ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಮ್ಮದ್ ಯೂನುಸ್


 ಮಹಮ್ಮದ್ ಯೂನುಸ್


ಪ್ರಪಂಚದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಬಹುತೇಕರು ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ತಮ್ಮನ್ನು ತಾವು ಅರ್ಪಿಸಿಕೊಂಡವರು. ಹಾಗೆ ಅರ್ಪಿಸಿಕೊಂಡು ಪ್ರಶಸ್ತಿಗೆ ಭಾಜನರಾದವರ ದೊಡ್ಡ ಪಟ್ಟಿಯೇ ಇದೆ.  ಬಾಂಗ್ಲಾ ದೇಶದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾದ ಮಹಮ್ಮದ್ ಯೂನಸ್ 2006ರಲ್ಲಿ  ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಮೂಲಕ ಅಂತಹ ಮಹಾನುಭಾವರ ಸಾಲಿಗೆ ಸೇರಿದ್ದಾರೆ.

ಯೂನಸ್ ಯುದ್ಧ ಗೆದ್ದವರಲ್ಲ; ಯುದ್ಧಕ್ಕಿಂತಲೂ ಭೀಕರವಾದ ಬಡತನವನ್ನು ಗೆದ್ದವರು. ಬಡತನದ ವಿರುದ್ಧ ಹೋರಾಡಿದವರು. ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಕ್ರಾಂತಿಗೆ ಕಾರಣರಾದವರು. ಆ ಕಾರಣಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.  

1940ರ ಜೂನ್ 28ರಂದು ಬಡ ಅಕ್ಕಸಾಲಿಗರ ಮಗನಾಗಿ ಹುಟ್ಟಿದ ಯೂನಸ್, ಬದುಕಿನುದ್ದಕ್ಕೂ ಬಡತನದ ಬವಣೆಯಲ್ಲಿ ನೊಂದು ಬೆಂದವರು. ಆ ಕಾರಣಕ್ಕಾಗಿಯೋ ಏನೋ ಯೂನಸ್ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಗಲೂ ಬಡವರ ಬದುಕನ್ನು ಮತ್ತೆ ಮತ್ತೆ ಕಣ್ಣಾರೆ ಕಾಣಲು ಪ್ರತೀವಾರ ಹಳ್ಳಿಗಳಿಗೆ ಹೋಗುತ್ತಿದ್ದರು.

ಹೀಗೆ ಹೋಗಿಬರುವ ಸಮಯ, ಅಂದರೆ 1976ರ ಆಸುಪಾಸಿನಲ್ಲಿ ಬಾಂಗ್ಲಾ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಹಳ್ಳಿಗಳಿಗೆ ಸ್ಮಶಾನಮೌನ ಮುತ್ತಿಕೊಂಡಿತ್ತು. ಹಳ್ಳಿಯ ಬಡವರು ಶ್ರೀಮಂತರಿಂದ ಸಾಲ ಪಡೆದು, ಹೆಚ್ಚಿನ ಬಡ್ಡಿ ತೆತ್ತು ಪಡಬಾರದ ಯಾತನೆ ಪಡುತ್ತಿದ್ದರು. ಯೂನಸ್ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮನ ಮರುಗಿತು. ಕಲಿತಿದ್ದ ಅರ್ಥಶಾಸ್ತ್ರ ಬ್ಯಾಂಕಿಗೆ ಕರೆದುಕೊಂಡುಹೋಯಿತು.

ಆದರೆ, ಬ್ಯಾಂಕಿಗೆ ಬೇಕಾಗಿರುವುದು ಅನುಕೂಲಸ್ಥರು, ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರೇ ಹೊರತು ಬಡವರಲ್ಲ. ಬಡವರ ಬಳಿ ಆಸ್ತಿ, ಪಾಸ್ತಿ ಇಲ್ಲ. ಅವರು ಸಾಲ ತೀರಿಸುತ್ತಾರೆಂಬುದಕ್ಕೆ ಗ್ಯಾರಂಟಿಯೂ ಇಲ್ಲ. ಹಾಗಾಗಿ ಅವರು ಬಡವರಿಗೆ ಸಾಲ ಕೊಡಲಿಲ್ಲ. ಯೂನಸ್ ಅವರ ಅರ್ಥಶಾಸ್ತ್ರ ಬಡವರ ಬವಣೆ ನೀಗಲು ನೆರವಾಗಲಿಲ್ಲ. ಆದರೆ, ಯೂನಸ್ ಹಿಂಜರಿಯಲಿಲ್ಲ. ತಾವೇ ಜಾಮೀನು ನೀಡಿ ಹಳ್ಳಿಯ ನಾಲ್ಕು ಹೆಂಗಸರಿಗೆ ಏಳು ಸಾವಿರ ಸಾಲ ಕೊಡಿಸಿದರು.

ಇಲ್ಲಿ ಅವರು ನಂಬಿದ್ದು ನಂಬಿಕೆಯನ್ನು, ಹಳ್ಳಿಯ ಹೆಂಗಸರ ಆತ್ಮವಿಶ್ವಾಸವನ್ನು. ಯೂನಸ್ ಅವರ ನಂಬಿಕೆಗೆ ದ್ರೋಹ ಬಗೆಯಲು ಇಚ್ಚಿಸದ ಸಾಲ ಪಡೆದ ಹಳ್ಳಿಯ ಹೆಂಗಸರು ಬಿದಿರು ಖರೀದಿಸಿ, ಬುಟ್ಟಿ ತಯಾರಿಸಿ, ಮಾರಿ ಹಣ ಸಂಪಾದಿಸಿದರು. ಸಾಲ ತೀರಿಸಿದರು. ಯೂನಸ್ ಸ್ಫೂರ್ತಿಗೊಂಡು ಇನ್ನಷ್ಟು ಹೆಂಗಸರಿಗೆ ಸಾಲ ಕೊಡಿಸಿದರು.

ಇದು ಹೀಗೆಯೇ ಮುಂದುವರೆಯುತ್ತಿದ್ದಾಗ, ಇದು ಇಷ್ಟಕ್ಕೇ ಸೀಮಿತವಾಗಿ ಮಹತ್ತರವಾದದ್ದು ಏನೂ ಸಾಧಿಸಲಾಗದು ಎಂದರಿತಾಗ ಮತ್ತೆ ತಮ್ಮೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರವಾದ. ಆ ಎಚ್ಚರದ ಫಲವೇ ಗ್ರಾಮೀಣ ಬ್ಯಾಂಕ್ ಸ್ಥಾಪನೆ. 1983ರಲ್ಲಿ ಬಡವರಿಂದ ಜಾಮೀನು ಕೇಳದೆ ಸಾಲ ನೀಡುವುದಕ್ಕಾಗಿಯೇ ಹುಟ್ಟಿಕೊಂಡದ್ದು ಈ ಗ್ರಾಮೀಣ ಬ್ಯಾಂಕ್. ಇಲ್ಲಿ ನಂಬಿಕೆ, ವಿಶ್ವಾಸ, ಜವಾಬ್ದಾರಿಗಳೇ ಅಡಿಪಾಯ. ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಯ ಹೆಂಗಸರೇ ಈ ಬ್ಯಾಂಕಿನ ಉಸ್ತುವಾರಿ ಹೊತ್ತ ಒಡೆಯರು.

ಯಾಕೆಂದರೆ, ಗಂಡಸರಿಗಿಂತ ಹೆಂಗಸರು ಹೆಚ್ಚು ನಂಬಿಕಸ್ಥರು ಮತ್ತು ಜವಾಬ್ದಾರಿಯುಳ್ಳವರು ಎಂಬುದು ಯೂನಸರ ಅನುಭವವಾಗಿತ್ತು. ಮತ್ತು ಹೆಂಗಸರ ಕೈಗೆ ಹಣ ಸಿಕ್ಕರೆ ಅವರು ಸಬಲರಾಗಿ, ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ತಾವು ಬದುಕುವುದಷ್ಟೇ ಅಲ್ಲ, ತಮ್ಮ ಕುಟುಂಬವನ್ನು, ಆ ಮೂಲಕ ತಮ್ಮ ಹಳ್ಳಿಯನ್ನು ಬದುಕಿಸುತ್ತಾರೆ ಎಂಬುದು ಯೂನಸ್ ಅವರ ನಂಬಿಕೆಯಾಗಿತ್ತು. 

ಯೂನಸ್ ಅವರ ಅಂದಿನ ಆ ಯೋಚನೆ ಗ್ರಾಮೀಣ ಬ್ಯಾಂಕ್ ಗಳ ಮೂಲಕ ಇಂದು ಫಲ ನೀಡಿದೆ. ಇಂದು ಬಾಂಗ್ಲಾದ ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಬಡತನದ ಬಿಗಿಮುಷ್ಟಿಯಿಂದ ಹೊರಬಂದು ದೇಶದ ರಾಜಕೀಯದತ್ತ ಗಮನ ಹರಿಸುತ್ತಿದ್ದಾರೆ. ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಂಗಸರ ಮತ ಚಲಾವಣೆ ಗಂಡಸರಿಗಿಂತ ಹೆಚ್ಚಾಗುತ್ತಿದೆ. ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಸುಖೀ ಕುಟುಂಬ, ಹೆಂಗಸರಿಗೆ ಸ್ಥಾನಮಾನ ತಂದುಕೊಡುತ್ತಿದೆ.

ನಾಲ್ಕು ಹೆಂಗಸರಿಗೆ ಸಾಲ ಕೊಡಿಸುವ ಮೂಲಕ ಶುರುವಾದ ಸಾಲ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಯೂನಸ್ ಅವರ ಗ್ರಾಮೀಣ ಬ್ಯಾಂಕ್ 2007 ವರ್ಷದ ವೇಳಗೆ ದೇಶದಾದ್ಯಂತ 2,500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿ, 7.4 ಮಿಲಿಯನ್ ಸಾಲಗಾರರಿಗೆ 6.37 ಬಿಲಿಯನ್ ಡಾಲರ್ ಸಾಲ ಕೊಟ್ಟು, 71,371 ಹಳ್ಳಿಗಳಲ್ಲಿ ತನ್ನ ಸೇವೆ ಸಲ್ಲಿಸತೊಡಗಿತ್ತು. ಇದು ಇತರ ದೇಶಗಳಿಗೂ ಮಾದರಿಯಾಗುತ್ತಿದೆ. ಇದನ್ನರಿತ ಬಾಂಗ್ಲಾ ಸರ್ಕಾರ ಈ ಗ್ರಾಮೀಣ ಬ್ಯಾಂಕುಗಳಿಗೆ ಸಹಾಯಹಸ್ತ ನೀಡಿದೆ. ಆದರೆ ಬ್ಯಾಂಕಿನ ಒಡೆತನದಲ್ಲಿ ಸಾಲಗಾರರಾದ ಹಳ್ಳಿಯ ಶೇರುದಾರರದೇ ಸಿಂಹಪಾಲು. ಸರ್ಕಾರದ್ದು ಕೇವಲ ಶೇಕಡ 6ರಷ್ಟು ಒಡೆತನ ಮಾತ್ರ.

ನೊಬೆಲ್ ಪಾರಿತೋಷಕವೇ ಅಲ್ಲದೆ ಮಹಮ್ಮದ್ ಯೂನುಸ್ ಅವರಿಗೆ ವಿಶ್ವದಾದ್ಯಂತ ಅನೇಕ ಗೌರವಗಳು ಸಲ್ಲುತ್ತಿವೆ.  ಇತ್ತೀಚೆಗೆ ಅವರು  ಅಮೆರಿಕ ದೇಶದ ಕಾಂಗ್ರಿಗೇಶನ್ ಸ್ವರ್ಣ ಪದಕವನ್ನೂ ಸ್ವೀಕರಿಸಿದರು.  2008ರ ವರ್ಷದ ಫಾರಿನ್ ಪಾಲಿಸಿ ಮ್ಯಾಗಜಿನ್ ಮಹಮ್ಮದ್ ಯೂನುಸ್ ಅವರನ್ನು ವಿಶ್ವದ ಶ್ರೇಷ್ಠ ನೂರು ಚಿಂತಕರ ಪಟ್ಟಿಯಲ್ಲಿ ಎರಡನೆಯವರನ್ನಾಗಿ ಹೆಸರಿಸಿತು.  2012ರ ವರ್ಷದಲ್ಲಿ ಸ್ಕಾಟ್ಲೆಂಡಿನ ಗ್ಲಾಸ್ಗೋ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯವು ಮಹಮ್ಮದ್ ಯೂನುಸ್ ಅವರನ್ನು ತನ್ನ ಚಾನ್ಸೆಲರ್ ಎಂದು ಹೆಸರಿಸಿ ಗೌರವಿಸಿದೆ.  ಮಹಮ್ಮದ್ ಯೂನುಸ್ ಅವರು 1998ರ ವರ್ಷದಲ್ಲಿ ಟೆಡ್ ಟರ್ನರ್ ಅವರು ಸ್ಥಾಪಿಸಿರುವ ಒಂದು ಬಿಲ್ಲಿಯನ್ ಡಾಲರ್ ಸಹಾಯ ನಿಧಿಯ ಮೇಲ್ವಿಚಾರಕ ಮಂಡಲಿಯ ನಿರ್ದೇಶಕರೂ ಆಗಿದ್ದಾರೆ. ಮಹಮ್ಮದ್ ಯೂನುಸ್ ಅವರು ತಮ್ಮ ಆರ್ಥಿಕ ಚಿಂತನೆಗಳ ಕುರಿತಾಗಿ ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.  

ಇದೆಲ್ಲ ಇವತ್ತು ಪವಾಡದಂತೆ ಕಾಣುತ್ತಿರಬಹುದು. ಒಳ್ಳೆಯದನ್ನು ಒಪ್ಪಿಕೊಳ್ಳುವ ಮನಸ್ಸುಗಳಿಗೆ ಕ್ರಾಂತಿಯಂತೆ ಕಾಣುತ್ತಿರಬಹುದು. ಆದರೆ, ಯೂನಸ್ ಅವರ ಹಳ್ಳಿ ಬದುಕು, ಬಡತನ ಚಿತ್ತಗಾಂಗ್ ವಿಶ್ವವಿದ್ಯಾಲಯ ಕಲಿಸಿದ ಅರ್ಥಶಾಸ್ತ್ರಕ್ಕಿಂತ ಹೆಚ್ಚಿನದನ್ನು ಕಲಿಸಿದೆ. ಬರೀ ಪಾಠ, ಪ್ರವಚನ, ಪೇಪರು, ಸೆಮಿನಾರು, ಚಿಂತನೆ ಮತ್ತು ಬುದ್ಧಿಜೀವಿಗಳ ವಲಯಗಳಲ್ಲಷ್ಟೇ ಕಳೆದುಹೋಗಲಿದ್ದ ಯೂನಸ್ ಅವರನ್ನು ಇಂದು ಬಾಂಗ್ಲಾದ ಕ್ರಾಂತಿಪುರುಷನನ್ನಾಗಿಸಿದೆ. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ.

ರಾಜಕೀಯ ಎಂಬುದು ಎಲ್ಲಾ ಒಳ್ಳೆಯ ಕೆಲಸಗಳಿಗೂ ಕಲ್ಲುಹಾಕುತ್ತದೆ, ಮಸಿ ಬಳಿಯುತ್ತದೆ.  ಮಹಮ್ಮದ್ ಯೂನುಸ್ ಅವರ ಬದುಕಿನಲ್ಲೂ ಇಂತದ್ದು ನಡೆಯುತ್ತಿದೆ.  ಮಹಮದ್  ಯೂನಸ್  ಅವರ  ರಾಜಕೀಯ  ನಿಲುವುಗಳಿಗಾಗಿ  ಆ  ದೇಶದ  ಸರ್ಕಾರ  2011ರ ವರ್ಷದಲ್ಲಿ  ಅವರನ್ನು  ಗ್ರಾಮೀಣ  ಬ್ಯಾಂಕಿನ  ಅಧ್ಯಕ್ಷತೆಯಿಂದ  ಪದಚ್ಯುತಿಗೊಳಿಸಿತು.  ಇಷ್ಟಾದರೂ  ಅಂತರರಾಷ್ಟ್ರೀಯಮಟ್ಟದಲ್ಲಿ  ಮಹಮ್ಮದ್  ಯೂನುಸ್  ಅವರ  ಕೀರ್ತಿ  ಏರುತ್ತಲೇ  ಇದೆ.  

ಮಹಮ್ಮದ್ ಯೂನುಸ್ ಅವರು ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಡಜನರಿಗಾಗಿ ಮಾಡಿರುವ ಸೇವೆ ಮಾತ್ರ ಅಪ್ರತಿಮವಾದದ್ದು ಎಂಬುದಂತೂ ನಿರ್ವಿವಾದ.

On the birth day of Nobel Peace Prize winner Muhammad Yunus

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ