರೀ, ಫ್ರಾನ್ಸ್ ದೇಶದ ಉನ್ನತ ಗೌರವ ಮುಂತಾದ ಹಿರಿಮೆಗಳಿಗೂ ಇವರು ಪಾತ್ರರಾಗಿದ್ದಾರೆ.
ಅಭಿಷೇಕ್ ಬಚ್ಚನ್ ಅವರನ್ನು ವರಿಸಿ ತಾಯಿಯಾಗಿರುವ ಈಕೆ ಈಗಲೂ ವಿಶ್ವದ ಸುಂದರ ಮಹಿಳೆಯಾಗಿ, ವೃತ್ತಿಪರತೆಯಲ್ಲಿನ ಉತ್ತಮತೆಗಾಗಿ ಹೆಸರಾಗಿರುವುದು ಇವರ ಮಹತ್ವದ ಸಾಧನೆಯಾಗಿದೆ.
On the birth day of Aishwarya Rai
ಕಾಮೆಂಟ್‌ಗಳು