ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಶಾ ಜಗದೀಶ್


 ಆಶಾ ಜಗದೀಶ್ 


ಆಶಾ ಜಗದೀಶ್ ಕನ್ನಡದ ಬಹುಮುಖಿ ಪ್ರತಿಭಾನ್ವಿತ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. 


ನವೆಂಬರ್ 21 ಆಶಾ ಅವರ ಜನ್ಮದಿನ. 

ಸೊರಬದಲ್ಲಿ ವಿದ್ಯಾಭ್ಯಾಸ ನಡೆಸಿದ ಆಶಾ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 


ಆಶಾ ಜಗದೀಶ್ ಅವರ ಬಹುಮುಖಿ ಆಸಕ್ತಿಗಳಲ್ಲಿ ಓದು, ಬರಹ, ಚಿತ್ರಕಲೆ, ಗಾಯನ, ಎಲ್ಲ ಬಗೆಯ ಸಂಗೀತ  ಕೇಳುವುದು, ಕರಕುಶಲ ವಸ್ತುಗಳ ತಯಾರಿಕೆ ಮುಂತಾದವು ಸೇರಿವೆ. 

ಇವರಿಗೆ ಹಿಂದುಸ್ಥಾನಿ ಸಂಗೀತ ಜೂನಿಯರ್ ಅಭ್ಯಾಸ ಆಗಿದ್ದು, ಪ್ರಸಕ್ತ ವಿದುಷಿ ಜಯಶ್ರೀ ಗಿರಿಧರ್ ಅವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.  ಹಲವಾರು ವೇದಿಕೆಗಳಲ್ಲಿ ಗಾಯನ ಮಾಡಿದ್ದಾರೆ.  ನಿರೂಪಣೆ ಆಶಾ ಅವರ ಮತ್ತೊಂದು ಆಪ್ತ ಹವ್ಯಾಸವಾಗಿದ್ದು ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ


ಆಶಾ ಜಗದೀಶ್ ಅವರ ಕತೆ, ಕವಿತೆ, ಪ್ರಬಂಧ ಮತ್ತು ಅಂಕಣಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿವೆ. 


'ಮೌನ ತಂಬೂರಿ’ ಎಂಬ ಕವನ ಸಂಕಲನ ಆಶಾ ಜಗದೀಶ್ ಅವರ ಪ್ರಥಮ ಪ್ರಕಟಿತ ಕೃತಿ. ಇವರ ಇತರ ಕೃತಿಗಳಲ್ಲಿ 'ಮಳೆ ಮತ್ತು ಬಿಳಿ ಬಟ್ಟೆ' ಕಥಾ ಸಂಕಲನ ಮತ್ತು 'ನಾದಾನುಸಂಧಾನ' ಅಂಕಣ ಬರಹಗಳ ಸಂಕಲನ, ನಡು ಮಧ್ಯಾಹ್ನದ ಕಣ್ಣು ಕಾವ್ಯ ಸಂಕಲನ, ಮಲೆನಾಡಿನ ಹುಡುಗಿ ಮಕ್ಕಳ ಕಥಾ ಸಂಕಲನ ಸೇರಿವೆ.


ಆಶಾ ಜಗದೀಶ್ ಅವರಿಗೆ ಕರ್ನಾಟಕ ಲೇಖಕಿಯರ ಸಂಘ ನೀಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶಿವಮೊಗ್ಗದ ಕರ್ನಾಟಕ ಸಂಘ ಕೊಡಮಾಡುವ ಹಾ.ಮಾ.ನಾಯಕ ಪ್ರಶಸ್ತಿ,  ಕಥಾ ಸಂಕಲನದ ಹಸ್ತಪ್ರತಿಗೆ ಮುಂಬೈನ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, 

ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯ ತೃತೀಯ ಬಹುಮಾನ, ಜೀವನ್ ಪ್ರಕಾಶನದ ಕವನ  ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆಯಾಗಿ ಆಯ್ಕೆ, ಸೃಜನಶೀಲರು ಕಥಾಸ್ಪರ್ಧೆ, ವಿಜಯ ಕರ್ನಾಟಕ ಕಥಾಸ್ಪರ್ಧೆ-2022, 2025 ರಲ್ಲಿ ಮೆಚ್ಚುಗೆ ಗಳಿಸಿದ ಕತೆ ಆಯ್ಕೆ, ಗದುಗಿನ ತೋಂಟದ ಸಿದ್ಧಲಿಂಗಶ್ರೀ ಕಾವ್ಯ ಪ್ರಶಸ್ತಿ, ಮಂಡ್ಯದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಲೇಖಕರ ಚೊಚ್ಚಲ ಪುಸ್ತಕಕ್ಕೆ ಕೊಡಮಾಡುವ ಸಹಾಯಧಾನಕ್ಕೆ ಆಯ್ಕೆ-2014 ಮುಂತಾದ ಅನೇಕ  ಗೌರವಗಳು ಸಂದಿವೆ.


ಆಶಾ ಅವರು ವಿಜಯ ಕರ್ನಾಟಕ ನುಡಿಹಬ್ಬ, ಮೇ ಸಾಹಿತ್ಯ ಮೇಳ, ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನಗಳು, ದಾವಣಗೆರೆ ಲೀಟರೇಚರ್ ಫೆಸ್ಟ್ ಸೇರಿದಂತೆ ಹಲವಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನ ವಾಚನ ಮಾಡಿದ್ದಾರೆ.


ಆಶಾ ಜಗದೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Happy birthday Asha Jagadish🌷🌷🌷















ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ