ರೇವತಿ
ರೇವತಿ
ರೇವತಿ ನನಗೆ ತುಂಬಾ ಇಷ್ಟವಾದ ಕಲಾವಿದೆ. ಮಾತುಗಳಿಗೆ ಅಭಿನಯವನ್ನು ಕೊಡುವಷ್ಟೇ, ಮೌನವನ್ನೂ ಅಭಿವ್ಯಕ್ತಿಸುವ ಅವರ ತೆರೆಯ ಮೇಲೆ ಮೂಡುವ ಉಪಸ್ಥಿತಿ ಮನಸ್ಸಿನಲ್ಲಿ ಉಳಿಯುವಂತದ್ದು. ಈಕೆ ನಟಿ, ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ, ಧ್ವನಿ ಕಲಾವಿದೆ ನಿರೂಪಕಿ, ಸಮಾಜಮುಖಿ ಹೀಗೆ ವೈವಿಧ್ಯಮುಖಿ. ಅವರು ಮೂರು ರಾಷ್ಟ್ರಿಯ ಪ್ರಶಸ್ತಿ, 9 ಫಿಲಂಫೇರ್ ಪ್ರಶಸ್ತಿ ಮತ್ತು ಹಲವು ರಾಜ್ಯ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳನ್ನು ಗಳಿಸಿದ್ದಾರೆ.
ರೇವತಿ 1966ರ ಜುಲೈ 8ರಂದು ಕೇರಳದ ಕೊಚ್ಚಿಯಲ್ಲಿ ಜನಿಸಿದರು. ಇವರ ಅಂದಿನ ಹೆಸರು ಆಶಾ ಕೆಲುನ್ನಿ. ತಂದೆ ಮಲಂಕ್ ಕೇಲುನ್ನಿ ಸೈನ್ಯಾಧಿಕಾರಿ ಆಗಿದ್ದರು. ತಾಯಿ ಲಲಿತಾ ಕೇಲುನ್ನಿ. ಚಿಕ್ಕಂದಿನಿಂದಲೇ ಭರತನಾಟ್ಯ ಕಲಿತ ಇವರು ನೃತ್ಯಕಾರ್ಯಕ್ರಮಗಳನ್ನೂ ನೀಡಿದ್ದರು. ಒಮ್ಮೆ ಶಾಲೆಯಲ್ಲಿ ನಡೆದ ಫ್ಯಾಷನ್ ಷೋದಲ್ಲಿ ಭಾಗವಹಿಸಿದ ಈಕೆಯ ಚಿತ್ರ ಅನಿರೀಕ್ಷಿತವಾಗಿ ತಮಿಳು ನಿಯತಕಾಲಿಕವೊಂದಕ್ಕೆ ಮುಖಪುಟವಾದಾಗ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಭಾರತೀರಾಜಾ ಈಕೆಗೆ ತಮ್ಮ 'ಮಣ್ ವಾಸನೈ' ಚಿತ್ರಕ್ಕೆ ಆಹ್ವಾನ ನೀಡಿದರು.
ಬಾಲ್ಯವನ್ನು ಹೆಚ್ಚು ದೆಹಲಿಯಲ್ಲಿ ಕಳೆದು ಚೆನ್ನೈಗೆ ಬಂದಿದ್ದ ರೇವತಿಯರಿಗೆ ತಮಿಳು ಸ್ಪಷ್ಟವಾಗಿ ಬರುತ್ತಿರಲಿಲ್ಲ. ಆದರೂ ಛಲ ಬಿಡದೆ ಕಲಿತರು. ಮೊದಲ ಚಿತ್ರ 'ಮಣ್ ವಾಸನೈ' ಗೆ ಫಿಲ್ಮ್ ಫೇರ್ ಉದಯೋನ್ಮುಖ ಪ್ರತಿಭಾ ಪ್ರಶಸ್ತಿ ಪಡೆದರು. ಮಲಯಾಳಂ, ತೆಲುಗು ಚಿತ್ರಗಳಲ್ಲೂ ನಟಿಸಿದರು. ಕನ್ನಡಕ್ಕೂ ಕೆಲವು ಚಿತ್ರಗಳಿಗೆ ಬಂದಿದ್ದರು. ಇವರು ತಾವು ನಟಿಸಿರುವ ಎಲ್ಲಾ ಬಾಷೆಯ ಸಿನಿಮಗಳಿಗೂ ತಾವೇ ಧ್ವನಿ ನೀಡಿದ್ದಾರೆ.
1986ರಲ್ಲಿ ಮಣಿರತ್ನಂ ನಿರ್ದೇಶಿಸಿ ರೇವತಿ, ಮೋಹನ್ ಹಾಗೂ ಕಾರ್ತಿಕ್ ಅಭಿನಯಿಸಿದ 'ಮೌನರಾಗಂ' ಚಿತ್ರದಲ್ಲಿ ಅವರ ವಿಭಿನ್ನ ಭಾವಗಳ ಅಭಿನಯ ಸ್ಮರಣೀಯ. ಇಂದಿಗೂ ಸಹ 'ಮೌನರಾಗಂ' ಚಿತ್ರದ ದಿವ್ಯಾ ಎಂದೇ ಅವರನ್ನು ಜನ ಗುರುತಿಸುವುದುಂಟು. 'ದೇವರ್ ಮಗನ್' ಚಿತ್ರದಲ್ಲಿ ಅವರು ಅಭಿನಯಿಸಿದ ಪಾತ್ರವೂ ಅವಿಸ್ಮರಣೀಯ. ಕೆ. ಬಾಲಚಂದರ್ ಅವರ ಪುನ್ನಗೈ ಮನ್ನನ್, ಭಾರತಿರಾಜಾ ಅವರ 'ಒರು ಖೈದಿಯಿನ್ ಡೈರಿ' ಅವರ ಇನ್ನೆರಡು ಸುಂದರ ಚಿತ್ರಗಳು. 1991ರಲ್ಲಿ ತೆರೆಕಂಡ 'ಲವ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ "ಸಾಥಿಯಾ ತೂ ನೇ ಕ್ಯಾ ಕಿಯಾ..." ಎಂದು ಹಾಡುತ್ತಾ ನಟಿಸಿದ ಚಿತ್ರವೂ ಜನಪ್ರಿಯ. ಕನ್ನಡದಲ್ಲಿ 'ಇದು ಸಾಧ್ಯ' ಮತ್ತು ವಿಷ್ಣುವರ್ಧನ್ ಜೊತೆ "ನಿಶ್ಯಬ್ದ" ಎಂಬ ಚಿತ್ರಗಳಲ್ಲಿಯೂ ನಟಿಸಿದ್ದರು.
ರೇವತಿ ತಮಿಳು, ತೆಲುಗು ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆದ ಸಾಧಕಿ. ರಾಷ್ಟ್ರೀಯ ಪ್ರಶಸ್ತಿಗಳು 'ದೇವರ್ ಮಗನ್' ಚಿತ್ರದಲ್ಲಿನ ಅಭಿನಯಕ್ಕೆ, 'ಮಿತ್ರ್ ಮೈ ಫ್ರೆಂಡ್' ಎಂಬ ಇಂಗ್ಲಿಷ್ ಚಲನಚಿತ್ರ ನಿರ್ಮಾಣಕ್ಕೆ ಮತ್ತು 'ರೆಡ್ ಬಿಲ್ಡಿಂಗ್ ವೇರ್ ದ ಸನ್ ಸೆಟ್ಸ್ ' ಎಂಬ ಕುಟುಂಬ ಕಲ್ಯಾಣದ ಕುರಿತಾದ ಚಿತ್ರ ನಿರ್ಮಾಣಕ್ಕೆ ರೇವತಿ ಅವರಿಗೆ ಸಂದಿವೆ. ಇದಲ್ಲದೆ ಹಲವು ರಾಜ್ಯ ಪ್ರಶಸ್ತಿಗಳೂ ಇವರಿಗೆ ಸಂದಿವೆ. ಇವರ 'ಮಿತ್ರ್ ಮೈ ಫ್ರೆಂಡ್' ಚಿತ್ರದ ವಿಶೇಷವೆಂದರೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದ ಎಲ್ಲಾ ತಂತ್ರಜ್ಞರೂ ಮಹಿಳೆಯರು. 'ರೆಡ್ ಬಿಲ್ಡಿಂಗ್ ವೇರ್ ದಿ ಸನ್ ಸೆಟ್ಸ್' ತಂದೆ ತಾಯಂದಿರ ವಿಮುಖ ಜೀವನ ವರ್ತನೆಗಳು, ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಕುರಿತಾಗಿದೆ. ಇವರು ಹಿಂದಿಯಲ್ಲಿ ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ನಿರ್ದೇಶಿಸಿದ 'ಫಿರ್ ಮಿಲೇಂಗೇ' ಚಿತ್ರ 'ಏಯ್ಡ್ಸ್' ಕುರಿತಾದ ಕಥಾ ಎಳೆಯನ್ನು ಹೊಂದಿತ್ತು. ಕಿರು ತೆರೆಯಲ್ಲೂ ಇವರ 'ಪೆಣ್', 'ಇರವಿಲ್ ಒರು ಪಗಲ್' ಮುಂತಾದವು ಪ್ರಶಸ್ತಿ ಗಳಿಸಿವೆ.
ಸಮಾಜಸೇವೆಯಲ್ಲೂ ನಿರತರಾಗಿರುವ ರೇವತಿ ಅನಾಥ ಮಕ್ಕಳು, ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವ ಮತ್ತು ಸಮಾಜಪರ ಕಾಳಜಿಗಳುಳ್ಳ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಬಾನ್ಯನ್, ಎಬಿಲಿಟಿ ಫೌಂಡೇಷನ್, ಟ್ಯಾಂಕರ್ ಫೌಂಡೇಷನ್, ವಿದ್ಯಾಸಾಗರ್ ಮುಂತಾದವುಗಳೊಂದಿಗೆ ಇವರ ಸಹಯೋಗವಿದೆ.
ರೇವತಿ ಚಲನಚಿತ್ರ ಛಾಯಾಗ್ರಾಹಕ ಮತ್ತು ನಿರ್ದೇಶಕರಾದ ಸುರೇಶ್ ಚಂದ್ರ ಮೋಹನ್ ಅವರನ್ನು ವರಿಸಿದ್ದಾರೆ.
ಅಕ್ಕರೆಯ ಸಕ್ರಿಯ ಕಲಾವಿದೆ ರೇವತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of my favorite actress Revathi
ಕಾಮೆಂಟ್ಗಳು