ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಚ್


 ಪಂಚ್ 


ಪಂಚ್ ಒಂದೂವರೆ ಶತಮಾನಗಳ ಕಾಲ ಲಂಡನ್ನಿನಿಂದ ಪ್ರಕಟವಾಗುತ್ತಿದ್ದ  ಸುಪ್ರಸಿದ್ಧ ಹಾಸ್ಯ ಇಂಗ್ಲಿಷ್ ವಾರಪತ್ರಿಕೆ. ಹಾಸ್ಯವೇ ಉದ್ದೇಶವಾಗಿ ಉಳ್ಳ ಪತ್ರಿಕೆಗಳು ಬಹುಕಾಲ ಬದುಕಿದ್ದು ಪತ್ರಿಕೋದ್ಯಮದ ಇತಿಹಾಸದಲ್ಲೇ ಅಪರೂಪ. ಪಂಚ್ ಹಲವು ಆತಂಕಗಳ ನಡುವೆಯೂ 150 ವರ್ಷ ಉಳಿದಿತ್ತು.

ಹಾಸ್ಯ ಪ್ರಧಾನವಾದ ಪತ್ರಿಕೆಯೊಂದನ್ನು ಸ್ಥಾಪಿಸುವ ಆಲೋಚನೆ ಇ.ಲ್ಯಾಂಡೆಲ್ಸ್ ಎಂಬ ಕುಶಲ ನಕಾಶೆಗಾರನಿಗೆ ಬಂತು. ಪ್ಯಾರಿಸ್ ನಗರದಲ್ಲಿ ಇಂಥ ಪತ್ರಿಕೆಯೊಂದು ಯಶಸ್ಸು ಗಳಿಸಿದ್ದುದು ಇದಕ್ಕೆ ಸ್ಫೂರ್ತಿಯಾಯಿತು. ಈ ಕೆಲಸದಲ್ಲಿ ಅವನ ಜೊತೆಗೂಡಿದವರು ಹೆನ್ರಿ ಮೇಹ್ಯೂ ಮತ್ತು ಮಾರ್ಕ್‍ಲೆಮನ್. ಪತ್ರಿಕೆ ಹೊರಡಿಸಲು ಅವರ ಬಳಿ ಇದ್ದ ಬಂಡವಾಳ ಇಪ್ಪತ್ತೈದು ಪೌಂಡುಗಳು ಮಾತ್ರ. 

ಪಂಚ್ ಪ್ರಥಮ ಸಂಚಿಕೆ ಹೊರಬಿದ್ದದ್ದು 1841ರ ಜುಲೈ 17ರಂದು. ಬೆಲೆ ಮೂರು ಪೆನ್ನಿ. ಪತ್ರಿಕೆಯ ಉಪನಾಮ ಲಂಡನ್ ಚಾರಿವಾರಿ. ಪ್ರಸಿದ್ಧ ಪಂಚ್ ಹಾಸ್ಯ ಪತ್ರಿಕೆಯ ಹೆಸರು ಚಾರಿವಾರಿ. ಮೇಹ್ಯೂ ಮಾರ್ಕ್ ಲೆಮನ್ ಮತ್ತು ಜೋಸೆಫ್ ಸ್ಟರ್ಲಿಂಗ್ ಕಾಯ್ನ್ ಇದರ ಸಂಪಾದಕರಾದರು. ಮಾಕ್ ಲೆಮನ್ ಮುಖ್ಯಸ್ಥ.

ಪಂಚ್ ಪ್ರಕಟಣೆ ಆರಂಭವಾದ ಕಾಲದಲ್ಲಿ ಹೊಸ ವೆಸ್ಟ್‍ಮಿನಿಸ್ಟರ್ ಭವನದ ನಿರ್ಮಾಣವಾಗುತ್ತಿತ್ತು. ರಾಜಕುಮಾರ ಆಲ್ಬರ್ಟನೂ ಅವನ ಕಲಾ ಸಲಹೆಗಾರರೂ ಹೊಸ ಕಟ್ಟಡದ ಗೋಡೆಗಳನ್ನು ಕಲಾಕೃತಿಗಳಿಂದ ಅಲಂಕರಿಸಬೇಕೆಂದು ಇಚ್ಛಿಸಿದರು. ಇದಕ್ಕಾಗಿ ಭಿತ್ತಿಚಿತ್ರ ರಚನೆಯ ಸ್ಪರ್ಧೆಯೊಂದನ್ನು ಏರ್ಪಡಿಸಿದರು. ಸ್ಪರ್ಧೆಗೆ ಬಂದಿದ್ದ ಕೃತಿಗಳನ್ನು ಪ್ರದರ್ಶಿಸಲಾಯಿತು. ಆ ಕೆಲಸದ ಭವ್ಯ ಕಲ್ಪನೆಯೇ ಇಲ್ಲದ ಅನೇಕ ಕಲಾವಿದರ ಕೃತಿಗಳು ಹಾಸ್ಯಾಸ್ಪದವಾಗಿದ್ದುವು. ಪಂಚ್‍ಗೆ ಆ ಪ್ರದರ್ಶನದಿಂದ ವಸ್ತು ದೊರಕಿತು. ಅದನ್ನು ವಿಡಂಬಿಸಿ ಪಂಚ್ ಅನೇಕ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತು. 

1832ರಲ್ಲಿ ಚಾರ್ಲ್ಸ್ ಫಿಲಿಪೋನನಿಂದ ಆರಂಭವಾಗಿದ್ದ ಫ್ರೆಂಚ್ ಹಾಸ್ಯಪತ್ರಿಕೆ ಚಾರಿವಾರಿಯಂತೆ ಇದೂ ರಾಜಕೀಯ ಸಾಮಾಜಿಕ ಟೀಕೆಯ ಶಕ್ತ ಮಾಧ್ಯಮವಾಗಿ ಪರಿಣಮಿಸಿತು. ಮೊದಲ ದಿನಗಳಲ್ಲಿ ಪಂಚ್ ಪತ್ರಿಕೆಯ ಪ್ರಸಾರ ಕೇವಲ 5,000-6,000 ದಷ್ಟಿತ್ತು. ಆರ್ಥಿಕವಾಗಿ ನಿಲ್ಲಲು 10,000 ಪ್ರತಿಗಳಷ್ಟಾದರೂ ಪ್ರಸಾರದ ಅವಶ್ಯಕತೆ ಇತ್ತು. ಒಂದನೆಯ ಮಹಾಯುದ್ಧದ ವರೆಗೆ ಪತ್ರಿಕೆಯ ಬೆಲೆಯನ್ನು ಏರಿಸಲಿಲ್ಲ. ಯುದ್ಧದ ಪರಿಣಾಮವಾಗಿ ಮುದ್ರಣವೆಚ್ಚ ಅತಿಯಾಗಿ ಹೆಚ್ಚಿದಾಗ ಪತ್ರಿಕೆಯ ಬೆಲೆಯನ್ನು ಆರು ಪೆನ್ನಿಗಳಿಗೆ ಹೆಚ್ಚಿಸಲಾಯಿತು.

ಆರ್ಥಿಕವಾಗಿ ಅಪಾಯದ ಅಂಚಿನಲ್ಲಿ ಇದ್ದರೂ ಪತ್ರಿಕೆಯನ್ನು ಮುದ್ರಿಸಲು ಧೈರ್ಯ ಮಾಡಿದವರು ಮುದ್ರಕರಾದ ಬ್ರಾಡ್‍ಬರಿ ಮತ್ತು ಇವಾನ್ಸ್.  ಸ್ವಲ್ಪ ಕಾಲದ ಅನಂತರ ಅವರು ಪತ್ರಿಕೆಯ ಮಾಲೀಕರಾದರು. ಮುಂದೆಯೂ ಅವರ ವಂಶದವರೇ ಇದರ ಮಾಲೀಕರು. ಪಂಚ್ ಮೊದಲಲ್ಲಿ ರಾಜಸತ್ತೆಯನ್ನು ತೀವ್ರವಾಗಿ ಟೀಕಿಸುತ್ತಿತ್ತು. ಅನಂತರ ತನ್ನ ಧ್ವನಿಯನ್ನು ಇಳಿಸಿತು. ಜಾನ್ ಲೀಚ್ ಬರೆಯುತ್ತಿದ್ದ ವ್ಯಂಗ್ಯಚಿತ್ರಗಳು ಖಾರವಾಗಿರುತ್ತಿದ್ದವು. ಫ್ರಾನ್ಸಿನ 3ನೆಯ ನೆಪೋಲಿಯನ್ ಮತ್ತು ರಷ್ಯದ 1ನೆಯ ನಿಕೊಲಾಸರನ್ನು ಲೇವಡಿ ಮಾಡಿ ಲೀಚ್ ವ್ಯಂಗ್ಯಚಿತ್ರಗಳನ್ನು ಬರೆದ. ತತ್ಫಲವಾಗಿ ವಿದೇಶಗಳಲ್ಲಿ ಪಂಚ್ ಪತ್ರಿಕೆಗೆ ಬಹಿಷ್ಕಾರ ಹಾಕಲಾಯಿತು. ಸ್ವಲ್ಪ ಕಾಲದ ಅನಂತರ ಲೀಚ್ ತನ್ನ ರೇಖಾಟೀಕೆಯನ್ನು ಮೃದುಗೊಳಿಸಿದರು.

ಸುಮಾರು 1842ರಲ್ಲಿ ಪ್ರಕಟವಾದ ಮೊದಲ ಪಂಚ್ ಆಲ್ಮನಾಕ್ ತುಂಬ ಯಶಸ್ಸು ಗಳಿಸಿತು. ಪತ್ರಿಕೆಯ ಮಾರಾಟ ಏರಿತು. ಕ್ರಮೇಣ ಪಂಚ್ ತನ್ನ ಆರಂಭದ ದಿನಗಳ ಜಡತೆಯನ್ನು ಕಳೆದುಕೊಂಡಿತ್ತು. ಅದು ಹೊಸ ನುಡಿಚಿತ್ರಗಳನ್ನು ಪ್ರಕಟಿಸತೊಡಗಿತ್ತು. 

ರಾಜಕೀಯವಿಚಾರಗಳಲ್ಲೂ ತೀವ್ರ ಆಸ್ಥೆ ತೋರಿಸಿದ್ದರಿಂದ ವಾರದ ಪ್ರಸಾರ 30,000 ಪ್ರತಿಗಳನ್ನು ಮುಟ್ಟಿತು.

ಹಾಸ್ಯ ಪತ್ರಿಕೋದ್ಯಮದಲ್ಲಿ ಪಂಚ್ ಪತ್ರಿಕೆಗೆ ಸ್ಪರ್ಧಿಗಳೇ ಇಲ್ಲ. ಇದರೊಂದಿಗೆ ಸ್ಪರ್ಧಿಸಿದ ನೈಟ್ ಅಂಡ್ ಡೇ (1937) ಬಹುಕಾಲ ಉಳಿಯಲಿಲ್ಲ. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಕಟವಾದ ಕಾಮಿಕ್ ಟೈಮ್ಸ್, ಟಾಮ್‍ಹಾಕ್, ಫನ್, ಏರಿಯಲ್, ಜೂಡಿ, ಮೂನ್‍ಷೈನ್ ಮತ್ತು ಲೈಕಾ ಜೋಕೊ ಪತ್ರಿಕೆಗಳು ಓದುಗರನ್ನು ಆಕರ್ಷಿಸಲು ವಿಫಲಗೊಂಡುವು.

ಪಂಚ್ ಪತ್ರಿಕೆಯ ವ್ಯಂಗ್ಯಚಿತ್ರಗಳನ್ನು ಇತರ ಪತ್ರಿಕೆಗಳೂ ಪುರಸ್ಕರಿಸುತ್ತಿದ್ದವು. ದಿ ಟೈಮ್ಸ್ ಪತ್ರಿಕೆ ಪಂಚ್‍ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು ಪುನರ್ ಮುದ್ರಿಸಿದೆ. ಭಾರತದ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಪಂಚ್‍ನ ವ್ಯಂಗ್ಯಚಿತ್ರಗಳು ಪುನರ್ ಪ್ರಕಟವಾಗುತ್ತಿದ್ದುವು. ಪಂಚ್ ಪ್ರತಿ ವರ್ಷವೂ ಪತ್ರಿಕಾ ಸೂಚಿಯೊಂದನ್ನು ಪ್ರಕಟಿಸುತ್ತಿತ್ತು. 1992ರಲ್ಲಿ ಪ್ರಕಟಣೆ ನಿಂತಿತು ಮತ್ತು 1996ನೇ ಸೆಪ್ಟೆಂಬರ್‍ನಿಂದ ಪ್ರಕಟಣೆ ಪುನರಾರಂಭದ ಪ್ರಯತ್ನ ನಡೆಯಿತಾದರೂ ಹೆಚ್ಚು ಚಂದಾದಾರರಿಲ್ಲದೆ ಪ್ರಕಟಣೆ 2002ರಲ್ಲಿ ನಿಲ್ಲುವುದು ಅನಿವಾರ್ಯವಾಯಿತು.

2004ರ ವೇಳೆಗೆ ಪಂಚ್ ಪತ್ರಿಕೆಯ ಬಹುತೇಕ ಸಂಗ್ರಹಗಳನ್ನು ಬ್ರಿಟಿಷ್ ಲೈಬ್ರರಿ ಕೊಂಡುಕೊಂಡಿತು.

ಪಂಚ್ ಅಂತಹ ಪ್ರಯತ್ನಗಳು ಕನ್ನಡದ ಕೊರವಂಜಿ ಪತ್ರಿಕೆಗಳ ಸ್ಥಾಪನೆಗೂ ಪ್ರೇರಣೆ ಆಗಿದ್ದವು.  

On the day popular humor magazine Punch brought its first issue

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ