ಸುನಿಲ್ ದತ್
ಸುನಿಲ್ ದತ್
ಸುನಿಲ್ ದತ್ ನಟರಾಗಿ, ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರಾಗಿದ್ದರು.
ಸುನಿಲ್ ದತ್ 1929ರ ಜೂನ್ 6ರಂದು ಈಗಿನ ಪಾಕಿಸ್ತಾನದ ಭಾಗವಾಗಿರುವ ಪಂಜಾಬ್ ಪ್ರಾಂತ್ಯದ ನಕ್ಕಾ ಖುರ್ದ್ ಎಂಬಲ್ಲಿ ಜನಿಸಿದರು. ಇವರ ಅಂದಿನ ಹೆಸರು ಬಾಲರಾಜ್ ದತ್. ತಂದೆ ದಿವಾನ್ ರಘುನಾಥ ದತ್. ತಾಯಿ ಕುಲವಂತಿದೇವಿ. 1947ರಲ್ಲಿ ದೇಶ ವಿಭಜನೆಯ ಗಲಭೆಗಳ ಸಂದರ್ಭದಲ್ಲಿ ಯಾಕುಬ್ ಎಂಬಾತ ಇವರ ಸಮಸ್ತ ಕುಟುಂಬವನ್ನು ಕಾಪಾಡಿದ. ಹೀಗೆ ಇವರ ಕುಟುಂಬ ಪಂಜಾಬ್ ಹರಿಯಾಣ ಬಳಿಯ ಯಮುನಾ ನದಿ ತೀರದ ಮಾಂಡೌಲಿ ಎಂಬಲ್ಲಿಗೆ ವಲಸೆ ಬಂತು. ಮುಂದೆ ಸುನಿಲ್ ದತ್ ಲಕ್ನೌ ಮತ್ತು ಮುಂಬೈಗಳಲ್ಲಿನ ಕಾಲೇಜುಗಳಲ್ಲಿ ಓದಿದರು. ಮುಂಬೈನ ಸಾರಿಗೆ ಸಂಸ್ಥೆಯಾದ ‘ಬೆಸ್ಟ್'
ಅಲ್ಲಿ ಕೆಲಸ ಮಾಡಿ 1954ರಲ್ಲಿ ಚರಿತ್ರೆಯಲ್ಲಿ ಬಿ.ಎ. ಪದವಿ ಪಡೆದರು.
ತಮಗಿದ್ದ ಉರ್ದು ಭಾಷೆಯಲ್ಲಿನ ಪ್ರೌಢಿಮೆಯಿಂದ ಆಕಾಶವಾಣಿಯಲ್ಲಿ ಕೆಲಸ ಗಳಿಸಿದ ಸುನಿಲ್ ದತ್, ರೇಡಿಯೋ ಸಿಲೋನಿನ ಹಿಂದೀ ವಿಭಾಗದ ಕಾರ್ಯಕ್ರಮ ನಿರ್ವಹಣೆಯಿಂದ ಜನಪ್ರಿಯರಾದರು. 'ಲಿಪ್ಟನ್ ಕಿ ಮಹಫಿಲ್' ಕಾರ್ಯಕ್ರಮ ಅವರಿಗೆ ಅಪಾರ ಪ್ರಸಿದ್ಧಿ ತಂದಿತ್ತು. 1953ರಲ್ಲಿ ದಿಲೀಪ್ ಕುಮಾರ್ ಅವರ 'ಶಿಖಸ್ತ್' ಚಿತ್ರದ ಕುರಿತಾಗಿ ಕಾರ್ಯಕ್ರಮ ನಿರ್ವಹಿಸಲು ನಿರ್ದೇಶಕ ರಮೇಶ್ ಸೈಗಾಲ್ ಅವರನ್ನು ಭೇಟಿ ಆದಾಗ, ಈತನ ರೂಪ ಮತ್ತು ಧ್ವನಿಯಿಂದ ಆಕರ್ಷಿತರಾದ ಸೈಗಾಲ್ ಬಾಲರಾಜ್ ದತ್ ಎಂದು ಹೆಸರು ಹೊಂದಿದ್ದ ಈತನಿಗೆ ಸುನಿಲ್ ದತ್ ಎಂದು ಹೆಸರುಕೊಟ್ಟು ತಮ್ಮ ಚಿತ್ರದಲ್ಲಿ ಬಣ್ಣ ಹಚ್ಚಿದರು. ಹೀಗೆ ಸುನಿಲ್ ದತ್ 1955ರಲ್ಲಿ 'ರೈಲ್ವೇ ಪ್ಲಾಟ್‍ಫಾರಂ' ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪದಾರ್ಪಣ ಮಾಡಿದರು.
1957ರ 'ಮದರ್ ಇಂಡಿಯಾ' ಚಿತ್ರ ಸುನಿಲ್ ದತ್ ಅವರಿಗೆ ಪ್ರಖ್ಯಾತಿ ತಂದಿತು. ನರ್ಗಿಸ್ ಜೊತೆ ಆಕೆಯ ಮಗನಾಗಿ ಕೋಪಿಷ್ಠ ಮಗನಾಗಿ ಅವರ ಅಭಿನಯ ಪ್ರಸಿದ್ಧಿ ಪಡೆಯಿತು.. ಈ ಚಿತ್ರೀಕರಣದ ಸಮಯದಲ್ಲಿ ಸೆಟ್ನಲ್ಲಿ ಬೆಂಕಿ ಅನಾಹುತವಾಯಿತು. ಈ ಸಂದರ್ಭದಲ್ಲಿ ತಮ್ಮ ಸಾಹಸದಿಂದ ನರ್ಗಿಸ್ ಅವರನ್ನು ಬೆಂಕಿ ಅನಾಹುತದಿಂದ ಪಾರುಮಾಡಿ, ನಿಜಜೀವನದಲ್ಲಿ ಆಕೆಯ ಪ್ರೇಮವನ್ನು ಗೆದ್ದರು ಎನ್ನಲಾಗಿದೆ. 1958ರಲ್ಲಿ ಈ ಜೋಡಿ ವಿವಾಹವಾದರು. ಸಂಜಯ್ ದತ್, ಪ್ರಿಯಾ ದತ್ ಮತ್ತು ನಮ್ರತಾ ದತ್ ಈ ದಂಪತಿಗಳ ಮಕ್ಕಳು.
ಮುಂದೆ ಸುನಿಲ್ ದತ್ 'ಪಡೋಸನ್' ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಜನಮನವನ್ನು ಗೆದ್ದರು. 'ರೇಷ್ಮಾ ಔರ್ ಶೇರಾ' ಚಿತ್ರದಲ್ಲಿ ಬಹಳ ಗಂಭೀರ ಪಾತ್ರವನ್ನೂ ಅಷ್ಟೇ ಸಹಜವಾಗಿ ನಿರ್ವಹಿಸಿದರು. ಪ್ರಖ್ಯಾತ ಬಾಲಿವುಡ್ ನಟಿಯರಾದ ಆಶಾ ಪರೇಖ್, ವಹೀದಾ ರಹಮಾನ್, ಸಾಧನಾ, ಸಾಯಿರಾ ಬಾನು ಮೊದಲಾದವರ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದರು. ಸಾಧನಾ, ಸುಜಾತಾ,
ಮೇ ಚುಪ್ ರಹೂಂಗೀ, ಗುಮ್ರಾಹ್, ಮುಜೆ ಜೀನೇ ದೋ, ಯೇ ರಾಸ್ತೇ ಹೆ ಪ್ಯಾರ್ ಕೇ, ಯಾದೇನ್, ವಕ್ತ್, ಹಮ್ರಾಝ್, ಮೆಹೆರ್ಬಾ, ಮಿಲನ್, ಝಕ್ಮೀ, ಜಾನೀ ದುಶ್ಮನ್ ಮುಂತಾದವು ಇವರ ಇತರ ಚಿತ್ರಗಳಲ್ಲಿ ಸೇರಿವೆ. ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲೂ ನಟಿಸಿದ್ದರು.
1984ರಲ್ಲಿ ರಾಜಕೀಯಕ್ಕೆ ಬಂದ ಸುನಿಲ್ ದತ್ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಸರಕಾರದಲ್ಲಿ ಕೇಂದ್ರ ಮಂತ್ರಿಗಳಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ನಿರ್ವಹಿಸಿದ್ದರು.
ಯಾದೇನ್ ಚಿತ್ರಕ್ಕೆ ರಾಷ್ಟ್ರೀಯ ಶ್ರೇಷ್ಠ ನಟ ಪುರಸ್ಕಾರ, ಮುಜೇ ಜೀನೇ ದೋ ಮತ್ತು ಖಾನ್‍ದಾನ್ ಚಿತ್ರಗಳಿಗೆ ಫಿಲಂಫೇರ್ ಪ್ರಶಸ್ತಿ, ಪದ್ಮಶ್ರೀ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಸುನಿಲ್ ದತ್ ಅವರಿಗೆ ಸಂದಿದ್ದವು.
ಸುನಿಲ್ ದತ್ 2005ರ ಮೇ 25ರಂದು ನಿಧನರಾದರು.
On the birth day of actor and pleasant personality Sunil Dutt
ಕಾಮೆಂಟ್‌ಗಳು