ಪಾರ್ಥಸಾರಥಿ
ಪಾರ್ಥಸಾರಥಿ ಶ್ರೀನಿವಾಸರಂಗ
ಇಂದು ನಾಡಿನ ಹಿರಿಯ ವಿದ್ವಾಂಸರಾದ ಕಳಲೆ ಪಾರ್ಥಸಾರಥಿ ಶ್ರೀನಿವಾಸರಂಗ ಅವರ ಜನ್ಮದಿನ.
ಮೂಲತಃ ಕಳಲೆಯವರಾದ ಕೆ. ಎಸ್. ಪಾರ್ಥಸಾರಥಿ ಅವರು 1941ರ ಏಪ್ರಿಲ್ 25ರಂದು ಜನಿಸಿದರು. ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸಂಖ್ಯಾಶಾಸ್ತ್ರ ಗಣಿತಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. ಆ ವರ್ಷ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿ ಪ್ರಥಮ ಎಂ.ಎ. ಅಲ್ಲಿ ಪ್ರಥಮ ಸ್ಥಾನ ಗಳಿಸಿದರೂ ಅವರಿಗೆ ಎರಡನೆಯ ಎಂಎ ಗೆ ಪಾಸ್ ಕೊಡಲಿಲ್ಲ. ಒಬ್ಬ ಪ್ರಾಧ್ಯಾಪಕರು ಇದಕ್ಕೆ "ತರಗತಿಯಲ್ಲಿ ಹಾಜರಿ ಖೋತ ಅಂತ ಕಾರಣ" ನೀಡಿದ್ದರು. ಆದರೂ ಸ್ವಂತ ಓದಿನಿಂದ ಅರ್ಥಶಾಸ್ತ್ರದಲ್ಲಿ ಆಧುನಿಕ ಕಾಲದವರೆಗಿನ ಎಲ್ಲ ಬೆಳವಣಿಗೆಗಳ ಕುರಿತಾಗಿ ಅಪಾರ ಪರಿಣತಿ ಗಳಿಸಿಕೊಂಡಿದ್ದಾರೆ.
ಪಾರ್ಥಸಾರಥಿ ಅವರು ಈಗಿನ ಯುಗದ ಬಿಎಸ್ಎನ್ಎಲ್ ಎನಿಸಿರುವ ಅಂದಿನ ಯುಗದ ಪೋಸ್ಟ್ ಅಂಡ್ ಟೆಲಿಗ್ರಾಫ್ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದರು.
ಪಾರ್ಥಸಾರಥಿ ಅವರು ಹಲವಾರು ವೈವಿಧ್ಯಮಯ ವಿಚಾರಗಳ ಕುರಿತು ನೂರಾರು ಮೌಲಿಕ ಲೇಖನಗಳನ್ನು ವಿವಿಧ ನಿಯತಕಾಲಿಕಗಳಿಗೆ ಬರೆದಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಬರೆದಿದ್ದರೂ ಆಧ್ಯಾತ್ಮ, ಮಾರ್ಕ್ಸ್, ತತ್ವಶಾಸ್ತ್ರ, ಇತಿಹಾಸಗಳ ಕುರಿತೂ ಅವರ ಬರವಣಿಗೆಗಳು ವ್ಯಾಪಿಸಿವೆ.
ಮಾರ್ಕ್ಸ್ ಚಿಂತನೆಗಳಿಗೆ ಹೆಚ್ಚು ಆಕರ್ಷಿತರಾದ ಪಾರ್ಥಸಾರಥಿ ಅವರು ನವಕರ್ನಾಟಕದ 'ಹೊಸತು' ಪತ್ರಿಕೆಗೆ ಸಹಸಂಪಾದಕರಾಗಿ ಸುಮಾರು ಎರಡು ದಶಕದ ಕಾಲ ಕೆಲಸ ಮಾಡಿದ್ದಾರೆ. ಪಾರ್ಥಸಾರಥಿಯವರು ತಮ್ಮ ಬರವಣಿಗೆಗಳನ್ನು ಕೃತಿರೂಪವಾಗಿಸಲು ಹೆಚ್ಚು ಆಶಯ ಹೊಂದದವರಾಗಿದ್ದರು. ಆದರೂ ಅವರು ಆಪ್ತರ ಒತ್ತಾಯದ ಮೇರೆಗೆ ರಚಿಸಿದ 'ಕಾರ್ಲ್ ಮಾರ್ಕ್ಸ್ ನುಡಿಮಿಂಚು', 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - ಒಂದು ಚಾರಿತ್ರಿಕ ಹಿನ್ನೋಟ' ಮತ್ತು ಪ್ರೊ. ಪ್ರೊ. ಕೆ. ಎಸ್. ಫಣಿಕ್ಕರ್ ಅವರ ಅನುವಾದ 'ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ' ಎಂಬ ಕೃತಿಗಳು ಇಂದೂ ನಿರಂತರವಾಗಿ ಅನೇಕ ಮರುಮುದ್ರಣಗಳನ್ನು ಕಾಣುತ್ತಿದೆ. ಬಿ ವಿ ಕಕ್ಕಿಲ್ಲಾಯ ಅವರಿಗೆ ತೊಂಭತ್ತು ತುಂಬಿದಾಗ ಇವರ ಸಂಪಾದನೆಯಲ್ಲಿ ಮೂಡಿದ 'ನಿರಂತರ' ಒಂದು ಮೌಲಿಕ ಗ್ರಂಥವಾಯಿತು.
ಪಾರ್ಥಸಾರಥಿ ಅವರಿಗೆ ವಯಸ್ಸು ಎಂಭತ್ತೊಂದು ಅನ್ನುತ್ತಾರೆ. ಅವರೊಂದಿಗೆ ಮಾತಾಡುತ್ತಿದ್ದರೆ ವಯಸ್ಸು ಇಪ್ಪತ್ತರದೇನೋ ಅನಿಸುವ ಸುಸ್ಪಷ್ಟ ಇನಿಧ್ವನಿಯ ವಿದ್ವತ್ಪೂರ್ಣ ಖಚಿತ ನಿಲುವಿನ ಮಾತುಗಳು ಸಂಮೋಹನಗೊಳಿಸುವಂತಿರುತ್ತದೆ. ಅವರೊಬ್ಬ ಅಪೂರ್ವ ವಿಶಾಲ ಮನಸ್ಸಿನ ಸಹೃದಯಿ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಅವರು ಹರಿಸಿದ ವಾತ್ಸಲ್ಯ, ಅವರು ನನ್ನ ಪ್ರತಿನಿತ್ಯದ ಬರಹಕ್ಕೆ ನೀಡುತ್ತ ಬಂದಿರುವ ಅಕ್ಕರೆಯುತ ಪ್ರೋತ್ಸಾಹ ಹೃದಯ ತುಂಬಿಸುತ್ತಿದೆ.
ಆತ್ಮೀಯ ಹಿರಿಯರೂ, ವಿದ್ವಾಂಸರೂ, ಸರಳ ಸಜ್ಜನಿಕೆಯ ಪ್ರೀತಿ ತುಂಬಿಕೊಂಡವರೂ ಆದ ಕಳಲೆ ಪಾರ್ಥಸಾರಥಿ ಶ್ರೀನಿವಾಸರಂಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
On the birthday of our great scholar, writer and affectionate Parthasarathy Srinivasaranga Sir 🌷🙏🌷
ಕಾಮೆಂಟ್‌ಗಳು