ಆನ್ ಫ್ರಾಂಕ್
ಆನ್ ಫ್ರಾಂಕ್
ಆನ್ ಫ್ರಾಂಕ್ ವಿಶ್ವ ಮಹಾಯುದ್ಧದ ಸಮಯದಲ್ಲಿ ತಮ್ಮ ಕುಟುಂಬ ನಾಜಿಗಳ ಬಂಧನಕ್ಕೆ ಸಿಲುಕುವ ಮುಂಚೆ, ಗೌಪ್ಯವಾಗಿ ಬದುಕು ನಡೆಸುತ್ತಿದ್ದ ದಿನಗಳಲ್ಲಿ ತಾನು ಬರೆದಿದ್ದ ದಿನಚರಿ ಬರಹಗಳಿಂದ ತನ್ನ
ಮರಣಾನಂತರ ಪ್ರಸಿದ್ಧ ಹೆಸರಾಗಿದ್ದಾಳೆ.
ಆನ್ ಫ್ರಾಂಕ್ ಜ್ಯೂಯಿಷ್ ಜನಾಂಗದ ಜರ್ಮನ್ ಹುಡುಗಿ. ಎರಡನೆಯ ಮಹಾಯುದ್ಧದಲ್ಲಿ ಹಾಲೆಂಡ್‌ನ ಆಮ್ಸ್ಟರ್‌ಡ್ಯಾಮ್‌ನ ನಾಜಿ ಆಕ್ರಮಣದ ಸಮಯದಲ್ಲಿ ಈಕೆಯೊಂದಿಗೆ ಅವರ ಕುಟುಂಬ ಕೆಲವು ಕಾಲ ತಲೆಮರೆಸಿಕೊಂಡಿತ್ತು. ಎಷ್ಟೇ ಕಷ್ಟಪಟ್ಟರೂ, ಜರ್ಮನ್ ಸೈನಿಕರ ಕಣ್ಣಿಂದ ಇವರ ಕುಟುಂಬ ತಪ್ಪಿಸಿಕೊಳ್ಳಲಾಗಲಿಲ್ಲ. ಇವರುಗಳು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ದೂಡಲ್ಪಟ್ಟರು. ಮೊದಲು ಇವರುಗಳು ಆಶ್ವಿಟ್ಜ್‌ನಲ್ಲಿದ್ದರು. ಮುಂದೆ ಆನ್ ಮತ್ತು ಅವಳ ಸಹೋದರಿಯನ್ನು ಬರ್ಗೆನ್-ಬೆಲ್ಸೆನ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಆಕೆ ಟೈಫಸ್‌ನಿಂದ 1944ರಲ್ಲಿ ನಿಧನಹೊಂದಿದಳು.
ಆನ್ ಫ್ರಾಂಕಳಿಗೆ ಬರಹಗಾರಳಾಗುವ ಕನಸಿತ್ತು. ತಲೆಮರೆಸಿಕೊಂಡಿದ್ದ ಸಮಯದಲ್ಲಿ, ಆಕೆ ತನ್ನ ಎಲ್ಲ ಅನುಭವಗಳನ್ನೂ ತನ್ನ ದಿನಚರಿಯಲ್ಲಿ ಬರೆಯಲಾರಂಭಿಸಿದಳು.
ಫ್ರಾಂಕ್ ಕುಟುಂಬ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಆ ಕುಟುಂಬಕ್ಕೆ ನೆರವಾಗಿದ್ದ ನೆರೆಹೊರೆಯವರು ಆನಳ ದಿನಚರಿ ಪುಸ್ತಕವನ್ನು ಕಂಡುಕೊಂಡರು. ಮುಂದೆ ಆನ್ ಫ್ರಾಂಕಳ ತಂದೆ ಒಟ್ಟೊ ಫ್ರಾಂಕ್ ಬಿಡುಗಡೆಯಾದಾಗ ಅದನ್ನು ಮೆಯೆಪ್ ಗೀಸ್ ಎಂಬುವರು ಅವನಿಗೆ ಒಪ್ಪಿಸಿದರು. ಆತ ತನ್ನ ಮಗಳ ಈ ಆತ್ಮಚರಿತ್ರೆಗಳನ್ನು ಪ್ರಕಟಿಸಿದರು. ಈ ಕೃತಿ ಹತ್ಯಾಕಾಂಡದ ಬಗ್ಗೆ ಲಭ್ಯವಾದ ಪ್ರಸಿದ್ಧವಾದ ಸಾಹಿತ್ಯದ ತುಣುಕುಗಳಲ್ಲಿ ಒಂದಾಗಿದೆ.
ಆನ್ನೆಲೀಸ್ ಮೇರಿ ಫ್ರಾಂಕ್ 1929ರ ಜೂನ್ 12ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಜನಿಸಿದಳು. ತಾಯಿ ಎಡಿತ್ ಹೊಲಾಂಡರ್. ತಂದೆ ಒಟ್ಟೊ ಹೆನ್ರಿಕ್ ಫ್ರಾಂಕ್ ಸ್ಥಳೀಯ ವ್ಯಾಪಾರಿಯಾಗಿದ್ದ.
ಆನ್ ಬಾಲ್ಯದಲ್ಲಿದ್ದಾಗ, ಅಡಾಲ್ಫ್ ಹಿಟ್ಲರ್ ನೇತೃತ್ವದ ರಾಷ್ಟ್ರೀಯ ಸಮಾಜವಾದಿ ಚಳುವಳಿ ಜರ್ಮನಿಯಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿತ್ತು. ಮೊದಲಿಗೆ, ಫ್ರಾಂಕ್ ಕುಟುಂಬ ತಾವಿದ್ದ ದೇಶದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ತೊಂದರೆಗಳನ್ನು ಕಾಣಲಿಲ್ಲ. ಆದರೆ 1933ರಲ್ಲಿ ಹಿಟ್ಲರನ ಪಕ್ಷವು ಚುನಾವಣೆಯಲ್ಲಿ ಗೆದ್ದು ಆತ ಛಾನ್ಸಲರ್ ಆದಾಗ ಎಲ್ಲವೂ ಬದಲಾಯಿತು. ಆ ಸಮಯದಲ್ಲಿ, ಆನ್ ಫ್ರಾಂಕ್‌ಗೆ ಸುಮಾರು ಐದು ವರ್ಷ.
ಜರ್ಮನಿಯಲ್ಲಿ ಬೆಳೆಯುತ್ತಿರುವ ಆಂಟಿಸ್ಮಿಟಿಸಂ ಒಟ್ಟೊ ಫ್ರಾಂಕ್‌ನನ್ನು ಹಾಲೆಂಡಿಗೆ ವಲಸೆ ಹೋಗಲು ಪ್ರೇರೇಪಿಸಿತು. ಆತ 1933ರ ಶರತ್ಕಾಲದಲ್ಲಿ ಆಮ್ಸ್ಟರ್‌ಡ್ಯಾಮ್‌ಗೆ ತೆರಳಿದ. ಕ್ರಮೇಣ ಅವನ ಕುಟುಂಬವೂ ಅವನೊಂದಿಗೆ ಸೇರಿಕೊಂಡಿತು.
ಫೆಬ್ರವರಿ 1934ರಲ್ಲಿ ಆನ್ ಸ್ವಲ್ಪ ಕಾಲ ತನ್ನ ಅಜ್ಜ-ಅಜ್ಜಿಯರೊಂದಿಗೆ ಆಚೆನ್ ಎಂಬಲ್ಲಿ ಕಳೆದಿದ್ದಳು. ಅದೇ ವರ್ಷ ಸಹೋದರಿಯರೊಂದಿಗೆ ಸ್ಥಳೀಯ ಶಾಲೆಗೆ ಹಾಜರಾಗಲು ಪ್ರಾರಂಭಿಸಿದಳು.
ಆನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಅವಳು ಓದುವುದು ಮತ್ತು ಬರೆಯುವುದರ ಬಗ್ಗೆ ತುಂಬಾ ಆಕರ್ಷಿತಳಾಗಿದ್ದಳು. ಅವಳನ್ನು ಬಲ್ಲ ಕೆಲವು ಹುಡುಗಿಯರು ಅವಳು ರಹಸ್ಯವಾಗಿ ಬರೆಯುತ್ತಿದ್ದಳು ಎನ್ನುತ್ತಿದ್ದರು. ತಂದೆ
ಒಟ್ಟೊ ಒಪೆಕ್ಟಾ ವರ್ಕ್ಸ್ ಎಂಬ ಕಂಪನಿಯಲ್ಲಿ ಕೆಲಸ ಗಳಿಸಿ ಮುಂದೆ ಹರ್ಮನ್ ವ್ಯಾನ್ ಪೆಲ್ಸ್ ಎಂಬ ಡಚ್ ಜ್ಯೂಯಿಷ್ ಜನಾಂಗೀಯ ವ್ಯಕ್ತಿಯೊಂದಿಗೆ ವ್ಯಾಪಾರ ಮಾಡಲು ಪ್ರಾರಂಭಿಸಿದ.
ನಾಜಿ ಜರ್ಮನಿಯು ಪೋಲೆಂಡನ್ನು ಸೆಪ್ಟೆಂಬರ್ 1939ರಲ್ಲಿ ಆಕ್ರಮಿಸಿತು. ಆ ಸಮಯದಲ್ಲಿ, ಆನ್ ಫ್ರಾಂಕ್‌ಗೆ 10 ವರ್ಷ ವಯಸ್ಸಾಗಿತ್ತು. ಅಲ್ಲಿಯವರೆಗೆ ಆಕೆ ತನ್ನ ಕುಟುಂಬದೊಂದಿಗೆ ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಂತೋಷದಿಂದಿದ್ದಳು. ಸುರಕ್ಷಿತ ಜೀವನವನ್ನು ಹುಡುಕುತ್ತಾ ಜರ್ಮನ್ ಪ್ರದೇಶವನ್ನು ತೊರೆದ ಜ್ಯೂಯಿಷ್ ಕುಟುಂಬಗಳಿಗೆ ಬದುಕು ಶೀಘ್ರವಾಗಿ ಬದಲಾಯಿತು. 1940ರ ಮೇ ತಿಂಗಳಲ್ಲಿ ನಾಜಿಗಳು ಹಾಲೆಂಡ್ ಮೇಲೆ ಆಕ್ರಮಣ ಮಾಡಿದರು. ಆ ಕ್ಷಣದಲ್ಲಿ ಒಟ್ಟೊ ಫ್ರಾಂಕ್ ಕುಟುಂಬಕ್ಕಿದ್ದ ಭಯಗಳು ವಾಸ್ತವವಾದವು.
ಪ್ರತ್ಯೇಕವಾಗಿ ಜ್ಯೂಯಿಷ್ ಜನರಿಗೆ ಅನ್ವಯವಾಗುವಂತೆ ಕಾನೂನುಗಳನ್ನು ಡಚ್ ಪ್ರದೇಶದಾದ್ಯಂತ ರೂಪಿಸಲಾಯಿತು. ಆನ್ ಮತ್ತು ಅವಳ ಸಹೋದರಿ ಮಾರ್ಗಾಟಳನ್ನು ಜ್ಯೂಯಿಷ್ ಮಕ್ಕಳಿಗಾಗಿನ ಶಾಲೆಗೆ ಹಾಜರಾಗುವಂತೆ ಒತ್ತಾಯಿಸಲಾಯಿತು. ಯಾವುದೇ ಜ್ಯೂಯಿಷ್ ಜನರಿಗೆ ಉದ್ಯಾನವನಗಳಲ್ಲಿ ನಡೆಯಲು ಅಥವಾ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶವಿರಲಿಲ್ಲ. ಇತರ ಜ್ಯೂಯಿಷ್ ಒಡೆತನದ ವ್ಯವಹಾರಗಳಿಗೆ ಪ್ರವೇಶಿಸಲು ಅವರಿಗೆ ಅವಕಾಶವಿರಲಿಲ್ಲ. ನಂತರ ಉಳಿದ ಜ್ಯೂಯಿಷ್ ಜನಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸ್ಟಾರ್ ಆಫ್ ಡೇವಿಡ್ ಅನ್ನು ಕಡ್ಡಾಯವಾಗಿ ಬಳಸಲಾಯಿತು.
ನಾಜಿ ಸರ್ಕಾರವು ಜ್ಯೂಯಿಷ್ ಜನರ ವ್ಯವಹಾರಗಳನ್ನು ನಿಯಂತ್ರಿಸತೊಡಗಿತು. ಆನಳ ತಂದೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಅಧಿಕೃತವಾಗಿ ಅಭಿವೃದ್ಧಿಪಡಿಸುವುದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆತ ತನ್ನ ಇಬ್ಬರು ಕ್ರಿಶ್ಚಿಯನ್ ಪಾಲುದಾರರ ಮೂಲಕ ವ್ಯಾಪಾರ ಮಾಡತೊಡಗಿದ.
ಒಟ್ಟೊ ಫ್ರಾಂಕ್ ತಮ್ಮ ಕುಟುಂಬವನ್ನು ಯುನೈಟೆಡ್ ಸ್ಟೇಟ್ಸ್ಗೆ ವರ್ಗಾಯಿಸಲು ಪ್ರಯತ್ನಿಸಿದ. ಆದರೆ ರೋಟರ್ಡ್ಯಾಮ್ ದೂತಾವಾಸವು ಮುಚ್ಚಲ್ಪಟ್ಟು ಇವರ ಅರ್ಜಿಯನ್ನು ಪ್ರಕ್ರಿಯೆಗೊಳಿಸದ ಕಾರಣ ಇವರ ಪ್ರಯತ್ನಗಳು ಸಾಧ್ಯವಾಗದೆ ಹೋಯಿತು.
ಜೂನ್ 1942ರಲ್ಲಿ ತನ್ನ ಹುಟ್ಟುಹಬ್ಬದಂದು ಆನ್ ತನ್ನ ಹೆತ್ತವರಿಂದ ಆಟೋಗ್ರಾಫ್ ನೋಟ್ಬುಕ್ ಅನ್ನು ಪಡೆದಳು. ಇದು ಅಂದಿನ ಮಕ್ಕಳ ಜನಪ್ರಿಯ ನೋಟ್ಬುಕ್ ಆಗಿತ್ತು. ಆನ್ ಫ್ರಾಂಕ್ ಇದನ್ನು ವೈಯಕ್ತಿಕ ದಿನಚರಿ ಪುಸ್ತಕವನ್ನಾಗಿಸಿಕೊಂಡಳು. ಅಂದಿನಿಂದ ಆಕೆ ತನ್ನ ಬದುಕಿನ ವಿಷಯಗಳನ್ನು ಕುರಿತು ಬರೆಯಲಾರಂಭಿಸಿದಳು. ಉದಾಹರಣೆಗೆ ಆಕೆ ಹಾಲೆಂಡ್‌ನಲ್ಲಿ ಜ್ಯೂಯಿಷ್ ಜನರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳ ಪಟ್ಟಿಯನ್ನು ಇದರಲ್ಲಿ ಮಾಡಿದ್ದಳು.
ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳಬಹುದು ಎಂದು ಆನಳ ತಂದೆಗೆ ತಿಳಿದಿತ್ತು, ಆದ್ದರಿಂದ ಆತ ತನ್ನ ವ್ಯವಹಾರದಲ್ಲಿ ಆದಷ್ಟು ಜಾಗರೂಕವಾಗಿರಬೇಕೆಂದು ಯತ್ನಿಸಿದ್ದನು. ಆದರೆ ಎಲ್ಲವೂ ವೇಗವನ್ನು ಪಡೆದುಕೊಂಡಿತು.
1942ರ ಜುಲೈ 6ರಿಂದ, ಫ್ರಾಂಕ್ಸ್ ಕುಟುಂಬದ ರಹಸ್ಯ ಜೀವನ ಪ್ರಾರಂಭವಾಯಿತು. ಅವರ
ಕಣ್ಮರೆ ಕಾನೂನುಬದ್ಧ ಎಂದು ತೋರಿಸಲು ಮನೆಯಲ್ಲಿ ಒಂದು ಟಿಪ್ಪಣಿಯನ್ನು ಬಿಟ್ಟರು, ಅದರಲ್ಲಿ ಅವರು ಡಚ್ ಪ್ರದೇಶವನ್ನು ತೊರೆದಿದ್ದಾರೆ ಎಂದು ಗೋಚರಿಸಿತು. ಫ್ರಾಂಕ್‌ನ ಕೆಲವು ಉದ್ಯೋಗಿಗಳು ಇವರು ಅಡಗಿದ್ದ ಸ್ಥಳವನ್ನು ತಿಳಿದಿದ್ದರು ಮತ್ತು ಅವರಿಗೆ ಆಹಾರ ಮತ್ತು ಇತರ ಸಾಮಗ್ರಿಗಳನ್ನು ಪೂರೈಸುತ್ತಿದ್ದರು.
ಮೊದಲಿಗೆ ಈ ಸಹಾಯಕರ ಕಾರ್ಯವು ಹೆಚ್ಚು ಜಟಿಲವಾಗಿರಲಿಲ್ಲ, ಆದರೆ ನಂತರ ಆನ್ ಅವರ ಕುಟುಂಬಕ್ಕೆ ಕೊಂಡೊಯ್ಯಲು ಆಹಾರ ಮತ್ತು ಇತರ ವಸ್ತುಗಳನ್ನು ಪಡೆಯುವುದು ಕಷ್ಟಕರವಾಯಿತು. ಒಟ್ಟೊ ಫ್ರಾಂಕ್ ತಮ್ಮ ಸ್ನೇಹಿತ ಹರ್ಮನ್ ವ್ಯಾನ್ ಪೆಲ್ಸ್ ಅವರ ಆಶ್ರಯಕ್ಕೆ ಕುಟುಂಬದೊಂದಿಗೆ ಬಂದ. ಆನ್ ತನ್ನ ಹೊಸ ವಾತಾವರಣನ್ನು ಸಹಿಸಿಕೊಂಡಳಾದರೂ, ಪ್ರತಿಯೊಬ್ಬರೂ ಕಡಿಮೆ ಸಂಪನ್ಮೂಲಗಳೊಂದಿಗೆ ಅಂತಹ ಸೀಮಿತ ಜಾಗದಲ್ಲಿ ವಾಸಿಸುವುದು ತುಂಬಾ ಕಷ್ಟಕರವಾಗಿತ್ತು, ಆದ್ದರಿಂದ ಆಕೆ ತನ್ನ ಡೈರಿಯಲ್ಲಿ ತನ್ನ ಮನಸ್ಸಿನ ಬೇಗುದಿಗಳನ್ನು ತೋಡಿಕೊಳ್ಳಲು ಪ್ರಾರಂಭಿಸಿದಳು. ಅವರು ಬಹಳ ಶಾಂತವಾಗಿ ಇರಬೇಕಾಗಿತ್ತು, ಏಕೆಂದರೆ, ಇದು ಇವರಿದ್ದ ಅಡಗು ತಾಣದಲ್ಲಿದ್ದವರ ಪ್ರಾಣವನ್ನು ಮಾತ್ರವಲ್ಲದೆ, ಅವರಿಗೆ ಸಹಾಯ ಮಾಡಿದ ಜ್ಯೂಯಿಷ್ ಅಲ್ಲದವರ ಪ್ರಾಣಕ್ಕೂ ಸಂಚಕಾರ ತರಬಹುದಾಗಿತ್ತು.
ಆನ್ ಮತ್ತು ಅವಳೊಂದಿಗೆ ವಾಸಿಸುತ್ತಿದ್ದ ಜನರ ನಡುವಿನ ಸಂಬಂಧಗಳು ಸುಲಭವಿರಲಿಲ್ಲ. ಮೊದಲು ಅಲ್ಲಿಯವರು ತಂದೆ ಒಟ್ಟೊ ಫ್ರಾಂಕ್ ಅವರನ್ನು ಅತ್ಯಂತ ಹತ್ತಿರದವರು ಎಂದು ಪರಿಗಣಿಸಿದರು. ಸಮಯ ಕಳೆದಂತೆ, ಮಾರ್ಗಾಟ್ ಅನ್ನು ಸ್ನೇಹದಿಂದ ನೋಡಲು ಪ್ರಾರಂಭಿಸಿದರು. ಪೀಟರ್ ಎಂಬ ವ್ಯಾನ್ ಪೆಲ್ಸ್ ಕುಟುಂಬದ ಹುಡುಗನ ಮೇಲೆ ಆಕೆ ಸ್ವಲ್ಪ ಮೋಹವನ್ನು ಹೊಂದಿದ್ದಳು.
ಮೊದಲಿಗೆ ಆನಳಿಗೆ ತನ್ನ ತಾಯಿಯೊಂದಿಗೆ ಭಿನ್ನಾಭಿಪ್ರಾಯಗಳು ಬಹಳಷ್ಟಿದ್ದವು. ಕ್ರಮೇಣ ತನ್ನ ಸಹೋದರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ರೀತಿಯಲ್ಲಿಯೇ, ತನ್ನ ತಾಯಿಯೊಂದಿಗೂ ಹೆಚ್ಚು ಸಾಮರಸ್ಯ ಮನೋಭಾವವನ್ನು ಹೊಂದಲು ಪ್ರಾರಂಭಿಸಿದಳು.
1944ರ ಆಗಸ್ಟ್ 1ರಂದು ಆನ್ ಫ್ರಾಂಕ್
ತನ್ನ ದಿನಚರಿಯಲ್ಲಿ ಕೊನೆಯ ಬಾರಿಗೆ ಬರೆದಳು. ಮೂರು ದಿನಗಳ ನಂತರ ಇವರಿದ್ದ ರಹಸ್ಯ ಅನೆಕ್ಸ್ ಅನ್ನು ಜರ್ಮನ್ ಅಧಿಕಾರಿಗಳು ಕಂಡುಹಿಡಿದರು. ಸ್ಥಳದಲ್ಲಿ ಅಡಗಿರುವ ಎಲ್ಲರನ್ನು ಕೇಂದ್ರ ರೀಚ್ ಭದ್ರತಾ ಕಚೇರಿಗೆ ವರ್ಗಾಯಿಸಲಾಯಿತು. ನಂತರ ಅವರನ್ನು ವೆಸ್ಟರ್ಬೋರ್ಕ್ ಎಂದು ಕರೆಯಲ್ಪಡುವ ಸಾರಿಗೆ ಕಾನ್ಸಂಟ್ರೇಶನ್ ಕ್ಯಾಂಪ್ಗೆ ಕರೆದೊಯ್ಯಲಾಯಿತು. ನಂತರ ಆಶ್ವಿಟ್ಜ್ಗೆ ಕಳುಹಿಸಲಾಯಿತು. ಫ್ರಾಂಕ್ ಕುಟುಂಬದೊಂದಿಗೆ ಸಹಕರಿಸಿದ ಕೆಲವರನ್ನು ಬಂಧಿಸಲಾಯಿತು, ಆದರೆ ಮೆಯೆಪ್ ಗೀಸ್ ಮತ್ತು ಬೆಪ್ ವೋಸ್ಕುಯಿಜ್ಲ್ ಅವರನ್ನು ಕೇವಲ ಪ್ರಶ್ನಿಸಿ ಬಿಟ್ಟುಬಿಡಲಾಯಿತು. ಇವರು ಆನ್ ಬರೆದ ಪುಸ್ತಕವನ್ನು ಕಂಡರು.
ಆಶ್ವಿಟ್ಜ್‌ನಲ್ಲಿ ಖೈದಿಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಲಾಯಿತು; ಅವರೊಂದಿಗೆ ಬಂದ ಜ್ಯೂಯಿಷ್ ಜನಾಂಗದ ಅನೇಕರು ತಕ್ಷಣವೇ ಗ್ಯಾಸ್ ಕೋಣೆಗಳಲ್ಲಿ ಕೊಲ್ಲಲ್ಪಟ್ಟರು. ಆನ್ ಅವರ ಕುಟುಂಬದ ಎಲ್ಲಾ ಸದಸ್ಯರು ಬಲವಂತದ ದುಡಿಮೆಗೆ ಒಳಗಾದರು. ಕಾನ್ಸಂಟ್ರೇಶನ್ ಕ್ಯಾಂಪ್‌ಗೆ ಪ್ರವೇಶಿಸಿದ ನಂತರ, ಒಟ್ಟೊ ಫ್ರಾಂಕ್ ತನ್ನ ಹೆಣ್ಣುಮಕ್ಕಳನ್ನು ಅಥವಾ ಅವನ ಹೆಂಡತಿಯನ್ನು ಮತ್ತೆ ನೋಡಲಿಲ್ಲ. ಆನಳ ತಾಯಿ ಎಡಿತಳು ಜನವರಿ 1945ರಲ್ಲಿ ಆಶ್ವಿಟ್ಜ್‌ನಲ್ಲಿ ನಿಧನಳಾದಳು. ಮತ್ತೊಂದೆಡೆ, ಹುಡುಗಿಯರನ್ನು ಬರ್ಗೆನ್-ಬೆಲ್ಸೆನ್‌ಗೆ ವರ್ಗಾಯಿಸಲಾಯಿತು. ಹೊಸ ಶಿಬಿರದಲ್ಲಿ ಖೈದಿಗಳ ಪರಿಸ್ಥಿತಿ ಹದಗೆಟ್ಟಿತ್ತು. ಇವರಿಗೆ ಸೌಲಭ್ಯಗಳಲ್ಲಿ ಟೈಫಸ್ ಹರಡುವಿಕೆಯ
ಕ್ರಿಮಿಗಳನ್ನು ಸೇರಿಸಲಾಯಿತು. ಆನ್ ಫ್ರಾಂಕ್‌ಳ ಸಾವಿಗೆ ಬರ್ಗೆನ್-ಬೆಲ್ಸೆನ್‌ನಲ್ಲಿ ಹರಡಿದ ಪ್ರಬಲ ಸಾಂಕ್ರಾಮಿಕ ರೋಗ ಕಾರಣ ಎಂದು ನಂಬಲಾಗಿದೆ.
ಅನಾರೋಗ್ಯಕ್ಕೆ ಮೊದಲು ಮಾರ್ಗಾಟ್ ನಿಧನಳಾದಳು. ತನ್ನ ಇಡೀ ಕುಟುಂಬ ಸಾವಿಗೀಡಾಯಿತು ಎಂದುಕೊಂಡಿದ್ದ ಆನ್ ನಿರುತ್ಸಾಹಗೊಂಡಳು. ಆನ್ ಫ್ರಾಂಕ್ ಫೆಬ್ರವರಿ ಅಥವಾ ಮಾರ್ಚ್ 1945ರಲ್ಲಿ ಜರ್ಮನಿಯ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ನಿಧನಳಾದಳು. ಏಪ್ರಿಲ್ 1945ರಲ್ಲಿ ಬ್ರಿಟಿಷ್ ಸೈನ್ಯವು ಕಾನ್ಸಂಟ್ರೇಶನ್ ಕ್ಯಾಂಪ್ ಅನ್ನು ಸ್ವತಂತ್ರಗೊಳಿಸುವುದಕ್ಕೆ ಕೆಲವೇ ವಾರಗಳ ಮೊದಲು ಆನ್ ಫ್ರಾಂಕ್ ಸಾವು ಸಂಭವಿಸಿತು ಎಂದು ಭಾವಿಸಲಾಗಿದೆ. ಆ ಕುಟುಂಬದಲ್ಲಿ ಉಳಿದ ಏಕೈಕ ಸದಸ್ಯ ಆನಳ ತಂದೆ ಒಟ್ಟೊ ಫ್ರಾಂಕ್. ಆತ ಆಶ್ವಿಟ್ಜ್‌ನಲ್ಲಿಯೇ ಬಂಧನದಲ್ಲಿ ಇದ್ದ. ಜನವರಿ 1945ರಲ್ಲಿ ಬ್ರಿಟಿಷ್ ಸೇನೆ ಆ ಕಾನ್ಸಂಟ್ರೇಶನ್ ಕ್ಯಾಂಪನ್ನು ವಿಮೋಚನೆಗೊಳಿಸಿದಾಗ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಗುಣಮುಖನಾಗಿ ಆಮ್ಸ್ಟರ್‌ಡ್ಯಾಮ್‌ಗೆ ಹಿಂದಿರುಗಿದ ನಂತರ, ಮೆಯೆಪ್ ಗೀಸಳಿಂದ ಆನ್ ಬರೆದ ಪುಸ್ತಕವನ್ನು ಪಡೆದ.
ಒಟ್ಟೊ ಫ್ರಾಂಕ್ ತನ್ನ ಮಗಳು ತನ್ನ ದಿನಚರಿಯಲ್ಲಿ ದಾಖಲಿಸಿದ ಅನುಭವಗಳನ್ನು ಓದಿದ ನಂತರ, ಆಕೆ ಗೌಪ್ಯತೆಯ ದಿನಗಳ ಕುರಿತು ದಾಖಲಿಸಿದ ವಿವರಗಳ ನಿಖರತೆಗೆ ಅಚ್ಚರಿಗೊಂಡ. ಹೀಗಾಗಿ ಆಕೆಯ ಬರಹವನ್ನು ಓದುಗರಿಗೆ ತಲುಪಿಸಲು ಯತ್ನಿಸಿದ. 1947ರಲ್ಲಿ 'ದ ಡೈರಿ ಆಫ್ ಎ ಯಂಗ್ ಗರ್ಲ್' ಎಂಬ ಹೆಸರಿನಿಂದ ಮಾರಾಟವಾದ ಈ ಪುಸ್ತಕವು ವಿಶ್ವಾದ್ಯಂತ ಯಶಸ್ವಿಯಾಯಿತು, 70 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲ್ಪಟ್ಟು, ಚಲನಚಿತ್ರಗಳು ಮತ್ತು ನಾಟಕಗಳಿಗೆ ಸಹಾ ವಸ್ತುವಾಯಿತು.
Anne Frank
ಕಾಮೆಂಟ್‌ಗಳು