ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುಂಡ್ಮಿ ಕಾಳಿಂಗ ನಾವಡ


ಗುಂಡ್ಮಿ ಕಾಳಿಂಗ ನಾವಡ


ಗುಂಡ್ಮಿ ಕಾಳಿಂಗ ನಾವಡ ಅವರು ಯಕ್ಷಗಾನ ಲೋಕದ ರಸರಾಗ ಚಕ್ರವರ್ತಿ ಎಂದು ಪ್ರಸಿದ್ಧರಾಗಿದ್ದವರು. ತಾವು ಬದುಕಿದ್ದ ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಅವರು ಮಾಡಿ ಹೋದ ಸಾಧನೆ ಮಹತ್ತರವಾದದ್ದು. ಇಂದು ಇವರ ಸಂಸ್ಮರಣೆ  ದಿನ. 

ಕಾಳಿಂಗ ನಾವಡರು 1958ರ ಜೂನ್ 6ರಂದು ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು. ತಂದೆ 
ರಾಮಚಂದ್ರ ನಾವಡ ಅವರು 1960 - 80ರ ದಶಕದಲ್ಲಿ ಪ್ರಸಿದ್ದ ಭಾಗವತರಾಗಿದ್ದರು. ತಾಯಿ ಪದ್ಮಾವತಿ. ತಮ್ಮ ತಂದೆಯವರಿಂದ ಶಿಕ್ಷಣ ಪಡೆದ ಕಾಳಿಂಗರು  'ಹೂವಿನ ಕೋಲು', 'ಜಾಪು', 'ಚಾಪು' ಗಳ ಮೂಲಕ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. 1983ರಲ್ಲಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ ಆಗ್ನೇಯ ನಾವಡ ಎಂಬ ಮಗ ಇದ್ದಾರೆ.

ತಂದೆ  ರಾಮಚಂದ್ರ ನಾವಡರು, ಕಾಳಿಂಗ ನಾವಡರನ್ನು ಆಗಿನ ಪ್ರಸಿದ್ದ ಭಾಗವತರಾಗಿದ್ದ ನಾರಣಪ್ಪ ಉಪ್ಪೂರು ಅವರ ಬಳಿ ಸೇರಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಕಾಳಿಂಗ ನಾವಡರಲ್ಲಿ ಉಜ್ವಲವಾದ ಭವಿಷ್ಯವಿರುವುದನ್ನು ಕಂಡ ನಾರಣಪ್ಪ ಉಪ್ಪೂರು ಅವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದರು.

ಕಾಳಿಂಗ ನಾವಡರು  ಗುರು ನಾರಣಪ್ಪ ಉಪ್ಪೂರುರವರ ಜೊತೆಗೂಡಿ, 1972 ರಲ್ಲಿ, ಅಂದರೆ ಕೇವಲ 14 ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದರು.  ನಂತರ 1977ರಲ್ಲಿ ಶ್ರೀ ವಿಜಯಶ್ರೀ ಮೇಳ (ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ) ಪೆರ್ಡೂರು, ನಂತರ 1978 ರಿಂದ 1990 ರವರೆಗೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ-ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದರು.

ನವೆಂಬರ್ 1988 ರಲ್ಲಿ ಬಹರೈನ್ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು. ಕಾಳಿಂಗ ನಾವಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು, ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ 'ಭಸ್ಮಾಸುರ ಮೋಹಿನಿ' ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿ, ಮುಂಬಯಿಯಲ್ಲಿ, ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದರು. ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ' ಮುಂತಾದ ಪದ್ಯಗಳು ಪ್ರಸಿದ್ಧವಾದವು.

ಕಾಳಿಂಗ ನಾವಡರು ಶಿವರಂಜಿನಿ, ಚಕ್ರವಾಕ, ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದದ್ದಲ್ಲದೆ, ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ಛಂದೋಬದ್ದವಾಗಿ, ಮನಮೋಹಕವಾಗಿ ರಚಿಸಿದರು.  ಅದರಲ್ಲೂ 'ನಾಗಶ್ರೀ' ಪ್ರಸಂಗವಂತೂ 2,000 ಕ್ಕಿಂತಲೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆಯನ್ನೇ ನಿರ್ಮಿಸಿತು. ಇವರು ರಚಿಸಿದ ಪ್ರಸಂಗಗಳನ್ನು ಈಗಲೂ ವಿವಿಧ ಮೇಳಗಳು ಪ್ರದರ್ಶಿಸುತ್ತಿವೆ.

ಕಾಳಿಂಗ ನಾವಡರ ಕೆಲವು ಪ್ರಸಿದ್ದ ಯಕ್ಷಗಾನ ಪ್ರಸಂಗಗಳಲ್ಲಿ  ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ, ಶ್ರೀ ಕೃಷ್ಣ ಸಾರಥ್ಯ, ಬಬ್ರುವಾಹನ, ಭಸ್ಮಾಸುರ ಮೋಹಿನಿ, ಬಾಲ ಸುಧೀರ, ಮಾಗಧ ವಧೆ, ಗದಾಯುದ್ಧ, ಚಕ್ರವ್ಯೂಹ, ಭೀಷ್ಮ ವಿಜಯ, ರಾಣಿ ಶಶಿಪ್ರಭೆ, ಕನಸ ಕಂಡ ಕಂಸ, ದ್ರೌಪದಿ ಪ್ರತಾಪ, ಚೆಲುವೆ ಚಿತ್ರಾವತಿ, ಕೀಚಕ ವಧೆ, ಶನಿ ಮಹಾತ್ಮೆ ಮುಂತಾದವು ಸೇರಿವೆ. ಕಾಳಿಂಗ ನಾವಡರ ಹಾಡುಗಾರಿಕೆಯ ಧ್ವನಿಸುರುಳಿಗಳನ್ನು ಭಾರತದ ಹೆಸರಾಂತ ಧ್ವನಿಮುದ್ರಣ ಸಂಸ್ಥೆಯಾದ ಟಿ-ಸೀರೀಸ್, ಆನಂದ್ ಆಡಿಯೋ ಸೇರಿದಂತೆ ಹಲವಾರು ಸಂಸ್ಥೆಗಳು ಹೊರತಂದಿವೆ.

ಸಾಮಾನ್ಯವಾಗಿ ಭಾಗವತರು ಎಷ್ಟೇ ಚೆನ್ನಾಗಿ ಹಾಡಿದರೂ, ವೇಷಧಾರಿಗಳಿಗಿಂತ ಹೆಚ್ಚಿನ ಜನಪ್ರಿಯತೆ-ಮನ್ನಣೆ ಪಡೆಯುವುದು ತೀರಾ ಕಷ್ಟ ಎಂಬ ಮಾತಿದೆ.  ಆದರೆ ಕಾಳಿಂಗ ನಾವಡರು ತೀರಾ ಕಡಿಮೆ ಸಮಯದಲ್ಲಿ, ತೀರಾ ಚಿಕ್ಕ ಪ್ರಾಯದಲ್ಲಿ ಅಪಾರ  ಜನಪ್ರಿಯತೆಯನ್ನು ಗಳಿಸಿದರು. ಅವರನ್ನು ನೋಡಲು, ಅವರ ಭಾಗವತಿಕೆಯನ್ನು ಕೇಳಲೆಂದೇ ಕಲಾಭಿಮಾನಿಗಳು ಬರುತ್ತಿದ್ದರು.

ಕಾಳಿಂಗ ನಾವಡರು ಅತೀ ಚಿಕ್ಕ ವಯಸ್ಸಿನಲ್ಲಿ, ಅಂದರೆ ಕೇವಲ 32ರ ಪ್ರಾಯದಲ್ಲಿ  1990ರ ಮೇ 27ರಂದು ರಸ್ತೆ ಅಪಘಾತವೊಂದಲ್ಲಿ ವಿಧಿವಶರಾದರು. ಇಂದಿಗೂ ಯಕ್ಷಪ್ರೆಮಿಗಳ  ಹೃದಯದಲ್ಲಿ  ಕಾಳಿಂಗ ನಾವಡರು ಅಮರರಾಗಿದ್ದಾರೆ.

great melody of Yakshagana world Late Gundmi Kalinga Navada 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ