ಸ್ವಾತಂತ್ರ್ಯ ನೋಟ - 8
ಸ್ವಾತಂತ್ರ್ಯ ನೋಟ - 8
ನಾನಾಬಗೆಯ ಸ್ವಾತಂತ್ರ್ಯದ ಕಿಡಿಗಳು
ತಿಲಕರ ಕೇಸರಿ (1880), ಅವರು ಆರಂಭಿಸಿದ ಗಣಪತಿ ಉತ್ಸವ (1893) ಹಾಗೂ ಶಿವಾಜಿ ಉತ್ಸವ (1895), ಮಹಾರಾಷ್ಟ್ರದಲ್ಲಿ 1896ರಲ್ಲಿ ಬಂದ ತೀವ್ರ ಕ್ಷಾಮ ಇದರ ಹಿಂದೆ ಮೂಡಿದ ಪ್ಲೇಗು (1897) ಇವೆಲ್ಲ ಉಗ್ರಪಂಥದ ಉದಯಕ್ಕೆ ಮಹಾರಾಷ್ಟ್ರದಲ್ಲಿ ಅವಕಾಶವಿತ್ತಿತ್ತು.
ಚಾಪೇಕರ್ ಬಂಧುಗಳ ಹುತಾತ್ಮ್ಯದಿಂದ ಉದ್ದೀಪನಗೊಂಡ ವಿನಾಯಕ ಸಾವರ್ಕರ್ ಅವರು ಕ್ರಾಂತಿಕಾರೀ ಸಂಘಟನೆ ಮಿತ್ರಮೇಳಾ(1900) ಹಾಗೂ ಅಭಿನವ ಭಾರತ (1908) ಇವುಗಳ ಸ್ಥಾಪನೆಗೆ ಕಾರಣರಾದರು.
ಗುಪ್ತ ಸಂಘಟನೆ, ವ್ಯಾಯಾಮಶಾಲೆಗಳ ಸ್ಥಾಪನೆ, ಪತ್ರಿಕೆಗಳಲ್ಲಿ ಕ್ರಾಂತಿಕಾರೀ ವಿಚಾರಗಳ ಪ್ರಕಟಣೆ ಮೊದಲಾದವುಗಳಿಗೆ ಮೊದಲಿಟ್ಟಿತು.
ಇದೇ ರೀತಿ ಬಂಗಾಳದಲ್ಲಿ ಬಂಕಿಮ್‍ಚಂದ್ರ ಚಟ್ಟೋಪಾಧ್ಯಾಯರ ಬರಹಗಳು, ಪರಮಹಂಸ, ವಿವೇಕಾನಂದರ ಚಟುವಟಿಕೆಗಳು, ಬ್ರಿಟಿಷ್ ಅಧಿಕಾರಿಗಳ ಬಂಗಾಳೀ ವಿರೋಧಿ ನಿಲುವು, ನೀಲಿ ಬೆಳೆಗಾರರ ಶೋಷಣೆ, ಬಿಪಿನ್ ಚಂದ್ರಪಾಲ್ ಮತ್ತು ಅರವಿಂದರ ಚಟುವಟಿಕೆಗಳು ಹಾಗೂ ಹಿಂದೂ ಪೇಟ್ರಿಆಟ್ ಬಗೆಯ ಪತ್ರಿಕೆಗಳ ಬರಹ ಮುಂತಾದವು ಬಂಗಾಳದಲ್ಲಿ ಕ್ರಾಂತಿಕಾರಿಗಳ ಚಟುವಟಿಕೆಗೆ ಹಾದಿ ಮಾಡಿತು.
1902ರಲ್ಲಿ ಅನುಶೀಲನ ಸಮಿತಿ ಸ್ಥಾಪನೆಯಾಯಿತು. ಜತೀಂದ್ರ ಬ್ಯಾನರ್ಜಿ ಮತ್ತು ಬಾರೀಂದ್ರ ಘೋಷ್ ಇದರ ಮುಖ್ಯ ಕಾರ್ಯಕರ್ತರು. ಇದೇ ರೀತಿ ಪಂಜಾಬಿನ ಸಹರಾನಪುರದಲ್ಲಿ ಒಂದು ಗುಪ್ತ ಸಂಘಟನೆ ಆರಂಭವಾಯಿತು. ಲಾಲಾಹರದಯಾಳ್, ಅಜಿತ್‍ಸಿಂಗ್, ಸೂಫೀ ಅಂಬಾಪ್ರಸಾದ್ ಇವರೆಲ್ಲ ಈ ಸಂಘಟನೆಗೆ ಸೇರಿದ್ದರು.
ಲಂಡನ್‍ನಲ್ಲಿ ನೆಲೆನಿಂತ ಗುಜರಾತೀ ಗೃಹಸ್ಥ ಶ್ಯಾಮಜೀ ಕೃಷ್ಣವರ್ಮ ಅಲ್ಲೇ ಇಂಡಿಯನ್ ಹೋಮ್ ರೂಲ್ ಲೀಗ್ ಸ್ಥಾಪಿಸಿದರು. ಇಂಡಿಯನ್ ಸೋಷಲಜಿಸ್ಟ್ ಪತ್ರಿಕೆ ಹಾಗೂ ಇಂಡಿಯಾ ಹೌಸ್‍ಗಳನ್ನು ಅದೇ ವರ್ಷಸ್ಥಾಪಿಸಿದರು (1905). ಭಿಕಾಜಿ ಕಾಮಾ ಮತ್ತು ಲಾಲಹರದಯಾಳ್, ಅವರ ಜೊತೆ ಸೇರಿಕೊಂಡರು. ಈ ಎಲ್ಲ ಸಂಸ್ಥೆಗಳು ಬೆಳೆಯಲು ವಂಗಭಂಗ ಹಾಗೂ ಸ್ವದೇಶೀ ಚಳವಳಿಗಳು ಒಳ್ಳೆಯ ಅವಕಾಶ ನೀಡಿದುವು.
1908ರಲ್ಲಿ ಅಲಿಪುರದಲ್ಲಿ ಖುದಿರಾಮ್ ಬಸು ಬಾಂಬು ಹಾಕಿದರು. ನಾಸಿಕದಲ್ಲಿ 1909ರಲ್ಲಿ ಕನ್ಸೇರ್ ಜ್ಯಾಕ್ಸನ್‍ನನ್ನು ಕೊಂದರು. ಅದೇ ವರ್ಷ ಮದನಲಾಲ್ ಢಿಂಗ್ರಾ ಲಂಡನಿನಲ್ಲಿ ಕರ್ಜನ್ ವಯ್ಲಿಗೆ ಗುಂಡಿಕ್ಕಿ ಗುಪ್ತ ತೀವ್ರಗಾಮಿ ಸಂಘಟನೆಗಳ ಅಸ್ತಿತ್ವದ ಪರಿಚಯವನ್ನು ಜಗತ್ತಿಗೆ ತೋರಿದರು.
ನಾಳೆ ಮುಂದುವರೆಸೋಣ....
ಕಾಮೆಂಟ್‌ಗಳು