ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೀಲಾ ಸ್ಯಾಮ್ಸನ್


 ಲೀಲಾ ಸ್ಯಾಮ್ಸನ್


ಲೀಲಾ ಸ್ಯಾಮ್ಸನ್ ಭರತನಾಟ್ಯ ಕಲಾವಿದರಾಗಿ ನೃತ್ಯ ಸಂಯೋಜಕರಾಗಿ, ಬೋಧಕರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ.

ಲೀಲಾ ಸ್ಯಾಮ್ಸನ್ 1951ರ ಮೇ 6ರಂದು ತಮಿಳುನಾಡಿನ ಕೂನೂರಿನಲ್ಲಿ ವೈಸ್ ಅಡ್ಮಿರಲ್ ಬೆಂಜಮಿನ್ ಅಬ್ರಹಾಂ ಸ್ಯಾಮ್ಸನ್ ಮತ್ತು ಲೈಲಾ ಸ್ಯಾಮ್ಸನ್ ದಂಪತಿಗಳ ಪುತ್ರಿಯಾಗಿ ಜನಿಸಿದರು. ಭಾರತೀಯ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದ ತಂದೆ ಪುಣೆಯ ಯಹೂದಿ ಬೆನೆ-ಇಸ್ರೇಲಿಯೇಟ್  ಸಮುದಾಯಕ್ಕೆ ಸೇರಿದವರು.  ತಾಯಿ ಅಹಮದಾಬಾದಿನ ಗುಜರಾತಿ ರೋಮನ್ ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು. 

ಲೀಲಾ ಸ್ಯಾಮ್ಸನ್‌ ಒಂಬತ್ತು ವರ್ಷದವರಾಗಿದ್ದಾಗ  ರುಕ್ಮಿಣಿ ದೇವಿ ಅರುಂಡೇಲ್ ಅವರ ಆಶ್ರಯದಲ್ಲಿ ನೃತ್ಯ ಕಲಿಯಲು ಕಲಾಕ್ಷೇತ್ರಕ್ಕೆ ಬಂದರು. ಆ ಸಂದರ್ಭದಲ್ಲಿ ಬೆಸೆಂಟ್ ಥಿಯೊಸಾಫಿಕಲ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮಧ್ಯೆ ಬಿ.ಎ ಮುಗಿಸಿ  ಪುನಃ ಕಲಾಕ್ಷೇತ್ರದಲ್ಲಿ ಭರತನಾಟ್ಯ ಸಾಧನೆಯನ್ನು ಮುಂದುವರೆಸಿದರು.

ಲೀಲಾ ಸ್ಯಾಮ್ಸನ್ ದೆಹಲಿಯ ಶ್ರೀರಾಮ್ ಭಾರತೀಯ ಕಲಾ ಕೇಂದ್ರ ಮತ್ತು ದೆಹಲಿಯ ಗಂಧರ್ವ ಮಹಾವಿದ್ಯಾಲಯಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿದರು. ಅವರ ಗಮನಾರ್ಹ ಶಿಷ್ಯರಲ್ಲಿ ಜಾಯ್ಸ್ ಪಾಲ್ ಪೌರ್ಸಾಬಾಹಿಯಾನ್ ಮತ್ತು ಜಸ್ಟಿನ್ ಮೆಕಾರ್ಥಿ ಸೇರಿದ್ದಾರೆ. ಯುರೋಪ್, ಆಫ್ರಿಕಾ ಮತ್ತು ಅಮೆರಿಕಾ ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿ ಅವರು ನೃತ್ಯಪ್ರದರ್ಶನ ನೀಡಿದ್ದಾರೆ.

1995ರಲ್ಲಿ, ಭರತನಾಟ್ಯದ ಸಾಂಪ್ರದಾಯಿಕ ಶಬ್ದಕೋಶವನ್ನು ಪರಿಶೀಲಿಸಲು ಲೀಲಾ ಸ್ಯಾಮ್ಸನ್ 'ಸ್ಪಂದಾ' ಎಂಬ ನೃತ್ಯ ಗುಂಪನ್ನು ರಚಿಸಿದರು. ಸಂಚಾರಿ ಮತ್ತು ಹೂಬಿಡುವ ಮರ ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಅವರ ಕೃತಿಗಳ ಮೇಲೆ ಮೂಡಿಸಲಾಗಿದೆ. 

ಲೀಲಾ ಸ್ಯಾಮ್ಸನ್ ಅವರು ಮಣಿರತ್ನಂ ನಿರ್ದೇಶನದ  'ಓಕೆ ಕಣ್ಮಣಿ'  ತಮಿಳು ಚಿತ್ರ ಮತ್ತು ಅದರ ಹಿಂದೀ ಆವೃತ್ತಿಯಾದ 'ಓಕೆ ಜಾನು'ನಲ್ಲಿ ನಟಿಸಿ ಗಮನ ಸೆಳೆದರು. 

ಲೀಲಾ ಸ್ಯಾಮ್ಸನ್ ಅವರು ರಿದಮ್ ಇನ್ ಜಾಯ್: ಕ್ಲಾಸಿಕಲ್ ಇಂಡಿಯನ್ ಡ್ಯಾನ್ಸ್ ಟ್ರೆಡಿಶನ್ಸ್. ರುಕ್ಮಿಣಿ ದೇವಿ: ಎ ಲೈಫ್ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

2005ರಲ್ಲಿ ಅಂದಿನ ಕೇಂದ್ರ ಸರ್ಕಾರ ಲೀಲಾ ಸ್ಯಾಮ್ಸನ್ ಅವರನ್ನು ಕಲಾಕ್ಷೇತ್ರದ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಚೇರ್ ಪರ್ಸನ್ ಆಗಿದ್ದರು. ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷರೂ ಆಗಿದ್ದರು. 

ಲೀಲಾ ಸ್ಯಾಮ್ಸನ್ ಅವರಿಗೆ ಪದ್ಮಶ್ರೀ, ತಮಿಳುನಾಡು ಸರ್ಕಾರದ  ನೃತ್ಯ ಚೂಡಾಮಣಿ, ಕಲೈಮಾಮಣಿ,  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ. 

On the birthday of dancer Leela Samson

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ