ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಾ ಶೆಣೈ


 ಪದ್ಮಾ ಶೆಣೈ


ಪದ್ಮಾ ಶೆಣೈ ಕನ್ನಡದ ಜನಪ್ರಿಯ ಲೇಖಕಿ ಎನಿಸಿದ್ದವರು.  ಶೆಣೈ ಅವರು ಕಳೆದ ಆರು ದಶಕಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು.  ತಮ್ಮ ಎಲ್ಲ ಕೃತಿಗಳಲ್ಲೂ ಸಮಕಾಲೀನ ವಿದ್ಯಮಾನಗಳಿಗೆ ಮಹತ್ವ ನೀಡುತ್ತಾ ಮಹತ್ವದ ಲೇಖಕಿ ಎನಿಸಿದವರು.

ಪದ್ಮಾ ಅವರು 1933ರ ನವೆಂಬರ್‌ 3ರಂದು ಮದರಾಸಿನಲ್ಲಿ ಜನಿಸಿದರು. ತಂದೆ ರಾಮ ಬಾಳಿಗ. ತಾಯಿ ಲಕ್ಷ್ಮೀದೇವಿ. ಕಾಲೇಜು ಪ್ರಾಧ್ಯಾಪಕರಾಗಿದ್ದ ತಂದೆಯವರ ಪ್ರಭಾವವು ಎಳೆಯ ವಯಸ್ಸಿನಲ್ಲಿಯೇ ಇವರ ಮೇಲೆ ಪರಿಣಾಮ ಬೀರಿತ್ತು.   ಬಾಲ್ಯದ ದಿನಗಳನ್ನು ಬೇರೆ ಬೇರೆ ಊರುಗಳಲ್ಲಿ ಕಳೆದ ಪದ್ಮಾರವರು ಮೆಟ್ರಿಕ್‌ ಮುಗಿಸಿದ್ದು ಉಡುಪಿಯಲ್ಲಿ. 

ಪದ್ಮಾ ಶೆಣೈ ಉಡುಪಿಯ ಸಿಂಡಿಕೇಟ್‌ ಬ್ಯಾಂಕಿನಲ್ಲಿ  ಸುಮಾರು ನಾಲ್ಕು ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯನಿರ್ವಾಹಕರೂ,  ಉದ್ಯಮಿಗಳೂ ಆದ ಮೋಹನ ಶೆಣೈ ಅವರನ್ನು ವರಿಸಿ ಪದ್ಮಾ ಶೆಣೈ ಎಂದಾದರು.

ಪದ್ಮಾ ಶೆಣೈ ಅವರು ಬಾಲ್ಯದಿಂದಲೇ ಸಣ್ಣಕತೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು.   ಸುಮಾರು 30 ಗಮನಾರ್ಹ ಕೃತಿಗಳನ್ನು  ಪ್ರಕಟಿಸಿದ್ದ ಪದ್ಮಾ ಅವರು ಮೊದಲು  ಸಣ್ಣಕಥೆಗಳನ್ನು ಬರೆದು ನಂತರದಲ್ಲಿ ಕಾದಂಬರಿಗಳನ್ನು ಬರೆದರು. ಇದಲ್ಲದೆ ಮಕ್ಕಳ ಸಾಹಿತ್ಯ, ವೈಚಾರಿಕ, ಆಧ್ಯಾತ್ಮಿಕ, ಪ್ರವಾಸ ಸಾಹಿತ್ಯಗಳನ್ನೂ ಪ್ರಕಟಿಸಿದ್ದರು.

ಪದ್ಮಾ ಶೆಣೈಯವರ ಉಷಾ, ಪ್ರಭಾ ಮತ್ತು ಸುಧಾ ಎಂಬ ನೀಳ್ಗತೆಗಳು, ಅಣ್ಣ-ತಂಗಿ ಎಂಬ ಹಾಸ್ಯಕಥೆ ಹಾಗೂ ಇನ್ನಿತರ ಕಿರುಗತೆಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಾದ ನವಯುಗ, ಪ್ರಕಾಶ, ನವಭಾರತ, ರಾಯಭಾರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಐವತ್ತರ ದಶಕದಲ್ಲಿ ಹಲವು ಸಣ್ಣಕಥೆಗಳನ್ನು ಬರೆದ ಪದ್ಮಾರವರು ಕಾದಂಬರಿ ರಚನೆಯನ್ನು ಪ್ರಾರಂಭಿಸಿದ್ದು 60ರ ದಶಕದಲ್ಲಿ. ಒಟ್ಟು 11 ಕಾದಂಬರಿಗಳು, 4 ಕಥಾಸಂಕಲನಗಳು, 3 ನೀಳ್ಗತೆಗಳು, 4 ಮಕ್ಕಳ ಸಾಹಿತ್ಯ, 1 ಜೀವನ ಚರಿತ್ರೆ, 1 ಪ್ರವಾಸ ಸಾಹಿತ್ಯ, 3 ಆಧ್ಯಾತ್ಮಿಕ ಸಾಹಿತ್ಯ, 1 ವೈಚಾರಿಕ ಸಾಹಿತ್ಯ, 1 ಕೊಂಕಣಿ ಸಾಹಿತ್ಯ ಮುತಾದವುಗಳಲ್ಲಿ ಪದ್ಮಾ ಶೆಣೈ ಅವರ ಸಾಹಿತ್ಯದ ಹರಹು ಕಾಣಸಿಗುತ್ತದೆ.

ಕನ್ನಡ ಕಾದಂಬರಿ ಲೋಕಕ್ಕೆ ಪದ್ಮಾ ಶೆಣೈ ತಮ್ಮ ಮೊದಲ ಹೆಜ್ಜೆಯಿರಿಸಿದ್ದು ರಸ-ವಿರಸ ಕಾದಂಬರಿಯ ಮೂಲಕ. 1963ರಲ್ಲಿ ಇದು ಪ್ರಕಟಗೊಂಡಿತು. ಆಗಿನ ಮೈಸೂರು ರಾಜ್ಯ ಸರಕಾರದ ಪ್ರಥಮ ಪ್ರಶಸ್ತಿಯನ್ನು ಪಡೆದ ಈ ಕಾದಂಬರಿ ಮುಂದೆ ಕನ್ನಡದ 'ಜಾಣ’ ಪರೀಕ್ಷೆಗೆ ಪಠ್ಯವಾಯಿತು. ಮುಂದೆ ಸಂಧಿಕಾಲ, ಕೊನೆಯ ನಿರ್ಧಾರ, ನಾ ನಿನ್ನ ಧ್ಯಾನದೊಳಿರಲು, ನರನಾರಾಯಣ, ಜಯಶ್ರೀ, ಅನಿಶ್ಚಿತ,  ಹೆಣೆದ ಮರೆಯ ನೆರಳುಗಳು ಮುಂತಾದವು ಪ್ರಕಟಗೊಂಡವು. 2007ರಲ್ಲಿ ಬರೆದ ಅನುಗ್ರಹ ಕಾದಂಬರಿ ಮುಂದೆ ವಿಸ್ತೃತ ನಿರೂಪಣೆಯೊಂದಿಗೆ ಕೊಂಕಣಿ ಭಾಷೆಯಲ್ಲಿ ಪ್ರಕಟಗೊಂಡಿತು.

ಪದ್ಮಾ ಶೆಣೈ ಅವರ ಕಥಾಸಂಕಲನಗಳಲ್ಲಿ ಹರಿದ ಗಾಳಿಪಟ, ಅನುತಾಪ, ಯಾರಿಗೆ ಯಾರು, ವರಾನ್ವೇಷಣೆ, ಯಾರು ಹಿತವರು ಮುಂತಾದವು ಪ್ರಸಿದ್ಧವಾಗಿವೆ. 'ನೂಲಿನಂತೆ ಸೀರೆ' ಕಥೆ ತರಂಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಮೆಚ್ಚುಗೆ ಗಳಿಸಿತ್ತು. ಇದೇ ಕಥೆ ತೆಲುಗಿಗೂ ಭಾಷಾಂತರಗೊಂಡಿದೆ. ಆದಿಶಂಕರರ ಜೀವನ ಚರಿತ್ರೆ ಮಹಾಸನ್ಯಾಸಿ; ಅಮೆರಿಕದಲ್ಲಿರುವ ಮಗನ ಮನೆಯಲ್ಲಿದ್ದು, ಅಮೆರಿಕ ಸುತ್ತಿ ಬರೆದ ಪ್ರವಾಸ ಕಥನ ಅಮೆರಿಕ-ವಾಸ-ಪ್ರವಾಸ ಇವರ ಬರಹ ವೈವಿಧ್ಯಗಳಲ್ಲಿ ಸೇರಿವೆ.

ಪದ್ಮಾ ಶೆಣೈಯವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಮ್ಮಾಯಿಯ ಆನಂದ ಕುಟೀರದಲ್ಲಿ ವಾಸವಾಗಿದ್ದ ಮಹಾನ್‌ಚೇತನ, ಎಲ್ಲರಿಂದಲೂ 'ಅಜ್ಜ’ ಎಂದೇ ಕರೆಯಲ್ಪಡುತ್ತಿದ್ದ ಮಹಾತ್ಮನ ಸಹಯೋಗದಲ್ಲಿ ಆಧ್ಯಾತ್ಮದ ದಾರಿಯಲ್ಲಿ ಹೆಜ್ಜೆಯೂರಿದ್ದರು. ಉಪನಿಷತ್ತುಗಳ ಸಾರವೋ ಎಂಬಂತೆ ಪದ್ಮಾ ಶೆಣೈ ಅವರು ರಚಿಸಿದ್ದ ಆನಂದೋಪನಿಷತ್ತು, ತಾತ್ವಿಕ ಕಥೆಗಳು, ತಾತ್ವಿಕ ಹಾಡುಗಳು ಓದುಗರ ಮನತಟ್ಟಿದ್ದವು.

ಪದ್ಮಾ ಶೆಣೈ ಕರಾವಳಿ ಲೇಖಕಿ-ವಾಚಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯೂ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಇವರಿಗೆ ಸಂದಿತ್ತು. ಕಿನ್ನಿಗೋಳಿಯಲ್ಲಿ ಜರುಗಿದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದರು. ಪದ್ಮಾ ಶೆಣೈ ಅವರ ಸಾಹಿತ್ಯ ಪ್ರತಿಭೆಗೆ ಅನೇಕ ಗೌರವ, ಪ್ರಶಸ್ತಿ, ಸನ್ಮಾನಗಳು ಸಂದಿದ್ದವು.  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಇವುಗಳಲ್ಲಿ ಸೇರಿದ್ದವು.

ಪದ್ಮಾ ಶೆಣೈ ಅವರು ಈ ಲೋಕವನ್ನಗಲಿದ್ದು 2020ರ ಮಾರ್ಚ್ 24ರಂದು. ಕನ್ನಡದ ಕೆಲಸವನ್ನು ಪ್ರೀತಿಯಿಂದ ಮಾಡಿಹೋದ ಹಿರಿಯ ಚೇತನಕ್ಕೆ ನಮನ. 

Padma Shenoy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ