ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇ. ಶ್ರೀಧರನ್


ಇ. ಶ್ರೀಧರನ್

ಇ. ಶ್ರೀಧರನ್ ಭಾರತೀಯ ಸಾರ್ವಜನಿಕ ಪಯಣದಲ್ಲಿ ಕ್ರಾಂತಿ ತಂದ ಮಹಾನ್ ತಂತ್ರಜ್ಞ.  ಕೊಂಕಣ್ ರೈಲ್ವೇ, ಕೊಲ್ಕೊತ್ತಾದಲ್ಲಿನ ಮೊದಲ ಮೆಟ್ರೊ ವ್ಯವಸ್ಥೆಗಳಲ್ಲಿ ತಂತ್ರಜ್ಞರಾಗಿ,   ದೆಹಲಿ ಮೆಟ್ರೊ ಕಾರ್ಪೊರೇಷನ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಕೊಚಿ ಮೆಟ್ರೋದ ಮೆದುಳಾಗಿ ಅವರು ಮೂಡಿಸಿದ  ಮೆಟ್ರೋ ನಿರ್ಮಾಣ ಕಾರ್ಯಗಳು ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿವೆ.

ಎಲಟ್ಟುವಾಲಪಿಲ್ ಶ್ರೀಧರನ್ 1932ರ ಜೂನ್ 12ರಂದು ಮಲಬಾರ್ ಜಿಲ್ಲೆಯ, ಪೊನ್ನಾನಿ ತಾಲ್ಲೂಕಿನ ಕರುಕಾಪುಥುರ್ ಎಂಬಲ್ಲಿ ಜನಿಸಿದರು.  ತಂದೆ ಕೀಯ್‍ವೀಟ್ಟಿಲ್ ನೀಲಕಂದನ್ ಮೂಸತ್.  ತಾಯಿ ಅಮ್ಮಾಲುಅಮ್ಮ.  ಶ್ರೀಧರನ್ ಅವರ ಓದು ಪಾಲ್ಗಾಟ್ ಆಸುಪಾಸಿನಲ್ಲಿ ನಡೆಯಿತು.  ಮುಂದೆ ಆಂಧ್ರಪ್ರದೇಶದ ಕಾಕಿನಾಡದ ಸರಕಾರಿ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು.  ಶ್ರೀಧರನ್ ಮತ್ತು ಶ್ರೇಷ್ಠ ಚುನಾವಣಾ ಆಯೋಕ್ತರಾಗಿ ಹೆಸರಾಗಿದ್ದ ಟಿ. ಎನ್. ಶೇಷನ್ ಅವರು ಶಾಲೆ ಮತ್ತು ಪದವಿಪೂರ್ವ ಶಿಕ್ಷಣದಲ್ಲಿ ಸಹಪಾಠಿಗಳಾಗಿದ್ದರು.  

ಶ್ರೀಧರನ್ ಕೆಲವು ಕಾಲ ಕೋಯಿಕೋಡ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಮುಂದೆ ಒಂದು ವರ್ಷ ಮುಂಬೈನ‍ಪೋರ್ಟ್ ಟ್ರಸ್ಟಿನಲ್ಲಿ ಅಪ್ರೆಂಟಿಸ್ ಆಗಿದ್ದರು. 1953ರಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ರೈಲ್ವೇ ಇಂಜಿನಿಯರ್ ಆದರು. 1954ರಲ್ಲಿ ದಕ್ಷಿಣ ರೈಲ್ವೇಯಲ್ಲಿ ಪ್ರೊಬೇಷನರಿ ಸಹಾಯಕ ಇಂಜಿನಿಯರ್ ಆದರು.  1964ರಲ್ಲಿ ಭೀಕರ ಸೈಕ್ಲೋನ್ ದೆಸೆಯಿಂದ ರಾಮೇಶ್ವರಂ ಮತ್ತು ತಮಿಳುನಾಡಿನ ಕೇಂದ್ರಪ್ರದೇಶಗಳ ಸಂಪರ್ಕ ಸೇತುವೆ ಕುಸಿದುಬಿತ್ತು.  ರೈಲ್ವೇ ಇಲಾಖೆ ಇದನ್ನು ಪುನಃಸಂಸ್ಥಾಪಿಸಲು 6 ತಿಂಗಳು ಸಮಯ ನೀಡಿದರೆ, ಶ್ರೀಧರನ್ ಅವರ ಮೇಲಧಿಕಾರಿ ಮೂರು ತಿಂಗಳಲ್ಲಿ ಈ ಕೆಲಸ ಮುಗಿಸಬೇಕು ಎಂದು ಗಡುವು ನೀಡಿದರು. ಶ್ರೀಧರನ್ ಕೇವಲ 46 ದಿನಗಳಲ್ಲಿ ಸೇತುವೆಯನ್ನು ಪನಃಸಂಸ್ಥಾಪಿಸಿ ದಕ್ಷತೆ ಮೆರೆದರು.  ಇದಕ್ಕಾಗಿ ರೈಲ್ವೇ ಸಚಿವರ ಪ್ರಶಸ್ತಿಯನ್ನು ಶ್ರೀಧರನ್ ಪಡೆದರು.

1970ರಲ್ಲಿ ಕೊಲ್ಕೊತ್ತಾ ಮೆಟ್ರೊ ಯೋಜನೆಯ ರೂಪುರೇಷೆಗಳನ್ನು ಮೂಡಿಸಲು ಡೆಪ್ಯೂಟಿ ಚೀಫ್ ಇಂಜಿನಿಯರ್ ಆಗಿ ಶ್ರೀಧರನ್ ಅವರಿಗೆ ಅಧಿಕಾರ ನೀಡಲಾಯಿತು. ಶ್ರೀಧರನ್ ಅವರು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದೇ ಅಲ್ಲದೆ ಭಾರತದ ಮೂಲಭೂತ ಸೌಕರ್ಯಗಳ ಆಧುನೀಕೃತ ಇಂಜಿನಿಯರಿಂಗ್ ಅಭಿವೃದ್ಧಿಯಲ್ಲಿ ಹೊಸ ಭಾಷ್ಯ ಬರೆದರು.  1975ರಲ್ಲಿ ಇವರನ್ನು ಈ ಹುದ್ಧೆಯಿಂದ ಎತ್ತಂಗಡಿ ಮಾಡಲಾಯಿತು.

1979ರಲ್ಲಿ ಶ್ರೀಧರನ್ ಅವರು ಕೊಚಿನ್ ಶಿಪ್ಯಾರ್ಡ್ ಸೇರಿದಾಗ ಅದು ತೀವ್ರ ಅನುತ್ಪಾದಕತಾ ಸಮಸ್ಯೆಗಳಲ್ಲಿ ಸಿಲುಕಿತ್ತು.  ಸಂಸ್ಥೆಯ ಪ್ರಥಮ ನಿರ್ಮಾಣವಾದ ಎಂ. ವಿ. ರಾಣಿ ಪದ್ಮಿನಿ ಹಡಗು ಬಹುಕಾಲ ವಿಳಂಬಗೊಂಡಿತ್ತು.‍ 1981ರಲ್ಲಿ ಶ್ರೀಧರನ್ ಈ ಸಂಸ್ಥೆಯ ಚೇರ್ಮನ್‍ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸಂಸ್ಥೆಯ ಪ್ರಥಮ ನಿರ್ಮಾಣವಾದ ಎಂ. ವಿ. ರಾಣಿ ಪದ್ಮಿನಿ ಹಡಗು ನಿರ್ಮಾಣ ಪೂರ್ಣವಾಗುವಲ್ಲಿ ಸಮರ್ಥ ನೇತೃತ್ವ ವಹಿಸಿದರು.

1987ರಲ್ಲಿ ಪಶ್ಚಿಮ ರೈಲ್ವೆಯಲ್ಲಿ ಇ. ಶ್ರೀಧರನ್ ಅವರಿಗೆ ಜನರಲ್ ಮ್ಯಾನೇಜರ್ ಆಗಿ ಬಡ್ತಿ ನೀಡಲಾಯಿತು.  1989ರಲ್ಲಿ ಇವರಿಗೆ  ರೈಲ್ವೇ ಬೋರ್ಡಿನ ಇಂಜಿನಿಯರಿಂಗ್ ಸದಸ್ಯತ್ವ  ಮತ್ತು ಭಾರತ ಸರ್ಕಾರದ ಎಕ್ಸ್-ಅಫಿಸಿಯೋ ಸೆಕ್ರೇಟರಿ ಆಗಿ ಉನ್ನತಿ ನೀಡಲಾಯಿತು.  1990ರಲ್ಲಿ ಅವರು ನಿವೃತ್ತರಾದರೂ ಸಹಾ, ಅಂದಿನ ರೈಲ್ವೇ ಮಂತ್ರಿಗಳಾದ ಜಾರ್ಜ್ ಫರ್ನಾಂಡಿಸ್ ಅವರು ಶ್ರೀಧರನ್ ಅವರ ಸೇವೆ  ಭಾರತ ಸರಕಾರಕ್ಕೆ  ಅಮೂಲ್ಯವಾದದ್ದು ಎಂಬುದನ್ನು ಮನಗಂಡು ಅವರನ್ನು ಕೊಂಕಣ್ ರೈಲ್ವೇ ನಿಗಮದ ಚೇರ್ಮನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಕಾಂಟ್ರಾಕ್ಟ್ ಆಧಾರದಲ್ಲಿ ನೇಮಿಸಿದರು.   ಹೀಗೆ ಭಾರತದ ರೈಲ್ವೇ ಇತಿಹಾಸದಲ್ಲಿ ಅದ್ಭುತ ಎನಿಸಿರುವ ಕೊಂಕಣ್ ರೈಲ್ವೇ ಏಳು ವರ್ಷಗಳ ಕಾಲದಲ್ಲಿ ಭವ್ಯ ರೀತಿಯಲ್ಲಿ ಸ್ಥಾಪನೆಗೊಂಡಿತು.

ದೆಹಲಿಯ ಮುಖ್ಯಮಂತ್ರಿಗಳಾದ ಸಾಹಿಬ್ ಸಿಂಗ್ ವರ್ಮಾ ಅವರು ಇ. ಶ್ರೀಧರನ್ ಅವರನ್ನು ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ಸಂಸ್ಥೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಿದರು.  1997ರ ವೇಳೆಗೆ ಈ ಸಂಸ್ಥೆಯ ಕಾರ್ಯಗಳೆಲ್ಲ ನಿಗಧಿತ ಅವಧಿಗೆ ಇಲ್ಲವೇ ಅದಕ್ಕೆ ಮುಂಚಿತವಾಗಿಯೇ, ನಿಗದಿತ ಬಡ್ಜೆಟ್ ಪರಿಮಿತಿಯೊಳಗೆ ಸಮರ್ಥವಾಗಿ ಈಡೇರಿತು.  ಮಾಧ್ಯಮಲೋಕ ಶ್ರೀಧರನ್ ಅವರ ಈ ಸಾಧನೆಗೆ ಅವರನ್ನು 'ಮೆಟ್ರೊ ಮ್ಯಾನ್' ಎಂದು ಕೊಂಡಾಡುತ್ತಾ ಬಂದಿದೆ.  

ಈ ಮೆಟ್ರೊ ಸಾಧನೆ ಇಡೀ ದೇಶದ ಪ್ರಮುಖ ನಗರಗಳಲ್ಲೆಲ್ಲ ಮೂಡಿರುವ ಮತ್ತು ಮೂಡುತ್ತಿರುವ ಮೆಟ್ರೊ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ.  ಶ್ರೀಧರನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕೊಚಿ ಮೆಟ್ರೋ ಯೋಜನೆ ನಾಲ್ಕು ವರ್ಷಗಳಲ್ಲಿ ಯಶಸ್ವೀ ಕಾರ್ಯನಿರ್ವಹಣೆ ಮಾಡಿತು. ಲಕ್ನೊ ಮೆಟ್ರೋ ಯೋಜನೆ ಎರಡೂವರೆ ವರ್ಷಗಳಲ್ಲೇ ಕಾರ್ಯನಿರ್ವಹಿಸಿತು. ಜಯಪುರ ಮೆಟ್ರೋ ಬೋರ್ಡ್ ಸಹಾ ಅವರ ಸೇವೆ ಪಡೆಯಿತು.

ಇ. ಶ್ರೀಧರನ್ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಗೌರವ ಸಂದಿದೆ. ಫ್ರಾನ್ಸ್ ದೇಶದ ನೈಟ್ ಆಫ್ ದ ಲೆಜೆನ್ ಆನರ್ ಮತ್ತು ಇನ್ನೂ ಅನೇಕ ಗೌರವಗಳು ಸಂದಿವೆ. ಅವರನ್ನು ವಿಶ್ವಸಂಸ್ಥೆ ಕೂಡಾ ಸಲಹೆಗಾರರನ್ನಾಗಿಸಿಕೊಂಡಿದೆ.

ಒಬ್ಬ ಸಮರ್ಥ ನಿಷ್ಠಾವಂತ ಅಧಿಕಾರಿ ದೇಶದಲ್ಲಿ ಎಂಥಾ ತಂಗಾಳಿ ತರಬಹುದು ಎಂಬುದಕ್ಕೆ ಇ. ಶ್ರೀಧರನ್ ನಿದರ್ಶನ.

ಇತ್ತೀಚೆಗೆ ಇ. ಶ್ರೀಧರನ್ ಅವರನ್ನು ಕ್ಷಿಪ್ರರೀತಿಯಲ್ಲಿ ರಾಜಕಾರಣಕ್ಕೆ ತರುವ ಕಾರ್ಯ ಯಶಸ್ವಿಯಾಗಲಿಲ್ಲ.  ಹಲವು ಸಿದ್ಧಾಂತಗಳ ಮನೋಧರ್ಮಗಳ ರಾಜಕೀಯದ ಕೇರಳದಂತಹ ರಾಜ್ಯದಲ್ಲಿನ ರಾಜಕಾರಣದಲ್ಲಿ ಶ್ರೀಧರನ್ ಅವರು ಯಶಸ್ಸು ಕಂಡಿಲ್ಲ ಎನ್ನುವುದು ಅವರದ್ದಾಗಲಿ, ಜನಸಮುದಾಯದ್ದಾಗಲಿ ತಪ್ಪು ಎನ್ನುವುದನ್ನು ನನ್ನ ಮನಸ್ಸು ಒಪ್ಪುವುದಿಲ್ಲ.  ಜಯ ಅಪಜಯಗಳು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ.  ನಾವು ಮಾಡುವ ಕೆಲಸವನ್ನು ಸಮರ್ಥವಾಗಿ ನಮ್ಮ ಸಮಾಧಾನ ಸಂತೃಪ್ತಿಗಳಿಗಾಗಿ ಮಾಡುತ್ತಿದ್ದೇವೆಯೇ ಎಂಬುದು ಮುಖ್ಯ. ಇ. ಶ್ರೀಧರನ್ ಎಂಬ ಸಾಮರ್ಥ್ಯಕ್ಕೆ ಸಾಷ್ಟಾಂಗ ನಮನ ಮತ್ತು ಹುಟ್ಟುಹಬ್ಬದ ಶುಭಾಶಯ. ಇಂಥ ಶ್ರೇಷ್ಠರಿಗೆ ಆಗಾಗ ಜನ್ಮನೀಡುತ್ತಿರುವ‍ ಭಾರತಮಾತೆಗೆ ಕೂಡಾ ನಮನ.


On the birthday of the great Metro Man E. Sreedharan Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ