ಎನ್. ರಾಮಾನುಜ
ಎನ್. ರಾಮಾನುಜ
ಇಂದು ಪೂಜ್ಯ ಎನ್. ರಾಮಾನುಜ ಅವರ ಹುಟ್ಟು ಹಬ್ಬ. ಯಾವುದೇ ಭೇದ ಭಾವಗಳಿಲ್ಲದ ಸಹಜ ನಿಷ್ಕಲ್ಮಶ ಪ್ರೀತಿ; ಆಸಕ್ತಿ ಉಳ್ಳ ಹೃದಯಗಳಿಗೆ ನಿರಂತರ ಪ್ರೋತ್ಸಾಹ, ತಾನು ಪ್ರೋತ್ಸಾಹಿಸಿ ಬೆಳಿಸಿದ ಸಸಿಗಳು ಮರವಾಗಿ ಬೆಳೆದಿದ್ದನ್ನು ಸಂಭ್ರಮಿಸುವ ವಿಶಾಲ ಹೃದಯವಂತಿಕೆ, ಅಪಚಾರ ಎಸಗಿದವರನ್ನೂ ಆದರಿಸುವ ದೊಡ್ಡ ಮನಸ್ಸು, ಹೀಗೆ ಹಲವು ರೀತಿಯಲ್ಲಿ ನನ್ನ ಮನಸ್ಸನ್ನು ಆವರಿಸುವ ಪೂಜ್ಯರಿವರು.
ಭಾರತೀಯ ವಿದ್ಯಾಭವನವನ್ನು ಕರ್ನಾಟಕದಲ್ಲಿ ಮತ್ತೂರು ಕೃಷ್ಣಮೂರ್ತಿ ಅವರಿಗೆ ಜೋಡಿಯಾಗಿ ವೈವಿಧ್ಯಮಯವಾಗಿ ಬೆಳಗಿಸಿ ಇತ್ತೀಚಿನವರೆಗೂ ಮುನ್ನಡೆಸಿದ ಕೀರ್ತಿ ರಾಮಾನುಜ ಅವರದ್ದು. ಅಂತೆಯೇ ಭವಾನ್ಸ್ ವಿದ್ಯಾಸಂಸ್ಥೆಗಳು, ಭವಾನ್ಸ್ ಬಿರ್ಲಾ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಪ್ರಾರಂಭಿಕ ಸಮಯದಿಂದ ಇತ್ತೀಚಿನವರೆಗೆ ಅಧ್ಯಕ್ಷತೆವಹಿಸಿ ನಿರಂತರವಾಗಿ ಮುನ್ನಡೆಸಿದ ಯಶಸ್ಸು ಕೂಡಾ ಅವರದ್ದು.
ಕೊಳ್ಳೇಗಾಲ ಗ್ರಾಮದಿಂದ ಬಂದ ರಾಮಾನುಜ ಅವರು ಮೈಸೂರಿನ ಮಾತೃಮಂಡಲಿ, ಮಹಾಜನಾಸ್, ಯುವರಾಜಾ, ಎನ್ ಐ ಕಾಲೇಜು ಮುಂತಾದೆಡೆಗಳಲ್ಲಿ ವಿದ್ಯಾಭ್ಯಾಸ ನಡೆಸಿ ಎಚ್ ಎಮ್ ಟಿ ಸಂಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನದವರೆಗೆ ಏರಿದ ಸಾಧನೆ ಮಾಡಿದವರು.
ರಾಮಾನುಜ ಅವರು ಅಂದಿನ ದಿನಗಳಲ್ಲಿ ಹೊಸ ಸಂಚಲನ ಮೂಡಿಸಿದ 'ಗೆಳೆಯರ ಬಳಗ'ದಲ್ಲಿ ಒಬ್ಬರು. ಬಾಕಿನ, ಸುಬ್ರಾಯ ಚೊಕ್ಕಾಡಿ Subraya Chokkady, ಟಿ. ಆರ್. ಶಾಮ ಭಟ್ಟ Shama Bhat, ಪರಂಜ್ಯೋತಿ, ಕಿರಣ ಮುಂತಾದವರು ಈ ಬಳಗದಲ್ಲಿದ್ದರು. ಈ 'ಗೆಳೆಯರ ಬಳಗ'ದ ಮೂಲಕ 'ಕವಿತಾ' ಎಂಬ ಹೆಸರಿನ ಕಾವ್ಯ ಮತ್ತು ಕಾವ್ಯವಿಮರ್ಶೆಗೆಂದೇ ಮೀಸಲಾದ ಋತು ಪತ್ರಿಕೆ ಮೂಡಿಬರುತ್ತಿತ್ತು. ಅದರ ಘೋಷವಾಕ್ಯ “ಕಾವ್ಯಂ ನ ಮಮಾರ ನ ಜೀರ್ಯತಿ” (ಅಥರ್ವ ವೇದ X.8.೩೨) ಅಂದರೆ ‘ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ’. ಈ ಚಿಂತನೆಯೇ ರೋಮಾಂಚನ ಮೂಡಿಸುವಂತದ್ದು.
ರಾಶಿ ಅವರ ಕೊರವಂಜಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ರಾಮಾನುಜ, ಮ. ರಾಮಮೂರ್ತಿ, ಅನಕೃ ಮುಂತಾದ ದಿಗ್ಗಜರ ಆಪ್ತ ಹುಡುಗನಾಗಿ ಕನ್ನಡ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಡುಗ. ಮುಂದೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದರೂ ಹೋದೆಡೆಯಲ್ಲೆಲ್ಲ ಸಾಂಸ್ಕೃತಿಕ ಮತ್ತು ಕನ್ನಡ ಮನಸ್ಸುಗಳು ಒಂದುಗೂಡಲು ಆಸಕ್ತಿ ವಹಿಸಿದವರು. ನಾನು ಎಚ್ ಎಮ್ ಟಿ ಕನ್ನಡ ಸಂಪದದಲ್ಲಿ ಕಾರ್ಯನಿರ್ವಹಿಸುವಾಗ ಮೆಚ್ಚಿ ಬೆನ್ನು ತಟ್ಟಿ ಅಲ್ಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ವ್ಯಾಪ್ತಿ ತಂದುಕೊಟ್ಟವರು. ಅವರೊಡನೆ ಅವರು ಬೆಳೆದು ಬಂದ ಕನ್ನಡ ಪ್ರೀತಿಯನ್ನು ಆಲಿಸುವುದು ರಸಮಯ ಅನುಭವ ನೀಡುವಂತದ್ದು. ಅವರು ಎಚ್ ಎಮ್ ಟಿ ಕೈಗಡಿಯಾರ ಪ್ರಯೋಜಕತೆಯ ಮೂಲಕ 'ನೀನಾಸಂ ತಿರುಗಾಟ' ಯೋಜನೆ, 'ಕುಮಾರವ್ಯಾಸ ಭಾರತ' ಪ್ರಚಾರದಂತಹ ಯೋಜನೆಗಳಿಗೆ ದೊಡ್ಡ ಬೆಂಬಲ ನೀಡುವಂತಹ ಸಾಂಸ್ಕೃತಿಕ ಸಹೃದಯತೆ ಮೆರೆದರು. 'ಅಪರಂಜಿ' ಪತ್ರಿಕೆ ಮತ್ತು ಅದರ ಹಾಸ್ಯೋತ್ಸವ ಕಾರ್ಯಕ್ರಮಗಳನ್ನೂ ಪೋಷಿಸಿದರು.
ಎನ್. ರಾಮಾನುಜ ಅವರ ಸಾಹಿತ್ಯ, ಸಂಸ್ಕೃತಿ ಮತ್ತು ಸಹೃದಯತೆಗಳ ರಾಯಭಾರಿತ್ವದ ವ್ಯಾಪ್ತಿ ಬೃಹತ್ತಾದದ್ದು. ಅವರಿಗೆ ಪರಿಚಿತವಿಲ್ಲದ ಸಾಹಿತ್ಯ, ಸಾಂಸ್ಕೃತಿಕ, ಸಾಂಸ್ಥಿಕ, ಶೈಕ್ಷಣಿಕ, ಆಡಳಿತಜ್ಞ, ರಾಜಕೀಯ ಗಣ್ಯರು ಕಡಿಮೆ ಎಂದರೂ ತಪ್ಪಿಲ್ಲ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳು ಸಂದಿವೆ.
ಪ್ರೀತಿ ಪ್ರೋತ್ಸಾಹಗಳ ಮಹಾನ್ ವೃಕ್ಷವಾದ ಎನ್ ರಾಮಾನುಜ ಅವರ ನೆರಳಲ್ಲಿ ಪುನೀತರಾದ ಮಂದಿ ಅನೇಕ. ಅಂತಹ ಧನ್ಯರಲ್ಲಿ ನಾನೂ ಒಬ್ಬ. ಈ ಮಹಾನ್ ವೃಕ್ಷ ಎನ್. ರಾಮಾನುಜ ಅವರು ಬಹುಕಾಲ ಆರೋಗ್ಯ ಸಂತಸ ಸೌಭಾಗ್ಯಗಳಿಂದ ನಮ್ಮನ್ನು ಪ್ರೇರಿಸುತ್ತಿರಲಿ. ನಮಸ್ಕಾರ.
On the birth day of Ramanuja Narayanaswamy Sir
ಕಾಮೆಂಟ್‌ಗಳು