ಅನ್ನಪೂರ್ಣೆ
ಅನ್ನಪೂರ್ಣೆ
ಶಿವನು ತನ್ನ ಲೋಕವಾದ ಕೈಲಾಸದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು. ಪಾರ್ವತಿದೇವಿಯು ಹಿಂದಿನಿಂದ ತಮಾಷೆಗಾಗಿ ಶಿವನ ಎರಡೂ ಕಣ್ಣುಗಳನ್ನು ತನ್ನ ಕೈಯಿಂದ ಮುಚ್ಚಿದಳು. ಗಾಬರಿಗೊಂಡ ಶಿವನು, ದೇವಿ! ಇದೇನಿದು ಎಂದು ಕೇಳಿದಾಗ ಪಾರ್ವತಿ ತಮಾಷೆಯಿಂದ ಹ ಹ್ಹ ಹಾ! ಎಂದು ನಕ್ಕಳು.
ಶಿವನ ಎರಡು ಕಣ್ಣುಗಳು ಸೂರ್ಯ-ಚಂದ್ರರು. ಶಿವನ ಕಣ್ಣುಗಳನ್ನು ಮುಚ್ಚಿದ್ದರಿಂದ ಜಗತ್ತೆಲ್ಲ ಕತ್ತಲಿನಲ್ಲಿ ಮುಳುಗಿಹೋಯಿತು. ಸಮಸ್ತ ಲೋಕಗಳಲ್ಲಿನ ಜೀವಿಗಳೂ ಒಮ್ಮೆಲೆ ಏನೂ ಕಾಣದಂತೆ ತಬ್ಬಿಬ್ಬಾಗಿಬಿಟ್ಟವು. ದೇವತೆಗಳು, ಭಕ್ತರು ಭಗವಂತನಲ್ಲಿ ಮೊರೆಯಿಟ್ಟರು.
ಜಗತ್ತಿನ ಪರಿಸ್ಥಿತಿಯ ಅರಿವು ಬಂದ ಕೂಡಲೇ ದೇವಿಗೆ ಭಯವಾಯಿತು. ಶಿವನ ಕಣ್ಣುಗಳನ್ನು ಮುಚ್ಚಿದ್ದ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡುಬಿಟ್ಟಳು.
“ದೇವಿ, ನೋಡಿದೆಯಾ ನಿನ್ನ ತುಂಟಾಟದಿಂದ ಪ್ರಜೆಗಳು, ಜೀವಜಂತುಗಳು ಎಷ್ಟೊಂದು ತೊಂದರೆಗಳಿಗೆ ಈಡಾದರು. ಕೈಲಾಸದಲ್ಲಿನ ಒಂದು ಕ್ಷಣ, ಜಗತ್ತಿಗೆ ಯುಗ-ಯುಗಗಳಾಗುತ್ತವೆ ಎಂಬುದು ನಿನಗೆ ಗೊತ್ತಿಲ್ಲವೆ?” ಎಂದನು ಶಿವ.
“ಸ್ವಾಮಿ, ನನ್ನ ಹುಡುಗಾಟದಿಂದ ನನಗೆ ಪಶ್ಚಾತ್ತಾಪವಾಗಿದೆ. ಮಾಡಿದ ತಪ್ಪಿಗಾಗಿ ಪ್ರಾಯಶ್ಚಿತ್ತವೆಂದು ತಪಸ್ಸು ಮಾಡುತ್ತೇನೆ. ದಯವಿಟ್ಟು ಅನುಮತಿ ಕೊಡಿ” ಎಂದು ನುಡಿದಳು ಪಾರ್ವತಿ.
“ನೀನು ಜಗನ್ಮಾತೆ, ನಿನಗೆ ಯಾವ ಪಾಪದ ಸೋಂಕೂ ಉಂಟಾಗುವುದಿಲ್ಲ. ಆದ್ದರಿಂದ ತಪಸ್ಸು ಮಾಡುವ ಅವಶ್ಯಕತೆ ಇಲ್ಲ” ಎಂದು ಪಾರ್ವತಿಯನ್ನು ಶಿವ ಸಮಾಧಾನಪಡಿಸಲು ಪ್ರಯತ್ನಿಸಿದನು.
“ಆದರೂ ಇದು ಜಗತ್ತಿಗೊಂದು ಉದಾಹರಣೆಯಾಗುವುದು ಖಂಡಿತ. ಮುಂದಾಲೋಚನೆ ಇಲ್ಲದೆ ಮಾಡಿದ ಕೃತ್ಯಕ್ಕೆ ನಿಮ್ಮಿಂದ ಸ್ವಲ್ಪಕಾಲ ದೂರವಾಗಿ ಸ್ವತಃ ಶಿಕ್ಷೆ ಅನುಭವಿಸುತ್ತೇನೆ” ಎಂದು ದೃಢನಿರ್ಧಾರದಿಂದ ನುಡಿದ ಪಾರ್ವತೀದೇವಿಯು ಶಿವನ ಪಾದಗಳಿಗೆ ಎರಗಿ ಕಾಡಿ ಬೇಡಿ ತಪಸ್ಸು ಮಾಡಲು ಅನುಮತಿ ಪಡೆದಳು.
“ಮೊದಲು ನಾನು ಬದರಿಕಾಶ್ರಮಕ್ಕೆ ಹೋಗುತ್ತೇನೆ. ಅಲ್ಲಿ ಕಾತ್ಯಾಯನ ಋಷಿಗಳಿದ್ದಾರೆ. ನನ್ನನ್ನು ಮಗಳಾಗಿ ಪಡೆಯಬೇಕೆಂದು ದೀರ್ಘಕಾಲದಿಂದ ಅವರು ಕಠಿಣ ತಪಸ್ಸನ್ನು ಆಚರಿಸುತ್ತಿದ್ದಾರೆ. ಈಗ ಅವರ ಇಷ್ಟವನ್ನು ಪೂರೈಸುತ್ತೇನೆ” ಎಂದುಕೊಂಡ ಪಾರ್ವತೀದೇವಿಯು ಋಷಿಗಳ ಮುಂದೆ ಮಗುವಾಗಿ ಪ್ರತ್ಯಕ್ಷಳಾದಳು.
“ವಿಶ್ವಜನನಿ! ನೀನು ಶಿಶುವಿನಂತೆ ರೂಪತಾಳಿ ಬಂದಿರುವುದನ್ನು ಬಲ್ಲೆ. ಇದು ನಿನ್ನ ಅಪಾರವಾದ ಕರುಣೆಯನ್ನು ಸೂಚಿಸುತ್ತದೆ. ನಿನ್ನನ್ನು ಮಗಳಾಗಿ ಸ್ವೀಕರಿಸುತ್ತೇನೆ” ಎಂದ ಋಷಿಗಳು, ಮಗುವಿಗೆ ಕಾತ್ಯಾಯಿನಿ ಎಂದು ಹೆಸರಿಟ್ಟರು.
ಬಾಲ್ಯದಿಂದಲೂ ಕಾತ್ಯಾಯಿನಿ ದೈವಭಕ್ತೆಯಾಗಿಯೇ ಬೆಳೆದಳು. ಅವಳು ಈಗ ಯುವತಿಯಾಗಿದ್ದಾಳೆ. ಇದೇ ಸಮಯದಲ್ಲಿ ಕಾಶೀಪಟ್ಟಣದಲ್ಲಿ ಕ್ಷಾಮ ಉಂಟಾಗಿದೆಯೆಂಬ ಸುದ್ದಿ ತಿಳಿದುಬಂದಿತು.
ಕಾತ್ಯಾಯಿನಿ ದೇವಿಯು ತಂದೆಯೊಡನೆ “ಅಪ್ಪಾ, ನಾನು ಕಾಶಿಗೆ ಹೋಗಿ ಪ್ರಜೆಗಳ ಕಷ್ಟನಿವಾರಣೆ ಮಾಡಬೇಕೆಂದಿದ್ದೇನೆ. ದಯವಿಟ್ಟು ಅಪ್ಪಣೆ ನೀಡಿ” ಎಂದು ಕೇಳಿಕೊಂಡಳು.
“ಮಗಳೇ, ರಾಣಿಯ ಹಾಗೆ ಹೋಗು” ಎಂದು ತಂದೆ ಕಾತ್ಯಾಯನ ಋಷಿಗಳು ಮಗಳನ್ನು ಹರಸಿದರು.
ಬರಪೀಡಿತ ಕಾಶೀಪಟ್ಟಣವನ್ನು ತಲುಪಿದ ಕಾತ್ಯಾಯಿನಿಯು, ಅಲ್ಲಿ ತನ್ನ ದಿವ್ಯಶಕ್ತಿಯಿಂದ ಸುಂದರವಾದ ಅರಮನೆಯೊಂದನ್ನು ನಿರ್ಮಿಸಿದಳು. ಕೈಯಲ್ಲಿ ಅಕ್ಷಯಪಾತ್ರೆಯನ್ನು ಧರಿಸಿ, ಅನ್ನಪೂರ್ಣೆಯಾಗಿ ವಿರಾಜಿಸಿದಳು. ಆ ಪಾತ್ರೆಯಿಂದ ಎಷ್ಟೇ ಭೋಜನವನ್ನು ನೀಡಿದರೂ ಅದು ಬರಿದಾಗುತ್ತಿರಲಿಲ್ಲ.
“ಎಲ್ಲರೂ ಬನ್ನಿ, ಇನ್ನು ಮುಂದೆ ಹಸಿವಿನಿಂದ ಯಾರೊಬ್ಬರೂ ಕಂಗಾಲಾಗಬೇಕಾಗಿಲ್ಲ. ನಾನು ಅನ್ನಪೂರ್ಣೆ, ನಿಮ್ಮೆಲ್ಲರನ್ನೂ ಕರೆಯುತ್ತಿದ್ದೇನೆ. ಬನ್ನಿ, ಹೊಟ್ಟೆತುಂಬಾ ತೃಪ್ತಿಯಾಗಿ ಊಟ ಮಾಡಿ” ಎಂದು ಊರಿನ ಜನರನ್ನೆಲ್ಲಾ ಆಹ್ವಾನಿಸಿದಳು.
ಬಂದವರೆಲ್ಲ ಊಟ ಮಾಡಿ ತೃಪ್ತರಾಗಿ ಅನ್ನಪೂರ್ಣೆಯನ್ನು ಮನಸಾರೆ ಪ್ರಶಂಸಿಸುತ್ತಿದ್ದರು.
ಇತ್ತ ಬರದ ದೆಸೆಯಿಂದ ರಾಜನ ಉಗ್ರಾಣ ಬರಿದಾಗಿತ್ತು. ಆದರೆ ಅನ್ನಪೂರ್ಣೆಯು ತನ್ನ ಹತ್ತಿರ ಬಂದ ಎಲ್ಲರಿಗೂ ಪುಷ್ಕಳವಾದ ಭೋಜನವನ್ನು ನೀಡುತ್ತಿದ್ದಳು. ಎಷ್ಟೇ ಜನ ಬರಲಿ, ಎಲ್ಲರಿಗೂ ಊಟ ಸಿಗುತ್ತಿತ್ತು. ರಾಜನು ಇದು ಹೇಗೆ ಸಾಧ್ಯ ಎಂದು ತಿಳಿಯಬಯಸಿದನು. ಅನ್ನಪೂರ್ಣೆಯ ಬಳಿಗೆ ದೂತನೊಬ್ಬನನ್ನು ಕಳುಹಿಸಿದನು.
ರಾಜದೂತನು ದೇವಿಯ ಮುಂದೆ ನಿಂತು ಪ್ರಣಾಮವನ್ನು ಮಾಡಿ “ದೇವಿ, ಕಾಶೀರಾಜರು ನಿಮ್ಮಿಂದ ಅಕ್ಕಿಯನ್ನು ಸಾಲವಾಗಿ ಕೇಳುತ್ತಿದ್ದಾರೆ” ಎಂದು ನಿವೇದಿಸಿದನು.
ಅದಕ್ಕೆ ಅನ್ನಪೂರ್ಣೆಯು “ದೂತನೇ, ನಾನು ಇಲ್ಲಿ ಅಕ್ಕಿಯನ್ನು ಮಾರಾಟಕಿಟ್ಟಿಲ್ಲ. ಬಂದವರಿಗೆಲ್ಲ, ಉಚಿತವಾಗಿ, ತೃಪ್ತಿಯಾಗುವಷ್ಟು ಅನ್ನವನ್ನು ನೀಡುತ್ತಿದ್ದೇನೆ. ದಯವಿಟ್ಟು ನಿಮ್ಮ ರಾಜನಿಗೆ ಈ ವಿಷಯವನ್ನು ತಿಳಿಸು” ಎಂದು ನುಡಿದಳು.
ಈ ಮಾತುಗಳನ್ನು ಕೇಳಿದ ಕಾಶೀರಾಜನು “ನಾನು ಈ ನಾಡಿನ ರಾಜ. ನನಗೇ ಈ ರೀತಿ ಉತ್ತರವನ್ನು ಕೊಡುವ ಈ ಮಹಿಳೆ ಯಾರಿರಬಹುದು?” ಎಂದು ಆಲೋಚಿಸಿದನು.
ಮಂತ್ರಿಗಳೊಡನೆ ಸಮಾಲೋಚಿಸಿ, ಅವಳನ್ನು ಪರೀಕ್ಷಿಸಬೇಕೆಂದು ತೀರ್ಮಾನಿಸಿದ ರಾಜನು, ವೇಷಮರೆಸಿಕೊಂಡು ಅನ್ನಪೂರ್ಣೆಯ ಬಳಿಗೆ ಹೋಗಿ ಊಟಕ್ಕಾಗಿ ಕುಳಿತುಕೊಂಡನು. ಅನ್ನಪೂರ್ಣೆ ತನ್ನ ಕೈಯಿಂದಲೇ ವಿಧವಿಧವಾದ ಪಕ್ವಾನ್ನಗಳನ್ನು ಬಡಿಸಿದಳು.
ಏನಾಶ್ಚರ್ಯ! ಒಬ್ಬ ಸಾಮಾನ್ಯ ಮಹಿಳೆಯಿಂದ ಇದು ಸಾಧ್ಯವಿಲ್ಲ. ಇವಳು ದೇವಿಯೇ ಇರಬೇಕು. ದಿವ್ಯಶಕ್ತಿಯಿಂದ ಇವುಗಳನ್ನೆಲ್ಲಾ ಒದಗಿಸಿದ್ದಾಳೆ ಎಂದು ರಾಜನಿಗೆ ಗೋಚರಿಸತೊಡಗಿತು.
ಊಟವಾದ ನಂತರದಲ್ಲಿ ಅನ್ನಪೂರ್ಣಾದೇವಿಯು ವೇಷಮರೆಸಿಕೊಂಡಿದ್ದ ರಾಜನನ್ನು ಕುರಿತು “ರಾಜಾ, ನೀನೂ, ನಿನ್ನ ಮಂತ್ರಿಗಳೂ ತೃಪ್ತಿಯಾಗಿ ಊಟ ಮಾಡಿದಿರಾ?” ಎಂದು ಪ್ರಶ್ನಿಸಿದಳು.
“ತಾಯೀ, ದೇವಿ! ಕೃಪೆಯಿಟ್ಟು ನನ್ನ ಅರಮನೆಗೆ ದಯಮಾಡಿಸಬೇಕೆಂದು ಬೇಡಿಕೊಳ್ಳುತ್ತೇನೆ” ಎಂದು ಕಾಶೀರಾಜನು ಪ್ರಾರ್ಥಿಸಿದನು.
ದೇವಿಯು ತನ್ನ ನಿಜರೂಪವನ್ನು ತಾಳಿ, ರಾಜನನ್ನು ಹರಸುತ್ತಾ ನುಡಿದಳು, “ರಾಜನೇ! ನೀನು ಸತ್ಯಸಂಧ. ನನ್ನ ಕೃಪೆಯಿಂದ ಇಲ್ಲಿ ಮಳೆಯಾಗುವುದು. ಮುಂದೆ ಕ್ಷಾಮ ಡಾಮರಗಳಿರುವುದಿಲ್ಲ. ನಿನ್ನ ನಾಡು ಸಂಪದ್ಭರಿತವಾಗಿರುತ್ತದೆ. ನಾನು ಇಲ್ಲಿಯೇ ಶಾಶ್ವತವಾಗಿ ಇರಲಾಗುವುದಿಲ್ಲ. ನಾನು ತಪಸ್ಸಿಗಾಗಿ ಹಿಂತಿರುಗಬೇಕಾಗಿದೆ. ಈ ಜನ್ಮದಲ್ಲಿಯೇ ನೀನು ಮುಕ್ತಿಯನ್ನು ಪಡೆ” ಎಂದು ಆಶೀರ್ವದಿಸಿದಳು.
“ತಾಯೀ! ನೀನು ತಪಶ್ಚರ್ಯೆಗಾಗಿ ಕಾಶಿಯನ್ನು ಬಿಟ್ಟು ಹೋದರೂ, ಇಲ್ಲಿ ನಿನ್ನ ಶಾಶ್ವತ ನೆಲೆಯನ್ನು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದನು.
“ಅನ್ನಪೂರ್ಣೆಯು ರಾಜನ ಪ್ರಾರ್ಥನೆಯನ್ನು ಮನ್ನಿಸಿ, ಶಾಶ್ವತವಾಗಿ ಕಾಶಿಯಲ್ಲಿ ನೆಲೆಸುವೆ” ಎಂದು ಹೇಳಿ ಹರಸಿದಳು.
ಇಂದಿಗೂ ಕಾಶಿಯಲ್ಲಿ ಪ್ರಸಿದ್ಧವಾದ ಅನ್ನಪೂರ್ಣೆಯ ದೇವಾಲಯವಿದೆ. ಇಲ್ಲಿ ಬೇಡಿದವರ ಇಷ್ಟಾರ್ಥಗಳನ್ನು ಆ ತಾಯಿ ಕರುಣಿಸುತ್ತಿದ್ದಾಳೆ
ನಿರೂಪಣೆ: ಸ್ವಾಮಿ ಕಮಲಾತ್ಮನಂದರು, ಕೃಪೆ: ವಿವೇಕಪ್ರಭ.
Annapurne
ಕಾಮೆಂಟ್‌ಗಳು