ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಚ್. ರಿಸ್ಲೆ


 ಎಚ್. ಎಚ್. ರಿಸ್ಲೆ


ಹರ್ಬಟ್ ಹೋಪ್ ರಿಸ್ಲೆ  ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಧಾನಗಳಲ್ಲಿ ಪ್ರಮುಖ ಸ್ಥಾನ ಪಡೆದವರು. ರಿಸ್ಲೆ ಬ್ರಿಟಿಷ್ ಪುರಾತತ್ತ್ವಜ್ಞ, ಮಾನವ ಶಾಸ್ತ್ರಜ್ಞ ಅಧಿಕಾರಿಯಾಗಿದ್ದರು. 

ಹರ್ಬಟ್ ಹೋಪ್ ರಿಸ್ಲೆ  1851ರ ಜನವರಿ 4ರಂದು ಜನಿಸಿದರು. ತಂದೆ ಜಾನ್ ಹೊಲ್ ಪೊರ್ಡ್ ರಿಸ್ಲೆ. ಇವರು ಮೂಲತಃ ವಿನ್‍ಚಸ್ಟರ್‍ನಿಂದ ಬಂದವರು. ರಿಸ್ಲೆ 1873ರಲ್ಲಿ ಬಿ.ಎ. ಪದವಿಯನ್ನು ಪಡೆದು ಭಾರತದ ಇಂಡಿಯನ್ ಸಿವಿಲ್ ಸರ್ವಿಸ್‍ನ ಸೇವೆಯ ಮೇರೆಗೆ ಭಾರತಕ್ಕೆ ಬಂದರು (1873).  ಇವರ ಸೇವೆ ಮಿಡ್ನಾಪುರದಲ್ಲಿ ಪ್ರಾರಂಭವಾಯಿತು. ಆಗ ಅಲ್ಲಿನ ವಿವಿಧ ಸಂಸ್ಕೃತಿ ಮತ್ತು ವೈವಿಧ್ಯಮಯ ಜನಸಮೂಹ ಕಂಡು, ಅವರಬಗ್ಗೆ ಆಸಕ್ತಿ ಮೂಡಿ ಅಧ್ಯಯನವನ್ನು ಆರಂಭಿಸಿ, ಓರಾನ್ ಆದಿವಾಸಿಗಳ ಬಗ್ಗೆ ಪ್ರಬಂಧವನ್ನು ಬರೆದರು.

ಹಂಟರ್ ಎಂಬಾತ ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣ (1869) ವನ್ನೂ ಇಂಪೀರಿಯಲ್ ಗೆಜಿಟಿಯ ರನ್ನೂ (1881) ಪ್ರಕಟಿಸಿದರು. ರಿಸ್ಲೆಯ ಒಲವು ಮಾನವಶಾಸ್ತ್ರ, ಸಮಾಜ ಶಾಸ್ತ್ರದ ಕಡೆ ಹೆಚ್ಚು ಇದ್ದುದರಿಂದ ಇವರನ್ನು ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿಸಿ ಕೊಳ್ಳಲಾಯಿತು(1875). ಇವರು ಗುಡ್ಡಗಾಡು ಜಿಲ್ಲೆಗಳಾದ ಹಜಾರಿಬಾಗ್ ಮತ್ತು ಲೂಹೋಡಗದ ಗೆಜಿಟಿಯರನ್ನು ಹೊರತಂದರು. ಇವರ ಕಾರ್ಯ ದಕ್ಷತೆಯನ್ನು ಅರಿತ ಪಶ್ಚಿಮ ಬಂಗಾಲ ಸರ್ಕಾರ 1879ರಲ್ಲಿ ಇವರನ್ನು ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಿತು. ಅನಂತರ ಇವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಛೋಟಾ ನಾಗಪುರಕ್ಕೆ ವಿಸ್ತರಿಸಿದರು(1880). ಜರ್ಮನ್ ಮಹಿಳೆಯೊಬ್ಬಳನ್ನು ಮದುವೆಯಾದರು. ಇವರ ಕಾರ್ಯ ದಕ್ಷತೆಯನ್ನು ಮೆಚ್ಚಿದ ಬಂಗಾಲದ ಲೆಫ್ಟಿನೆಂಟ್ ಗೌರ್ನರ್ ರಿವರ್ಸ್ ತಾಮ್‍ಸನ್ ಇವರನ್ನು ಬುಡಕಟ್ಟು ಸಮೂಹದ ಬಗ್ಗೆ ಅಧ್ಯಯನ ಮಾಡಲು ಆಯ್ಕೆ ಮಾಡಿದರು (1885). ಜೇಮ್ಸ್ ಎಂಬವರು ತಾವು ಪಶ್ಚಿಮ ಬಂಗಾಲದ ಜನರ ಬಗ್ಗೆ ಕೈಗೊಂಡ ಅಧ್ಯಯನದ ಅಪೂರ್ಣ ಮಾಹಿತಿಗಳನ್ನು ರಿಸ್ಲೆಗೆ ನೀಡಿದರು. ಅದನ್ನು ಬಳಸಿಕೊಂಡ ರಿಸ್ಲೆ ಅಪಾರ ಪರಿಶ್ರಮದಿಂದಾಗಿ ದಿ ಡಿಸ್ಕ್ರಿಪ್ಟ್ ಎತ್ನಾಲಜಿ ಆಫ್ ಬೆಂಗಾಲ್ (1872) ಮತ್ತು ಗೆಜಿಟಿಯರ್ ಆಫ್ ಸಿಕ್ಕಿಂ (1894) ಎಂಬ ಗ್ರಂಥಗಳನ್ನು ಪ್ರಕಟಿಸಿದರು.

ಸಂಸ್ಕೃತಿ ಅಧ್ಯಯನದಲ್ಲಿ ಮಾನವಶಾಸ್ತ್ರದ ಮಹತ್ತ್ವನ್ನು ಅರಿತ ರಿಸ್ಲೆ ಭಾರತದ ಸಿವಿಲ್ ಸರ್ವಿಸ್‍ನಲ್ಲಿ ಮಾನವಶಾಸ್ತ್ರವನ್ನು ಬೋಧಿಸಬೇಕೆಂದು ಪ್ರತಿಪಾದಿಸಿದರು. ಇದನ್ನು ಆರ್.ಸಿ. ಟೆಂಪಲ್ ಅನುಮೋದಿಸಿದರು (1913). ಇದಕ್ಕೆ ಬ್ರಿಟಿಷ್ ಮಾನವಶಾಸ್ತ್ರಜ್ಞರೂ ಸಹಮತ ವ್ಯಕ್ತಪಡಿಸಿದರು. ತದನಂತರ ಮಾನವಶಾಸ್ತ್ರವನ್ನು ಶಾಲೆ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲು ಪ್ರಾರಂಭಿಸಲಾಯಿತು. ಅನಂತರ ರಿಸ್ಲೆ ಜನಗಣತಿಯ ಕಮೀಷನರಾಗಿ ನೇಮಕಗೊಂಡರು (1901 ಮತ್ತು 1911).
1901 ಮತ್ತು 1911ರ ಜನಗಣತಿಯ ವರದಿಗಳನ್ನು ಇವರು ಪೂರ್ಣ ಗೊಳಿಸಿದರು. ದಿ ಪೀಪಲ್ ಆಫ್ ಇಂಡಿಯ ಎಂಬ ಪುಸ್ತಕವನ್ನು ಪ್ರಕಟಿಸಿದರು(1908). ಲಾರ್ಡ್ ಕರ್ಜನ್‍ ಆಳಿಕೆಯಲ್ಲಿ ಇವರನ್ನು ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಯಿತು (1909). ಇವರು ಎತ್ನೊಲಾಜಿಕಲ್ ಸರ್ವೆಯಲ್ಲಿ ನಿರ್ದೇಶಕರಾಗಿ, ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್‍ ಅಧ್ಯಕ್ಷರಾಗಿ, ಇಂಡಿಯನ್ ಮ್ಯೂಸಿಯಂನ ಟ್ರಸ್ಟಿಯಾಗಿ, ರಾಣಿ ವಿಕ್ಟೋರಿಯ ಮೆಮೊರಿಯಲ್ ಕಮಿಟಿ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರಯ. ಭಾರತೀಯ ಸಿವಿಲ್ ಸರ್ವಿಸ್‍ನ ಸೇವೆಯ ತರುವಾಯ ಇಂಗ್ಲೆಂಡ್‍ನಲ್ಲಿ ಭಾರತದ ಕಚೇರಿಗೆ ಕಾರ್ಯದರ್ಶಿಯಾಗಿ ನೇಮಕವಾದರು(1910). 

ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಧಾನಗಳಲ್ಲಿ ಪ್ರಮುಖ ಸ್ಥಾನಗಳಿಸಿದ್ದ ರಿಸ್ಲೆ 1911ರ ಸೆಪ್ಟೆಂಬರ್ 30ರಂದು ವಿಂಬಲ್ಡನ್‍ನಲ್ಲಿ ನಿಧನರಾದರು. 

On the birth anniversary of H. H. Ridley who conducted extensive studies on the tribes and castes in India

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ