ಸುಧಾ ಸರನೋಬತ್
ಸುಧಾ ಸರನೋಬತ್
ಇಂದು ಹಿರಿಯ ಹಾಸ್ಯ ಬರಹಗಾರ್ತಿ ಹಾಗೂ ನಮ್ಮೆಲರ ಆತ್ಮೀಯರಾದ ಸುಧಾ ಸರನೋಬತ್ ಅವರ ಜನ್ಮದಿನ. ಜೊತೆಗೆ ಇದು ಅವರ ವಿವಾಹ ವಾರ್ಷಿಕೋತ್ಸವದ ದಿನ ಕೂಡ. ಇಡೀ ಸರನೋಬತ್ ದಂಪತಿಗಳ ಕುಟುಂಬವೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಂದ ತುಂಬಿ ತುಳುಕುತ್ತಿರುವಂತದ್ದು. ಸುಧಾ ಸರನೋಬತ್ - ಮಧುಕರ್ ಸರನೋಬತ್ ದಂಪತಿಗಳು ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಕಗಳ ಆರಾಧಕರು. ಅವರ ಮೂವರು ಪುತ್ರಿಯರಾದ ಅಂಜಲಿ, ಆರತಿ ಮತ್ತು ಅನುಪಮಾ ಅವರುಗಳೂ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಅಪ್ರತಿಮ ಪ್ರತಿಭಾವಂತರು.
ಸುಧಾ ಸರನೋಬತ್ ಮೂಲತಃ ವಿಜಾಪುರ ಜಿಲ್ಲೆಯವರು. ಕಳೆದ ಐದು ದಶಕಗಳಿಂದ ಹಾಸ್ಯ ಲೇಖನಗಳನ್ನು, ಲಘು ಪ್ರಬಂಧಗಳನ್ನು ಬರೆಯುತ್ತ ಬಂದಿದ್ದು, ಅವರ ಬರಹಗಳು ಜನಪ್ರಿಯ ವಾರಪತ್ರಿಕೆಗಳಾದ ಸುಧಾ, ಕರ್ಮವೀರ, ತರಂಗ ಸೇರಿದಂತೆ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರವಾಗಿ ಹರಿದುಬಂದಿದೆ. ಅಲ್ಲದೆ ‘ಚಿನ್ನದಂತ ಗಂಡ’, ‘ಅರ್ಧಾಂಗಿಯ ಅನರ್ಥ ಕೋಶ’ , ‘ಹೆಸರಿನಲ್ಲೇನಿದೆ ಮಹಾ’, ‘ಕೊರೊನಾ ಟೈಮ್ಸ್’ ಮಂತಾದ ಹಾಸ್ಯ ಸಂಕಲನಗಳು ಪ್ರಕಟಗೊಂಡಿವೆ.
ಸುಧಾ ಸರನೋಬತ್ ಅವರ ‘ಚಿನ್ನದಂತ ಗಂಡ’ ಹಾಸ್ಯ ಸಂಕಲನಕ್ಕೆ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, ಹಾಗೂ ಸಮಗ್ರ ಹಾಸ್ಯ ಸಾಹಿತ್ಯಕ್ಕೆ ಗೊರೂರು ಪ್ರಶಸ್ತಿ, ‘ಉದರಾಯಣ’ ಪ್ರಬಂಧಕ್ಕೆ ಮಹಾರಾಷ್ಟ್ರದ ಡೊಂಬಿವಲಿ ಕರ್ನಾಟಕ ಸಂಘದ ವತಿಯಿಂದ ಅತ್ಯುತ್ತಮ ಲಲಿತ ಪ್ರಬಂಧ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಸಾಹಿತ್ಯದ ಜೊತೆಗೆ ಸಂಗೀತ ಹಾಗೂ ಸಮಾಜಮುಖಿ ಕೆಲಸಗಳಲ್ಲಿಯೂ ಅವರು ತೊಡಗಿಕೊಂಡಿದ್ದಾರೆ.
ಸುಧಾ ಸರನೋಬತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ. ಜೊತೆಗೆ ಸುಧಾ ಸರನೋಬತ್ - ಮಧುಕರ್ ಸರನೋಬತ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಆತ್ಮೀಯ ಶುಭಹಾರೈಕೆಗಳು. ನಿಮ್ಮ ಮತ್ತು ನಿಮ್ಮ ಕುಟುಂಬದವರ ಬದುಕು ಸುಂದರವಾಗಿರಲಿ. ಬಹುಕಾಲ ನಿಮ್ಮ ಆಶೀರ್ವಾದ ನಮ್ಮೊಂದಿಗಿರಲಿ. ನಮಸ್ಕಾರ.
Happy birth day to Sudha Sarnobat and happy wedding anniversary to Sudha Sarnobat and Madhukar Sarnobat
ಕಾಮೆಂಟ್‌ಗಳು