ಶಿವಕುಮಾರ್ ಶರ್ಮ
ಪಂಡಿತ್ ಶಿವಕುಮಾರ್ ಶರ್ಮ ನಮನ 🌷🙏🌷
ಮಹಾನ್ ಸಂಗೀತಜ್ಞ, ಸಂತೂರ್ ವಾದನ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು ಈಲೋಕವನ್ನಗಲಿದ್ದಾರೆ.
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರುಪಂಡಿತ್ ಶಿವಕುಮಾರ್ ಶರ್ಮ.
ಪಂಡಿತ್ ಶಿವಕುಮಾರ್ ಶರ್ಮ ಅವರು 1938ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದರು. ತಂದೆ ಪಂಡಿತ್ ಉಮಾದತ್ತ ಶರ್ಮ ಸಂಗೀತಗಾರರಾಗಿದ್ದು ಗಾಯನದ ಜೊತೆಗೆ ತಬಲಾ ಮತ್ತುಹಾರ್ಮೋನಿಯಂ ನುಡಿಸುವಿಕೆಯಲ್ಲಿ ಸಹಾ ಪ್ರಭುತ್ವ ಸಾಧಿಸಿದ್ದರು. ತಂದೆಯಿಂದ ಐದನೆಯವಯಸ್ಸಿನಲ್ಲೇ ಶಿವಕುಮಾರ ಶರ್ಮ ಅವರ ಸಂಗೀತ ಕಲಿಕೆ ಆರಂಭಗೊಂಡಿತು. ಆರಂಭದಲ್ಲಿತಬಲಾ ಕಲಿಕೆ ಆರಂಭಿಸಿದ ಶಿವಕುಮಾರ ಶರ್ಮರು ಮುಂದೆ ಗಾಯನದಲ್ಲಿ ತರಬೇತಿ ಪಡೆದರು. ಹನ್ನೆರಡನೇ ವಯಸ್ಸಿನ ವೇಳೆಗೆ ಜಮ್ಮುವಿನ ರೇಡಿಯೋ ಕೇಂದ್ರದಲ್ಲಿ ಅವರ ಗಾಯನಪ್ರಸಾರವಾಗಿತ್ತು.
ಅಂದಿನ ದಿನಗಳಲ್ಲಿ ಉಮಾದತ್ತ ಶರ್ಮ ಅವರು ತಂತಿ ವಾದ್ಯಗಳ ಬಗ್ಗೆ ಸಂಶೋಧನೆಮಾಡುತ್ತಿದ್ದಾಗ ಅವರಿಗೆ ನೂರು ತಂತಿಗಳಿದ್ದ ಸಂತೂರ್ ಎಂಬ ಕಾಶ್ಮೀರದ ಪ್ರಾಂತೀಯ ಜನಪದವಾದ್ಯ ಅಪಾರವಾಗಿ ಆಸ್ಥೆ ಹುಟ್ಟಿಸಿತು. ಅವರಿಗೆ ತಮ್ಮ ಮಗ ಅದರಲ್ಲಿ ಸಂಗೀತ ನುಡಿಸಬೇಕುಎಂದು ಆಶಯ ಮೂಡಿತು.
ಶಿವಕುಮಾರ್ ಶರ್ಮರು ತಮ್ಮ 13ನೆಯ ವಯಸ್ಸಿನಲ್ಲಿ ಸಂತೂರ್ ಬಳಸಲು ಪ್ರಾರಂಭಿಸಿದರು. 1955ರಲ್ಲಿ ಅವರು ಮುಂಬೈನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಕಾಲೇಜಿನಲ್ಲಿದ್ದಾಗ ತಬಲಾ ವಾದನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನ ಪಡೆದಿದ್ದಶಿವಕುಮಾರ್ ಶರ್ಮ ಸಂಗೀತಲೋಕದಲ್ಲಿ ಅಪರಚಿತವೆನಿಸಿದ್ದ ಸಂತೂರ್ ವಾದ್ಯದ ಹಿಂದೆಹೊರಟರು.
ಪಂಡಿತ್ ಶಿವಕುಮಾರ್ ಶರ್ಮ ಅವರು 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಮೊದಲಬಾರಿಗೆ ಶಾಸ್ತ್ರೀಯವಾಗಿ ಸಂತೂರ್ ವಾದನವನ್ನು ಪ್ರಸ್ತುತಗೊಳಿಸಿ ಜನಮೆಚ್ಚುಗೆ ಪಡೆದರು. ನಂತರದ ಹತ್ತು ವರ್ಷಗಳಲ್ಲಿ ಆ ವಾದ್ಯವನ್ನು ನಾನಾ ರೀತಿಯಲ್ಲಿ ಪರಿಷ್ಕರಿಸಿ ಇದರಲ್ಲಿದ್ದ ನೂರುತಂತಿಗಳಲ್ಲಿ ಕೆಲವನ್ನು ತೆಗೆದರು. ವಾದ್ಯದ ತಾಂತ್ರಿಕ ರಚನೆಯ ಜೊತೆಗೆ ಅದನ್ನು ನುಡಿಸುವತಂತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿದ ಶರ್ಮ, ಈ ವಾದ್ಯದಲ್ಲಿ ನವಿರಾದ ಸಂಗೀತಗಮಕಗಳನ್ನೂ ಧ್ವನಿಸುವ ಸಾಮರ್ಥ್ಯವನ್ನು ತಂದು, ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆಬರುವಂತೆ ಮಾಡಿದರು.
ಪಂಡಿತ್ ಶಿವಕುಮಾರ್ ಶರ್ಮ ಅವರು 'ಝಣಕ್ ಝಣಕ್ ಪಾಯಲ್ ಬಾಜೆ' ಚಿತ್ರದ ಒಂದುದೃಶ್ಯಕ್ಕಾಗಿ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಅವರ ಮೊದಲ ಆಲ್ಬಮ್ 1960ರಲ್ಲಿದಾಖಲಾಯಿತು. 1967ರಲ್ಲಿ, ಅವರು 'ಕಾಲ್ ಆಫ್ ದಿ ವ್ಯಾಲಿ' ಎಂಬ ಪರಿಕಲ್ಪನೆಯ ಆಲ್ಬಂ ಅನ್ನುತಯಾರಿಸಲು ಕೊಳಲಿನ ಇಂಪಿನ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮತ್ತು ಸಂಗೀತಗಾರಬ್ರಿಜ್ ಭೂಷಣ್ ಕಬ್ರಾ ಅವರೊಂದಿಗೆ ಒಂದುಗೂಡಿದರು. ಈ ಆಲ್ಬಂ ಭಾರತೀಯ ಶಾಸ್ತ್ರೀಯಸಂಗೀತದ ಬಹು ದೊಡ್ಡ ಯಶಸ್ಸೆನಿಸಿತು.
'ದಿ ಗ್ಲೋರಿ ಆಫ್ ಸ್ಟ್ರಿಂಗ್ಸ್ - ಸಂತೂರ್', 'ವರ್ಷ-ಎ ಹೋಮೇಜ್ ಟು ದಿ ರೇನ್ ಗಾಡ್ಸ್', 'ಹಂಡ್ರೆಡ್ಸ್ಟ್ರಿಂಗ್ಸ್ ಆಫ್ ಸಂತೂರ್', 'ಪಯೋನಿಯರ್ ಆಫ್ ಸಂತೂರ್','ಸಂಪ್ರದಾಯ', 'ವೈಬ್ರಂಟ್ಮ್ಯೂಸಿಕ್', 'ಎಸೆನ್ಷಿಯಲ್ ಈವ್ನಿಂಗ್ ಚಾಂಟ್ಸ್' , 'ದಿ ಲಾಸ್ಟ್ ವರ್ಡ್ ಇನ್ ಸಂತೂರ್', 'ಸಂಗೀತ್ಸರ್ತಾಜ್' ಮುಂತಾದ ಅನೇಕ ಆಲ್ಬಮ್‍ಗಳ ಮೂಲಕ ಪಂಡಿತ್ ಶಿವಕುಮಾರ್ ಶರ್ಮ ಸಂಗೀತಲೋಕದ ವಿಸ್ಮಯವನ್ನು ತರೆದಿಟ್ಟಿದ್ದಾರೆ. ಅವರ ಸಂಗೀತ ಕಛೇರಿಗಳು ವಿಶ್ವದಾದ್ಯಂತ ತಮ್ಮಸುನಾದದ ಇಂಪನ್ನು ಚೆಲ್ಲುತ್ತಿವೆ.
ಪಂಡಿತ್ ಶಿವಕುಮಾರ್ ಶರ್ಮ 2002ರಲ್ಲಿ 'ಜರ್ನಿ ವಿಥ್ ಹಂಡ್ರೆಡ್ ಸ್ಟ್ರಿಂಗ್ಸ್: ಮೈ ಲೈಫ್ ಇನ್ಮ್ಯೂಸಿಕ್' ಎಂಬ ಆತ್ಮಚರಿತ್ರೆ ಪ್ರಕಟಿಸಿದರು. ಭಾರತದ ಎಲ್ಲಾ ಮೂಲೆಗಳಿಂದ ಮತ್ತು ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕಾ ಮುಂತಾಗಿ ವಿಶ್ವದ ವಿವಿಧ ಭಾಗಗಳಿಂದ ಅವರ ಬಳಿ ಶಿಷ್ಯತ್ವಪಡೆದವರಿದ್ದಾರೆ. ಅವರ ಶಿಷ್ಯರಾದ ಸತೀಶ್ ವ್ಯಾಸ್, ಉಲ್ಲಾಸ್ ಬಾಪಟ್, ಧನಂಜಯ್ದೈತಣ್ಕರ್, ರಾಹುಲ್ ಶರ್ಮ, ಶ್ರುತಿ ಅಧಿಕಾರಿ ಮುಂತಾದವರು ಸಂತೂರ್ ಯಾನವನ್ನುಯಶಸ್ವಿಯಾಗಿ ಕೈಗೊಂಡಿದ್ದಾರೆ.
ಸದಾ ಹೊಸದರತ್ತ ತುಡಿಯುವಂತದ್ದು ಶಿವಕುಮಾರ್ ಶರ್ಮ ಅವರ ಮನ. ಅವರಿಗೆ ಕಲೆಯಯಾವ ವಿಭಾಗಗಳೂ ವರ್ಜ್ಯವಲ್ಲ. ಹೀಗಾಗಿ ಹೆಸರಾಂತ ಕೊಳಲು ವಾದಕ ಪಂ. ಹರಿಪ್ರಸಾದ್ಚೌರಾಸಿಯಾ ಅವರ ಜೊತೆಗೂಡಿ ‘ಶಿವ-ಹರಿ’ ಹೆಸರಿನಲ್ಲಿ, ಸಿಲ್ ಸಿಲಾ, ಫಾಸ್ಲೆ, ಚಾಂದನಿ, ಲಮ್ಹೆ, ಡರ್ ಮುಂತಾದ ಸಿನಿಮಾಗಳಿಗೆ ಸುಶ್ರಾವ್ಯ ಸಂಗೀತ ನೀಡಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ, ಅಮೆರಿಕದಬಾಲ್ಟಿಮೋರ್ ನಗರದ ಗೌರವಪ್ರಜೆಯಾಗಿ ದೊರೆತ ಸನ್ಮಾನ, ಜಮ್ಮು ವಿಶ್ವವಿದ್ಯಾಲಯದ ಗೌರವಡಾಕ್ಟರೇಟ್, ತಾನ್ ಸೇನ್ ಸನ್ಮಾನ ಮುಂತಾದ ಅನೇಕ ಗೌರವಗಳು ಪಂಡಿತ್ ಶಿವಕುಮಾರ್ಶರ್ಮ ಅವರನ್ನು ಅರಸಿಬಂದಿದ್ದವು.
ಈ ಮಹಾನ್ ಸಂಗೀತ ತಪಸ್ವಿ 2022ರ ಮೇ 10ರಂದು ಈ ಲೋಕವನ್ನಗಲಿದ್ದಾರೆ. ಈ ಮಹಾನ್ಚೇತನಕ್ಕೆ ನಮನ.
Respects to departed soul great musician and Santoor Maestro Pandit Sivakumar Sharma
ಕಾಮೆಂಟ್‌ಗಳು