ವರಾಹ ಅವತಾರ
ವರಾಹ ಅವತಾರ
ಭಾಗವತ ಪುರಾಣದ ಮೂರನೆಯ ಸ್ಕಂದದಲ್ಲಿ ಭಗವಂತನ ವರಾಹ ಅವತಾರದ ಕಥೆ ಬಂದಿದೆ. ಭೂಮಿ ಪ್ರಳಯ ಜಲದಲ್ಲಿ ಮುಳುಗುವುದು; ಭಗವಂತನು ವರಾಹರೂಪದಲ್ಲಿ ಬಂದು ಭೂಮಿಯನ್ನು ಮೇಲೆತ್ತುವುದು ಮತ್ತು ಹಿರಣ್ಯಾಕ್ಷ ವಧೆ ಇಲ್ಲಿ ಕಾಣಬರುತ್ತದೆ.
ಇತರ ಪುರಾಣಗಳಲ್ಲೂ ಈ ಕಥೆ ಬಂದಿದೆ. ಇದರಲ್ಲಿ ಒಂದು ಮಹತ್ವಪೂರ್ಣವಾದ ಸಾಂಕೇತಿಕತೆ ಅಡಗಿದಂತಿದೆ. ಪುರಾಣದಲ್ಲಿ ಬರುವ ಹೆಚ್ಚಿನ ಕಥೆಗಳು ಸಾಂಕೇತಿಕವಾಗಿಯೇ ಇರುತ್ತವೆ. ಒಂದು ಪುರಾಣ ವರಾಹಾವತಾರದ ಕಥೆಯನ್ನು ಹೀಗೆ ವರ್ಣಿಸುತ್ತದೆ:
ಒಮ್ಮೆ ಭೂಮಿ ತನ್ನ ಕಕ್ಷೆಯಿಂದ ಕಳಚಿಕೊಂಡಿತಂತೆ. ಸೃಷ್ಟಿಯಾದ ಅನೇಕ ಕಾಲದ ಅನಂತರ ನಡೆದ ಘಟನೆಯಿದು. ಪರಿಣಾಮವಾಗಿ ಭೂಮಿ ಪರಸ್ಪರ ಆಕರ್ಷಣಶಕ್ತಿಯ ಸ್ಥಿರಕೇಂದ್ರವನ್ನು ಕಳೆದುಕೊಂಡು ಕುಸಿಯತೊಡಗಿತಂತೆ. ಆಗ ಭಗವಂತ ವರಾಹರೂಪ ತೊಟ್ಟು ಬಂದ. ಭೂಮಿಯನ್ನು ಮೊದಲಿನಂತೆಯೆ ಅದರ ಕಕ್ಷೆಯಲ್ಲಿರಿಸಿದ. ಹೀಗೆ ಭೂಮಿ ಮತ್ತು ಇತರ ವಿಶ್ವಗಳ ಚಲನೆಯನ್ನು ವ್ಯವಸ್ಥೆಗೊಳಿಸಿದ. ಹೀಗೆ ಇದೊಂದು ದರ್ಶನ. ಹಲವು ಅವತಾರಗಳು ಜ್ಞಾನಿಗಳ, ಋಷಿಮುನಿಗಳ ಅರಿವಿಗೆ ಗೋಚರವಾದ ದರ್ಶನಗಳೆ. ಕಣ್ಮುಚ್ಚಿ ಧ್ಯಾನಕ್ಕೆ ಕೂತಾಗ ನಾವೂ ಹಲವು ಬಗೆಯ 'ರೂಪ'ಗಳನ್ನು ಕಾಣಬಲ್ಲೆವು. ಈ ಸಂದರ್ಭದಲ್ಲಿ ಬ್ರಹ್ಮಾದಿದೇವತೆಗಳ, ಋಷಿಗಳ 'ಒಳಗಣ್ಣಿಗೆ' ಭಗವಂತ ವರಾಹರೂಪದಲ್ಲಿ ಕಾಣಿಸಿಕೊಂಡ.
ಇನ್ನು ನಾವು ಕೇಳಿರುವ ಕಥೆಯರೂಪದಲ್ಲಿ ಈ ಘಟನೆಯನ್ನು ಮಕ್ಕಳಂತೆ ಅನುಭವಿಸೋಣ.
ತುಂಬ ಹಿಂದೆ ಹಿರಣ್ಯಾಕ್ಷನೆಂಬ ರಾಕ್ಷಸ ರಾಜ ಇದ್ದ. ಅವನು ಶಕ್ತಿವಂತನಾಗಿ ಬೆಳೆದುಬಿಟ್ಟಿದ್ದ. ಅವನು ಅಹಂಕಾರದಿಂದ ಮೆರೆಯುತ್ತಿದ್ದ. ಅವನಿಗೆ ಇಡೀ ಭೂಮಿಯನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಅವನ ಬಳಿ ಬ್ರಹ್ಮನಿಂದ ಪಡೆದಿದ್ದ ವರಗಳೂ ಇದ್ದವು.
ರಾಕ್ಷಸರು ಸಾವೇ ಬೇಡ ಎಂದು ವರ ಪಡೆಯವ ಹಾಗಿರಲಿಲ್ಲ. ಹಾಗಾಗಿ ಮನುಷ್ಯನೂ ಅಲ್ಲ ಮೃಗವೂ ಅಲ್ಲದ ಜೀವದಿಂದಲೋ, ಕೋತಿಯಿಂದಲೋ, ಹಂದಿಯಿಂದಲೋ, ಸಾಮಾನ್ಯ ನರಪಿಳ್ಳೆಯಿಂದಲೋ ಬಂದ್ರೆ ಬರಲಿ ಎಂದು ಉಡಾಫೆಯಿಂದ exception ಕೇಳಿಕೋತಾ ಇದ್ರು. ಭಗವಂತ ಅದನ್ನೆಲ್ಲ ಚೆನ್ನಾಗಿ ಸ್ಟಡಿ ಮಾಡಿ, ಅವರನ್ನು ಮುಗಿಸಲು ಬರ್ತಾ ಇದ್ದ. ಅಷ್ಟು ಸ್ಟಡಿ ಮಾಡಕ್ಕೆ ಅವನಿಗೆ ತುಂಬಾ ಸಮಯ ಬೇಕಾಗ್ತಿತ್ತು. ಇಲ್ಲ ಏನ್ ಮಾಡ್ತಾನೋ ಈ ರಾಕ್ಷಸ ನೋಡೇಬಿಡೋಣ ಅಂತ ಸಾಕಷ್ಟು ತಮಾಷೆ ನೋಡಿ, ಅಪ್ಪಾ ಕಾಪಾಡಪ್ಪ ಅಂತ ಎಲ್ಲರೂ ಬಾಯಿಬಡಿದುಕೊಂಡು ವಿಪರೀತಕ್ಕಿಟ್ಟುಕೊಂಡಿತು ಅನಿಸಿದ ಮೇಲೆ ಬರ್ತಾ ಇದ್ದ. ಹಿರಣ್ಯಾಕ್ಷ ತನಗೆ ಹಂದಿಯಿಂದ ಸಾವು ಬಂದರೆ ಬರಲಿ, ಅದು ಹೇಗೆ ಹಂದಿಗೆ ತನ್ನನ್ನು ಕೊಲ್ಲಲು ಸಾಧ್ಯ ಆಗುತ್ತೆ ಅಂತ ತಾನು ಆಡಿದ್ದೇ ಆಟ ಅಂತ ಮೆರೀತಿದ್ದ.
ಒಮ್ಮೆ ಹಿರಣ್ಯಾಕ್ಷ “ನನ್ನಲ್ಲಿರುವ ವರಗಳಿಂದ ದೇವತೆಗಳ ಶಕ್ತಿ ಕುಂದಿಸುವೆ” ಎಂದು ಗರ್ಜಿಸಿದ. ಅದಕ್ಕೆ ಅವನು ಮಾಡಿದ್ದೇನು?
ಭೂಮಿಯನ್ನು ಸಮುದ್ರಕ್ಕೆ ಎಸೆದ. ಆಗ ಪೃಥ್ವಿಯು ಮುಳುಗುತ್ತಾ ಸಮುದ್ರದ ತಳದಲ್ಲಿ ಕುಗ್ಗತೊಡಗಿತು. 'ಅಯ್ಯಯ್ಯೋ!’ ಎಂದು ದೇವತೆಗಳು ಚೀರಿದರು. 'ನಮ್ಮ ಗತಿ ಏನು’ ಎಂದು ಭೂಮಿಯ ಮೇಲಿನ ಎಲ್ಲ ಜೀವಿಗಳೂ ಭಯಭೀತರಾದರು. 'ಕಾಪಾಡು, ಕಾಪಾಡು,’ ಎಂದು ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ಆಗ ಭಗವಂತನು ವರಾಹ ಅವತಾರ ತಾಳಿದ.
ಅಸುರ ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರಕ್ಕೆ ಎಸೆದಿದ್ದ. ಆದ್ದರಿಂದ ಮೊದಲು ಅದರ ರಕ್ಷಣೆ ಮಾಡಬೇಕಾಗಿತ್ತು. ಹೀಗಾಗಿ ವರಾಹ ರೂಪದಲ್ಲಿದ್ದ ವಿಷ್ಣುವು ಗರ್ಜಿಸುತ್ತ ಜಲಪ್ರವೇಶಿಸಿದ. “ಓ!, ಸಾಗರ ತಳದಲ್ಲಿ ಭೂ ಮಂಡಲ ಇದೆ” ಎಂದು ಕಂಡುಕೊಂಡ.
ತತ್‌ಕ್ಷಣ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಆ ರೀತಿ ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ.
ಆಗ ರಾಕ್ಷಸ ಹಿರಣ್ಯಾಕ್ಷನು “ಎಲೆ ಮೃಗವೇ, ನೀನೇನು ಭೂಮಿಯನ್ನು ಎತ್ತುವುದು?” ಎಂದು ಹಾಸ್ಯದ ಧ್ವನಿಯಲ್ಲಿ ವರಾಹನನ್ನು ಕೆಣಕಲು ಪ್ರಯತ್ನಿಸಿದ. “ಪ್ರಾಣಿಯಾದ ನೀನು ನನ್ನನ್ನು ಅದು ಹೇಗೆ ಎದುರಿಸುವೆ?” ಎಂದು ಇನ್ನಷ್ಟು ಕೆಣಕಿದ.
ಹಿರಣ್ಯಾಕ್ಷನ ಮಾತಿಗೆ ವರಾಹ ಉತ್ತರಿಸಿದ, “ನೀನು ಹೇಳುವಂತೆ ನಾವು ಕಾಡು ಮೃಗಗಳೇ. ನಿನ್ನಂತಹ ಬೇಟೆ ನಾಯಿಗಳಿಗಾಗಿ ಹುಡುಕುತ್ತಿದ್ದೇವೆ.” ತನ್ನನ್ನು ಕೊಲ್ಲಲು ಬಂದ ಅಸುರನಿಗೆ ವರಾಹ ಸವಾಲು ಒಡ್ಡಿದ. ಆಗ ಆ ರಾಕ್ಷಸನು ಕೆರಳಿದ ಸರ್ಪದಂತೆ ಬುಸುಗುಟ್ಟಿದ. ವರಾಹನ ಮೇಲೆ ಎರಗಿ ತನ್ನ ಗದಾಪ್ರಹಾರ ಮಾಡಿದ. ವರಾಹನಿಗೆ ಪೆಟ್ಟೂ ಕೊಟ್ಟ. ಇಬ್ಬರೂ ಕೋಪದಿಂದ ಹೋರಾಡಿದರು. ರಾಕ್ಷಸನ ಪೆಟ್ಟಿನಿಂದ ವರಾಹನು ಕಿಂಚಿತ್ತೂ ನೋವು ಅನುಭವಿಸಲಿಲ್ಲ. ಹಿರಣ್ಯಾಕ್ಷ ಮಾತ್ರ ವರಾಹ ರೂಪದ ಭಗವಂತನು ಕೊಟ್ಟ ಪೆಟ್ಟಿನಿಂದ ಕೆಳಗುರುಳಿದ. 'ಸದ್ಯ, ರಾಕ್ಷಸನ ಸಂಹಾರವಾಯಿತಲ್ಲಾ’ ಎಂದು ಎಲ್ಲರಿಗೂ ಸಮಾಧಾನ.
ಕೃಪೆ: ಬನ್ನಂಜೆ ಗೋವಿಂದಾಚಾರ್ಯರ ಸಂಗ್ರಹ ಭಾಗವತ ನೀಡಿದ ಹೊಳಹು ಮತ್ತು ಚಿಕ್ಕಂದಿನಿಂದ ಕಥೆ ಓದಿ ಕೇಳಿದ್ದ ನೆನಪುಗಳ ಜೊತೆಯಲ್ಲಿ.
Varaha Avatar of Lord Vishnu
ಕಾಮೆಂಟ್‌ಗಳು