ಎಚ್. ಎಸ್. ಪಾರ್ವತಿ
ಎಚ್. ಎಸ್. ಪಾರ್ವತಿ
ಎಚ್. ಎಸ್. ಪಾರ್ವತಿ ಅವರು ಆಕಾಶವಾಣಿ ಕಲಾವಿದರಾಗಿ, ವೈವಿಧ್ಯಪೂರ್ಣ ಬರಹಗಾರರಾಗಿ, ಸಾಮಾಜಿಕ ಕಳಕಳಿಯ ಚಿಂತಕರಾಗಿ, ಕರ್ನಾಟಕ ಲೇಖಕಿಯರ ಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದವರಾಗಿ ಮತ್ತು ಅದ್ಭುತ ಸಂಘಟಕರಾಗಿ ಪ್ರಸಿದ್ಧರಾಗಿದ್ದವರು.
ಎಚ್. ಎಸ್. ಪಾರ್ವತಿ 1934ರ ಫೆಬ್ರವರಿ 3ರಂದು ಜನಿಸಿದರು. ತಂದೆ ಎಚ್. ಶ್ರೀನಿವಾಸರಾವ್. ತಾಯಿ ಮಹಾಲಕ್ಷ್ಮಮ್ಮ. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಓದಿದ ಪಾರ್ವತಿ ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಎಂ. ಎ. ಪದವಿ ಪಡೆದರಲ್ಲದೆ, ಉನ್ನತ ಹಿಂದಿ ಪ್ರಾವಿಣ್ಯತಾ ಪರೀಕ್ಷೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ 'ಜಾಣ' ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಅಣ್ಣ ಎಚ್.ಎಸ್. ಸೂರ್ಯನಾರಾಯಣ (‘ಸೂರಿ’) ಅವರು ಪ್ರಜಾವಾಣಿಯಲ್ಲಿ ‘ಕ್ರೀಡಾಂತರಂಗ’ ಅಂಕಣದಿಂದ ಪ್ರಸಿದ್ಧರಾಗಿದ್ದರಲ್ಲದೆ ಆಕಾಶವಾಣಿಯಲ್ಲಿ ಕ್ರೀಡೆಯ ವೀಕ್ಷಕ ವಿವರಣೆ ನೀಡುವುದರಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಪಾರ್ವತಿ ಅವರು ಎಮ್.ಎಸ್. ಶ್ರೀಹರಿ ಅವರನ್ನು ವಿವಾಹವಾದರು. ಪ್ರಗತಿಶೀಲ ಮನೋಭಾವದವರಾದ ಪಾರ್ವತಿ ಅವರದ್ದು ಅಂದಿನ ಕಾಲದಲ್ಲೇ ಪ್ರೇಮ ವಿವಾಹ.
ಪಾರ್ವತಿ ಅವರು 1958ರಲ್ಲಿ ಆಕಾಶವಾಣಿ ಸೇರಿ ಕಾರ್ಯಕ್ರಮ ನಿರ್ವಾಹಕರಾಗಿ ಮೈಸೂರು ಹಾಗೂ ಬೆಂಗಳೂರು ಕೇಂದ್ರಗಳಲ್ಲಿ 32 ವರ್ಷ ಕಾರ್ಯನಿರ್ವಹಿಸಿ, 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.
ಬೆಳೆಯುವ ದಿನಗಳಲ್ಲೇ ಪಾರ್ವತಿಯವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿತ್ತು. ಇವರ ಮನೆಯ ಆಸುಪಾಸಿನಲ್ಲೇ ಇದ್ದ ಖ್ಯಾತ ಸಾಹಿತಿ ನಿರಂಜನ ಅವರು ಇವರಿಗಿದ್ದ ಬರವಣಿಗೆಯ ಶಕ್ತಿಯನ್ನು ಮೆಚ್ಚಿ 'ಪರಾಜಯ' ಎಂಬ ಹಿಂದಿ ಕಾದಂಬರಿಯ ಅನುವಾದ ಮಾಡಲು ಪ್ರೇರಿಸಿದರು. ಹಲವಾರು ಪತ್ರಿಕೆಗಳಲ್ಲಿ ಪಾರ್ವತಿ ಅವರ ಸಣ್ಣ ಕಥೆಗಳು ಮತ್ತು ಕಿರುಲೇಖನಗಳು ಪ್ರಕಟಣೆಗೊಂಡವು. ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲಿಗರಲ್ಲಿ ಎಚ್. ಎಸ್. ಪಾರ್ವತಿಯವರೂ ಒಬ್ಬರು. ಇವರ ಲೇಖನ ಮತ್ತು ಕಥೆಗಳಲ್ಲಿ ಇದರ ಮಾರ್ದನಿಯಿದೆ.
ಬರಹಗಾರ್ತಿಯಾಗಿ ಎಚ್. ಎಸ್. ಪಾರ್ವತಿ ಅವರು 64ಕ್ಕೂ ವೈವಿಧ್ಯಪೂರ್ಣ ಕೃತಿಗಳನ್ನು ರಚಿಸಿದ್ದರು. ಆಕಾಶವಾಣಿಯಲ್ಲಿ ಮೂಡಿಬಂದ ಅವರ ನೂರಾರು ನಾಟಕಗಳು ಪುಸ್ತಕ ರೂಪಕ್ಕಿಳಿದಿದ್ದರೆ ನೂರು ಪುಸ್ತಕಗಳನ್ನು ದಾಟುತ್ತಿತ್ತು.
ನೇಸರು ನೆಳಲು, ಜೀವನ ಜಾಲ, ಜಬಾಲಾ, ಗೂಡಿನಿಂದ ಗಗನಕ್ಕೆ, ಇದು ಬರಿ ಬೆಳಗಲ್ಲ, ಹಾವು ಏಣಿ ಆಟ, ಒಂದು ಸಂವತ್ಸರ ಚಕ್ರ, ಮಡಿಲು, ಯುಗಪುರುಷ, ನಂದ ನಂದನ ಮುಂತಾದವು ಪಾರ್ವತಿ ಅವರ ಕಾದಂಬರಿಗಳು.
ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿ ಮೋಡ, ನೆನಪು ಸಾಯಲಿಲ್ಲ, ಸುಳಿ, ಮಹಾಭಾರತದ ಉಪಕಥೆಗಳು ಮುಂತಾದವು ಪಾರ್ವತಿ ಅವರ ಕಥಾ ಸಂಕಲನಗಳು.
ಚಿಂತನ ಮಂಥನ, ಸಾಹಿತ್ಯ-ಮಹಿಳಾ ದೃಷ್ಟಿ, ಸಾಹಿತ್ಯ ಲಹರಿ, ಓದಿನಾ ಒಳಗು, ಕಿರಣ ಮುಂತಾದವು ಪಾರ್ವತಿ ಅವರ ಪ್ರಬಂಧ ಸಂಕಲನಗಳು.
ಪರಾಜಯ, ದುರ್ಗೇಶ ನಂದಿನಿ, ತ್ಯಾಗಪತ್ರ ಮತ್ತು ಉದಯದೆಡೆಗೆ, ಬಿಳಿರಕ್ತ, ಮುಚ್ಚಿದ ಬಾಗಿಲು, ಮಾಸಿದ ಸೆರಗು, ದರ್ಬಾರಿ ರಾಗ, ಬಂಟೀ, ರಣ ಹದ್ದುಗಳು, ಮಂದಹಾಸ, ಫಣೇಶ್ವರನಾಥ ನೇಣಿ, ಗಂಗೂತಾಯಿ, ಪಂಜಾಬಿ ಲೋಕಕಥೆಗಳು, ನನಗೆ ಚಂದ್ರ ಬೇಕು ಮಂತಾದವು ಪಾರ್ವತಿ ಅವರು ಅನುವಾದಿಸಿದ ಕೃತಿಗಳು.
ಪಾರ್ವತಿ ಅವರು ಅಮೃತಾ ಪ್ರೀತಂ, ಮೀರಾಬಾಯಿ, ಪ್ರೇಮಚಂದ್, ಶಾರದಾಮಣಿ ದೇವಿ, ಹನುಮಾನ್ ಪ್ರಸಾದ್ ಪೋದ್ದಾರ್ ಮುಂತಾದ ವ್ಯಕ್ತಿ ಚಿತ್ರಣಗಳನ್ನೂ ಪ್ರಕಟಿಸಿದ್ದರು.
ಕನಸು-ನನಸು, ಭಾರತಿ ತಿರುಮಲೆ ರಾಜಮ್ಮ -ಅಭಿನಂದನಾ ಗ್ರಂಥ, ಸುನಂದಾಭಿನಂದನ-ಅಭಿನಂದನಾ ಗ್ರಂಥ, ಜಿ.ನಾರಾಯಣ-ವಿಚಾರ, ಕಬೀರ್ ಮತ್ತು ಸರ್ವಜ್ಞನ ವಚನಗಳು, ಸುರಗಿ, ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಇಪ್ಪತ್ತನೆ ಶತಮಾನದಲ್ಲಿ ಕರ್ನಾಟಕ ಮಹಿಳೆಯರ ಸಾಧನೆ ಮುಂತಾದವು ಎಚ್. ಎಸ್. ಪಾರ್ವತಿ ಅವರು ಸಂಪಾದಿಸಿದ ಕೃತಿಗಳು. 'ಎಚ್. ಎಸ್. ಪಾರ್ವತಿ ಅವರಕಥನ ಸಾಹಿತ್ಯ' ಎಂಬ ಮಹಾಪ್ರಬಂಧಕ್ಕೆ ಎಸ್. ದಿವ್ಯಾ ಅವರು ಮೈಸೂರು ವಿಶ್ವವಿದ್ಯಾಲಯದ ಪಿಎಚ್.ಡಿ' ಗಳಿಸಿದ್ದಾರೆ.
ಎಚ್. ಎಸ್. ಪಾರ್ವತಿ ಅವರು ಕನ್ನಡದ ಅನೇಕ ಸಣ್ಣ ಕಥೆಗಳನ್ನು ಬಾನುಲಿ ರೂಪಕವಾಗಿಸಿ ಪ್ರಸಾರ ಮಾಡಿದ್ದರು. ಅನೇಕ ನಾಟಕಗಳನ್ನೂ ರಚಿಸಿದ್ದರಲ್ಲದೆ , ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದ್ದ ಇವರು ಘಟಶ್ರಾದ್ಧ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಶ್ರೀನಿವಾಸ ಪ್ರಭು ಮತ್ತು ಇತರರ ನಿರ್ದೇಶನದಲ್ಲಿ ದೂರದರ್ಶನದ ನಾಟಕಗಳಲ್ಲೂ ನಟಿಸಿದ್ದರು.
ಎಚ್. ಎಸ್. ಪಾರ್ವತಿ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕರಲ್ಲಿ ಒಬ್ಬರು. ಸಂಘ ಸ್ಥಾಪನೆ ಆದಾಗ ಮೊ ಎರಡು ವರ್ಷ ಕಾರ್ಯದರ್ಶಿಯಾಗಿಯೂ ಮತ್ತೆರಡು ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಿ ಅನೇಕ ನಿಷ್ಠಾವಂತ ಕಾರ್ಯಕರ್ತೆಯರನ್ನು ರೂಪಿಸಿ ಅನೇಕ ಮಹತ್ವದ ಕಾರ್ಯಕ್ರಮಗಳ ರೂವಾರಿಯಾದರು. ಅನೇಕ ಬರಹಗಾರ್ತಿಯರನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಿದರು.
ಎಚ್.ಎಸ್.ಪಾರ್ವತಿ ಅವರಿಗೆ ಅನುಪಮಾ ಪ್ರಶಸ್ತಿ, ಲಿಪಿಪ್ರಾಜ್ಞೆ ಪ್ರಶಸ್ತಿ, ಕೆ.ಎಸ್.ಭಾರತಿ ರಾಜಾರಾಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಷಿಪ್ ಗೌರವ, ಕರ್ನಾಟಕ ಅನುವಾದ ಅಕಾಡೆಮಿ ಪ್ರಶಸ್ತಿ, ಉತ್ತರ ಪ್ರದೇಶದ ರಾಷ್ಟ್ರೀಯ ಸಮ್ಮಾನ್ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಪಾರ್ವತಿ ಅವರ ಇಚ್ಛೆಯ ಮೇರೆಗೆ ಅವರ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಲ್ಲಿ 2016ರಿಂದ ವಿಚಾರ ಸಾಹಿತ್ಯ,ವಿಮರ್ಶೆಗೆ ಲೇಖಕಿಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಜನಾನುರಾಗಿ ಸಹೃದಯರಾಗಿದ್ದ ಎಚ್. ಎಸ್. ಪಾರ್ವತಿ ಅವರು 2015ರ ನವೆಂಬರ್ 9ರಂದು ಈ ಲೋಕವನ್ನಗಲಿದರು.
ಕೃತಜ್ಞತೆಗಳು:
ಎಚ್ . ಎಸ್. ಪಾರ್ವತಿ ಅವರ ಸುಪುತ್ರಿ Vidya Malavalli M S
Shantha Nagaraj ಅವರ ಲೇಖನ
Great writer and AIR program executive H. S. Parvathi
ಕಾಮೆಂಟ್‌ಗಳು