ಹೇಮಂತ್ ಕುಮಾರ್
ಹೇಮಂತ್ ಕುಮಾರ್
ಹೇಮಂತ್ ಕುಮಾರ್ ಮತ್ತು ಹೇಮಂತ ಮುಖರ್ಜಿ ಎಂದು ಹೆಸರಾದ ಹೇಮಂತ ಮುಖೋಪಾಧ್ಯಾಯ ಅವರು ಮಹಾನ್ ಗಾಯಕ ಮತ್ತು ಸಂಗೀತ ಸಂಯೋಜಕರಾಗಿದ್ದವರು. ಮೂಲತಃ ಬಂಗಾಳಿ ಮತ್ತು ಹಿಂದಿ ಗಾಯಕರಾದ ಅವರು ಮರಾಠಿ, ಗುಜರಾತಿ, ಒಡಿಯಾ, ಅಸ್ಸಾಮಿ, ತಮಿಳು, ಪಂಜಾಬಿ, ಭೋಜ್‌ಪುರಿ, ಕೊಂಕಣಿ, ಸಂಸ್ಕೃತ, ಉರ್ದು ಮುಂತಾದ ಭಾಷೆಗಳಲ್ಲೂ ಹಾಡಿದ್ದಾರೆ.
ಹೇಮಂತ್ ಕುಮಾರ್ 1920ರ ಜೂನ್ 16 ರಂದು ಬನಾರಸ್ನಲ್ಲಿ ಜನಿಸಿದರು.
ಹೇಮಂತ್ ಕುಮಾರ್ ಬಂಗಾಳಿ ಮತ್ತು ಹಿಂದಿ ಚಲನಚಿತ್ರ ಸಂಗೀತ, ರವೀಂದ್ರ ಸಂಗೀತ ಮತ್ತು ಇತರ ಹಲವು ಪ್ರಕಾರಗಳ ಕಲಾವಿದರಾಗಿದ್ದರು. ಅವರು ಶ್ರೇಷ್ಠ ಹಿನ್ನೆಲೆ ಗಾಯಕರಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು. "ದೇವರ ಧ್ವನಿ" ಎಂದು ಜನಪ್ರಿಯರಾಗಿದ್ದರು.
ಹೇಮಂತ್ ಅವರ ಮೊದಲ ಗೀತೆ 1940ರಲ್ಲಿ ಬಿಡುಗಡೆಯಾದ 'ರಾಜ್‌ಕುಮಾರೇರ್ ನಿರ್‍ಬಸನ್' ಎಂಬ ಬೆಂಗಾಲಿ ಚಲನಚಿತ್ರದಲ್ಲಿತ್ತು. ಇದನ್ನು ಎಸ್.ಡಿ.ಬರ್ಮನ್ ಸಂಯೋಜಿಸಿದ್ದರು. 1941ರಲ್ಲಿ ಹರಿಪ್ರಸನ್ನ ದಾಸ್ ಸಂಗೀತ ಸಂಯೋಜನೆಯಲ್ಲಿ 'ನಿಮಾಯ್ ಸನ್ಯಾಸ್' ಚಿತ್ರಕ್ಕೆ ಹಾಡಿದರು. ಹೇಮಂತ ಕುಮಾರ್ ಅವರ ಸ್ವಂತ ಮೊದಲ ಬಂಗಾಳಿ ಚಲನಚಿತ್ರೇತರ ಗಾಯನ ಸಂಯೋಜನೆ "ಕಥಾ ಕಾಯೋನಕೋ ಶುಧು ಶೋನೋ"ದಲ್ಲಿ ಬಂತು. 1943ರಲ್ಲಿ "ಅಮರ್ ಬಿರಹಾ ಆಕಾಶೆ ಪ್ರಿಯಾ" ಸಂಯೋಜನೆ ಮೂಡಿಬಂತು. ಇವುಗಳಿಗೆ ಅಮಿಯಾ ಬಾಗ್ಚಿ ಅವರ ಸಾಹಿತ್ಯವಿತ್ತು.
ಹೇಮಂತ ಕುಮಾರ್ ಅವರ ಮೊದಲ ಹಿಂದಿ ಚಲನಚಿತ್ರದ ಹಾಡುಗಳು 1942ರಲ್ಲಿ 'ಮೀನಾಕ್ಷಿ'ಯಲ್ಲಿ ಬಂದವು. ನಂತರ 1944ರಲ್ಲಿ ಪಂ. ಅಮರನಾಥ್ ಸಂಗೀತ ನಿರ್ದೇಶನದಲ್ಲಿ 'ಇರಾದಾ' ಚಿತ್ರದಲ್ಲಿ ಹಾಡಿದರು.
ಹೇಮಂತ ಕುಮಾರ್ ಅವರನ್ನು ರವೀಂದ್ರ ಸಂಗೀತದ ಅಗ್ರಗಣ್ಯ ವಿದ್ವಾಂಸರೆಂದು ಪರಿಗಣಿಸಲಾಗಿದೆ. ಅವರ ಮೊದಲ ಧ್ವನಿಮುದ್ರಿತ ರವೀಂದ್ರ ಸಂಗೀತವು ಬಂಗಾಳಿ ಚಲನಚಿತ್ರ ಪ್ರಿಯಾ ಬಂಧಬಿ (1944)ಯ ಗೀತೆ "ಪಥೇರ್ ಶೇಷ್ ಕೊತಾಯೆ" ಮೂಲಕ ಹೊರಹೊಮ್ಮಿತ್ತು. ಅವರು ತಮ್ಮ ಮೊದಲ ರವೀಂದ್ರ ಸಂಗೀತದ ಡಿಸ್ಕ್ ಅನ್ನು 1944ರಲ್ಲಿ ಕೊಲಂಬಿಯಾ ಲೇಬಲ್ ಅಡಿಯಲ್ಲಿ ಧ್ವನಿಮುದ್ರಿಸಿದರು. "ಅಮರ್ ಆರ್ ಹಬೆ ನಾ ದೇರಿ" ಮತ್ತು "ಕೇನೋ ಪಂಥಾ ಇ ಚಂಚಲತಾ" ಮುಂತಾದ ಪ್ರಸಿದ್ಧ ಹಾಡುಗಳು ಇದರಲ್ಲಿವೆ. ಅದಕ್ಕೂ ಮೊದಲು, ಅವರು ಆಕಾಶವಾಣಿಯಲ್ಲಿ "ಆಮಾರ್ ಮಲ್ಲಿಕಾಬೋನೆ" ಗೀತೆಯನ್ನು ಹಾಡಿದ್ದರು.
ಸಂಗೀತ ನಿರ್ದೇಶಕರಾಗಿ ಹೇಮಂತ ಕುಮಾರ್ ಅವರ ಮೊದಲ ಚಲನಚಿತ್ರ 1947ರಲ್ಲಿ ಬಂಗಾಳಿಯ 'ಅಭಿಯಾತ್ರಿ'.
ಮುಂದೆ ಅವರು ಹಿಂದೀ ಮತ್ತು ಬಂಗಾಳಿಯ ಅನೇಕ ಚಿತ್ರಗೀತೆಗಳ ಗಾಯನಕ್ಕೆ ಮತ್ತು ಸಂಗೀತ ಸಂಯೋಜನೆಗಳಿಗೆ ಪ್ರಸಿದ್ಧರಾದರು.
ಅವರು 1989ರಲ್ಲಿ ತಮಗೆ ಸಂದ ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದರು. ಕೋಲ್ಕತ್ತಾ ವಿಶ್ವವಿದ್ಯಾಲಯದ ಡಾಕ್ಟರೇಟ್, ರಾಷ್ಟ್ರೀಯ ಪ್ರಶಸ್ತಿ, ಫಿಲಂಫೇರ್ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದವು.
ಹೇಮಂತ್ ಕುಮಾರ್ 1989 ಸೆಪ್ಟೆಂಬರ್ 26 ರಂದು ನಿಧನರಾದರು.
On the birth anniversary of great singer and composer Hemanth Kumar
ಕಾಮೆಂಟ್‌ಗಳು