ವಿಜಯಾ ಸುಬ್ಬರಾಜ್
ವಿಜಯಾ ಸುಬ್ಬರಾಜ್
ಡಾ. ವಿಜಯಾ ಸುಬ್ಬರಾಜ್ ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಬರಹಗಾರ್ತಿ.
ವಿಜಯಾ ಸುಬ್ಬರಾಜ್ 1947ರ ಏಪ್ರಿಲ್ 20ರಂದು ಬೆಂಗಳೂರಿನಲ್ಲಿ ಜನಿಸಿದರು. ತಾಯಿ ಲಕ್ಷ್ಮಿ. ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಎಲ್.ಎಲ್.ಬಿ, ಹಿಂದಿ ಸಾಹಿತ್ಯರತ್ನ ಮತ್ತು ಫ್ರೆಂಚ್ ಭಾಷೆಯಲ್ಲಿ ಡಿಪ್ಲೋಮಾ ಪದವಿಗಳನ್ನು ಪಡೆದಿದ್ದಾರೆ.
ಡಾ. ವಿಜಯಾ ಅವರು ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕರ ಹುದ್ದೆ ನಿರ್ವಹಿಸಿ ನಿವೃತ್ತರಾಗಿದ್ದಾರೆ.'ಕನ್ನಡದಲ್ಲಿ ಗೀತ ನಾಟಕಗಳು : ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಅವರಿಗೆ ಪಿಎಚ್.ಡಿ. ಪದವಿ ಸಂದಿದೆ.
ಡಾ. ವಿಜಯಾ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕೊಂಡವರು. ಅವರ ಹಲವಾರು ಲೇಖನಗಳು, ಕಥೆ, ಕವನ, ನಾಟಕಗಳು ನಾಡಿನ ಎಲ್ಲ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ, ದೂರದರ್ಶನಕ್ಕಾಗಿ ಶಬ್ದ ಚಿತ್ರಗಳು, ಭಾಷಣಗಳು, ಲೇಖನಗಳು, ವಿಮರ್ಶೆ, ಚಿಂತನೆಗಳು, ನಾಟಕಗಳು, ಸಂದರ್ಶನಗಳು ಹೀಗೆ ವೈವಿಧ್ಯಪೂರ್ಣ ಕೊಡುಗೆ ನೀಡಿದ್ದಾರೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕಥೆ, ಕವನ, ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ, ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಮ್ಮಟ, ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವಾರು ಸಂಭಾವನಾ ಗ್ರಂಥಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ಡಾ. ವಿಜಯಾ ಸುಬ್ಬರಾಜ್ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ಪ್ರಕಟಿಸಿದ್ದಾರೆ.
ತ್ರಿಶಂಕು, ಏನು ಹೇಳಲಿ ಗೆಳೆಯ, ಹಾಡೇನ ಪಾಡೇನ, ಈ ತೆರದ ನಿರೀಕ್ಷೆಯಲ್ಲಿ, ವಸುಂಧರೆಯ ಪ್ರಾಯ ಮುಂತಾದವು ಅವರ ಕವನ ಸಂಕಲನಗಳು; ಪಾಂಚಾಲಿ, ಪಾದ್ರಿಯೊಬ್ಬನ ಕಥೆ, ನಗರವಧು ಸಾಲವತಿ, ಪ್ರೇಮ ಸಮಾಗಮ, ಮಿಲನ, ಮತ್ತೊಂದು ಮಹಾಭಾರತ, ದಂಗೆ ಎದ್ದವಳು ಮುಂತಾದವು ನಾಟಕಗಳು;. ತಪ್ಪಿದ ಹೆಜ್ಜೆಗಳು, ಬುವಿಯಿಂದ ಬಾನಿಗೆ, ಸೌರಭ ಸೇತು, ಹರಿದತ್ತ ಹರಿವ ಚಿತ್ತ, ನೂರ್ ಜಹಾನ್, ನಡು ವಯಸ್ಸಿನಲ್ಲಿ (ಚೀನಿ ಭಾಷಾಂತರ) ಶಾಲ್ಮಲಿ (ಹಿಂದಿ ಭಾಷಾಂತರ) ಮುಂತಾದವು ಕಾದಂಬರಿಗಳು; ಮಾನಿಷಾದ, ಕಾಣದ ದಿಕ್ಕಿನತ್ತ, ಅದೇ ಮುಖ, ಒಳದನಿ, ಚೀನಿ ಭಾಷೆಯಿಂದ ಲುಷುನ್ ಅವರ 10 ಚೀನಿ ಕಥೆಗಳು ಮತ್ತು ಹುಚ್ಚನ ದಿನಚರಿ ಮುಂತಾದವು ಕಥಾ ಸಂಕಲನಗಳು; ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ ಪ್ರವಾಸ ಕಥನ; ಸ್ಪಂದನ, ಸಮಾಲೋಚನ ಮುಂತಾದುವು ವಿಮರ್ಶಾ ಕೃತಿಗಳು; ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಅವರ ಕೃತಿಯನ್ನು 'ಒಂದು ನೂರು ವರ್ಷಗಳ ಏಕಾಂತ' ಎಂಬ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. 'ಬೆಸುಗೆಯ ಬಂಧನದಲ್ಲಿ ಬಾ ಮತ್ತು ಬಾಪು' ಡಾ. ವಿಜಯಾ ಸುಬ್ಬರಾಜ್ ಅವರ ಮತ್ತೊಂದು ಕೃತಿ.
ಡಾ. ವಿಜಯಾ ಸುಬ್ಬರಾಜ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ನೀಲಗಂಗ ಪ್ರಶಸ್ತಿ, ಕಂದಗಲ್ ಹನುಮಂತರಾವ್ ಪ್ರಶಸ್ತಿ, ದೊಂಬಿವಿಲಿ ಕರ್ನಾಟಕ ಸಂಘ (ಮುಂಬಯಿ) ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಶಾರದಾ ಸಾಹಿತ್ಯ ಸ್ತ್ರೀ ಪ್ರಶಸ್ತಿ, ಪೆರ್ಲಕೃಷ್ಣಭಟ್ ಪ್ರಶಸ್ತಿ, ಸಂಜೆವಾಣಿ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಡಾ. ವಿಜಯಾ ಸುಬ್ಬರಾಜ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of writer Dr. Vijaya Subbarao
ಕಾಮೆಂಟ್‌ಗಳು