ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜುಂಪಾ ಲಾಹಿರಿ



ಜುಂಪಾ ಲಾಹಿರಿ

ಜುಂಪಾ ಲಾಹಿರಿ ಭಾರತೀಯ ಮೂಲಸ್ತ ಕುಟುಂಬಕ್ಕೆ ಸೇರಿದ ವಿಶ್ವಪ್ರಖ್ಯಾತ ಲೇಖಕಿ.

ಜುಂಪಾ ಲಾಹಿರಿ 1967ರ ಜುಲೈ 11ರಂದು ಲಂಡನ್ ನಗರದಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ನೀಲಾಂಜನಾ ಸುದೇಷ್ಣಾ ಲಾಹಿರಿ.

‘ಜುಂಪಾ’ ಎಂಬ ಹೆಸರು ಇಟ್ಟಿದ್ದು ಆಕೆಯ ಅಂಗನವಾಡಿ ಶಿಕ್ಷಕಿ. ಸುದೇಷ್ಣಾ ಲಾಹಿರಿ ಇತ್ಯಾದಿ ಹೆಸರು ಕರೆಯಲು ನಾಲಿಗೆ ಹೊರಳುವುದಿಲ್ಲ ಎನ್ನುವ ಕಾರಣಕ್ಕಾಗಿ ಇಂಗ್ಲೆಂಡಿನ ಶಿಕ್ಷಕಿ ಪ್ರೀತಿಯಿಂದ ಜುಂಪಾ ಎಂದು ಕರೆಯುತ್ತಿದ್ದರು. ಇದೇ ಮುಂದೆ ಜುಂಪಾ ಲಾಹಿರಿ ಎಂದಾಗಿದೆ. 

ಜುಂಪಾ ಅವರ ತಂದೆ ತಾಯಿ ಮೂಲತಃ ಪಶ್ಚಿಮಬಂಗಾಳದವರು. ಜುಂಪಾ ಎರಡು ವರ್ಷದ ಮಗುವಾಗಿದ್ದಾಗ ಅಮೆರಿಕಕ್ಕೆ ಸ್ಥಳಾಂತರಗೊಂಡರು. ನಂತರದ ದಿನಗಳಲ್ಲಿ ಜುಂಪಾ ಬೆಳೆದಿರುವುದೆಲ್ಲ ಅಮೆರಿಕದಲ್ಲೇ. ಅಮರ್ ಲಾಹಿರಿ ಅವರು ರೋಡ್ ಐಲೆಂಡ್ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗಲೂ ಕೋಲ್ಕತದಲ್ಲಿ ಜುಂಪಾ ಸಂಬಂಧಿಕರಿದ್ದು, ಆಗಾಗ ಬಂದು ಅವರನ್ನು ಭೇಟಿ ಮಾಡಿ ಹೋಗುವುದಾಗಿ ಜುಂಪಾ ಹೇಳಿಕೊಂಡಿದ್ದಾರೆ.

ಇಂಗ್ಲೀಷ್ ಸಾಹಿತ್ಯದಲ್ಲಿ ವಿಶೇಷವಾದ ಜ್ಞಾನ ಬೆಳೆಸಿಕೊಂಡು ಲೇಖಕಿಯಾಗಿ ಗುರುತಿಸಿಕೊಂಡಿರುವ ಜುಂಪಾ 2001ರಲ್ಲಿ ಪತ್ರಕರ್ತ ಅಲ್ಬೆರ್ಟೊ ವಿ.ಬುಷ್ ಅವರನ್ನು ವಿವಾಹವಾದರು. ಅಲ್ಬೆರ್ಟೊ ಟೈಮ್ ಲ್ಯಾಟಿನ್ ಅಮೆರಿಕ ಪತ್ರಿಕೆಯ ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜುಂಪಾ ಲಾಹಿರಿ ಅವರ ಮೊದಲ ಸಣ್ಣ ಕಥಾ ಸಂಗ್ರಹವಾದ ಇಂಟರ್‌ಪ್ರಿಟರ್ ಆಫ್ ಮ್ಯಾಲಡೀಸ್  2000ವರ್ಷದ  ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಇವರ ಮೊದಲ ಕಾದಂಬರಿ 'ದ ನೇಮ್‌ಸೇಕ್' ಚಲನಚಿತ್ರವಾಗಿದೆ. 2008ರಲ್ಲಿ ಪ್ರಕಟಗೊಂಡ ಅವರ 'ಅನ್‌ಕಸ್ಟಮ್ಡ್ ಅರ್ಥ್' ಬಹುಜನಪ್ರಿಯತೆ ಗಳಿಸಿತು. 2013ರಲ್ಲಿ ಪ್ರಕಟಗೊಂಡ 'ದ ಲೋ ಲ್ಯಾಂಡ್' ಕಾದಂಬರಿ ಪುಲಿಟ್ಜರ್ ಪ್ರಶಸ್ತಿಯ ಅಂತಿಮ
ಪರಿಗಣನಾ ಹಂತ ತಲುಪಿತ್ತು. 2015ರಲ್ಲಿ ಅವರ ಲಲಿತ ಪ್ರಬಂಧಗಳ ಸಂಗ್ರಹ 'ಟೀಚ್ 
ಯುವರ್ಸೆಲ್ಪ್ ಇಟಾಲಿಯನ್' ಪ್ರಕಟಗೊಂಡಿತು. Translating Myself and others 2022ರಲ್ಲಿ ಪ್ರಕಟಗೊಂಡಿದೆ.

ಜುಂಪಾ ಲಾಹಿರಿ 'ದಿ ನ್ಯೂಯಾರ್ಕರ್' ಪತ್ರಿಕೆಯೊಂದಿಗೆ ನಿರಂತರ ಬಾಂಧವ್ಯ ಹೊಂದಿದ್ದಾರೆ. 2018ರಲ್ಲಿ ಅವರ 'ದ ಬೌಂಡರಿ' ಎಂಬ ಕಥೆಯನ್ನೂ ಒಳಗೊಂಡ ಹಾಗೆ ಅವರ ಅನೇಕ ಕಥೆಗಳು ಇಲ್ಲಿ ಮೂಡಿಬಂದಿವೆ.

ಜುಂಪಾ ಲಾಹಿರಿ ಅವರು ಇಟಾಲಿಯನ್ ಭಾಷೆಯಲ್ಲಿಯೂ 'ಡೋವ್ ಮಿ ಟ್ರೊವೋ' ಎಂಬ ಕಾದಂಬರಿ ಪ್ರಕಟಿಸಿದ್ದಾರೆ. 2019ರಲ್ಲಿ ಇಟಲಿಯ 40 ವಿವಿಧ ಲೇಖಕರ ಕಥೆಗಳನ್ನು ಇಂಗ್ಲಿಷಿಗೆ ಅನುವಾದಿಸಿ ಸಂಕಲನವಾಗಿ ಪೆಂಗ್ವಿನ್ ಪ್ರಕಾಶನದ ಮೂಲಕ ಹೊರತಂದಿದ್ದಾರೆ.

ಜುಂಪಾ ಲಾಹಿರಿ ಅವರಿಗೆ ಅಮೆರಿಕದ ಅಧ್ಯಕ್ಷರ ಮಾನವೀಯತಾ ಪುರಸ್ಕಾರ, ಪ್ರತಿಷ್ಟಿತ ಪುಲಿಟ್ಜರ್ ಬಹುಮಾನಗಳೇ ಅಲ್ಲದೆ ಅನೇಕ ಸಾಹಿತ್ಯಕ ಬಹುಮಾನಗಳು ಸಂದಿವೆ.

ಜುಂಪಾ ಲಾಹಿರಿ ಅವರು 2005ರಿಂದ ಲಾಹಿರಿ ಪೆನ್ ಅಮೆರಿಕನ್ ಸೆಂಟರ್‌ನ ಉಪಾಧ್ಯಕ್ಷರಾಗಿದ್ದಾರೆ, ಬರಹಗಾರರ ನಡುವೆ ಗೆಳೆತನ ಮತ್ತು ಬೌದ್ಧಿಕ ಸಾಂಗತ್ಯ ಬೆಳೆಸಲು ರೂಪಗೊಂಡ ಸಂಸ್ಥೆ ಇದಾಗಿದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದ ಅಂದಿನ ಅಧ್ಯಕ್ಷರಾದ ಬರಾಕ್ ಒಬಾಮರವರು ಜುಂಪಾ ಲಾಹಿರಿಯವರನ್ನು ಕಲೆ ಮತ್ತು ಮಾನವತೆಯ ಮಂಡಳಿಯಲ್ಲಿ ಸದಸ್ಯರಾಗಿ ನೇಮಕ ಮಾಡಿದ್ದರು.

On the birth day of novelist Nilanjana Sudeshna "Jhumpa" Lahiri

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ