ವಡಿವೇಲು
ವಡಿವೇಲು
ವಡಿವೇಲು ಹಾಸ್ಯ ಕಲಾವಿದರಾಗಿ ಪ್ರಖ್ಯಾತರು. ಏನೂ ಅಲ್ಲದವನಾಗಿಲ್ಲದ ಒಬ್ಬ ವ್ಯಕ್ತಿ ಕಲಾವಿದನಾಗಿ ಪ್ರಖ್ಯಾತನಾಗುವುದು, ಪ್ರಖ್ಯಾತಿ ತರುವ ಅಹಂ, ಪೈಪೋಟಿ, ಸಾಮಾನ್ಯ ಕಲಾವಿದನೊಬ್ಬನ ಮೇಲೆ ರಾಜಕೀಯ ತರುವ ಬಿರುಗಾಳಿ, ಕಲಾವಿದರಲ್ಲಿ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುವಿಕೆ, ಹಲವು ರೀತಿಯ ವ್ಯಸನಗಳು ಇವೆಲ್ಲವೂ ಇವರ ಜೀವನದಲ್ಲೂ ನಟನೆಗಿಂತ ಹಲವು ಪಟ್ಟು ಎತ್ತರದಲ್ಲಿ ನಿಂತಿವೆ.
ವಡಿವೇಲು 1960ರ ಸೆಪ್ಟೆಂಬರ್ 12ರಂದು ತಮಿಳುನಾಡಿನ ಮದುರೈನ ಕುಮಾರವಾದಿವೆಲ್ ಎಂಬಲ್ಲಿ ಜನಿಸಿದರು. ತಂದೆ ನಟರಾಜನ್. ತಾಯಿ ಸರೋಜಿನಿ. ತಂದೆ ನಡೆಸುತ್ತಿದ್ದ ಪುಟ್ಟ ಗಾಜು ಕತ್ತರಿಸುವ ವ್ಯವಹಾರದಲ್ಲಿ ಬಾಲಕ ವಡಿವೇಲು ತೊಡಗಿಕೊಂಡಿದ್ದ. ಇದರಿಂದಾಗಿ ಪ್ರಾಥಮಿಕ ಶಿಕ್ಷಣವನ್ನೂ ಪಡೆಯಲಿಲ್ಲ. ತಂದೆಯ ನಿಧನದ ನಂತರ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಆಗ ವಡಿವೇಲು ಸಹೋದರರು ತಂದೆಯ ವ್ಯವಹಾರವನ್ನು ಮುಂದುವರಿಸಿದ್ದರು. ಸಮಯ ಸಿಕ್ಕಗಾಗಲೆಲ್ಲ ವಡಿವೇಲು ನಾಟಕದತ್ತ ಮುಖಮಾಡುತ್ತಿದ್ದರು. ಹಾಸ್ಯದ ಪಾತ್ರಗಳಲ್ಲಿ ಜನ ಗುರುತಿಸಲಾರಂಭಿಸಿದರು.
ಒಮ್ಮೆ ರೈಲಿನಲ್ಲಿ ಪಯಣಿಸುವಾಗ ವಡಿವೇಲುಗೆ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ರಾಜ್ ಕಿರಣ್ ಸಿಕ್ಕರು. ಕೆಲವು ಸಮಯದ ನಂತರ ರಾಜ್ ಕಿರಣ್ ವಡಿವೇಲುಗೆ ತನ್ನ ಮುಂದಿನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಸಂದೇಶ ಕಳಿಸಿದರು. 1988ರಲ್ಲಿ ಕಸ್ತೂರಿ ರಾಜಾ ನಿರ್ದೇಶಿಸಿದ, ರಾಜ್ ಕಿರಣ್ ನಿರ್ಮಾಣದ 'ಎನ್ ರಾಸಾವಿನ್ ಮನಸಿಲ್ಲೈ' ಎಂಬ ತಮಿಳು ಚಿತ್ರದಲ್ಲಿ ವಡಿವೇಲುಗೆ ಚಿಕ್ಕ ಪಾತ್ರದಲ್ಲಿ ನಟಿಸಲು ಅವಕಾಶ ದೊರಕಿತು. 1988ರಲ್ಲಿ ಟಿ.ರಾಜೇಂದರ್ ನಿರ್ದೇಶನದ 'ಎನ್ ತಂಗೈ ಕಲ್ಯಾಣಿ' ಚಿತ್ರದಲ್ಲೂ ಅವಕಾಶ ಸಿಕ್ಕಿತ್ತು.
ಅಂದಿನ ದಿನಗಳಲ್ಲಿ ಗೌಂಡಮಣಿ ಮತ್ತು ಸೆಂಥಿಲ್ ತಮಿಳು ಚಲನಚಿತ್ರಗಳಲ್ಲಿ ಅವಿಭಾಜ್ಯ ಎನ್ನುವಂತೆ ಹಾಸ್ಯ ಪಾತ್ರಗಳನ್ನು ಆಕ್ರಮಿಸಿದ್ದರು. ಮತ್ತೊಬ್ಬ ಅಪ್ರತಿಮ ಹಾಸ್ಯ ಕಲಾವಿದ ವಿವೇಕ್ ಕೂಡಾ ಮೇಲೇರುತ್ತಿದ್ದರು. ಹೀಗಾಗಿ ವಡಿವೇಲು ಅವರಿಗೆ ಅವಕಾಶಗಳು ಸುಲಭವಾಗಿರಲಿಲ್ಲ. 1992ರಲ್ಲಿ ಕಮಲ್ ಹಾಸನ್ ನಟನೆಯ 'ದೇವರ್ ಮಗನ್' ಚಿತ್ರದಲ್ಲಿ ವಡಿವೇಲು ಅವರಿಗೆ ಅವಕಾಶ ಸಿಕ್ಕಿತ್ತು. ಅದರಲ್ಲಿ ಕೇವಲ
ಹಾಸ್ಯ ಮಾತ್ರವಲ್ಲದ ಆತನ ಅಭಿನಯ ಮನೋಜ್ಞವಾಗಿತ್ತು. ಬಳಿಕ ಕಮಲ್ ಹಾಸನ್ ನಿರ್ದೇಶನದ ಸಿಂಗಾರಾ ವೇಲನ್ ಚಿತ್ರದಲ್ಲಿ ವಡಿವೇಲುಗೆ ಹಾಸ್ಯ ಪಾತ್ರ ದಕ್ಕಿತ್ತು.
1994ರಲ್ಲಿ ಎಸ್.ಶಂಕರ್ ನಿರ್ದೇಶನದ 'ಕಾದಲನ್' ವಡಿವೇಲುಗೆ ಹೆಚ್ಚು ಜನಪ್ರಿಯತೆ ತಂದಿತು. ಹೀಗೆ ಸಿಕ್ಕ ಒಂದೊಂದು ಅವಕಾಶದಲ್ಲೂ ವಡಿವೇಲು ಮೇಲೇರಿದರು. 1988ರಿಂದ ವಡಿವೇಲು ಬಿಡುವಿಲ್ಲದ ಬಹುಬೇಡಿಕೆಯ ನಟರಾದರು. ಅನೇಕ ಬಾರಿ ಉತ್ತಮ ಅಭಿನಯಕ್ಕಾಗಿ ತಮ್ಮ ರಾಜ್ಯದ ಚಲನಚಿತ್ರ ಪ್ರಶಸ್ತಿ ಪಡೆದರು.
ಈ ಮಧ್ಯೆ ತಮಿಳಿನ ಖ್ಯಾತ ನಟ ಮತ್ತು ಸಕ್ರಿಯ ರಾಜಕಾರಣಿ ಕ್ಯಾಪ್ಟನ್ ವಿಜಯ್ ಕಾಂತ್ ಜತೆಗೆ ವಡಿವೇಲು ಜಿದ್ದಿಗೆ ಬಿದ್ದರು. ಒಮ್ಮೆ ವಿಜಯಕಾಂತ್ ಅವರೇ ಈತನಿಗೆ ಬಹು ಬೆಂಬಲವಾಗಿದ್ದರು. ಇಬ್ಬರ ಜಗಳ ಕೋರ್ಟ್ ಕಟಕಟೆಗೂ ಬಂತು. ವಿಧ್ವಂಸಕಾರಿ ಹೊಡೆದಾಟಗಳು ಎರಡೂ ಗುಂಪುಗಳ ಜೊತೆ ನಡೆಯತೊಡಗಿತು. ಹಲವು ಜನ ಮೋಸ ಮಾಡಿದರು ಎಂದು ಇವರು, ಇವರು ಮಾಡಿದರು ಎಂದು ಇತರರು ಪ್ರಕರಣಗಳ ದಾಖಲೆಯ ರಾದ್ಧಾಂತ ಮಾಡಿದರು. ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಂತೂ ಕೆಟ್ಟ ರೀತಿಯ ದೂಷಣೆಗಳು ನಡೆದವು.
ವಡಿವೇಲು 2018ರಲ್ಲಿ ಚಿಂಬು ದೇವನ್ ನಿರ್ದೇಶನದ ಇಮ್ಸಾಯಿ ಅರಸನ್ 24ನೇ ಪುಲಿಕೇಶಿ ಸಿನಿಮಾದಲ್ಲಿ ನಟಿಸಲು ವಡಿವೇಲು ಒಪ್ಪಿಕೊಂಡಿದ್ದು, ವಸ್ತ್ರ ವಿನ್ಯಾಸಕಾರನ ವಿಷಯದಲ್ಲಿ ಅಸಮಾಧಾನವಾಗಿ ಆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಹೊರಬಂದರು. ಈ ಸಿನಿಮಾದ ನಿರ್ಮಾಪಕ ಎಸ್. ಶಂಕರ್ ರಾಜೀ ಸಂಧಾನಕ್ಕೆ ಪ್ರಯತ್ನಿಸಿದ್ದರೂ ವಡಿವೇಲು ಒಪ್ಪಿರಲಿಲ್ಲವಂತೆ. ಕೊನೆಗೆ ವಡಿವೇಲು ವಿರುದ್ಧ ದೂರು ದಾಖಲಾಗಿ ತಮಿಳು ಸಿನಿಮಾ ನಿರ್ಮಾಪಕರ ಮಂಡಳಿ ವಡಿವೇಲು ಮೇಲೆ ನಿಷೇಧ ಹೇರಿತ್ತು.
ಈಗ ಪುನಃ ನಟಿಸುತ್ತಿದ್ದಾರೆ ಎಂಬ ಸುದ್ಧಿ ಇದೆ. ರಾಜಕೀಯ ಬದಲಾದ ಸೂಚನೆ ಇದ್ದರೂ ಅಚ್ಚರಿಯಿಲ್ಲ. ರಂಗಭೂಮಿ ಮತ್ತು ಸಿನಿಮಾಗಳು ಕಲಾವಿದನ ವೇದಿಕೆ ಆಗುವ ಬದಲು ಕಲಾವಿದನ ಬದುಕೇ ಸುದ್ಧಿ ಮಾದ್ಯಮಗಳ ವೇದಿಕೆಯಾಗುವ ಕಾಲವಿದು.
On the birthday of actor Vadivelu
ಕಾಮೆಂಟ್‌ಗಳು