ತಾತ್ಯಾ ಟೋಪೆ
ತಾತ್ಯಾ ಟೋಪೆ
ಏಪ್ರಿಲ್ 18, ಭಾರತ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಹೋರಾಟಗಾರರಾದ ತಾತ್ಯಾಟೋಪೆ ಅವರು ದೇಶಕ್ಕಾಗಿ ಪ್ರಾಣತೆತ್ತ ದಿನ. ಅವರ ಮೂಲ ಹೆಸರು ರಾಮಚಂದ್ರ ಪಾಂಡುರಂಗ.
1859ರ ಏಪ್ರಿಲ್ 18ರಂದು ಬೃಹತ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವಿಸ್ಮರಣೀಯವಾಗಿ ಹೋರಾಡಿದ ಈತ ಕೊನೆಗೆ ತಮ್ಮ ಮಿತ್ರದ್ರೋಹಿಯೊಬ್ಬನಿಂದ ಬ್ರಿಟಿಷ್ ಸೇನೆಗೆ ಸೆರೆಸಿಕ್ಕಿ ಮರಣದಂಡನೆಗೆ ಗುರಿಯಾಗಿ ಕೇವಲ ತಮ್ಮ 45ನೆಯ ವಯಸ್ಸಿನಲ್ಲಿ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತರು. ಅವರೊಡನೆ ಗಲ್ಲಿಗೇರಿಸಲ್ಪಟ್ಟ ಇತರ ನಾಯಕರುಗಳೆಂದರೆ ಅಜಿಮುಲ್ಲಾ ಖಾನ್, ಅಹಮದುಲ್ಲಾಹ್ ಶಾ, ಕುನ್ವರ್ ಸಿಂಗ್, ಜನರಲ್ ಬಕ್ತ್ ಖಾನ್, ಅಜೀಜನ್, ಬೇಗಂ ಹಜರತ್ ಮಹಲ್ ಮುಂತಾದವರು.
ಸಿಪಾಯಿ ದಂಗೆ ಎಂದು ಬಣ್ಣಿತವಾದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾನ್ಪುರ, ಕಲ್ಪಿ, ಝಾನ್ಸಿಗಳಲ್ಲಿ ಯುದ್ಧ ಸಂಘಟನೆಗಳನ್ನು ನಡೆಸಿದ ತಾತ್ಯಾ ಟೋಪೆ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು.
ಈ ಪ್ರದೇಶಗಳನ್ನು ಬ್ರಿಟಿಷ್ ಸೇನೆ ಪುನಃ ವಶಪಡಿಸಿಕೊಂಡಿತಾದರೂ, ತಾತ್ಯಾ ಅವರು ದೇಶದ ಇತರೆಡೆಗಳಾದ ಬಂದೆಲ್ಖಾಂಡ್, ಮಧ್ಯಭಾರತ, ರಾಜಾಸ್ಥಾನದ ಭರತ್ಪುರ, ಬಿತುಹರ್ ಮುಂತಾದ ಬಹುತೇಕ ಕಡೆಗಳಲ್ಲಿ ಸೇನೆಯನ್ನು ನಿರಂತರವಾಗಿ ಸಂಘಟಿಸುತ್ತಲೇ ಇದ್ದರು. ನರ್ಮದಾ, ಬೆಟ್ವಾ ನದೀತೀರಗಳಿಂದ ಮೊದಲ್ಗೊಂಡು ದಕ್ಷಿಣದ ಖಾಂಡೇಶ್‍ವರೆಗೆ ಅವರು ಕ್ರಾಂತಿಯ ಕಿಡಿಯನ್ನು ಜ್ವಾಜ್ವಲ್ಯಮಾನವಾಗಿ ಉರಿಸಿದ್ದರು. ಅವರ ಸಂಘಟನಾ ಶಕ್ತಿ ಅತ್ಯದ್ಭುತವಾದುದೆಂದು ಚರಿತ್ರೆ ದಾಖಲಿಸಿದೆ. ಈ ಎಲ್ಲಾ ಪ್ರದೇಶದ ಜನರಲ್ಲಿ ಅವರು ಬಹಾದ್ದೂರ್ ತಾತ್ಯಾ ಟೋಪೆ ಎಂದೇ ಪ್ರಸಿದ್ಧರಾಗಿದ್ದರು.
ಎಲ್ಲ ರೀತಿಯಲ್ಲೂ ಬ್ರಿಟಿಷ್ ಸಿಂಹಾಸನಕ್ಕೆ ಸಿಂಹಸ್ವಪ್ನರಾಗಿದ್ದ ತಾತ್ಯಾಟೋಪೆ ಅದ್ಭುತವಾದದ್ದನ್ನು ಸಾಧಿಸುವುದರತ್ತ ಮುನ್ನುಗ್ಗಿದ್ದರು. ಆದರೆ ಮಾನಸಿಂಗನೆಂಬ ಒಬ್ಬ ನಂಬಿಕೆಯ ಗೆಳೆಯ ತಾತ್ಯಾ ಟೋಪೆಯವರಿಗೆ ಮಿತ್ರದ್ರೋಹಿಯಾಗಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅವರ ಸುಳಿವನ್ನು ಕೊಟ್ಟು ಅವರ ಬಂಧನಕ್ಕೆ ಕಾರಣನಾದ. ಮತ್ತೊಂದು ವಿಚಾರವೆಂದರೆ ಗ್ವಾಲಿಯರಿನ ದೊರೆಯಾದ ಜಿವಾಜಿ ರಾವ್ ಸಿಂಧಿಯಾ ಕೂಡಾ ಬ್ರಿಟಿಷರಿಗೆ ತನ್ನ ಸೇನೆಯನ್ನು ನೆರವು ನೀಡಿದ. ಬಹುಶಃ ಅದಿಲ್ಲದಿದ್ದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆಯಂತಹವರ ಸಾಹಸವನ್ನು ಬ್ರಿಟಿಷ್ ಸೇನೆ ತಡೆದುಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.
ತಾತ್ಯಾ ಟೋಪಿ ತನ್ನ ಗೆರಿಲ್ಲಾ ಯುದ್ಧದಿಂದ ಬ್ರಿಟಿಷರಿಗೆ ಭೀತಿ ಹುಟ್ಟಿಸಿದ್ದರು. ಹಾಗಾಗಿ ಬ್ರಿಟಿಷ್ ಆಡಳಿತ ನಮ್ಮ ಭಾರತೀಯ ಒಡಕುತನವನ್ನೇ ಬಂಡವಾಳವಾಗಿಸಿಕೊಂಡು ತಾತ್ಯಾಟೋಪೆಯವರನ್ನು ಮೋಸದ ಸುಳಿಗೆ ಸಿಲುಕಿಸಿ ತನ್ನ ಚಕ್ರಾಧಿಪತ್ಯವನ್ನು ಮುಂದುವರೆಸಿತು.
ತಾತ್ಯಾ ಟೋಪೆಯಂತಹ ಮಹಾವೀರ ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಅಲುಗಿಸಿದ್ದರು ಮತ್ತು ಅದಕ್ಕೆ ಈ ನೆಲ ಶಾಶ್ವತವಾಗಿ ದಕ್ಕುವಂತದಲ್ಲ ಎಂಬುದನ್ನು ಮನಮುಟ್ಟುವಂತೆ ಲಿಖಿಸಿದ್ದರು ಎಂಬುದು ಮಾತ್ರ ಅಲ್ಲಗೆಳೆಯಲಾರದ ಸತ್ಯ.
Remembrance Day of Tantia Tope

ಕಾಮೆಂಟ್‌ಗಳು