ಯಶ್ ಪಾಲ್
ಯಶ್ ಪಾಲ್
ಯಶ್ ಪಾಲ್ ವಿಜ್ಞಾನಿ ಮಾತ್ರವಲ್ಲದೆ ಸಮಾಜಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಜ್ಞಾನದ ನಿಧಿ. ‘ಯಶ್ ಪಾಲ್ ಸಿಂಗ್' ಅವರು ಕಾಸ್ಮಿಕ್ ರೇಸ್ ಅಧ್ಯಯನ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು.
ಯಶ್ ಪಾಲ್ 1926ರ ನವೆಂಬರ್ 26ರಂದು ಈಗಿನ ಪಾಕಿಸ್ಥಾನದ ಭಾಗವಾಗಿರುವ ಝಾಂಗ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಯಶ್ ಪಾಲ್ ಸಿಂಗ್. ಆದರೆ, ಅವರೆಂದೂ ತಮ್ಮ ಹೆಸರಿನ ಮುಂದೆ ಸಿಂಗ್ ಎಂದು ಬರೆದುಕೊಳ್ಳಲಿಲ್ಲ. ಅದು ಅವರಿಗೆ ಇಷ್ಟವೂ ಇರಲಿಲ್ಲ.
ಪಾಲ್ ತಮ್ಮ ಬಾಲ್ಯ, ಶಾಲಾ ದಿನಗಳನ್ನು ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಕಳೆದರು. ಒಮ್ಮೆ ಬಾಲಕ ಯಶ್ ಹಾಗೂ ಅವರ ಸಹೋದರ ಭೂಕಂಪದ ಅವಶೇಷಗಳ ಅಡಿ ಸಿಲುಕಿ ಸಾವಿನ ದವಡೆಯಿಂದ ಪಾರಾಗಿದ್ದರು.
ಯಶ್ ಪಾಲರು ಪಾಕಿಸ್ತಾನದಲ್ಲಿ ಪದವಿ ಶಿಕ್ಷಣ ಪೂರೈಸಿದ ನಂತರ ದೇಶದ ವಿಭಜನೆ ವೇಳೆ ಉನ್ನತ ವ್ಯಾಸಂಗಕ್ಕೆ ಭಾರತಕ್ಕೆ ಬಂದರು. ಯಶ್ ಪಾಲ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದುಕೊಂಡರು. ವಿದ್ಯಾರ್ಥಿಯಾಗಿದ್ದಾಗಲೇ ದೇಶದ ಪ್ರತಿಷ್ಠಿತ ಮುಂಬೈ ಟಾಟಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡರು. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಕಾಸ್ಮಿಕ್ ರೇಸ್ ಬಗ್ಗೆ ಅಧ್ಯಯನ ನಡೆಸಿದರು.
ಇನ್ನೂ ಎಂ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಪಾಲ್ ಅವರಿಗೆ ನಿಯಮಾವಳಿ ಪ್ರಕಾರ ಪ್ರವೇಶ ನೀಡುವಂತಿರಲಿಲ್ಲ. ಆದರೆ, ಟಾಟಾ ಸಂಸ್ಥೆ ಪಾಲ್ ಅವರಿಗಾಗಿಯೇ ಮೊದಲ ಬಾರಿಗೆ ನಿಯಮಾವಳಿ ಸಡಿಲಿಸಿತ್ತು.
ಪಾಲ್ ಅವರ ಪಾಂಡಿತ್ಯಕ್ಕೆ ಮಾರುಹೋದ ಹಿರಿಯ ವಿಜ್ಞಾನಿ ಸತೀಶ್ ಧವನ್, ಅವರನ್ನು ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡಿದರು. ಧವನ್ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಅಹಮದಾಬಾದ್ನಲ್ಲಿ ಪ್ರತಿಷ್ಠಿತ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಿದ ಪಾಲ್ ಅವರು ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮುಂದೆ ಯಶ್ ಪಾಲ್ ಯೋಜನಾ ಆಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷ ಸ್ಥಾನದಂತಹ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ದಕ್ಷತೆಗೆ ಹೆಸರಾದರು.
ನಿವೃತ್ತಿಯ ನಂತರ ಸುಮ್ಮನೆ ಕೂರುವ ಜಾಯಮಾನ ಯಶ್ ಪಾಲ್ ಅವರದ್ದಾಗಿರಲಿಲ್ಲ. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕೆ ಇಳಿದರು. ದೂರದರ್ಶನದ ಮೂಲಕ ವಿಜ್ಞಾನವನ್ನು ಜನರ ಮನೆ ಮನೆಗೆ ತಲುಪಿಸಿದರು. ಕಿರುತೆರೆಯಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಪಾಲ್ಗೊಂಡು ಪರಿಚಿತರಾದರು. ತಮ್ಮ ಸಮಕಾಲೀನರು ನೆಮ್ಮದಿಯ ನಿವೃತ್ತಿಯ ಜೀವನ ಸಾಗಿಸುವಾಗ ಇಳಿ ವಯಸ್ಸಿನಲ್ಲೂ ಬೀದಿಗಿಳಿದ ಯಶ್ ಪಾಲ್ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕಾನೂನು ಸಮರ ಸಾರಿ ಜಯ ಸಾಧಿಸಿದರು. ಅವರ ಹೋರಾಟದ ಫಲವಾಗಿ ಛತ್ತೀಸಗಡದಲ್ಲಿಯ 112 ನಕಲಿ ವಿಶ್ವವಿದ್ಯಾಲಯಗಳು ಬಾಗಿಲು ಮುಚ್ಚಬೇಕಾಯಿತು.
ಯಶ್ ಪಾಲ್ ಅವರು ಡಾ. ಹೋಮಿ ಜಹಾಂಗೀರ್ ಭಾಭಾ, ಡಾ. ವಿಕ್ರಂ ಸಾರಾಭಾಯ್, ಸತೀಶ್ ಧವನ್ ಅವರಂತಹ ದಿಗ್ಗಜ ವಿಜ್ಞಾನಿಗಳ ತಲೆಮಾರಿನ ಕೊನೆಯ ಕೊಂಡಿಯಾಗಿದ್ದರು. ಅದೆಲ್ಲದಕ್ಕೂ ಹೆಚ್ಚಾಗಿ ಅವರು ವಿಜ್ಞಾನ ಯೋಗಿಯಂತಿದ್ದರು.
ಯಶ್ ಪಾಲ್ ಅವರಿಗೆ ಪದ್ಮಭೂಷಣ, ಪದ್ಮ ವಿಭೂಷಣ, ಮಾರ್ಕೊನಿ ಪ್ರಶಸ್ತಿ, ಕಳಿಂಗ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.
ಮಹಾನ್ ವಿಜ್ಞಾನಿಗಳಾಗಿದ್ದ ಯಶ್ ಪಾಲ್ 2017ರ ಜುಲೈ 24ರಂದು ನಿಧನರಾದರು.
On the birth anniversary of great scientist who brought science near common man Dr. Yash Pal
ಕಾಮೆಂಟ್ಗಳು