ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿಡಾರಂ ರಾಮಮಂದಿರ


 ಬಿಡಾರಂ ಕೃಷ್ಣಪ್ಪ ರಾಮಮಂದಿರ ಆಗಿದ್ದು ಹೀಗಂತೆ


ಮೈಸೂರಿನ ಸಂಗೀತ ದಿಗ್ಗಜರುಗಳಲ್ಲಿ ಬಿಡಾರಂ ಕೃಷ್ಣಪ್ಪನವರೂ ಒಬ್ಬರು. ಅವರು ಅದ್ಭುತ ಸಂಗೀತಗಾರರಾಗಿದ್ದಂತೆ ಕೊಡುಗೈ ದಾನಿಯೂ ಆಗಿದ್ದರು. ಧರ್ಮಭೀರುಗಳಾಗಿದ್ದ ಕೃಷ್ಣಪ್ಪನವರು ಶ್ರೀರಾಮನ ಅಚಲ ಭಕ್ತರಾಗಿದ್ದುದರಿಂದ ಮೈಸೂರಿನಲ್ಲೊಂದು ಶ್ರೀರಾಮ ದೇವಾಲಯವನ್ನು ನಿರ್ಮಿಸಿ ಅಲ್ಲಿ ಪ್ರಸಿದ್ಧ ಸಂಗೀತಗಾರರ ಸಂಗೀತ ಕಚೇರಿ  ನಡೆಯುತ್ತಿರಬೇಕು ಎಂಬುದು ಅವರ ಆಸೆಯಾಗಿತ್ತು.  ಆದರೆ ದೇವಾಲಯ ಕಟ್ಟಿಸುವಷ್ಟು ಅವರು ಧನವಂತರಾಗಿರಲಿಲ್ಲ. ಆದ್ದರಿಂದ ಅವರು ಅಲ್ಲಲ್ಲಿ ತಿರುಗಿ, ನಾನಾ ಮೂಲಗಳಿಂದ ಹಣಕೂಡಿಸಿ, ದೇವಾಲಯ ಕಟ್ಟಡ ಪ್ರಾರಂಭಿಸಿಯೇಬಿಟ್ಟರು. ಅಂತೂ ಇಂತೂ ತಮ್ಮ ಸಂಕಲ್ಪದಂತೆ ದೇವಾಲಯವೂ ರೂಪುಗೊಂಡಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಎಲ್ಲರೂ ಕೃಷ್ಣಪ್ಪನವರ ಸಾಹಸವನ್ನು ಹೊಗಳುವವರೇ. 

ಕೆಲ ಹಿರಿಯರಂತೂ ಬಾಯ್ತುಂಬ ಅವರನ್ನು ಹರಸಿ, ರಾಮಮಂದಿರವನ್ನು ನಿರ್ಮಿಸಿ ಶ್ಲಾಘನೀಯ ಕಾರ್ಯ ಮಾಡಿದ್ದೀರಿ. ಸೀತಾರಾಮರಿಗೆ ಒಂದೆರಡು ಚಿನ್ನದೊಡವೆ ಮಾಡಿಸಿ ಅಜರಾಮರ ಕೀರ್ತಿಗೆ ಭಾಜನರಾಗಿರಿ ಎಂದು ಸಲಹೆ ನೀಡಿದರು. 

ಕೃಷ್ಣಪ್ಪನವರಿಗೆ ಸರಿಯೆನ್ನಿಸಿತು. ಒಡವೆ ಮಾಡಿಸಲು ಸಾಕಾಗುವಷ್ಟು ಚಿನ್ನವನ್ನು ಹೊಂದಿಸಲಾಗಲಿಲ್ಲ. ಮನೆಯಲ್ಲಿ ತಮ್ಮ ಪತ್ನಿಯ ತಾಳಿ ಬಿಟ್ಟರೆ ಬೇರೆ ಚಿನ್ನವೂ ಇರಲಿಲ್ಲ. ಕೊನೆಗೆ ನಿರ್ವಾಹವಿಲ್ಲದೆ ಹೆಂಡತಿಯ ತಾಳಿಯನ್ನು ಪಡೆದು ಒಡವೆಗೆ ಉಪಯೋಗಿಸಲು ತೀರ್ಮಾನಿಸಿದರು. ಆ ವಿಷಯವನ್ನು ಹೆಂಡತಿಗೆ ಹೇಳಿದಾಗ, ಆಕೆ ಏನು ಹೇಳಬೇಕೋ ತೋಚದೆ ಮಿಕಮಿಕ ನೋಡತೊಡಗಿದರು. ಆಕೆಯ ಮನದ ಗೊಂದಲವನ್ನು ಅರ್ಥಮಾಡಿಕೊಂಡ ಕೃಷ್ಣಪ್ಪನವರು, "ನಾನೇ ನಿನ್ನ ಜೀವಂತ ತಾಳಿ. ನಾನಿರುವಾಗ ನಿನಗೇತಕ್ಕೆ ಚಿಂತೆ? ನಾವೆಲ್ಲ ಆ ಶ್ರೀರಾಮನಿಗೆ ಸೇರಿದವರಲ್ಲವೆ?" ಎಂದು ಸಮಾಧಾನದ ಮಾತುಗಳನ್ನು ಹೇಳಿದರು. ಪತಿಯ ಮಾತಿನಿಂದ ಸಂತೋಷಗೊಂಡ ಆಕೆ ಏನೂ ಮಾತನಾಡದೆ ತಮ್ಮ ಕತ್ತಿನಲ್ಲಿದ್ದ ತಾಳಿಯನ್ನು ತೆಗೆದುಕೊಟ್ಟರು. ಈಗ ಕೃಷ್ಣಪ್ಪನವರಾಗಲೀ, ಅವರ ಪತ್ನಿಯಾಗಲೀ ಇಲ್ಲ. ಆದರೆ ಅವರು ಕಟ್ಟಿಸಿದ ಶ್ರೀರಾಮ ಮಂದಿರ ಈಗಲೂ ಮೈಸೂರಿನ ಶಿವರಾಮಪೇಟೆಯಲ್ಲಿದ್ದು ಆಸ್ತಿಕರ ಶ್ರದ್ಧಾಕೇಂದ್ರವಾಗಿದೆ.

ಕೃಪೆ: 'ಕನ್ನಡಪ್ರಭ'ದಲ್ಲಿ ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ 
ಚಿತ್ರಕೃಪೆ: ಉತ್ಥಾನ, ದಿ ಹಿಂದೂ ಪತ್ರಿಕೆಗಳು

Story of Bidaram Krishnappa Rama Mandira

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ