ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾರ್ಕೋನಿ


 ರೇಡಿಯೋದ ಜನಕ ಮತ್ತು ಮೊಬೈಲುಗಳ ತಾತ 
ಮಾರ್ಕೋನಿ  ಗೊಲೈಲ್ಮೊ


ಜಗತ್ತಿನ ಇತಿಹಾಸದಲ್ಲಿ ರೇಡಿಯೋ ಸಂಪರ್ಕ ತಂದ ಕೊಡುಗೆ ಅತ್ಯಮೂಲ್ಯವಾದುದು. ಇದು ಮುಂದೆ ಸಂಪರ್ಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಈ ಕೊಡುಗೆಯ ಮಹತ್ವದ ಪಾಲು ಸಂದದ್ದು ಮಾರ್ಕೋನಿ ಅವರಿಂದ. ಹೀಗಾಗಿ ಮಾರ್ಕೋನಿ ಅವರು ರೇಡಿಯೋದ ಜನಕ ಮತ್ತು ಮೊಬೈಲುಗಳ ತಾತ ಎಂದು ಹೆಸರುವಾಸಿ.

ಮಾರ್ಕೋನಿ  ಗೊಲೈಲ್ಮೊ ಅವರು ಇಟಲಿಯ ಬಾಲಾನ್ಯಾ ಎಂಬಲ್ಲಿ 1874ರ ಏಪ್ರಿಲ್ 25 ರಂದು ಜನಿಸಿದರು. ಶ್ರೀಮಂತ ಮನೆತನದಿಂದ ಬಂದ ಮಾರ್ಕೋನಿ ಖಾಸಗಿ ಶಿಕ್ಷಣ ಪಡೆದು ಭೌತವಿಜ್ಞಾನದಲ್ಲಿ ಪರಿಣತಿಗಳಿಸಿದರು.

ಹರ್ಟ್ಜ್ ಎಂಬುವರು ಆವಿಷ್ಕರಿಸಿದ ವಿದ್ಯುತ್ ಕಾಂತ ತರಂಗಗಳನ್ನು ಕುರಿತ ಒಂದು ಲೇಖನ 1886ರಲ್ಲಿ ಮಾರ್ಕೋನಿ ಅವರ ಗಮನಕ್ಕೆ ಬಂತು.  ನಿರ್ದ್ರವ್ಯತೆಯಲ್ಲಿ ತಂತಿ ಮುಂತಾದವುಗಳಲ್ಲಿ ಯಾವ ಮಾದ್ಯಮದ ನೆರವೂ ಇಲ್ಲದೆ ಬೆಳಕಿನ ವೇಗದಿಂದ ಸಾಗುವ ಶಕ್ತಿ ವಿಶೇಷವಿದು. ಅಂದಮೇಲೆ ಸಂಜ್ಞೆಗಳ ರವಾನೆಗೆ ಈ ತರಂಗಗಳನ್ನು ಉಪಯೋಗಿಸಬಹುದಲ್ಲವೇ? ಹೀಗೆ ಪರಿಭಾವಿಸಿದ ಮಾರ್ಕೋನಿ ರೇಡಿಯೋ ತರಂಗಗಳನ್ನು ಹರ್ಟ್ಜ್ ವಿಧಾನದಿಂದ ಉತ್ಪಾದಿಸಿದರು ಮತ್ತು ಇವನ್ನ ಪತ್ತೆ ಹಚ್ಚಲು ಕೊಹಿರರ್ ಎಂಬ ಸಲಕರಣೆಯನ್ನು ಬಳಸಿದರು. ತೀರಾ ಅಳ್ಳಕವಾಗಿ ಪೇರಿದ ಲೋಹ ರೇಕುಗಳ ಧಾರಕವೇ ಕೋಹಿರರ್. ಸಾಧಾರಣವಾಗಿ ಇದು ಅತ್ಯಲ್ಪ ವಿದ್ಯುತ್ತನ್ನು ಪ್ರವಹಿಸಗೊಡುತ್ತಿತ್ತು. ಆದರೆ ರೇಡಿಯೋ ತರಂಗಗಳು ಇದರ ಮೇಲೆ ಬಿದ್ದಾಗ ಸಾಕಷ್ಟು ವಿದ್ಯುತ್ ಪ್ರವಹಿಸುತ್ತಿತ್ತು. ಈ ತೆರನಾಗಿ ರೇಡಿಯೋ ತರಂಗಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ವಿದ್ಯುತ್ ಪ್ರವಾಹವಾಗಿ ಪರಿವರ್ತಿಸುವುದು ಸಾಧ್ಯವಾಯಿತು.

ಕ್ರಮೇಣ ಮಾರ್ಕೋನಿ ತಮ್ಮ ಉಪಕರಣಗಳಲ್ಲಿ ಸುಧಾರಣೆಗಳನ್ನು ತಂದು ಪ್ರೇಷಕ (ಟ್ರಾನ್ಸ್‍ಮಿಟರ್) ಮತ್ತು ಅಭಿಗ್ರಾಹಕ (ರಿಸೀವರ್) ಎರಡನ್ನೂ ಭೂಸಂಪರ್ಕ ಗೊಳಿಸಿದರು. ಅಲ್ಲದೇ ಭೂಸಂಪರ್ಕರಹಿತ ತಂತಿಯೊಂದನ್ನು ಆಂಟೆನಾವಾಗಿ ಉಪಯೋಗಿಸುತ್ತ ಪ್ರೇಷಣೆಯನ್ನೂ ಅಭಿಗ್ರಹಣೆಯನ್ನೂ ಸುಲಭಮಾಡಿದರು. ಆಂಟೆನಾದ ಉಪಯೋಗವನ್ನು ಮೊದಲು ಬಳಕೆಗೆ ತಂದವರು ರಷ್ಯದ ಭೌತವಿಜ್ಞಾನಿ ಅಲೆಕ್ಸಾಂಡರ್ ಸ್ಟೆಪನೊವಿಚ್ ಪೊಪೊವ್. 

ರೇಡಿಯೊ ತರಂಗಗಳ ಪ್ರೇಷಣೆ ಮತ್ತು ಅಭಿಗ್ರಹಣೆ ಪ್ರಾಯೋಗಿಕ ಯಶಸ್ಸು ಗಳಿಸಿದ ಒಡನೆಯೇ ಮಾರ್ಕೋನಿ ಎರಡು ಠಾಣೆಗಳ ನಡುವಿನ ಅಂತರವನ್ನು ಹೆಚ್ಚಿಸುತ್ತ ಹೋದರು. 1895ರಲ್ಲಿ ಆರಂಭದ ಪ್ರೇಷಣದೂರ ಮನೆಯಿಂದ ತೋಟದವರೆಗೆ ಇತ್ತು. ಅದೇ ಮುಂದಿನ ಪ್ರಯೋಗದಲ್ಲಿ ಈ ಅಂತರ 1.6 ಕಿಮೀ ನಷ್ಟು ಅಧಿಕವಾಗಿತ್ತು. ಮರುವರ್ಷ 1896 ರಲ್ಲಿ ಇದು 14.4 ಕಿಮೀ ಆಗಿತ್ತು.  1897ರಲ್ಲಿ ಇದು 19.2 ಕಿಮೀ 1898ರಲ್ಲಿ 28.8 ಕಿಮೀ.

ಈ ತೆರನಾಗಿ ತಮ್ಮ ಉಪಕರಣಗಳನ್ನೂ ವಿಧಾನಗಳನ್ನೂ ಕ್ರಮಶಃ ಸುಧಾರಿಸಿದ ಮಾರ್ಕೋನಿ ಅವನ್ನು ವಾಣಿಜ್ಯಾತ್ಮಕವಾಗಿ ಅಭಿವರ್ಧಿಸಲು ಯೋಜಿಸಿದರು.   ವೃದ್ಧ ಭೌತವಿಜ್ಞಾನಿ ಕೆಲ್ವಿನ್, ಹಾಗೂ ಇನ್ನೊಬ್ಬ ಹಿರಿಯ ವಿಜ್ಞಾನಿ ಸ್ಟೋಕ್ಸ್ ಅವರುಗಳಿಗೂ ಶುಭಾಶಯಗಳನ್ನು ಮಾರ್ಕೋನಿ ಸಂದೇಶ ವಾಹಕದ (ರೇಡಿಯೊ ತರಂಗಗಳು) ಮೂಲಕ ರವಾನಿಸಲು ಹಣಪಾವತಿಸಿದಾಗ ರೇಡಿಯೊ ಪ್ರೇಷಣೆ ಅಧಿಕೃತವಾಗಿ ವಾಣಿಜ್ಯರಂಗಕ್ಕೆ ಕಾಲಿಟ್ಟಿತು (1898-99).

ಮಾರ್ಕೋನಿ ಪ್ರವರ್ತಿಸಿದ ನಾಟಕದ ಅಂತಿಮ ಅಂಕ 1901ರಲ್ಲಿ ತೊಡಗಿತು. ವಿದ್ಯುತ್ಕಾಂತ ತರಂಗಗಳು ಪ್ರೇಷಣ ಕೇಂದ್ರದಿಂದ ನೇರ ಹೊರಕ್ಕೆ ಧಾವಿಸಬೇಕು. ಆದರೆ ಈ ಸಹಜಧರ್ಮಕ್ಕೆ ಅಪವಾದವಾಗಿ ರೇಡಿಯೊ ತರಂಗಗಳು ಭೂಮಿಯ ವಕ್ರತೆಯನ್ನು ಅನುಸರಿಸುತ್ತವೆಂದು ಅವರಿಗೆ ತಿಳಿಯಿತು. ಆದ್ದರಿಂದ ದೂರದ ಎರಡು ನೆಲೆಗಳ ನಡುವೆ ರೇಡಿಯೋ ಸಂಪರ್ಕ ಏರ್ಪಡಿಸಬೇಕಾದರೆ ಆಂಟೆನಾವನ್ನು ಆದಷ್ಟು ಎತ್ತರಕ್ಕೆ ಒಯ್ಯುವುದೊಂದೇ ಮಾರ್ಗವೆಂದು ತೀರ್ಮಾನಿಸಿ ಈ ಕೆಲಸಕ್ಕಾಗಿ ಬಲೂನುಗಳನ್ನು ಉಪಯೋಗಿಸಿದರು. ಅದೇ ವರ್ಷದ ಡಿಸೆಂಬರ್ 12ರಂದು ಮಾರ್ಕೋನಿ ಮಾರ್ಸ್ ಸಂಕೇತವನ್ನು (ಮಾರ್ಸ್ ಕೋಡ್) ಉಪಯೋಗಿಸಿ ಸಂದೇಶಗಳನ್ನು ರವಾನಿಸುವ ವಿಧಾನವನ್ನು ಬಳಕೆಗೆ ತಂದರು.

1909ರ ಭೌತ ವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕವನ್ನು ಮಾರ್ಕೋನಿ ಅವರಿಗೆ  ಬ್ರೌನ್ ಜೊತೆ ಕೊಡಲಾಯಿತು.

ಮಾರ್ಕೋನಿ ರೋಮ್‍ನಲ್ಲಿ 1937 ವರ್ಷದ ಜುಲೈ 20 ರಂದು ನಿಧನರಾದರು.

On the birth anniversary of father of radio and grand father of mobile phones Guglielmo Marconi


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ