ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಿನಿ


 ಪದ್ಮಿನಿ


ಪದ್ಮಿನಿ ಸುಂದರ ವದನಾರವಿಂದದ ಅದ್ಭುತ ನಟಿ ಮತ್ತು ನೃತ್ಯ ಕಲಾವಿದೆ. ಅವರು ತಮ್ಮ ಸಹೋದರಿಯರಾದ ಲಲಿತಾ ಮತ್ತು ರಾಗಿಣಿಯರೊಂದಿಗೆ ತಿರುವಾಂಕೂರು ಸಹೋದರಿಯರೆಂದೇ ಪ್ರಸಿದ್ಧಿ. 

ಪದ್ಮಿನಿ 1932ರ ಜೂನ್ 12ರಂದು ತಿರುವನಂತಪುರದಲ್ಲಿ ಜನಿಸಿದರು. ತಂದೆ ಶ್ರೀ ತಂಕಪ್ಪನ್ ಪಿಳ್ಳೈ.  ತಾಯಿ ಸರಸ್ವತಿ ಅಮ್ಮಾ. ಪದ್ಮಿನಿ ತಮ್ಮ ಸಹೋದರಿಯರೊಂದಿಗೆ ಮಹಾಲಿಂಗಮ್ ಪಿಳ್ಳೈ ಅವರಲ್ಲಿ ಭರತನಾಟ್ಯವನ್ನು ಕಲಿಯಲಾರಂಭಿಸಿ ಗುರು ಗೋಪಿನಾಥ್ ಅವರಲ್ಲಿ ಶಿಷ್ಯತ್ವ ಪಡೆದರು.  ಇವರು ಕಥಕ್ಕಳಿ ಮತ್ತು ಕೇರಳ ನಟನಮ್ ಅನ್ನು ಎನ್. ಎಸ್ ಕೃಷ್ಣನ್ ಅವರಲ್ಲಿ ಪಡೆದರು. ತಿರುವನಂತಪುರದಲ್ಲಿ 'ಪಾರಿಜಾತ ಪುಷ್ಪಾಪಹರಣಂ' ನೃತ್ಯ ಪ್ರಸ್ತುತಿಯಲ್ಲಿ ಈಕೆಯ ಅಭಿನಯವನ್ನು ಗಮನಿಸಿದ ಕೃಷ್ಣನ್ ಆಕೆಯನ್ನು ತಮ್ಮ ನಿರ್ಮಾಣದ 'ಮನಮಗಳ್' ಚಿತ್ರದ ನಾಯಕಿಯನ್ನಾಗಿಸಿದರು.

ಪದ್ಮಿನಿ 1950, 60 ಮತ್ತು 70ರ ದಶಕದ‍ ಅತಿ ಬೇಡಿಕೆಯ ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದ ಕಲಾವಿದೆಯಾದರು. ಸೌಂದರ್ಯಯುತ ರಾಣಿ ಎನಿಸಿದ್ದ ಆಕೆ ತಾವು ನಿರ್ವಹಿಸಿದ ನೃತ್ಯ ಪಾತ್ರಗಳಿಂದ 'ನಾಟ್ಯ ಪೆರೋಲಿ' ಎಂಬ ಕೀರ್ತಿಗೆ ಭಾಜನರಾಗಿದ್ದರು.‍ ಅವರ ತಿಲ್ಲಾನ ಮೋಹನಾಂಬಾಳ್ ಚಿತ್ರದ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ.‍ 'ಜಿಸ್ ದೇಶ್ ಮೇ ಗಂಗಾ ಬೆಹ್ತೀ ಹೈ' ಚಿತ್ರದಲ್ಲಿನ ಅಭಿನಯ ಅವರನ್ನು ರಾಷ್ಟ್ರೀಯ ಮಟ್ಟದ ತಾರೆಯನ್ನಾಗಿಸಿತು.

ಪದ್ಮಿನಿ ತಮ್ಮ ಹದಿನಾರನೇ ವಯಸ್ಸಿನಲ್ಲಿ 1948ರ 'ಕಲ್ಪನಾ' ಎಂಬ ಚಿತ್ರದಲ್ಲಿ ನೃತ್ಯಪಾತ್ರದಲ್ಲಿ ಅಭಿನಯಿಸಿದರು.  ಮುಂದೆ 30 ವರ್ಷಗಳ ಕಾಲ ಅವರು 250ಕ್ಕೂ ಚಿತ್ರಗಳಲ್ಲಿ ನಟಿಸಿದರು. ಅವರ ಇತರ ಪ್ರಮುಖ ಚಿತ್ರಗಳಲ್ಲಿ ತಮಿಳಿನ ಅನ್ಬು, ವಿಯೇಟ್ನಾಮ್ ವೀಡು, ವೀರ ಪಾಂಡ್ಯ ಕಟ್ಟಬೊಮ್ಮನ್; ತೆಲುಗಿನ 'ಸಂಪೂರ್ಣ ರಾಮಾಯಣಂ', 'ವಸಂತ ಸೇನಾ'; ಮಲಯಾಳದ ಕುಮಾರ ಸಂಭವಂ; ಹಿಂದಿಯ ಮೇರಾ ನಾಮ್ ಜೋಕರ್; ಭಾರತ-ಸೋವಿಯತ್ ಸಹಯೋಗದ 'ಜರ್ನಿ ಬಿಯಾಂಡ್ ಥ್ರೀ ಸೀಸ್'    (ಹಿಂದಿಯಲ್ಲಿ 'ಪರದೇಸಿ') ಮುಂತಾದವು ಸೇರಿವೆ.

ಪದ್ಮಿನಿ 1961ರಲ್ಲಿ ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯರಾಗಿದ್ದ ರಾಮಚಂದ್ರನ್ ಅವರನ್ನು ವರಿಸಿದರು. 1977ರಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ 'ಪದ್ಮಿನಿ ಸ್ಕೂಲ್ ಆಫ್ ಫೈನ್ ಆರ್ಟ್ಸ್' ಎಂಬ ಪ್ರಸಿದ್ಧ ನೃತ್ಯ ಸಂಸ್ಥೆಯನ್ನು ತೆರೆದರು. 

ಪದ್ಮಿನಿ ಅವರು 2006ರ ಸೆಪ್ಟೆಂಬರ್ 24ರಂದು ನಿಧನರಾದರು.

On the birth anniversary of great actress Padmini

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ