ಅರುಣಾ ಅಸಫ್ ಅಲಿ
ಅರುಣಾ ಅಸಫ್ ಅಲಿ
ಭಾರತ ರತ್ನ ಅರುಣಾ ಅಸಫ್ ಅಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಮಾಜ ಸೇವಕಿ.
ಅರುಣಾ 1909ರ ಜುಲೈ 16ರಂದು ಹರಿಯಾಣಾ ರಾಜ್ಯದ ಕಲ್ಕಾ ಎಂಬಲ್ಲಿ
ಜನಿಸಿದರು. ಇವರ ತಂದೆ ಉಪೇಂದ್ರನಾಥ್ ಗಂಗೂಲಿ ಹೋಟೆಲ್ ನಡೆಸುತ್ತಿದ್ದರು. ಲಾಹೋರ್, ನೈನಿತಾಲ್ ಮುಂತಾದೆಡೆ ವಿದ್ಯಾಭ್ಯಾಸ ಮಾಡಿದ ಅರುಣಾ, ಕೊಲ್ಕತ್ತಾದ ಗೋಖಲೆ ಮೆಮೋರಿಯಲ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ
ನಿರ್ವಹಿಸಲು ಆರಂಭಿಸಿದರು.
ಅರುಣಾ ಅವರು ವಿಧ್ಯಾರ್ಥಿದೆಸೆಯಿಂದಲೇ ಗಾಂಧೀಜಿ ಪ್ರಭಾವಕ್ಕೊಳಗಾದರು. ಅಲಹಾಬಾದ್ ಕಾಂಗ್ರೆಸ್ ಪಕ್ಷದ ಸಮಾರಂಭವೊಂದರಲ್ಲಿ
ಅಧ್ಯಕ್ಷಸ್ಥಾನ ವಹಿಸಿದ್ದ ಅಸಫ್ ಅಲಿಯವರನ್ನು ಭೇಟಿಯಾದ
ಅರುಣಾ, ಅವರ ವಿಚಾರಧಾರೆ ಹಾಗೂ ಸರಳತೆಗೆ ಮಾರುಹೋದರು. ಎರಡೂ ಕುಟುಂಬಗಳ ಪ್ರತಿರೋಧವನ್ನು ಲೆಕ್ಕಿಸದ ಅರುಣಾ, ತಮಗಿಂತಲೂ ಸುಮಾರು 20 ವರ್ಷ ಹಿರಿಯರಾದ, ಅಸಫ್ ಅಲಿಯವರನ್ನು 1928ರಲ್ಲಿ ವಿವಾಹವಾದರು.
ವಿವಾಹವಾದ ಬಳಿಕ, ಅರುಣಾ ಅವರು ಸ್ವಾತಂತ್ರ್ಯ ಅಂದೋಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬ್ರಿಟಿಷ್ ಸರಕಾರದ
ವಿರುದ್ಧ, ಪ್ರತಿಭಟನೆ ಮತ್ತು ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದೇ ಅಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಮಹಿಳೆಯರು ಮನೆಯಿಂದ ಹೊರಬರಲು ಪ್ರೇರೇಪಿಸಿದರು. ಮಹಿಳೆಯರು ಶಿಕ್ಷಣ ಪಡೆಯಲು ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿದರು.
ಬ್ರಿಟಿಷ್ ಸರಕಾರ ಅರುಣಾ ಅಸಫ್ ಅಲಿ ಅವರನ್ನು 'ಉಗ್ರ ಹೋರಾಟಗಾರ್ತಿ' ಎಂದು ಪರಿಗಣಿಸಿ ಸೆರೆಮನೆಗೆ ತಳ್ಳಿತು. 1931ರಲ್ಲಿ,
ಗಾಂಧೀಜಿ-ಇರ್ವಿನ್ ಒಪ್ಪಂದವಾದಾಗಲೂ, ಅರುಣಾರನ್ನು ಹೊರತುಪಡಿಸಿ, ಮಿಕ್ಕ ಸ್ವಾತಂತ್ರ ಆಂದೋಳನಾಕಾರರನ್ನು
ಬಿಡುಗಡೆ ಮಾಡಿದಾಗ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಕೊನೆಗೂ ಮಣಿದ ಸರ್ಕಾರ ಅರುಣಾರನ್ನೂ ಮಾಡಿತು. 1932ರಲ್ಲಿ ಅರುಣಾರ ಸಂಘಟನಾ ಚಾತುರ್ಯ ಹಾಗೂ ದಿಟ್ಟತನದ ಹೋರಾಟವನ್ನು ಕಂಡ ಬ್ರಿಟಿಷ್ ಸರ್ಕಾರ ಅವರನ್ನು ತಿಹಾರ್ ಜೈಲಿನಲ್ಲಿರಿಸಿತು. ರಾಜಕೀಯ ಖೈದಿಗಳಿಗೆ ನೀಡುತ್ತಿದ್ದ ಕೆಳದರ್ಜೆಯ ಪರಿಗಣನೆಗಳಿಂದ ಸಿಡಿದೆದ್ದ ಅರುಣಾ ಅಲ್ಲಿಯೂ ತಮ್ಮ ಪ್ರತಿಭಟನೆ ಮುಂದುವರಿಸಿದರು. ಅರುಣಾರನ್ನು, ಬ್ರಿಟಿಷ್ ಸರ್ಕಾರ ಅಂಬಾಲಾ ಜೈಲಿನಲ್ಲಿ ಒಂಟಿಯಾಗಿಟ್ಟಿತು.
1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಕಾಂಗ್ರೆಸ್ ಪ್ರಮುಖರನ್ನೆಲ್ಲ ಬಂಧಿಸಿತ್ತು. ಆ ವರ್ಷದ ಆಗಸ್ಟ್ 8ರಂದು ಸಭೆಯ ಅಧ್ಯಕ್ಷತೆ ವಹಿಸಿದ ಅರುಣಾ ಅಸಫ್ ಅಲಿ, ಅಳಿದುಳಿದ ಸದಸ್ಯರಲ್ಲಿ ಉತ್ಸಾಹ ತುಂಬಿದರದಲ್ಲದೆ, ಗೋವಾಲಿ ಕೆರೆ ಮೈದಾನದಲ್ಲಿ, ತ್ರಿವರ್ಣ ಧ್ವಜವನ್ನು ಹಾರಿಸಿಯೇ ಬಿಟ್ಟರು. ಅರುಣಾ ಅಸಫ್ ಅಲಿ ಅವರನ್ನು ಹಿಡಿದೊಪ್ಪಿಸಿದವರಿಗೆ ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತು. ಭೂಗತರಾಗಿದ್ದ ಅರುಣಾ, ದಸ್ತಗಿರಿ ನಿರ್ದೇಶನದ ಪತ್ರವನ್ನು 1946ರಲ್ಲಿ ಸರ್ಕಾರ ಮರಳಿ ಪಡೆದ ನಂತರವೇ ಹೊರಗೆ ಕಾಣಿಸಿಕೊಂಡರು. ಈ ಮಧ್ಯೆ ಅವರು ರಾಮ್ ಮನೋಹರ್ ಲೋಹಿಯಾ ಅವರೊಂದಿಗೆ 'ಇನ್‍ಕ್ವಿಲಾಬ್' ಎಂಬ ಪತ್ರಿಕೆ ಸಂಪಾದಿಸಿದರು.
ಸ್ವತಂತ್ರ ಭಾರತದಲ್ಲಿ ಅರುಣಾ ಅಸಫ್ ಅಲಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ಹಾಗೂ ಕಾರ್ಮಿಕ ಸಂಘ ಉಪಾಧ್ಯಕ್ಷೆಯಾಗಿ, ಕಾರ್ಯ ನಿರ್ವಹಿಸಿದರು. ಸರಳ ಜೀವನಕ್ಕೆ ಹೆಸರಾದ ಅರುಣಾ, ಜನಸಾಮಾನ್ಯರಂತೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. 1953ರಲ್ಲಿ ಅಸಫ್ ಅಲಿಯವರ ನಿಧನದಿಂದ ಅರುಣಾ ಏಕಾಂಗಿಯಾದರು.
ದೇಶ ಸ್ವಾತಂತ್ರ್ಯ ಗಳಿಸಿದ ನಂತರವೂ, ಅರುಣಾ ಅಸಫ್ ಅಲಿಯವರ ಹೋರಾಟದ ಗತಿ ಕಡಿಮೆಯಾಗಲಿಲ್ಲ. ಅರುಣಾ ಅಸಫ್ ಅಲಿ ಅವರು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷಕ್ಕೆ ಬಂದರು. ನಂತರ ಅದರಿಂದಲೂ ಹೊರಬಂದು ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದರು. ಬಡಜನರಿಗೆ ವೈದ್ಯಕೀಯ ಸೌಲಭ್ಯ, ಶಿಕ್ಷಣ ಹಾಗೂ ಉದ್ಯೋಗ ದೊರಕಿಸುವಲ್ಲಿ ಶ್ರಮಿಸಿದರು. 'ಭಾರತೀಯ ರಾಷ್ಟ್ರೀಯ ಒಕ್ಕೂಟ' ಪ್ರಾರಂಭಿಸಿ ಅಶಿಕ್ಷಿತ ಮಹಿಳೆಯರನ್ನು
ಶಿಕ್ಷಿತರಾಗುವಂತೆ ಪ್ರೇರೇಪಿಸಿದರು.
ಅರುಣಾ ಅಸಫ್ ಅಲಿ 1956ರಲ್ಲಿ ಸಿಪಿಐ ಪಕ್ಷದಿಂದ ಹೊರಬಂದರು. 1958ರಲ್ಲಿ ಅರುಣಾ ಅಸಫ್ ಅಲಿ ಅವರು
ದೆಹಲಿಯ ಪ್ರಪ್ರಥಮ ಮಹಿಳಾ ಮೇಯರ್ ಆಗಿ ಚುನಾಯಿತರಾದರು. ವಿಮಲಾ ಕಪೂರ್, ಸುಭದ್ರಾ ಜೋಷಿ, ಕೃಷ್ಣ ಮೆನನ್ ಮುಂತಾದವರೊಂದಿಗೆ ಸಮಾಲೋಚಿಸಿ ದೆಹಲಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿದರು.
ಅರುಣಾ ಅಸಫ್ ಅಲಿ ಅವರು 'ಲಿಂಕ್' ಹಾಗೂ 'ಪೇಟ್ರಿಯಾಟ್'' ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿ ವೈಚಾರಿಕ ಲೇಖನಗಳನ್ನು ಬರೆಯುತ್ತಿದ್ದರು. 1964ರ ನಂತರ ಸಕ್ರಿಯ ರಾಜಕಾರಣದಿಂದ ದೂರ ಉಳಿದ ಅರುಣಾ ಅಸಫ್ ಅಲಿ, ಸಮಾಜ ಸೇವೆಗೆ ತಮ್ಮ ಸಮಯವನ್ನೆಲ್ಲ ಮೀಸಲಿಟ್ಟರು.
ಅರುಣಾ ಅಸಫ್ ಅಲಿ ಅವರಿಗೆ ಇಂಟರ್ ನ್ಯಾಷನಲ್ ಲೆನಿನ್ ಪೀಸ್ ಪ್ರೈಜ್,
ಜವಾಹರಲಾಲ್ ನೆಹರು ಅವಾರ್ಡ್ ಫಾರ್
ಇಂಟರ್ ನ್ಯಾಷನಲ್ ಅಂಡರ್ಸ್ಟ್ಯಾಂಡಿಂಗ್ ಪ್ರಶಸ್ತಿ 1991, ಪದ್ಮವಿಭೂಷಣ 1992 ಹಾಗೂ ಮರಣೋತ್ತರವಾಗಿ 1997ರಲ್ಲಿ ಭಾರತರತ್ನ ಪ್ರಶಸ್ತಿ ಇತ್ತು ಗೌರವಿಸಲಾಯಿತು.
ಅರುಣಾ ಅಸಫ್ ಅಲಿಯವರು 1996ರ ಜುಲೈ 29ರಂದು ನಿಧನರಾದರು.
On the birth anniversary of educator, political activist, and publisher Bharat Ratna Aruna Asaf Ali
ಕಾಮೆಂಟ್‌ಗಳು