ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವಪರಂಪರೆ ದಿನ


ವಿಶ್ವಪರಂಪರೆ ದಿನದಂದು 


ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ.

ಗಂಗ, ಕದಂಬ, ರಾಷ್ಟ್ರಕೂಟ ಬಲ
ಚಾಲುಕ್ಯ, ಹೊಯ್ಸಳ, ಬಲ್ಲಾಳ
ಹುಕ್ಕ, ಬುಕ್ಕ, ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ.

ಆಚಾರ್ಯತ್ರಯ ಮತಸಂಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ
ಶರಣ, ದಾಸ, ತೀರ್ಥಂಕರ
ನಡೆ-ನುಡಿ ವಿಶ್ವತಮೋಹಾರಿ.

ಪಂಪ, ರನ್ನ, ನೃಪತುಂಗ, ಹರೀಶ್ವರ
ರಾಘವಾಂಕ, ಸರ್ವಜ್ಞ, ಪುರಂದರ
ಕುಮಾರವ್ಯಾಸ, ರತ್ನಾಕರ, ಜನಪದ 
ಕಾವ್ಯ ಸಮುದ್ರವಿಹಾರಿ.

ಸಾಯಣ, ವಿದ್ಯಾರಣ್ಯ, ಭಾಸ್ಕರ
ಮಹಾದೇವಿ, ಮುಕ್ತಾಯಿ ಮಹಂತರ,
ಕಂತಿ-ಹಂಪ, ಸುಮನೋರಮೆ-ಮುದ್ದಣ
ಸರಸ ಹೃದಯ ಸಂಚಾರಿ.

ತ್ಯಾಗ-ಭೋಗ-ಸಮಯೋಗದ ದೃಷ್ಟಿ
ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ
ಜ್ಞಾನದ, ವಿಜ್ಞಾನದ, ಕಲೆಯೈಸಿರಿ,
ಸಾರೋದಯ ಧಾರಾನಗರಿ.

ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,
ದಯವೇ ಧರ್ಮದ ಮೂಲ ತರಂಗ
ವಿಶ್ವಭಾರತಿಗೆ ಕನ್ನಡದಾರತಿ,
ಮೊಳಗಲಿ ಮಂಗಲ ಜಯಭೇರಿ.

ಸಾಹಿತ್ಯ: ಚನ್ನವೀರ ಕಣವಿ

On world Heritage Day

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ