ಸಿ. ಎನ್. ಮಂಜುನಾಥ್
ಡಾ. ಸಿ. ಎನ್. ಮಂಜುನಾಥ್
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 1957ರಲ್ಲಿ ಜನಿಸಿದ ಡಾ. ಸಿ. ಎನ್. ಮಂಜುನಾಥ್ ಅವರು ಈ ನಾಡು ಕಂಡ ಶ್ರೇಷ್ಠಮಟ್ಟದ ಹೃದಯರೋಗ ತಜ್ಞರು.
ಮಂಜುನಾಥ್ ಅವರು ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣಗಳನ್ನು ಪೂರ್ಣಗೊಳಿಸಿದರು. ಇವರು ಹೃದಯಸಂಬಂಧಿ ರೋಗಗಳನ್ನು ಗುಣಪಡಿಸುತ್ತಲೇ ತಮ್ಮ ವೈದ್ಯಕೀಯ ಶಿಕ್ಷಣದಲ್ಲಿ ಉತ್ಕೃಷ್ಟತೆ ಗಳಿಸಿಕೊಂಡರು.
ಮಂಜುನಾಥ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡುತ್ತಿರಬೇಕಾದರೆ ಅಸಿಸ್ಟೆಂಟ್ ಸರ್ಜನ್ ಆಗಿ ನೇಮಕಗೊಂಡರು. ಮೊದಲ ಕೆಲವು ತಿಂಗಳುಗಳು ಕೆ ಆರ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನಂತರ ಡಿಎಂ ಮಾಡಲು, ಕೆಎಂಸಿ ಮಣಿಪಾಲಿಗೆ ಸೇರಿಕೊಂಡರು. ಜನವರಿ 1989 ರಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಸೇರಿಕೊಂಡರು. ಮೊದಲು ಅಲ್ಲಿ ಪ್ರಾಧ್ಯಾಪಕರಾಗಿ ಸೇರಿ ನಂತರ, ಹಂತಹಂತವಾಗಿ ತಮ್ಮಅನುಭವಕ್ಕೆ ಅನುಗುಣವಾಗಿ 1996ರಲ್ಲಿ ಪ್ರೊಫೆಸರ್ ಆಗಿ ಪ್ರಮೋಷನ್ ಪಡೆದು, 2006ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಸರಕಾರೀ ಕಾಲೇಜುಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಓದುತ್ತಾರೆ. ಪ್ರಮುಖವಾದ ಸಮಸ್ಯೆ ಏನಂದರೆ, ಸರಕಾರೀ ಆಸ್ಪತ್ರೆಗಳ ನಿರ್ವಹಣೆ ಚೆನ್ನಾಗಿರುವುದಿಲ್ಲ. ಜನರಲ್ಲಿ ಸರಕಾರೀ ಆಸ್ಪತ್ರೆಯೆಂದರೆ ಒಳ್ಳೆಯ ಭಾವನೆಯಿರುವುದಿಲ್ಲ. ಮಂಜುನಾಥರಿಗೆ ಒಂದು ಕನಸಿತ್ತು. ತಮಗೆ ಸರಕಾರೀ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿ ಏನಾದರೂ ದೊರೆತರೆ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು. ಅದನ್ನು ಅವರು ನನಸಾಗಿಸಿಕೊಂಡರು.
ಡಾ. ಮಂಜುನಾಥ್ ಅವರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಮೇಲೆ ಅದರ ಖ್ಯಾತಿಯು ವಿಶ್ವದಾದ್ಯಂತ ಪಸರಿಸಲು ಕಾರಣಕರ್ತರಾಗಿದ್ದಾರೆ. ಇವರ ಹಲವಾರು ವಿಶೇಷ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಪ್ರಕಟವಾಗಿವೆ. ಹಾಗೆಯೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹಲವಾರು ವೈದ್ಯಕೀಯ ಸಮಾವೇಶಗಳನ್ನು ಆಯೋಜಿಸಿದ ಖ್ಯಾತಿಯೂ ಇವರದಾಗಿದೆ. ಹಳ್ಳಿಗಾಡಿನ ಹಾಗೂ ಬಡಜನತೆಯ ಆರೋಗ್ಯದತ್ತ ಮಂಜುನಾಥ್ ಅವರು ಹರಿಸಿದ ವಿಶೇಷ ಗಮನ ನಾಡಿನ ಎಲ್ಲ ವರ್ಗದವರ ಮನಗಳನ್ನೂ ತಟ್ಟಿವೆ. ಇವರ ಮುಂದಾಳತ್ವದಲ್ಲಿ ಪ್ರತಿನಿತ್ಯ ನಡೆಯುವ ವಿಧವಿಧವಾದ ವಿಶೇಷ ಶಸ್ತ್ರಚಿಕಿತ್ಸೆಗಳು ಅಪಾರ.
ಡಾ.ಮಂಜುನಾಥ್ ಹೇಳುತ್ತಾರೆ, “ನಾವು ಯಾವುದೇ ರೋಗಿಗೆ ಚಿಕಿತ್ಸೆ ಕೊಡುವಾಗ, ಅವರೊಬ್ಬರನ್ನು ಮಾತ್ರ ನೋಡುವುದಿಲ್ಲ, ಅವರ ಮನೆಯ ಕಡೆಯವರನ್ನೂ ನೋಡಬೇಕಾಗುತ್ತದೆ. ರೋಗಿಗೆ ನಾವು ನೀಡುವ ಚಿಕಿತ್ಸೆ ಫಲಕಾರಿಯಾದರೆ, ಇಡೀ ಕುಟುಂಬವೇ ಸಂತೋಷದಿಂದ ಬಾಳಬಹುದು. ಪ್ರಾಣ ಎನ್ನುವುದು ಬಹಳ ಮುಖ್ಯ. ಇಡೀ ಕುಟುಂಬ ಅವರನ್ನು ನಂಬಿಕೊಂಡು ಇರುತ್ತದೆ.
ಹಣ, ಡಾಕ್ಯುಮೆಂಟ್ಸ್, ಇನ್ಸೂರೆನ್ಸ್ ಇರಲಿ, ಇರದೇ ಇರಲಿ. ಗುಣಮಟ್ಟದ ಚಿಕಿತ್ಸೆ ನೀಡಬೇಕು ಎನ್ನುವುದೇ ನನ್ನ ಸಂಕಲ್ಪ, ಅದೇ ರೀತಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಮಾಜದಲ್ಲಿ ನಾವು ಒಬ್ಬರಿಗೆ ಸಹಾಯ ಮಾಡಿದರೆ, ನಾಲ್ಕು ಜನ ನಮ್ಮ ಕಷ್ಟಕ್ಕೆ ನಿಲ್ಲುತ್ತಾರೆ. ಐವತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದೇವೆ. (ನನ್ನ ಗಮನಕ್ಕೆ ಬಂದ ಹಾಗೆ) ಹಣ ಇಲ್ಲ ಎಂದು ಯಾವುದೇ ರೋಗಿಯನ್ನೂ ವಾಪಸ್ ಕಳುಹಿಸಿದ ಘಟನೆ ನಡೆದಿಲ್ಲ.”
ಇಂದು ಜಯದೇವ ಆಸ್ಪತ್ರೆಯ ಪರಿಧಿ ಕೆಲವು ಹಳೆಯ ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಿದೆ. ಇದು ಗುಲ್ಬರ್ಗಾದಲ್ಲಿಯೂ ತನ್ನ ಶಾಖೆಯನ್ನು ಮೂಡಿಸಿದೆ.
ಡಾ. ಮಂಜುನಾಥ್ ಅವರು ಸಲ್ಲಿಸುತ್ತಿರುವ ನಿಸ್ವಾರ್ಥಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ರಾಜೀವಗಾಂಧೀ ಅರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿದೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರಿ ಅನಸೂಯ ಅವರ ಪತಿಯಾದ ಡಾ. ಸಿ. ಎನ್. ಮಂಜುನಾಥ್ ಎಲ್ಲ ರಾಜಕೀಯ ಎಲ್ಲೆಗಳನ್ನೂ ಮೀರಿ ಜನಸೇವೆಯಿಂದ ಸಕಲರ ಹೃದಯದಲ್ಲಿ ಸ್ಥಾಪಿತಗೊಂಡಿರುವವರು. ಅವರ ಜನಪರ ಕಾಳಜಿಗಳು ಮಾತಾಗಿರದೆ ಜನಹೃದಯಗಳಲ್ಲಿ ಸಾಕಾರಗೊಂಡಿವೆ.
ನಾವು ಭುವಿಗೆ ಬರುವುದಕ್ಕೆ ಮುಂಚೆ ವಿಶ್ವಮಾನವರು, ಇಲ್ಲಿಂದ ಹೋಗುವಾಗ ವಿಶ್ವಮಾನವರು, ಈ ಎರಡರ ಬದುಕಿನ ನಡುವೆಯೂ ವಿಶ್ವಮಾನವತ್ವವನ್ನು ಕಂಡುಕೊಳ್ಳುವ ಅಗತ್ಯವಿದೆ ಎನ್ನುವ ಅವರ ನುಡಿ ಹೃದಯಸ್ಪರ್ಶಿ.
Photo courtesy: Abhijith B. Rao
Great cardiologist Dr. C.N. Manjunath
ಕಾಮೆಂಟ್‌ಗಳು