ಗೋಕುಲ ನಿರ್ಗಮನ 20
ಗೋಕುಲ ನಿರ್ಗಮನ 20
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಹಿರಿಯರು
ಹಾಡು: ರಾಗ - ರಂಜಿನಿ
ಕೊಳಲನೂದು ಗೋವಿಂದ
ಮುಪ್ಪಿಗಾಗಲಾನಂದ
ಸುಬಲ
ರಾಧೆಯಂತಿತ್ತು ಸುದಾಸ
ಸುದಾಸ
ನಿನ್ನ ಕಣ್ಣು ಮಂಜಾಗಿದೆ ಸುಬಲ
ಅಕೊ ನಾಗವೇಣಿಯೋಡುತಲಿಹಳು
ಸುಬಲ
ಜತೆಗೆ ರಾಧೆ ಇದ್ದೇ ಇಹಳು
ಸುದಾಸ
ಪರಿಕಿಪ ಬಾ - ಹೋಯಿತು ಮಾನ
ಹಾಳಾಗಲಿ ಇವರೀ ಸುಮ್ಮಾನ
( ಇಬ್ಬರೂ ಓಡುವರು. ಹಿರಿಯರು ಮಾತ್ರ ಹಾಡುತ್ತಿರುತ್ತಾರೆ. )
ಹಿರಿಯರು
ರಾಗ - ಹಿಂದಿನದೆ
ಕೊಳಲನೂದು ಗೋವಿಂದ
ಮುಪ್ಪಿಗಾಗಲಾನಂದ ||ಪ||
ಮೈ ಮುಪ್ಪ ಕಾರುವಂತೆ
ಮನಕೆ ಚಿಂತೆ ಸೇರದಂತೆ
ಹರೆಯದ ಹುರುಪಿಂದ ನಾವು
ಹಗುರು ಹೆಜ್ಜೆಯಿಡುವ
ತೆರದಿ - ಕೊಳಲನೂದು
ಕಣ್ಣ ಮಂಜು ಹರಿಯುವಂತೆ
ಕಿವಿಯು ಹರಿತವಾಗುವಂತೆ
ಬಾಳೇ ಸನಿಯ ಸಾವು ದೂರ
ಎಂಬ ತೆರದ ನಂಬಿಕೆ ಬರೆ - ಕೊಳಲನೂದು
ದಿನದಿನಕೂ ಬೆಳವ ಘೋರ
ಕಾಲ ಬೆನ್ನುಬಾಗೆ ಭಾರ
ನಿನ್ನ ಕೊಳಲ ಮಂತ್ರಕವನು ಹೆದರಿ ಹೆಗಲನಿಳಿವ ತೆರದಿ - ಕೊಳಲನೂದು
ಕೃಷ್ಣ
(ನಗೆಮೊಗದಿಂದ)
ಓಹೋ ತಾತ ಓಹೋ ತಾತ
ಇಲ್ಲೇತಕೆ ಬಂದಿರಿ ತಾತ
ಹುಡುಗರನೆಲ್ಲ ಹೆದರಿಸುತ
ಹುಡುಗರ ಹುಡುಗಾಟಕೆ ಬಿಟ್ಟು
ಹಿರಿಯರು ಹೊರಡುವುದೇ ಚಂದ
ಹಿರಿಯರು
ಪೋಪೆವು ಪೋಪೆವು
ಒಂದು ನುಡಿತವನು ನುಡಿಸೈ - ಪೋಪೆವು
ಕೃಷ್ಣ
ಸೈ ಇದೆ ಒಪ್ಪಂದ
ಹಿರಿಯರು
ಹೂ ಸೈ ಇದೆ ಇದೆ ಒಪ್ಪಂದ
(ಕೃಷ್ಣ ಭಾವದಿಂದ ಕೊಳಲೂದುತ್ತಾನೆ. ಈ ಅರ್ಥ ಬರುವಂತೆ.)
ರಾಗ - ಪೀಲು
ನಿಲ್ಲು ನಿಲ್ಲು ತುಸ ತಳುಗು
ನಮ್ಮ ಬಾಳಿನ ಕರೆಗೆ ಬಂದು ತಗಲುತಲಿರುವ
ನಲ್ಮೆಸಿರಿಕಡಲ ತೆರೆಯೇ –
ಒಮ್ಮೆ ಒಮ್ಮೆ ಸೆಳೆದೊಯ್ಯಿ ಮರಳಲೇಬೇಕಾದೊಡೆಮ್ಮ ನೀ ತುಸ ಬಿಡದೆ
ನಡುವಿನಾಳಕ್ಕೆ ತೆರೆಯೇ
(ಹಿರಿಯರು ಲಾಲಿಸಿ ಸ್ತಂಭೀಭೂತರಾಗಿ ಆಮೇಲೆ ಥಟ್ಟನೆ ಕುಣಿಯುತ್ತಾರೆ.)
ಹಿರಿಯರು
ಹಾಡು : ರಾಗ - ಮಾಂಡ್
ಭಾಪುರೇ ಮಝ ಭಾಪುರೇ - ಭಲೇ
ಲೇಸು ಲೇಸು ಲೇಸೈ ಹರೇ –
ಸುಕ್ಕುಮೈಯ ಕೆಳಗಿಕ್ಕೆವು - ಭಲೆ
ಸುಕ್ಕುಮೈಯ ಕೆಳಗಿಕ್ಕದಲೆ ನಾ-
ವುಕ್ಕುವ ಮೋದಕೆ ಅಪ್ಪೆವು – ಅಹ ಭಾಪುರೇ
ಮುಪ್ಪೆ ನಮಗೊಪ್ಪೆಂದೆವು ನಾ- ಭಲೆ
ಮುಪ್ಪೆ ನಮಗೊಪ್ಪೆಂದು ನಾ -
ವಿಪ್ಪತ್ತು ಹರೆಯವ ದೂರೆವು - ಅಹ
ಲೋಕದ ಕೊಂಕನು ಬೊಂಕೆವು – ಭಲೆ
ಲೋಕದ ಕೊಂಕನು ಬೊಂಕದೆಲೆ-ನಾ
ವೇಕಾಂತದೊಳದ ನಗುವೆವು - ಅಹ
ಹಿಂದೆ ಬಹರಿಗೆ ಅಂದವು - ಭಲೆ
ಹಿಂದೆ ಬಹರಿಗೆ ಅಂದವನೆ ನಾವ್
ತಂದ ಬಾಳನು ಬಿಡುವೆವು - ಅಹ
ಬೀಳುವ ಕಾಲಕ್ಕೆ ಬೆದರೆವು – ಭಲೆ
ಬೀಳುವ ಕಾಲಕೆ ಬೆದರದೆ ನಾವದ
ನೇಳಿಗೆ ಎಂದೇ ಬಗೆವೆವು - ಅಹ
ಕೃಷ್ಣ
ಭಾಪುರೇ ಮಝ ಭಾಪುರೇ - ಭಲೆ
ಲೇಸು ಲೇಸು ತಾತಂದಿರೇ-
ಹುಡುಗರಂತೆಯೇ ಕುಣಿದಿರಿ – ಭಲೆ
ಹುಡುಗರಂತೆಯೇ ಕುಣಿದರು ನೀವು
ಹಿರಿಯರಂತೆಯೇ ನುಡಿದಿರಿ – ಅಹ ಭಾಪುರೇ ಇನ್ನು ಊರಿಗೆ ಮರಳಿರಿ - ಭಲೆ
ಇನ್ನು ಊರಿಗೆ ಮರಳುತ ನೀವು
ಚೆನ್ನ ನಿದ್ದೆಗೆ ಸಲ್ಲಿರಿ
ಬರುವೊಡೆ ನಾಳೆಗು ಬನ್ನಿರಿ - ಅಹ ಭಾಪುರೇ
ಹಿರಿಯರು
ಆಗಲಿ ಕೃಷ್ಣ ಆಗಲಿ ಕೃಷ್ಣ
ಇನ್ನೂ ತುಸು ನುಡಿಸೋ ಕೃಷ್ಣ –
ನಾಳೆ ಎಲ್ಲೋ ನಾವೆಲ್ಲೋ -
ಕೃಷ್ಣ
ಮರೆತಿರ ತಾತಾ ಒಪ್ಪಂದ
ಹಿರಿಯರು
ಹೂ ಇಹುದಪ್ಪಾ ಆ ನಿರ್ಬಂಧ
ಒಬ್ಬ ಹಿರಿಯ
ಬನ್ನಿರಿ ಬನ್ನಿರಿ ರಾಮನೆಡೆ
ಅವರಾಟವನೂ ನೋಡುವೊಡೆ
( ಅವರು ಹೋದಮೇಲೆ ಕೃಷ್ಣ ಕೊಳಲನೂದುತ್ತಾ ನಿಂತಿರುವಾಗ ಕಲಕಿದ ನೀರಿಗೆ ಮರಳಿ ಮೀನುನೆರೆವಂತೆ, ಚೆದರಿದ ಪಾರಿವಾಳಗಳು ತಿರುಗಿ ಕೂಡುವಂತೆ ಗೋಪಗೋಪಿಯರು ಬಂದುನೆರೆದುಕೊಳ್ಳುತ್ತಾರೆ. ರಾಧೆ ಮತ್ತು ಅವಳ ಸಖೀ ಮಾತ್ರ ಕಾಣುವುದಿಲ್ಲ. ಮನೆಗೆ ಓಡಿಹೋದರೋಅಥವಾ ತಮ್ಮನ್ನು ಅರಸುತ್ತಿರುವ ತಂದೆಗಳ ಕಣ್ಣಿಗೆ ಸಿಕ್ಕದಂತೆ ಯಾವ ತರುಕುಂಜದಲ್ಲಿಅಡಗಿದ್ದಾರೋ )
**********
ಹಿರಿಯರು ಕೊಳಲನೂದು ಗೋವಿಂದ ಎಂದು ಹಾಡುತ್ತ ಬರುವರು. ರಾಧೆ ಕಂಡ ಹಾಗಾಯಿತುಎನ್ನುವನು ಸುಬಲ. ಸುದಾಸ ಒಪ್ಪುವುದಿಲ್ಲ. ಕಣ್ಣು ಮಂಜಾಗಿದೆ ನಿನಗೆ. ನಾಗವೇಣಿ ನೋಡುಓಡುತ್ತಿಹಳು ಎಂದಾಗ ಇಬ್ಬರಿಗೂ ತಮ್ಮ ಮಕ್ಕಳ ಮೇಲೆ ಕೋಪ. ತಮ್ಮ ಮಾನ ಹೋಯಿತೆಂದುಹೊರಡುವರು. ಹಾಡು ಮುಂದುವರೆಯುವುದು.
ಈ ಮುಪ್ಪಿನಲ್ಲಿ ಆನಂದ ಸಿಗುವಂತೆ, ಮೈ ಹಗುರಾಗುವಂತೆ, ಹರೆಯದ ಹುರುಪುಮರುಕಳಿಸುವಂತೆ ಕೊಳಲನ್ನು ಊದು. ಕಣ್ಣಿನ ಮಂಜು ಹರಿದು, ಕಿವಿಗಳು ಹರಿತವಾಗಿ ಬಾಳುಸನಿಹವಾಗಿ ಸಾವು ದೂರಾಗುವಂತೆ ಕೊಳಲನ್ನು ಊದು. ಕಾಲರಾಯನು ಬೆನ್ನಿನ ಮೇಲಿರುವನು. ಅವನ ಭಾರ ತೊಲಗುವಂತೆ ನಿನ್ನ ಕೊಳಲಿಗೆ ಅವನು ಹೆದರಿ ಓಡುವಂತೆ ಕೊಳಲನ್ನು ಊದುಎನ್ನುವರು.
ಕೃಷ್ಣನು ಅವರನ್ನು ಕಂಡು ನಗುತ್ತಾ ಇಲ್ಲೇಕೆ ಬಂದಿರಿ? ಹುಡುಗರನ್ನು ಹೆದರಿಸಲು ಎನ್ನುವನು. ಅದಕ್ಕವರು ಹೋಗುತ್ತೇವೆ. ಒಂದು ಬಾರಿ ಕೊಳಲನ್ನು ನುಡಿಸೆನ್ನಲು ಅದಕ್ಕೆ ಕೃಷ್ಣ ಅದನ್ನು ಕೇಳಿಹೊರಡಬೇಕು ಎಂದು ನಿರ್ಬಂಧ ವಿಧಿಸುವನು.
ಕೃಷ್ಣ ಭಾವಪೂರ್ಣವಾಗಿ ಹಾಡುವನು. ಸ್ವಲ್ಪ ತಾಳು. ಸೆಳೆದೊಯ್ಯಲೇಬೇಕಾಗಿದ್ದರೆ ಒಮ್ಮೆಗೇಕರೆದುಕೋ. ನಿನ್ನಲ್ಲಿ ಒಂದಾಗಿಸಿಕೋ ಎಂದು. ಹಿರಿಯರಿಗೆ ಸಂತಸವಾಗಿ ಎಲ್ಲರೊಂದಾಗಿಕುಣಿಯತೊಡಗುವರು.
ಭಾಪುರೇ, ಮೈಯಲ್ಲಿ ಸುಕ್ಕು ಬಂದು ಮುಪ್ಪಾಗಿದ್ದರೂ ಕುಣಿಯುವೆವು. ಮುಪ್ಪಿಗೆ ಹೆದರದೆಒಪ್ಪಿಕೊಳ್ಳುವೆವು. ಹರೆಯವನ್ನು ದೂರುವುದಿಲ್ಲ. ಲೋಕವನ್ನು ಕುರಿತು ಕೊಂಕು ಮಾತನಾಡೆವು. ಏಕಾಂತದಲ್ಲಿ ನಗುವೆವು. ಹಿಂದೆ ಬರುವವರಿಗೆ ಬಾಳು ಸಿಗಲಿ.ನಮ್ಮ ಬಾಳನ್ನು ಮುಗಿಸುವೆವು. ಸಾವಿಗೆ ಹೆದರುವುದಿಲ್ಲ .ಅದು ನಮ್ಮ ಸುಕೃತವೆಂದೇ ಬಗೆಯುವೆವು. ಎಂದು ಹಾಡುವರು.
ಕೃಷ್ಣನು ಅದಕ್ಕೆ ಮೆಚ್ಚುವನು. ಮುಪ್ಪಿನಲ್ಲಿಯೂ ಹುಡುಗರಂತೆಯೇ ಕುಣಿದಿರಿ ಎಂದು ಹೊಗಳಿಇನ್ನು ಊರಿಗೆ ಮರಳಿರಿ ಎನ್ನುವನು. ಆರಾಮವಾಗಿ ನಿದ್ರಿಸಿರೆಂದನು. ಹಿರಿಯರು ಇನ್ನೊಂದುಹಾಡನ್ನು ನುಡಿಸೆನ್ನಲು ಒಪ್ಪಂದವನ್ನು ನೆನಪಿಸುವನು. ಅದಕ್ಕವರು ಸರಿಯೆಂದು ಬಲರಾಮನಆಟವನ್ನು ನೋಡೋಣವೆಂದು ಅಲ್ಲಿಂದ ಹೊರಡುವರು.
ಚದುರಿದ ಮೀನುಗಳೆಲ್ಲ ಮತ್ತೆ ಸೇರುವಂತೆ ಗೋಪ ಗೋಪಿಯರು ಮತ್ತೆ ಬರುವರು. ಆದರೆ ರಾಧೆಮತ್ತು ಅವಳ ಸಖಿ ಬಂದಿಲ್ಲ. ಮನೆಗೇ ಹೋದರೋ ಅಥವಾ ಹಿರಿಯರಿಗೆ ಹೆದರಿ ಎಲ್ಲಾದರೂಬಚ್ಚಿಟ್ಟುಕೊಂಡಿರುವರೋ ತಿಳಿಯದು.
ಭಾವಾರ್ಥ: ಸುಬ್ಬುಲಕ್ಷ್ಮಿ
ಕಾಮೆಂಟ್‌ಗಳು