ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಡೂರು


 ಅಡೂರು ಗೋಪಾಲಕೃಷ್ಣನ್ 


ಅಡೂರು ಗೋಪಾಲಕೃಷ್ಣನ್ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ದೇಶಕರು.  ಸಂಖ್ಯೆಯಲ್ಲಿ ಕಳೆದ 57 ವರ್ಷಗಳಲ್ಲಿ ಅವರು ನಿರ್ದೇಶಿಸಿರುವುದು ಕೇವಲ ಹನ್ನೆರಡು ಚಿತ್ರಗಳು.  ಮಾಡಿರುವ ಸಾಧನೆ ಮತ್ತು ಗಳಿಸಿರುವ ಹೆಸರು ಅಪಾರ.  ಅವರು ಹದಿನಾರು ರಾಷ್ಟ್ರೀಯ ಪ್ರಶಸ್ತಿಗಳು, ಹದಿನೇಳು ಕೇರಳ ರಾಜ್ಯದ ಪ್ರಶಸ್ತಿಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗದ ಶ್ರೇಷ್ಠ ಸಾಧನೆಯ ದ್ಯೋತಕವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೇ ಅಲ್ಲದೆ ಪದ್ಮವಿಭೂಷಣ ಗೌರವವನ್ನೂ ಅವರಿಗೆ ಸಲ್ಲಿಸಲಾಗಿದೆ.

ಅಡೂರು ಗೋಪಾಲಕೃಷ್ಣನ್ 1941ರ ಜುಲೈ 3ರಂದು ಕೇರಳದ ಮನ್ನಾಡಿ ಎಂಬಲ್ಲಿ ಜನಿಸಿದರು.ತಂದೆ ಮಾಧವನ್ ಉನ್ನಿತ್ಥಾನ್. ತಾಯಿ ಗೌರಿ ಕುಂಜಮ್ಮ. ಗೋಪಾಲಕೃಷ್ಣನ್ ಎಂಟನೇ ವಯಸ್ಸಿನಲ್ಲೇ ಹವ್ಯಾಸಿ ನಾಟಕಗಳಲ್ಲಿ ಪಾತ್ರವಹಿಸಿದ್ದರು. ಮುಂದೆ ಬರವಣಿಗೆ ಮತ್ತು ನಿರ್ದೇಶನಕ್ಕೆ ಕಾಲಿಟ್ಟು ಹಲವು ನಾಟಕಗಳನ್ನು ನಿರ್ದೇಶಿಸಿದರು. 1961ರಲ್ಲಿ ಗಾಂಧಿಗ್ರಾಮ್ ರೂರಲ್ ಇನಸ್ಟಿಟ್ಯೂಟ್ ಇಂದ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಶಾಸ್ತ್ರಗಳನ್ನು ಆಯ್ದುಕೊಂಡು ಪದವಿ ಪಡೆದು ತಮಿಳುನಾಡಿನ ದಿಂಡಗಲ್ನಲ್ಲಿ ಸರ್ಕಾರಿ ಅಧಿಕಾರಿಯಾದರು.  1962ರಲ್ಲಿ ಕೆಲಸ ಬಿಟ್ಟು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಗಳಿಸಿ ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಚಿತ್ರಕಥೆ ಮತ್ತು ನಿರ್ದೇಶನವನ್ನು ಅಭ್ಯಾಸಮಾಡಿ, 1965ರಲ್ಲಿ ಪದವಿ ಪಡೆದು ಹೊರಬಂದರು. ಮುಂದೆ ತಮ್ಮ ಸಹಪಾಠಿಗಳು ಮತ್ತು ಗೆಳೆಯರ ಜೊತೆಗೂಡಿ ಚಿತ್ರಲೇಖ ಫಿಲಂ ಸೊಸೈಟಿ ಮತ್ತು ಚಲನಚಿತ್ರ ಸಹಕರಣ ಸಂಘಂ ಸ್ಥಾಪಿಸಿದರು. ಇದು ಸಹಕಾರಿ ಕ್ಷೇತ್ರದಲ್ಲಿ ಚಲನಚಿತ್ರ ನಿರ್ಮಾಣ, ವಿತರಣೆ ಮತ್ತು ಪ್ರದರ್ಶನಗಳಿಗೆ ಚಾಲನೆ ಕೊಟ್ಟ ವಿನೂತನ ಪ್ರಯತ್ನವೆನಿಸಿತು.

1965ರಲ್ಲಿ 20 ನಿಮಿಷದ ಕಿರು ಚಿತ್ರ 'ಎ ಗ್ರೇಟ್ ಡೇ' ನಿರ್ದೇಶಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಅಡೂರ್ ಗೋಪಲಕೃಷ್ಣನ್ 12 ಚಲನಚಿತ್ರಗಳು 30ಕ್ಕೂ ಹೆಚ್ಚು ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ  ಬಹುತೇಕ ಕಿರುಚಿತ್ರಗಳು ಕೇರಳದ ಪ್ರದರ್ಶನ ಕಲೆಗಳನ್ನು ಕುರಿತಾದದ್ದು ಎಂಬುದು ಮಹತ್ವದ ವಿಚಾರ. 

ಅಡೂರ್ ಗೋಪಾಲಕೃಷ್ಣನ್ ಅವರ 'ಸ್ವಯಂವರಂ', 'ಕೊಡಿಯೆಟ್ಟಮ್', 'ಎಲಿಪ್ಪತಾಯಂ', 'ಮುಖಾಮುಖಮ್', 'ಅನಂತರಂ', 'ಮಥಿಲುಕಳ್', 'ವಿಧೇಯನ್', 'ಕಥಾಪುರುಷನ್', 'ನಿಯಲಕ್ಕುತು' ಮುಂತಾದ ಚಿತ್ರಗಳು ಹಲವು ವಿಭಾಗಗಳಲ್ಲಿ 16 ರಾಷ್ಟ್ರೀಯ ಪ್ರಶಸ್ತಿ ಗಳಿಸಿವೆ.

ಅಡೂರ್ ಗೋಪಾಲಕೃಷ್ಣನ್ ಅವರಿಗೆ 1984ರಲ್ಲಿ ಪದ್ಮಶ್ರೀ,  2004ರಲ್ಲಿ ದಾದಾ ಸಾಹೇಬ್ ಫಾಲ್ಕೆ, 2006ರಲ್ಲಿ ಪದ್ಮ ವಿಭೂಷಣ,  2013ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಗೌರವ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಹಾಗೂ ಅನೇಕ ವಿದೇಶಿ ಚಲನಚಿತ್ರೋತ್ಸವ ಗೌರವಗಳು ಸಂದಿವೆ.  ಅಡೂರ್ ಗೋಪಾಲಕೃಷ್ಣನ್ ಎನ್ಎಫ್‍ಡಿಸಿ ಅಧ್ಯಕ್ಷತೆ, ಪುಣೆ ರಾಷ್ಟ್ರೀಯ ಚಲನಚಿತ್ರ ಶಾಲೆ ನಿರ್ದೇಶಕತ್ವ, ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಜ್ಯೂರಿ ಸದಸ್ಯತ್ವ ಮುಂತಾದ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದಾರೆ.  

On the birthday of great director Adoor Gopalakrishnan 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ