ರಾಮನ್ ಸತ್ತ ಸುದ್ದಿ
ರಾಮನ್ ಸತ್ತ ಸುದ್ದಿ
ನವೆಂಬರ್ 21 (1970) ಮಹಾನ್ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರು ಈ ಲೋಕವನ್ನಗಲಿದ ದಿನ. ಈ ಕ್ಷಣ ನಮ್ಮ ಕೆ. ಎಸ್. ನಿಸಾರ್ ಅಹಮದ್ ಅವರ ‘ರಾಮನ್ ಸತ್ತ ಸುದ್ಧಿ ಎಂಬ ಮನೋಜ್ಞ ಕವನದ ನೆನಪಾಯ್ತು.
ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.
ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?
ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...
ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ...
ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.
ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.
ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...
ಸ್ವಗತ:. ನಿಸಾರ್ ಅಹಮದ್ ಅವರು ಹೋದಾಗಲೂ ನೆನಪಾಯ್ತು.
A poem I love the most on the death anniversary of Nobel Laureate great Physicist Sir C V Raman
ಕಾಮೆಂಟ್‌ಗಳು