ಮೋತಿಲಾಲ್ ನೆಹರೂ
ಮೋತಿಲಾಲ್ ನೆಹರೂ
ಮೋತಿಲಾಲ್ ನೆಹರೂ ಸ್ವಾತಂತ್ರ್ಯ ಹೋರಾಟಗಾರರಾಗಿ, ವಕೀಲರಾಗಿ, ಮತ್ತು ರಾಜಕಾರಣಿಯಾಗಿ ಹೆಸರಾಗಿದ್ದವರು. ಅವರು ಎರಡು ಬಾರಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.
ಮೋತಿಲಾಲ್ ನೆಹರೂ 1861ರ ಮೇ 6ರಂದು ಜನಿಸಿದರು. ತಂದೆ ಗಂಗಾಧರ ನೆಹರೂ, ಇವರು ಜನಿಸುವ ಮೂರು ತಿಂಗಳ ಮುಂಚೆ ನಿಧನರಾದರು. ತಾಯಿ ಇಂದ್ರಾಣಿ. ನೆಹರೂ ಕುಟುಂಬ ದೆಹಲಿಯಲ್ಲಿ ಹಲವಾರು ತಲೆಮಾರುಗಳಿಂದ ನೆಲೆಸಿತ್ತು. ಗಂಗಾಧರ ನೆಹರೂ ಆ ನಗರದಲ್ಲಿ ಕೊತ್ವಾಲ್ ಆಗಿದ್ದರು. 1857ರ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ದೆಹಲಿಯ ಗಂಗಾಧರ್ ನೆಹರೂ ಕುಟುಂಬದ ಮನೆಯನ್ನು ಲೂಟಿ ಮಾಡಿ ಸುಟ್ಟು ಹಾಕಲಾಗಿ, ಗಂಗಾಧರ್ ತಮ್ಮ ಕುಟುಂಬದೊಂದಿಗೆ ದೆಹಲಿಯನ್ನು ತೊರೆದು ಆಗ್ರಾಕ್ಕೆ ತೆರಳಿದರು.
ತಮ್ಮ ಪತಿಯನ್ನು ಕಳೆದುಕೊಂಡ ಮೋತಿಲಾಲ್ ನೆಹರೂ ಅವರ ತಾಯಿ ಇಂದ್ರಾಣಿ ತನ್ನ ಮಕ್ಕಳು ಸಂಪಾದಿಸುವವರೆಗೆ ಅಷ್ಟೇನೂ ಅನುಕೂಲದಲ್ಲಿ ಇಲ್ಲದ ತನ್ನ ಸಹೋದರ ದೆಹಲಿಯ ಬಜಾರ್ ಸೀತಾರಾಮ್ ಅಮರನಾಥ್ ಜುಟ್ಶಿ ಅವರಿಂದ ಜೀವನಾಧಾರದ ಬೆಂಬಲ ಪಡದರು. ಮುಂದೆ ಮೋತಿಲಾಲ್ ಅವರ ಹಿರಿಯ ಅಣ್ಣ ನಂದಲಾಲ್ ಖೇತ್ರಿಯ ರಾಜನ ಆಸ್ಥಾನದಲ್ಲಿ ಗುಮಾಸ್ತರಾಗಿ ಕೆಲಸ ಗಳಿಸಿ, ಕ್ರಮೇಣ ಅಲಹಾಬಾದಿನಲ್ಲಿ ವಕೀಲರಾದರು.
ಮೋತಿಲಾಲ್ ನೆಹರೂ 1883ರಲ್ಲಿ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾನ್ಪುರದಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ನಂತರ, ಚೆನ್ನಾಗಿ ವಕೀಲ ವೃತ್ತಿ ನಡೆಸುತ್ತಿದ್ದ ಸಹೋದರ ನಂದಲಾಲ್ ಅವರೊಂದಿಗೆ ಅಲಹಾಬಾದ್‌ನಲ್ಲಿ ವಕೀಲ ವೃತ್ತಿಗೆ ಸಹಾಯಕರಾಗಿ ಜೊತೆಗೂಡಿದರು. ಏಪ್ರಿಲ್ 1887ರಲ್ಲಿ ನಂದಲಾಲ್ ಇನ್ನೂ ತಮ್ಮ 42ನೇ ವಯಸ್ಸಿನಲ್ಲಿ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಸೇರಿ, ದೊಡ್ಡ ಕುಟುಂಬವನ್ನು ಅಗಲಿ ನಿಧನರಾದರು. ಹೀಗೆ 25ನೇ ವಯಸ್ಸಿನಲ್ಲಿ ಮೋತಿಲಾಲ್ ನೆಹರೂ ತಮ್ಮ ವಿಸ್ತೃತ ನೆಹರೂ ಕುಟುಂಬದ ಏಕೈಕ ಜೀವನಾಧಾರ ಸಂಪಾದಿಸುವವರಾದರು.
ಮೋತಿಲಾಲ್ ನೆಹರೂ ವಕೀಲ ವೃತ್ತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಖ್ಯಾತರಾದರು. 1900ರಲ್ಲಿ, ಅಲಹಾಬಾದ್ ನಗರದ ಸಿವಿಲ್ ಲೈನ್ಸ್‌ನಲ್ಲಿ ದೊಡ್ಡ ಮನೆಯನ್ನು ಖರೀದಿಸಿ ಅದಕ್ಕೆ 'ಆನಂದ ಭವನ' ಎಂದು ಹೆಸರಿಟ್ಟರು. 1909ರಲ್ಲಿ ಗ್ರೇಟ್ ಬ್ರಿಟನ್‌ನ ಪ್ರಿವಿ ಕೌನ್ಸಿಲ್‌ನಲ್ಲಿ ಪಾಲ್ಗೊಳ್ಳುವ ಘನತೆಯ ವೃತ್ತಿಜೀವನದ ಉತ್ತುಂಗಕ್ಕೇರಿದರು.
ಮೋತಿಲಾಲ್ ನೆಹರೂ ಅಲಹಾಬಾದ್‌ನಿಂದ ಪ್ರಕಟವಾಗುತ್ತಿದ್ದ ಪ್ರಮುಖ ದಿನಪತ್ರಿಕೆ 'ದಿ ಲೀಡರ್'ನ ನಿರ್ದೇಶಕ ಮಂಡಳಿಯ ಮೊದಲ ಅಧ್ಯಕ್ಷರಾದರು. 1919ರ ಫೆಬ್ರುವರಿ 5ರಂದು 'ದಿ ಲೀಡರ್' ಪತ್ರಿಕೆಗೆ ಪ್ರತಿಸ್ಪರ್ಧಿಯಾಗಿ 'ದಿ ಇಂಡಿಪೆಂಡೆಂಟ್' ಎಂಬ ಹೊಸ ದೈನಿಕ ಪತ್ರಿಕೆಯನ್ನು ಪ್ರಾರಂಭಿಸಿದರು.
ಮೋತಿಲಾಲ್ ನೆಹರೂ 1918ರಲ್ಲಿ ಮಹಾತ್ಮ ಗಾಂಧಿಯವರ ಪ್ರಭಾವದ ಅಡಿಯಲ್ಲಿ, ಭಾರತೀಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಆರಂಭಿಸಿದ ಶ್ರೀಮಂತರಲ್ಲಿ ಮೊದಲಿಗರಾದರು.
1919ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಮೋತಿಲಾಲ್ ನೆಹರೂ ಅವರ ಮೇಲೆ ಆಳವಾದ ಪ್ರಭಾವ ಬೀರಿತು. "ನನ್ನ ರಕ್ತ ಕುದಿಯುತ್ತಿದೆ" ಎಂದು ಬರೆದರು. ಅದೇ ವರ್ಷದ ಕೊನೆಯಲ್ಲಿ ಅಮೃತಸರದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದರು. ಸೆಪ್ಟೆಂಬರ್ 1920ರಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಅಸಹಕಾರ ಚಳುವಳಿಗೆ ಬೆಂಬಲ ನೀಡಿದ ಮುಂಚೂಣಿ ನಾಯಕರಾಗಿದ್ದರು. ಡಿಸೆಂಬರ್ 1928ರಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲ್ಕತ್ತಾ ಕಾಂಗ್ರೆಸ ಅಧಿವೇಶನ ಅವರ ಇತರ ನಾಯಕರೊಂದಿಗಿನ ಮುಖಾಮುಖಿ ಘರ್ಷಣೆಯನ್ನು ಬಿಂಬಿಸಿತು. ಅಂದಿನ ದಿನಗಳಲ್ಲಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾಗಳಿಗೆ ಇದ್ದಂತೆ ಬ್ರಿಟಿಷ್ ಸಾಮ್ರಾಜ್ಯದಡಿಯಲ್ಲಿನ ಒಂದು ಸ್ವಯಂ ಆಡಳಿತದ 'ಡೊಮಿನಿಯನ್ ಸ್ಟೇಟಸ್' ಅನ್ನು ಸ್ವೀಕರಿಸಲು ಅವರಿಗೆ ಒಪ್ಪಿಗೆಯಿತ್ತು.
ಮೋತಿಲಾಲ್ ನೆಹರೂ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದರು. ಆರಂಭದಲ್ಲಿ ಮಹಾತ್ಮ ಗಾಂಧಿಯವರಿಗೆ ನಿಕಟವಾಗಿದ್ದರೂ, 1922ರಲ್ಲಿ ಉತ್ತರ ಪ್ರದೇಶದ ಚೌರಿ ಚೌರಾದಲ್ಲಿ ದಂಗೆಕೋರ ಜನಸಮೂಹದಿಂದ ಪೊಲೀಸರನ್ನು ಹತ್ಯೆಗೈದ ಕಾರಣ ಕೊಟ್ಟು ಗಾಂಧಿಯವರು ನಾಗರಿಕ ಪ್ರತಿರೋಧವನ್ನು ಹಿಂತೆಗೆದುಕೊಂಡದ್ದಕ್ಕಾಗಿ ಅವರನ್ನು ಬಹಿರಂಗವಾಗಿ ಟೀಕಿಸಿದರು.
ಮೋತಿಲಾಲ್ ನಂತರ ಸ್ವರಾಜ್ ಪಕ್ಷವನ್ನು ಸೇರಿದರು. ಇದು ಬ್ರಿಟಿಷ್ ಪ್ರಾಯೋಜಿತ ಮಂಡಳಿಗಳಿಗೆ ಪ್ರವೇಶಿಸಲು ಪ್ರಯತ್ನಿಸಿತು. ಮೋತಿಲಾಲ್ ಅವರು ಯುನೈಟೆಡ್ ಪ್ರಾವಿನ್ಸ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಚುನಾಯಿತರಾಗಿದ್ದರು. ಅಲ್ಲಿ ಅವರು ಮಂಡಿಸಿದ ನಿರ್ಣಯವನ್ನು ತಿರಸ್ಕರಿಸಿದ್ದನ್ನು ಪ್ರತಿಭಟಿಸಿ ಹೊರನಡೆದರು. 1923ರಲ್ಲಿ, ಹೊಸ ದೆಹಲಿಯಲ್ಲಿ ಬ್ರಿಟಿಷ್ ಇಂಡಿಯಾದ ಹೊಸ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಆಯ್ಕೆಯಾಗಿ ವಿರೋಧ ಪಕ್ಷದ ನಾಯಕರಾದರು. ಆ ಪಾತ್ರದಲ್ಲಿ, ಅವರು ಹಣಕಾಸು ಮಸೂದೆಗಳು ಮತ್ತು ಇತರ ಶಾಸನಗಳ ಸೋಲುಣಿಸುವ ಮೂಲಕ ಅಥವಾ ಕನಿಷ್ಠ ವಿಳಂಬಗೊಳಿಸುವ ಮೂಲಕ ಬಹು ಪ್ರತೀಕೂಲ ಪರಿಣಾಮಗಳಿಗೆ ತಡೆ ತಂದರು. ಭಾರತೀಯ ಸೇನೆಗೆ ಭಾರತೀಯ ಅಧಿಕಾರಿಗಳ ನೇಮಕಾತಿಯನ್ನು ಉತ್ತೇಜಿಸುವ ಉದ್ದೇಶದಿಂದ ಅವರು ಆಯ್ಕೆ ಸಮಿತಿಯನ್ನು ಸೇರಲು ಒಪ್ಪಿಕೊಂಡರು.
ಮಾರ್ಚ್ 1926ರಲ್ಲಿ, ಮೋತಿಲಾಲ್ ನೆಹರೂ ಭಾರತಕ್ಕೆ ಸಂಪೂರ್ಣ ಡೊಮಿನಿಯನ್ ಸ್ಥಾನಮಾನವನ್ನು ನೀಡುವ ಸಂವಿಧಾನವನ್ನು ರಚಿಸಲು ಪ್ರತಿನಿಧಿ ಸಮ್ಮೇಳನವನ್ನು ಒತ್ತಾಯಿಸಿದರು. ಇದನ್ನು ಬ್ರಿಟಿಷ್ ಸಂಸತ್ತು ಜಾರಿಗೊಳಿಸಿತು. ಈ ಬೇಡಿಕೆಯನ್ನು ಅಸೆಂಬ್ಲಿ ತಿರಸ್ಕರಿಸಿತು ಮತ್ತು ಇದರ ಪರಿಣಾಮವಾಗಿ ನೆಹರು ಮತ್ತು ಅವರ ಸಹೋದ್ಯೋಗಿಗಳು ತಮ್ಮ ಅಸೆಂಬ್ಲಿ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.
1916ರಲ್ಲಿ ಮೋತಿಲಾಲ್ ಅವರ ಮಗ ಜವಾಹರಲಾಲ್ ನೆಹರೂ ರಾಜಕೀಯಕ್ಕೆ ಪ್ರವೇಶಿಸಿದರು. 1929ರಲ್ಲಿ, ಜವಾಹರಲಾಲ್ ನೆಹರೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಜವಾಹರಲಾಲ್ ನೆಹರೂ ತಮ್ಮ ತಂದೆಯ ಡೊಮಿನಿಯನ್ ಸ್ಥಾನಮಾನದ ಆದ್ಯತೆಯನ್ನು ವಿರೋಧಿಸಿದ್ದರು. ಮೋತಿಲಾಲ್ ನೆಹರೂ ಅವರು ಸ್ವರಾಜ್ ಪಕ್ಷವನ್ನು ಸ್ಥಾಪಿಸಲು ಸಹಾಯ ಮಾಡಿದಾಗಲೂ ಕಾಂಗ್ರೆಸ್ ಪಕ್ಷವನ್ನು ತೊರೆಯಲಿಲ್ಲ.
ಮೋತಿಲಾಲ್ ನೆಹರೂ 1928ರಲ್ಲಿ ಆಲ್-ಬ್ರಿಟಿಷ್ ಸೈಮನ್ ಆಯೋಗಕ್ಕೆ ಪ್ರತಿಯಾಗಿ ಪ್ರಸಿದ್ಧವಾದ ನೆಹರೂ ಆಯೋಗದ ಅಧ್ಯಕ್ಷರಾದರು. ನೆಹರೂ ವರದಿ ಭಾರತೀಯರೇ ಬರೆದ ಮೊದಲ ಸಂವಿಧಾನ. ಇದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾದಂತಹ ಸಾಮ್ರಾಜ್ಯದೊಳಗೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನವನ್ನು ಕಲ್ಪಿಸಿತು. ಇದನ್ನು ಕಾಂಗ್ರೆಸ್ ಪಕ್ಷವು ಅನುಮೋದಿಸಿತು. ಆದರೆ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸಿದ ಹೆಚ್ಚಿನ ರಾಷ್ಟ್ರೀಯತಾವಾದಿ ಭಾರತೀಯರು ತಿರಸ್ಕರಿಸಿದರು. ವರದಿಯನ್ನು ಭಾರತದ ಮುಸ್ಲಿಂ ನಾಯಕತ್ವವು, ಅದರಲ್ಲೂ ವಿಶೇಷವಾಗಿ ಮುಹಮ್ಮದ್ ಅಲಿ ಜಿನ್ನಾ ನಾಯಕತ್ವವು ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ತಿರಸ್ಕರಿಸಿತು.
ಹಿರಿಯ ವಯಸ್ಸಿನ ಅನಾರೋಗ್ಯ ಮೋತಿಲಾಲ್ ನೆಹರೂ ಅವರನ್ನು 1929-1931ರ ಐತಿಹಾಸಿಕ ಘಟನೆಗಳಿಂದ ದೂರವಿಟ್ಟಿತು. ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನ ಗುರಿಯಾಗಿ ಅಳವಡಿಸಿಕೊಂಡಾಗ ಮತ್ತು ಗಾಂಧೀಜಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ ಮೋತಿಲಾಲ್ ಅವರನ್ನು ಬಂಧಿಸಿ ಅವರ ಮಗನೊಂದಿಗೆ ಬಂಧನದಲ್ಲಿರಿಸಲಾಯ್ತು. ಆರೋಗ್ಯ ಹದಗೆಟ್ಟದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಜನವರಿ 1931ರ ಕೊನೆಯ ವಾರದಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಸರ್ಕಾರವು ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಕಾರಣವಾಗುವ ಘಟನೆಗಳ ಸರಣಿಯ ಸೂಚಕವಾಗಿ ಬಿಡುಗಡೆ ಮಾಡಿತು. ಮೋತಿಲಾಲರು ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮಗ ಮತ್ತು ಗಾಂಧಿಯನ್ನು ಪಕ್ಕದಲ್ಲಿಟ್ಟುಕೊಂಡ ಸಂತೃಪ್ತಿ ಹೊಂದಿದ್ದರು. 1931ರ ಫೆಬ್ರವರಿ 6ರಂದು ನಿಧನರಾದರು.
ಮೋತಿಲಾಲ್ ನೆಹರೂ ಅವರ ಚಿಂತನೆಗಳು ಮತ್ತು ಭಾಷಣಗಳನ್ನು ಆಧರಿಸಿದ ಹಲವಾರು ಕೃತಿಗಳು ಪ್ರಕಟಗೊಂಡಿವೆ.
On the birth anniversary lawyer, activist and politician Motilal Nehru
ಕಾಮೆಂಟ್‌ಗಳು