ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯ ಸಿಂಧೂರ


 ವಿಜಯ ಸಿಂಧೂರ


ವಿಜಯ ಸಿಂಧೂರ ನಾಡಿನ ಹೆಸರಾಂತ ಹಿರಿಯ ಕಲಾವಿದರಾಗಿದ್ದಾರೆ.

ವಿಜಯ ಸಿಂಧೂರ 1940ರ ಜೂನ್ 7ರಂದು 
ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ಜನಿಸಿದರು. ತಂದೆ ಗಂಗಪ್ಪ. ತಾಯಿ ಬಸಮ್ಮ. ಬಾಲ್ಯದಿಂದಲೇ ಮನೆಯಲ್ಲಿ ತೂಗು ಹಾಕಿದ್ದ ರವಿವರ್ಮನ ಚಿತ್ರಗಳಿಂದ ಆಕರ್ಷಿತರಾಗಿ ತಾವೂ ಅದರಂತೆ ಮಾಡಬೇಕೆಂದು ಚಿತ್ರಕಲೆಗೆ ತೊಡಗಿ ಶಿವ-ಪಾರ್ವತಿ ಚಿತ್ರ ಬರೆದರು. ಗಣಪತಿ ಚಿತ್ರಬಿಡಿಸಿ ಬಣ್ಣ ತುಂಬಿದರು. 

ಇಂಜಿನಿಯರ್‌ ಅಥವಾ ಡಾಕ್ಟರ್‌ ಆಗಬೇಕೆಂದು ಆರಿಸಿಕೊಂಡ ಐಚ್ಛಿಕ ವಿಷಯ ಗಣಿತ ಕೈಕೊಟ್ಟು ಚಿತ್ರಕಲೆಯತ್ತ ಮನಸ್ಸು ಹೊರಳಿತು. ಪುಣೆಯ ಅಭಿನವ ಕಲಾ ವಿದ್ಯಾಲಯದ ಎಸ್.ಎಸ್. ಕಾಮತ್ ಮತ್ತು ಮುಂಬಯಿಯ ದಂಡಾವತಿಯವರ ನೂತನ ವಿದ್ಯಾಶಾಲೆಯಲ್ಲಿ ಚಿತ್ರಕಲಾಭ್ಯಾಸ ಮಾಡಿದರು. ಶಂಕರ ರಾವ್  ಪಲ್ಸೀಕರ್‌ರವರ ಮಾರ್ಗದರ್ಶನ ದೊರಕಿ ಚಿತ್ರಕಲೆಯ ಡಿಪ್ಲೊಮಾ ಪಡೆದರು. ಶಿಷ್ಯವೇತನದಿಂದ ಭಿತ್ತಿ ಚಿತ್ರಕಲೆ ಅಭ್ಯಾಸ ಮಾಡಿದರು. ತೈಲವರ್ಣ ಮಾಧ್ಯಮದಲ್ಲಿ ಅಪಾರ ಸಾಧನೆ ಮಾಡಿದರು. ಇವರ ಭಾವಚಿತ್ರಗಳ ರಚನೆಯಲ್ಲಿ ಜೀವ ಕಳೆ ತುಂಬಿತುಳುಕುತ್ತಿತ್ತು
ಮಲ್ಲಿಕಾರ್ಜುನ ಮನಸೂರ್‌, ಸವಾಯಿ ಗಂಧರ್ವ, ಗಂಗೂಬಾಯಿ ಹಾನಗಲ್, ರಂಗಭೂಮಿ ಕಲಾವಿದ ದೇಶಪಾಂಡೆ ಮುಂತಾದವರ ಚಿತ್ರ ರಚನೆ ಮಾಡಿದರು. ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್‌ ಭವನ, ಕರ್ನಾಟಕ ಲಲಿತ ಕಲಾ ಅಕಾಡಮಿ, ತಾಜ್ ಆರ್ಟ್ ಗ್ಯಾಲರಿ ಮುಂಬಯಿ, ಜಹಂಗೀರ್‌ ಆರ್ಟ್ ಗ್ಯಾಲರಿ, ಇಮೇಜಸ್ ಗ್ಯಾಲರಿ-ಬೆಂಗಳೂರು, ಜಮಖಂಡಿ, ಬಿಜಾಪುರ, ಹೈದರಾಬಾದ್ ಕಲಾಭವನ ಮುಂತಾದೆಡೆ ಏಕವ್ಯಕ್ತಿ ಪ್ರದರ್ಶನ ಮಾಡಿದರು. ಧರಣ ಆರ್ಟ್ಸ್‌ಗ್ಯಾಲರಿ- ದೆಹಲಿ, ಅಖಿಲ ಭಾರತ ಕಲಾ ಪ್ರದರ್ಶನಗಳಾದ ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಭೂಪಾಲ್ ಭಾರತ ಭವನ, ಪ್ಯಾರಿಸ್ಸಿನ ಆರ್ಟಿಸ್ಟ್ ಇಂಡಿಯನ್‌ನಲ್ಲಿ ಸಾಂಘಿಕ ಪ್ರದರ್ಶನಗಳಲ್ಲಿ ಪಾಲ್ಗೊಂಡರು. ಹೈದರಾಬಾದ್, ಬೆಂಗಳೂರು, ಧಾರವಾಡ, ಮೈಸೂರು, ನಾಗಪುರ, ಕಲಬುರ್ಗಿ ಕಲಾಶಿಬಿರಗಳಲ್ಲಿ ಭಾಗಿಯಾದರು. ಆರ್ಟಿಸ್ಟ್ಸ್‌ ಸೊಸೈಟಿ ಆಫ್ ಇಂಡಿಯಾ, ಮುಂಬಯಿ ಟಾಟಾ ಗುಂಪಿನ ಕಂಪನಿಗಳು, ನ್ಯಾಷನಲ್ ಗ್ಯಾಲರಿ ಆಫ್ ಮಾಡರ‍್ನ ಆರ್ಟ್ಸ್ ಮುಂತಾದ ಸಂಗ್ರಹಗಳಲ್ಲಿ ಇವರ ಕೃತಿಗಳು ಸಂಗ್ರಹೀತಗೊಂಡಿವೆ. 

ವಿಜಯ ಸಿಂಧೂರ ಅವರಿಗೆ ಬಾಂಬೆ ಆರ್ಟ್‌ ಸೊಸೈಟಿ ಪ್ರಶಸ್ತಿ, ಆರ್ಟ್‌ ಸೊಸೈಟಿ ಆಫ್ ಇಂಡಿಯಾದ ಪಟೇಲ್ ಟ್ರೋಫಿ, ಕೇಂದ್ರ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಕೋಲ್ಕತ್ತಾದ ಅಖಿಲ ಭಾರತ ಕಲಾ ಪ್ರದರ್ಶನ ಪ್ರಶಸ್ತಿ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of great artiste Vijay Sindhur 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ