ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಹುಲ್ ದ್ರಾವಿಡ್



 ರಾಹುಲ್ ದ್ರಾವಿಡ್ 


ಈ ವಾಣಿಜ್ಯ - ಗೊಂದಲಯುತ - ಸಂದಿಗ್ಧ ವಾತಾವರಣಗಳ ಲೋಕದಲ್ಲಿ 'ಸಂಭಾವಯುಕ್ತ ವ್ಯಕ್ತಿ' ಎಂಬುವರನ್ನು ಸುಲಭವಾಗಿ ಉದಾಹರಿಸಬೇಕು ಅಂದ್ರೆ ಏನೂ ಮಾಡಬೇಕಿಲ್ಲ - ರಾಹುಲ್ ದ್ರಾವಿಡ್ ಅಂದ್ರೆ ಸಾಕು!  ಹೆಚ್ಚಿಗೆ ವಿವರ ಬರೆಯಬೇಕಿಲ್ಲ.   

ಜನವರಿ 11, 1973 ರಾಹುಲ್ ದ್ರಾವಿಡ್ ಅವರು ಹುಟ್ಟಿದ ದಿನ.  ನಾನು ರಾಹುಲ್ ದ್ರಾವಿಡ್ ಅಭಿಮಾನಿ.  ರಾಹುಲ್ ದ್ರಾವಿಡ್ ಕ್ರಿಕೆಟ್ ಬಿಟ್ಟ ನಂತರ ನಾನೂ ಕ್ರಿಕೆಟ್ ನೋಡುವುದ ಬಹುತೇಕ ಬಿಟ್ಟಿದ್ದೆ.  ಅವರು ನಮ್ಮ ಕ್ರಿಕೆಟ್ ತಂಡದ ತರಬೇತುದಾರರಾದರು.  ಅವರಂತಹ ಮಹನೀಯರು ಮಾರ್ಗದರ್ಶಿಸುತ್ತಿರುವ ಕಾರಣ ನಮ್ಮ ತಂಡ ಗೆಲ್ಲಬೇಕು ಎಂಬ ಸದ್ಭಾವ ನನ್ನ ಹೃದಯ ತುಂಬಿತು. ಹಾಗಾಗಿ ಅವರ ಮಾರ್ಗದರ್ಶನದ ಕುರಿತಾಗಿ ಆಪ್ತವಾಗಿ ಓದತೊಡಗಿದೆ. ಅವರ ಮಾರ್ಗದರ್ಶಿತ್ವದ ಪಂದ್ಯಗಳ ಕುರಿತು ಅತ್ಯಂತ ಕಾಳಜಿ ಉಳ್ಳವನಾದೆ. ಇಂದೂ ಅವರ ಕುರಿತು ಎಲ್ಲೇ ಏನೇ ಸುದ್ದಿ ಕಂಡರೂ ಓದಿ ಮನತುಂಬಿಸಿಕೊಳ್ಳುವುದನ್ನು ಬಿಡುವುದಿಲ್ಲ.  ಅವರ ಬಗ್ಗೆ ಓದಲು ಸಿಗುವುದೆಲ್ಲ ಬರೀ ಪಾಸಿಟಿವ್.  ಅವರು ನನ್ನ ಆರಾಧ್ಯಭಾವ.  ಕ್ರಿಕೆಟ್ ಎಂಬ ವಿಶ್ವವನ್ನೂ ಮೀರಿದ ಅನಿಕೇತನ ಆತನ ಚೈತನ್ಯ. 

ಇಂದು ರಾಹುಲ್ ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಸುಮಾರು 13 ವರ್ಷವೇ ಕಳೆದಿದೆ.  ದ್ರಾವಿಡ್ ತಮ್ಮನ್ನು ಎಂದೂ ಪ್ರದರ್ಶನಕ್ಕಿಟ್ಟುಕೊಳ್ಳದವರು.  ಅವರು ಆಡುತ್ತಿದ್ದ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ ಒಂದು ಮಹತ್ವದ ತಂಡವಾಗಿ ರೂಪುಗೊಳ್ಳಲು ಅವರು ಒಂದು ಮಹತ್ವದ ಪಾತ್ರಧಾರಿಯಾಗಿದ್ದರೂ ಪ್ರಚಾರ ಪಡೆಯುತ್ತಿದ್ದವರು ಮತ್ತ್ಯಾರೋ ಎನ್ನುವಂತ ಮೂಖಮರ್ಮರ ಅವರ ಅಭಿಮಾನಿಗಳಾದ ನಮ್ಮಂತಹವರಲ್ಲಿ ಆಗಾಗ ಮೂಡಿಬರುತ್ತಿತ್ತು. ರಾಹುಲ್ ದ್ರಾವಿಡ್ ಎಂಬ ಮಹಾನ್ ವ್ಯಕ್ತಿ ಕ್ರಿಕೆಟ್ ಆಡಿದರು ಎಂಬುದು ಆ ಆಟಕ್ಕೇ ಒಂದು ಗೌರವ ಎಂಬುದು ಅವರ ಅಭಿಮಾನಿಗಳೆಲ್ಲರ ಅಂತರಾಳದ ಹೃದ್ಭಾವ.  

ಕ್ರಿಕೆಟ್ ಲೋಕದಲ್ಲಿ ಶಿಸ್ತು ಎಂಬ ಪದಕ್ಕೆ ರಾಹುಲ್ ದ್ರಾವಿಡ್ ಮತ್ತೊಂದು ಹೆಸರು.  1991-93ರ ವರ್ಷಗಳಲ್ಲಿ   ದ್ರಾವಿಡ್ ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರ ಆಡಲು ಆರಂಭಿಸಿದ್ದರು.  ಕೆ.ಎಸ್.ಸಿ.ಎ ಕ್ರೀಡಾಂಗಣದ ಎದುರಿದ್ದ ಚರ್ಚಿನ ಹಿಂಬಾಗದಲ್ಲಿ ಲ್ಯಾವೆಲ್ಲಿ ರಸ್ತೆಯಲ್ಲಿದ್ದ ನಮ್ಮ ಕಚೇರಿಯ ಆಸುಪಾಸಿನಲ್ಲಿ  ತಮ್ಮ ಕಾರನ್ನು ನಿಲ್ಲಿಸಿ ತಮ್ಮ ಕ್ರಿಕೆಟ್ ಕಿಟ್ ಹೊತ್ತು ನಡೆಯುತ್ತಿದ್ದ ಬಾಲಕ ದ್ರಾವಿಡ್ ಅವರನ್ನು ಆಗಾಗ ಕಾಣುವುದು ಸಾಮಾನ್ಯವಾಗಿತ್ತು.  ಹಲವು ಬಾರಿ ನಾವು ಗೆಳೆಯರು ಅವರಿಗೆ ಹಲ್ಲೋ ದ್ರಾವಿಡ್ ಹೇಳುತ್ತಿದ್ದೆವು.  ಒಂದು ರೀತಿಯ ಪ್ರಸನ್ನತೆಯ ಸ್ಪಂದನೆ ಪುಟ್ಟ ಹುಡುಗರಾದ ಅವರಿಂದ ನಮಗೆ ದೊರಕುತ್ತಿತ್ತು.   ಸಾಮಾನ್ಯವಾಗಿ ಕ್ರಿಕೆಟ್ ಹುಡುಗರೆಲ್ಲ ದಂಡು ದಂಡಾಗಿ ಬರುವುದುಂಟು.  ಆದರೆ ರಾಹುಲ್ ಮಾತ್ರ ಬಹಳಷ್ಟು ವೇಳೆ ಏಕಾಂಗಿ.  ಬಹುಶಃ ಆಗಿನ ದಿನದಲ್ಲೂ ಎಲ್ಲರೂ ಮನೆಗೆ ಹೊರಟ ಮೇಲೆ  ಇನ್ನೂ ಅಭ್ಯಾಸ ಮಾಡುತ್ತಿದ್ದರು ಎನಿಸುತ್ತದೆ.  ಅವರ ಕ್ರೀಡಾ ಅವಧಿಯ ಕಡೆಯ ದಿನಗಳಲ್ಲಿ ಸಹಾ ಅವರು ಎಲ್ಲರೂ ಅಭ್ಯಾಸಕ್ಕೆ ಬರುವ ಮುಂಚಿತವಾಗಿ ಬಂದು ಎಲ್ಲರೂ ಹೋದ ಮೇಲೆ ಸಹಾ ಸಾಕಷ್ಟು ಅಭ್ಯಾಸ ನಡೆಸುವ ಶ್ರದ್ಧೆಯುಳ್ಳವರು ಎಂಬುದನ್ನು ಆಗಾಗ ನಾವೆಲ್ಲಾ ಓದಿದ್ದೇವೆ.  ಅಂದಿನ ದಿನಗಳಲ್ಲಿ ನಾವು ಕಾಣುತ್ತಿದ್ದ ಸುಂದರವಾದ ದ್ರಾವಿಡ್ ಎಳೆಮೊಗದ ಕಳೆ ಈಗಲೂ ಮರೆಯುವಂತದಲ್ಲ.  ಅದೇನೋ ಆ ಮೊಗದಲ್ಲಿ ವಿಶಿಷ್ಟ ಸೊಬಗು.  ತಾನು ಬಯಸಿದ್ದನ್ನು ಸಾಧಿಸಿಯೇ ತೀರುವ ವಿರಳ ವ್ಯಕ್ತಿಗಳಲ್ಲಿ ಕಾಣುವ ಅಪೂರ್ವ ತೇಜಸ್ಸು ಆ ಕಣ್ಣುಗಳಲ್ಲಿ.  ಇನ್ನೊಂದು ರೀತಿಯಲ್ಲಿ ನೋಡಿದರೆ, ನಾವು ನಮಗೆ ಗೊತ್ತಿರುವ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾದರೆ  ಓಹೋ ಆತ ಇಂತಹ ಕಾರಣದಿಂದಲೇ  ಯಶಸ್ವಿ ಆದರು ಎಂಬ ಚೌಕಟ್ಟಿನಲ್ಲಿ ಅವರನ್ನು ಸಿಲುಕಿಸಿ ನೋಡತೊಡಗುತ್ತೇವೆ.  ರಾಹುಲ್ ದ್ರಾವಿಡ್ ಎಲ್ಲ ಎಲ್ಲೆಗಳನ್ನೂ ಮೀರಿದ ಒಬ್ಬ ಕಲಾಪೂರ್ಣ ಆಟಗಾರ.

ದಿಲೀಪ್ ಪ್ರೇಮಚಂದ್ರನ್ ಎಂಬ ಕ್ರಿಕೆಟ್ ವ್ಯಾಖ್ಯಾನಗರರು “ಬಹುಶಃ ರಾಹುಲ್ ದ್ರಾವಿಡ್ ಕೊನೆಯ ಪೀಳಿಗೆಯ ಕಲಾತ್ಮಕ ಆಟಗಾರರಲ್ಲೊಬ್ಬರು” ಎಂಬ ಅಭಿಪ್ರಾಯವನ್ನು ಅವರ ನಿವೃತ್ತಿಯ ದಿನಗಳಲ್ಲಿ   ಬರೆದಿದ್ದರು.  ರಾಹುಲ್ ದ್ರಾವಿಡ್ ಅವರು ಮೊದಲು ಒಂದು ದಿನಗಳ ಪಂದ್ಯಗಳಿಗೆ ಬಂದು ಏರುಪೇರಿನ ಫಲಿತಗಳನ್ನು ಕಂಡು ನಂತರದಲ್ಲಿ ಟೆಸ್ಟ್ ರಂಗಕ್ಕೆ ಕಾಲಿರಿಸಿದವರು.  ಕೆ. ಕೆ. ತಾರಾಪುರ್ ಅವರು ಕಲಿಸಿದ ಶಾಸ್ತ್ರೀಯ ಮಾದರಿಯ, ವ್ಯವಸ್ಥಾತ್ಮಕವಾದ, ಬಲಾಢ್ಯ ತಾಂತ್ರಿಕತೆಯ ಮೋಹಕ ಶೈಲಿಯ  ಬ್ಯಾಟಿಂಗ್ ಅವರದು.  ಏಕತಾನತೆಯ, ಏಕಮುಖದ ಬ್ಯಾಟಿಂಗ್ ಶೈಲಿ ಎಂದು ಕೆಲವರು ಹೇಳಬಹುದಾದರೂ, ಅವಶ್ಯವಿದ್ದಲ್ಲಿ ಆಟದ ಗತಿಯನ್ನು ಬದಲಾಯಿಸುವ ನಿಪುಣತೆ ಕೂಡ ಅವರಲ್ಲಿದ್ದದ್ದು ಸರ್ವವೇದ್ಯ.

ಅವರು ಎಂತಹ ಪ್ರಾಜ್ಞ ಎಂಬುದಕ್ಕೆ ದ್ರಾವಿಡ್ ಡಾನ್ ಬ್ರಾಡ್ಮನ್ ಅವರ ಸ್ಮರಣಾರ್ಥ ಆಸ್ಟ್ರೇಲಿಯಾದಲ್ಲಿ ನೀಡಿದ ಉಪನ್ಯಾಸವೇ ಸಾಕ್ಷಿ.  ಹಾಗೆ ಉಪನ್ಯಾಸ ನೀಡಿದ ಪ್ರಪ್ರಥಮ ಆಸ್ಟ್ರೇಲಿಯನ್ನೇತರ ಮಹನೀಯರವರು.

ಒಮ್ಮೆ ಅವರು ಸೌತ್ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇನ್ನೂರನೇ ಕ್ಯಾಚ್ ಹಿಡಿಯುವ ವಿಡಿಯೋ ನೋಡುತ್ತಿದ್ದೆ.  ವಿಕೆಟ್ ಕೀಪರ್ ಧೋನಿಯವರ ಹಿಂದಿನಿಂದ ಬಂದ ಆ ಚೆಂಡನ್ನು ಅವರು ಕೆಳಕ್ಕೆ ಬಿದ್ದು ಹಿಡಿದ ರೀತಿ ನೋಡಿದಾಗ ಈ ವ್ಯಕ್ತಿ ಅದೆಂತಹ ಅಪರಿಮಿತ  ಕ್ರಿಕೆಟ್ ಇಚ್ಛಾವಂತ ಎಂಬ ಅಚ್ಚರಿ ಹುಟ್ಟಿತು.  ಈ ತೆಂಡುಲ್ಕರ್, ದ್ರಾವಿಡ್, ಕುಂಬ್ಳೆ, ಗಾವಸ್ಕರ್, ಕಪಿಲ್ ದೇವ್, ವಿ ವಿ ಎಸ್ ಲಕ್ಷ್ಮಣ್ ಅಂತಹ ಆಟಗಾರರಲ್ಲಿ ಅಡಗಿರುವ ಸುದೀರ್ಘ ಅವಧಿಯ ಕ್ರಿಕೆಟ್ ಹಸಿವು ನಮ್ಮ ಭಾರತೀಯ ಕ್ರಿಕೆಟ್ ರಂಗದ ಹಿಂದಿನ ವರ್ಷಗಳ ಯಶಸ್ಸಿನ ನಿಜವಾದ ಸಾರ್ಥಕತೆಯ ಗುಟ್ಟು ಎನಿಸುತ್ತದೆ.  ಎಷ್ಟು ಎಷ್ಟು ಆಟಗಾರರ ದಂಡೇ ಬರಬಹುದು.  ಆದರೆ ಇಂತಹ ಆಟಗಾರರು ಒಬ್ಬೊಬ್ಬರೂ ಒಂದೊಂದು ವಿಶ್ವವಿದ್ಯಾಲಯದಂತೆ ಈ ಕ್ರಿಕೆಟ್ ಲೋಕವನ್ನು ಅನನ್ಯವಾಗಿ ಬೆಳಗಿದ್ದಾರೆ.  ಕೆಲ ವರ್ಷದ ಹಿಂದಿನ  ಸೌತ್ ಆಫ್ರಿಕಾ ಟೆಸ್ಟ್ ಸರಣಿಯ ಸಂದರ್ಭದಲ್ಲಿ ನಮ್ಮ ಇಂದಿನ ಯುವ ಪೀಳಿಗೆ ಸ್ಲಿಪ್ ವಿಭಾಗದಲ್ಲಿ ಬಿಟ್ಟ ಕೆಲವು ಕ್ಯಾಚುಗಳ ಸಂದರ್ಭದಲ್ಲಿ ದೋಣಿ ಹೇಳುತ್ತಿದ್ದರು, “ನಾವು ದ್ರಾವಿಡ್, ಲಕ್ಷ್ಮಣ್ ಅಂತಹ ಸ್ಲಿಪ್ ಕ್ಷೇತ್ರರಕ್ಷಕರನ್ನು  ಸೃಷ್ಟಿಸುವುದು ಅಷ್ಟು ಸುಲಭವಲ್ಲ!”

ಒಂದು ಪ್ರಖ್ಯಾತ ಉದ್ಘೋಷವೊಂದು ನೆನಪಿಗೆ ಬರುತ್ತಿದೆ.  ಒಬ್ಬ ವ್ಯಕ್ತಿ ಹೇಗೆ ಗೆಲ್ಲುತ್ತಾನೆಂಬುದು ಆತನ ಬಗ್ಗೆ ಎಲ್ಲವನ್ನೂ ಹೇಳುವುದಿಲ್ಲವಂತೆ.  ಆತ ಹೇಗೆ ಸೋಲನ್ನೂ ಸ್ವೀಕರಿಸುತ್ತಾನೆ ಎಂಬುದು ಬಹಳಷ್ಟು ಹೇಳುತ್ತದಂತೆ.   ರಾಹುಲ್ ದ್ರಾವಿಡ್ ಅವರು ನಿವೃತ್ತರಾಗುವುದಕ್ಕೆ ಒಂದು ವರ್ಷ ಮುಂಚೆ  ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಲ್ಲಿ ತಮ್ಮ ಬ್ಯಾಟಿಂಗ್ ಮೊನಚು ಕಳೆದಕೊಂಡ ಸೂಚನೆ ಕಾಣಿಸಿತು.  ಅವರು ನೇರ ಹೋಗಿದ್ದುದು ರಣಜಿ ತಂಡದಲ್ಲಿ ಆಡಲಿಕ್ಕೆ.  ಅಲ್ಲಿ ತಾನು ಇನ್ನೂ ಆಡಬಲ್ಲೆ ಎಂದು ಕಂಡುಕೊಂಡು ಮುಂದಿನ ಸರಣಿಗಳಲ್ಲಿ ಪುನಃ ತಮ್ಮ ಯಶಸ್ಸಿನ ಪಥಕ್ಕೆ ಹಿಂದಿರುಗಿದರು.  ಬದುಕಲ್ಲಿ ತಮ್ಮ ಸೋಲನ್ನು ಗಂಭೀರವಾಗಿ ವಿಮರ್ಶಿಸಿಕೊಂಡು ತಮ್ಮನ್ನು ಆಗಾಗ ಪುನಃ ಕಂಡುಕೊಳ್ಳುವ ಅಪೂರ್ವ ಬದುಕಿನ ಪಾಠಗಳು ರಾಹುಲ್ ದ್ರಾವಿಡ್ ಅವರ ಕ್ರೀಡಾಜೀವನದ ಅಧ್ಯಾಯಗಳಲ್ಲಿವೆ.

ಕೆಲವು  ವರ್ಷಗಳ ಹಿಂದೆ ಭಾರತ ತಂಡ ಟೆಸ್ಟ್ ಕ್ರಿಕೆಟ್ಟಿನಲ್ಲಿ ಮೊದಲಬಾರಿಗೆ ಮೊದಲ ಸ್ಥಾನದಲ್ಲಿ ವಿರಾಜಮಾನವಾದ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್ ಪಾತ್ರ ಅತ್ಯಂತ ಪ್ರಮುಖದ್ದಾಗಿದೆ.  ಭಾರತ ಗೆದ್ದ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ ಅವರ ಸರಾಸರಿ ರನ್ನುಗಳ ಸಂಖ್ಯೆ ಮಿಕ್ಕೆಲ್ಲರಿಗಿಂತ ಹಿರಿದಾದ 65ನ್ನು ಮೀರಿದ್ದು.  ನಂತರದ ಸ್ಥಾನ ಮತ್ತೊಬ್ಬ ಮನೋಜ್ಞ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಅವರ ಸರಾಸರಿ 61.  ವಿವಿದ ಹದಿನೆಂಟು ಆಟಗಾರರೊಡನೆ ರಾಹುಲ್ ದ್ರಾವಿಡ್ 85 ಭಾರೀ ಶತಕದ ಜೊತೆ ಆಟ ಆಡಿರುವುದು ವಿಶ್ವದಾಖಲೆ.   ಭಾರತ ತನ್ನ ತಾಯ್ನಾಡಿನಲ್ಲಿ ಹುಲಿ, ಹೊರಗಡೆ ಇಲಿ ಎಂಬುದನ್ನು ಹೆಚ್ಚಿನ ರೀತಿಯಲ್ಲಿ ಸುಳ್ಳು ಮಾಡಿದವರು ರಾಹುಲ್ ದ್ರಾವಿಡ್.  ರಾಹುಲ್ ದ್ರಾವಿಡ್ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಶೇಖಡಾ 50 ಸರಾಸರಿ ರನ್ನುಗಳನ್ನು ಮಾಡಿದ್ದರೆ ವಿದೇಶದಲ್ಲಿನ ಅವರ ಸರಾಸರಿ ರನ್ನುಗಳು 55ನ್ನು ಮೀರಿದೆ.  

ರಾಹುಲ್ ದ್ರಾವಿಡ್ ಅವರ ಮತ್ತೊಂದು ಹೆಗ್ಗಳಿಕೆ ಎಂದರೆ ಅವರು ತಮ್ಮ ಮಿತಿಗಳನ್ನು ಅರ್ಥೈಸಿರುವ ರೀತಿ.  ತಾವು ಅಥ್ಲೆಟ್ ಅಂತೆ ಕ್ಷಿಪ್ರರಲ್ಲವೆಂದು ಚೆನ್ನಾಗಿ ಅರ್ಥೈಸಿದ ರಾಹುಲ್ ದ್ರಾವಿಡ್ ಅದಕ್ಕೆ ಪರ್ಯಾಯವಾಗಿ ತಮ್ಮ ಯಶಸ್ಸನ್ನು  ಕಠಿಣ ಪರಿಶ್ರಮ ಮತ್ತು ಯೋಗಾತ್ಮಕ ಎನ್ನಬಹುದಾದಂತ ಏಕಾಗ್ರತೆಯ ಮೂಲಕ ಸಾಧಿಸಿದರು.  2003ರಲ್ಲಿ ಅಡಿಲೈಡ್ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಪ್ರಥಮ ಬಾರಿಗೆ ಜಯಗಳಿಸಿದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಎರಡೂ ಇನ್ನಿಂಗ್ಸ್ ಗಳಲ್ಲಿ ಸೇರಿದಂತೆ ಒಟ್ಟು 835 ನಿಮಿಷಗಳ ಬ್ಯಾಟಿಂಗ್ ಮಾಡಿದ್ದರು.  ಅದಾದ ಕೆಲವು ತಿಂಗಳುಗಳ ನಂತರದಲ್ಲಿ ಪಾಕಿಸ್ಥಾನದಲ್ಲಿ ಗಳಿಸಿದ ಪ್ರಥಮ ಸರಣಿ ವಿಜಯದ ಸಂದರ್ಭದಲ್ಲಿ ಅವರು ತಾವು ಮಾಡಿದ  270 ರನ್ನುಗಳಿಗಾಗಿ ಅವರು ಬ್ಯಾಟು ಮಾಡಿದ ಸಮಯ 12 ಗಂಟೆಗಳ ಅವಧಿಯದ್ದು.

ಮೊದಮೊದಲು ಒಂದು ದಿನದ ಪಂದ್ಯಗಳಲ್ಲಿ ಈತನೊಬ್ಬ ಹೊರೆ ಎಂದು ಭಾವಿಸಲ್ಪಟ್ಟ ರಾಹುಲ್ ದ್ರಾವಿಡ್, ವರುಷಗಳು ಉರುಳಿದಂತೆ ತಮ್ಮ ಆಟದಲ್ಲಿ ಹೊಸತನ ತಂದು ಮಧ್ಯಮ ಆಯಾಮದಲ್ಲಿ ಉತ್ತಮ ಪ್ರಗತಿದಾಯಕರೆಂದು ಪರಿಗಣಿತರಾದರು.  2008ರ ವೇಳೆಗೆ ಅವರನ್ನು ಬದಿಗಿರಿಸುವ ವೇಳೆಗಾಗಲೇ ಅವರು ಹತ್ತು ಸಾವಿರಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿಯಾಗಿತ್ತು.  1999ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ನುಗಳನ್ನು ಪೇರಿಸಿದವರೂ ಅವರೆ.  2003ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪುವಲ್ಲಿ  ವಿಕೆಟ್ ಕೀಪಿಂಗ್ ಮಾಡುವುದರ ಮೂಲಕ ತಂಡಕ್ಕೆ ಹೆಚ್ಚಿನ ಬ್ಯಾಟಿಂಗ್ ಶಕ್ತಿ ತೊಡಿಸಿದ ರಾಹುಲ್ ದ್ರಾವಿಡ್ ಅವರ ಕೊಡುಗೆಯನ್ನು ಮರೆಯುವಂತೆಯೇ ಇಲ್ಲ.  ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸತತ ಹದಿನೆಂಟು ಬಾರಿ ಬೆನ್ನಟ್ಟುವ ಆಟದ ವಿಶ್ವದಾಖಲೆಯ ವಿಜಯ ಸಾಧಿಸಿದ ಕೀರ್ತಿ ರಾಹುಲ್ ದ್ರಾವಿಡ್ ನಾಯಕತ್ವಕ್ಕೆ ಸಲ್ಲುತ್ತದೆ.  ಆ ಸಮಯದಲ್ಲಿ ಅವರು ನಡೆಸಿದ ಬ್ಯಾಟಿಂಗ್ ವೈವಿಧ್ಯ ಕೂಡಾ ಅಪಾರ ಮಹತ್ವದ್ದು.  

ಇಷ್ಟಾದರೂ ರಾಹುಲ್ ದ್ರಾವಿಡ್ ಅವರು ಟೆಸ್ಟ್ ಪಂದ್ಯಗಳಲ್ಲಿನ ಕೊಡುಗೆಗಳಿಗಾಗಿಯೇ ಹೆಚ್ಚು ಸ್ಮರಣೀಯರು.  ಲಾರ್ಡ್ಸ್ ಮೈದಾನದಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಮಹತ್ವದ ನವಯುವ ಆಟಗಾರರಾಗಿ ಮೂಡಿಬಂದರು. ಮುಂದೆ ಈ ಶಕ್ತಿ  ವಾಂಡರರ್ಸ್ ಪಂದ್ಯದಲ್ಲಿ ಮತ್ತಷ್ಟು ಪ್ರಜ್ವಲಿಸಿತು.  ವಿಶ್ವ ಪ್ರಸಿದ್ಧ ಬ್ಯಾಟುಗಾರರನ್ನೆಲ್ಲ ನುಚ್ಚು ನೂರು ಮಾಡುವ ದಕ್ಷಿಣ ಆಫ್ರಿಕಾದ  ಬೌಲರುಗಳನ್ನೂ ದ್ರಾವಿಡ್ ಅವರ ಶಕ್ತಿ ವಾಂಡರರ್ಸ್ ಟೆಸ್ಟ್ ಪಂದ್ಯದಲ್ಲಿ ಪ್ರಪ್ರಥಮ ಬಾರಿಗೆ ಮಣಿಸಿತು.  ಕಲ್ಕತ್ತೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿ ಎರಡನೆ ಇನ್ನಿಂಗ್ಸ್ನಲ್ಲಿ ಹಲವು ವಿಕೆಟ್ ಕಳೆದುಕೊಂಡಿದ್ದ ಗಂಭೀರ ಸಂದರ್ಭದಲ್ಲಿ ವಿ.ವಿ. ಎಸ್. ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಆಡಿದ ರೀತಿ ಕ್ರಿಕೆಟ್ ಇತಿಹಾಸದಲ್ಲಿ ಅಂದಿನ ಪ್ರಬಲ ಆಸ್ಟ್ರೇಲಿಯಾಕ್ಕೆ ಭಾರತವನ್ನು ಒಂದು ಹೊಸ ಪೈಪೋಟಿದಾರನನನ್ನಾಗಿ  ಸಮರ್ಥವಾಗಿ ಬಿಂಬಿಸಿತು.  ಅದು ಭಾರತದ ಕ್ರಿಕೆಟ್ ಐತಿಹ್ಯಕ್ಕೆ ಮಹತ್ವದ ತಿರುವು.  ವಿ.ವಿ.ಎಸ್ ಲಕ್ಷಣ್ ಮನೋಜ್ಞವಾಗಿ ಆಡಿದ ಆ ಸಂದರ್ಭದಲ್ಲಿ,ರಾಹುಲ್ ದ್ರಾವಿಡ್ ಅವರ ಜೊತೆ ಪೈಪೋಟಿಯ ಆಟಕ್ಕಿಳಿಯದೆ ಅದಕ್ಕೆ ಬೆಂಬಲವಾಗಿ ಆಡಿದ ರೀತಿ ಅವರ ಮೌಲ್ಯವನ್ನು ಅವರು ಗಳಿಸಿದ ರನ್ನುಗಳಿಗೂ ಮೀರಿಸುತ್ತದೆ.  ಮುಂದಿನ ಕೆಲವು ವರ್ಷಗಳು  ಒಂದು ಸುವರ್ಣ ಯುಗ.  ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡು ಸರಣಿಗಳಲ್ಲಿ ಈ ಮಹಾನ್ ಬ್ಯಾಟುದಾರನಿಗೆ ತಲಾ 600ಕ್ಕೂ  ಹೆಚ್ಚು ರನ್ನು ನೀಡಬೇಕಾಯಿತು.   ಗಂಗೂಲಿ ನಾಯಕತ್ವದ ಯಶಸ್ಸಿನ ಚರಿತ್ರೆಯ ಬಹುಭಾಗ ರಾಹುಲ್ ದ್ರಾವಿಡ್ ಅವರ ಬ್ಯಾಟಿನಿಂದ ಬರೆಯಲ್ಪಟ್ಟಿತು.  ಗಂಗೂಲಿ ಅವರನ್ನು ಹೊರಗಿಟ್ಟ ಎರಡು ವರ್ಷಗಳಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪ್ರಧಾನ ಎಂದು ಹೇಳಲಾಗದಿದ್ದರೂ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಜ್ ಸರಣಿ ವಿಜಯಗಳು ಭಾರತದ ಸಂಗ್ರಹಕ್ಕೆ ಮಹತ್ವದ ಸೇರ್ಪಡೆಗಳಾದವು.

ಮುಂದೆ ಅವರು ನಾಯಕತ್ವ ಬಿಟ್ಟರೂ  ಅವರ ಬ್ಯಾಟಿಂಗ್ ಮೊನಚು ಅಡಗಿದ ಪರಿಸ್ಥಿತಿ ನಿರ್ಮಾಣವಾಯಿತು.  ಇನ್ನೇನು ನಿವೃತ್ತಿ ಅನಿವಾರ್ಯ ಎಂದು ಜನ ಹೇಳುತ್ತಿರುವ ವೇಳೆಗೆ ಶ್ರೀಲಂಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸರಣಿಗಳಲ್ಲಿ ಪುನಃ ಮತ್ತೊಮ್ಮೆ ಯಶಸ್ವಿಯಾಗಿ ಮೂಡಿಬಂದು ತಾವೆಷ್ಟು ಅಮೂಲ್ಯ ಎಂದು ತಮ್ಮ ಬ್ಯಾಟಿಂಗ್ ಮೂಲಕ ಸಾರಿ ಹೇಳಿದರು.   ಇವೆಲ್ಲಕ್ಕೂ ಮಿಗಿಲಾಗಿ 2010ರ ವರ್ಷ ಯಾವುದೇ ಆಟಗಾರನೂ ಗಳಿಸಲಾಗದಷ್ಟು ಅವರು ಪೇರಿಸಿದ  ರನ್ನುಗಳ ಸಂಖ್ಯೆಯೇ ಸುಮಾರು ಸಾವಿರದ ಇನ್ನೂರರಷ್ಟು.   ತಮ್ಮ ಕ್ರಿಕೆಟ್ ಆಟದ ಕೊನೆಯ ಅಧ್ಯಾಯವಾದ ಐಪಿಎಲ್ ನಲ್ಲಿ ಅವರು ತಮ್ಮ ರಾಜಾಸ್ಥಾನದ ಅತ್ಯಂತ ಸಾಧಾರಣ ತಂಡವನ್ನು, ಹಲವಾರು ವಿವಾಧಗಳ ನಡುವೆಯೂ ಶ್ರೇಷ್ಠವಾಗಿ ನಡೆಸಿದ ರೀತಿಯೂ ಅತ್ಯಂತ ಮನನಾರ್ಹವಾದದ್ದು.  ಕಳೆದ ಹಲವು ವರ್ಷಗಳಲ್ಲಿ ಭಾರತೀಯ ಕಿರಿಯರ ತಂಡದ ತರಬೇತುದಾರರಾಗಿ ಅವರು ಹೊಸ ಹೊಸ ಆಟಗಾರರ ಮೂಲಕ ಸಾಧಿಸಿದ ಯಶಸ್ಸು, ಅದಕ್ಕೂ ಮಿಗಿಲಾಗಿ ಅವರು ಹೊಸ ಹೊಸ ಆಟಗಾರರನ್ನು ಸೃಷ್ಟಿಸಿದ ರೀತಿ  ವಿಶ್ವದೆಲ್ಲೆಡೆಯಿಂದ  ಪ್ರಶಂಸೆ ಪಡೆಯಿತು.  ಮುಂದೆ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅವರ ಮಾರ್ಗದರ್ಶನದ ಲಾಭ ಪಡೆದು ದೇಶದಲ್ಲಿ ಮೂಡಿರುವ ಪ್ರತಿಭೆಗಳು ಅಸಂಖ್ಯಾತ. ಕೇವಲ   ಭಾರತೀಯ ಆಟಗಾರರು ಮಾತ್ರವಲ್ಲದೆ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ ಹೀಗೆ ಪ್ರತೀ ಕ್ರಿಕೆಟ್ ಪ್ರಧಾನ ದೇಶಗಳ ಆಟಗಾರರೆಲ್ಲಾ  ತಾವು ದ್ರಾವಿಡ್ ಅವರಲ್ಲಿ ತಮ್ಮ ಆಟದ ಬಗ್ಗೆ ಚರ್ಚಿಸಿ ಅವರು ನೀಡಿದ ಸಲಹೆಯಿಂದ  ತಮ್ಮ ಆಟದಲ್ಲಿದ್ದ ಕೊರತೆಗಳನ್ನು ನೀಗಿಸಿಕೊಂಡಿದ್ದಾಗಿ  ಮುಕ್ತವಾಗಿ ಬರೆದಿದ್ದಾರೆ.  ಅವರ ವ್ಯಕ್ತಿತ್ವವನ್ನು ಗೌರವಿಸದ ಕ್ರಿಕೆಟ್ಟಿಗರೇ ಇಲ್ಲ ಎಂದರೂ ತಪ್ಪಿಲ್ಲ.  ಮುಂದೆ ಹಲವು ಒತ್ತಾಯಗಳ ದೆಸೆಯಿಂದ ಭಾರತದ ಕ್ರಿಕೆಟ್ ತಂಡದ ತರಬೇತುದಾರರಾಗಿ ಜವಾಬ್ಧಾರಿ ನಿರ್ವಹಿಸಿದರು. 

ಭಾರತದ ಅಸಾಮಾನ್ಯ ಆಟಗಾರ ಸಚಿನ್ ತೆಂಡುಲ್ಕರ್ ತಾಂಡವ ಪ್ರದರ್ಶನದ ದೀರ್ಘಾವಧಿಯಲ್ಲಿ ಎಂತಹ ಆಟಗಾರನ ಸಾಧನೆಗಳು ಕಳೆಗುಂದುವುದೂ ಸಹಜ.  ಇಂತಹ ಪ್ರಖಂಡತೆಯ ಮಧ್ಯದಲ್ಲೂ ತಮ್ಮ ವಿಶಿಷ್ಟ ಮುದ್ರೆಯೊಂದಿಗೆ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ರಂಗಕ್ಕೆ ನೀಡಿರುವ ಬೆಳಕು  ವಿಶಿಷ್ಟ ಮೌಲ್ಯದ್ದು.  ಮೂವತ್ತಾರು  ಶತಕ, ಹದಿಮೂರು  ಸಾವಿರಕ್ಕೂ ಹೆಚ್ಚು ಟೆಸ್ಟ್ ರನ್ನುಗಳು, ಇನ್ನೂರಕ್ಕೂ ಹೆಚ್ಚು ಕ್ಯಾಚುಗಳು, ಹತ್ತು ಸಾವಿರಕ್ಕೂ ಹೆಚ್ಚು ಒಂದು ದಿನದ ರನ್ನುಗಳು ಇವೆಲ್ಲಕ್ಕೂ ಮಿಗಿಲಾಗಿ ಅವರು ಕಾಪಾಡಿಕೊಂಡು ಬಂದ ಶಿಸ್ತು, ಸಹನೆ, ಏಕಾಗ್ರತೆ, ಉತ್ತಮ ದೇಹಾರೋಗ್ಯ, ತಡೆ ಇಲ್ಲದ ಕ್ರಿಕೆಟ್ ಕ್ರಿಯಾಶೀಲತೆ, ಸೌಜನ್ಯತೆ ಇವೆಲ್ಲಾ ಕ್ರಿಕೆಟ್ ಭೂಪಟದಲ್ಲೂ, ಕ್ರೀಡಾ ಪ್ರೇಮಿಗಳ ಮನದಲ್ಲೂ ಅವರನ್ನು ಚಿರಂತನವಾಗಿರಿಸುತ್ತವೆ.  

ರಾಹುಲ್ ದ್ರಾವಿಡ್ 2012ರ ಮಾರ್ಚ್ ತಿಂಗಳಿನಲ್ಲಿ ನಿವೃತ್ತಿ ಘೋಷಿಸಿದಾಗ ನಮ್ಮೆಲ್ಲರ  ಗೆಳೆಯ ಹಾಗೂ ಪ್ರಸಿದ್ಧ ಕ್ರೀಡಾ ರೇಖಾಚಿತ್ರಗಾರ ಸತೀಶ್ ಆಚಾರ್ಯ ಹೀಗೆ ಬರೆದಿದ್ದರು “ಇಂತಹ ಒಬ್ಬ ಶ್ರೇಷ್ಠ ಸಜ್ಜನ ಒಮ್ಮೆ ಕ್ರಿಕೆಟ್ ಆಟದಲ್ಲಿದ್ದ ಎಂಬುದನ್ನು ಮುಂಬರುವ ತಲೆಮಾರುಗಳು ನಂಬುವುದಕ್ಕೆ ಕಷ್ಟ ಎಂದು ಭಾವಿಸುತ್ತವೆ”.  ಇದು ರಾಹುಲ್ ದ್ರಾವಿಡ್ ಅವರ ಕುರಿತ ಒಂದು ಮನಮುಟ್ಟುವ ವ್ಯಾಖ್ಯಾನ.  

ಗಂಗೂಲಿ ಬಲವಂತದ  ಮೇರೆಗೆ ಕ್ಲಿಷ್ಟಕರವಾದ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಹೊತ್ತ ರಾಹುಲ್ ದ್ರಾವಿಡ್ ಅವರನ್ನು, ಅವನ್ಯಾಕಿಲ್ಲ, ಇವನಿಗೇಕೆ ಮಣೆ ಇತ್ಯಾದಿ ದಿನ ನಿತ್ಯ ಟೀಕಿಸಲಾಯಿತು.  ಕಳೆದ ವರ್ಷಗಳಲ್ಲಿ ಅಯ್ದ ಕೆಲವರು ಪೆಟ್ಟು ತಿಂದು ಕುಳಿತಿದ್ದರು.  ವಿರಾಟ್ ಕೊಹ್ಲಿ ಮಾನಸಿಕ ಆಘಾತದಲ್ಲಿದ್ದು, ಅತ ಮೇಲೆ ಬರುವುದೇ ಇಲ್ಲ ಎಂದು ಕ್ರಿಕೆಟ್ ಪಂಡಿತರು ನಿರ್ಣಯಿಸಿಬಿಟ್ಟರು.  ರೋಹಿತ್ ಶರ್ಮ ರನ್ ಮಾಡುವುದನ್ನು ಮರೆತ ಕ್ಯಾಪ್ಟನ್, ಹೀಗೆ ಆದ್ರೆ ಏನು ಪ್ರಯೋಜನ, ಕೋಚ್ ಸರಿಯಿಲ್ಲ ಎಂದರು.  
ರಾಹುಲ್ ದ್ರಾವಿಡ್ ಚಿಂತನೆಯಿಂದ ಹಿಂದೆಂದೂ ದೇಶ ಕಂಡಿಲ್ಲದ ಹಾಗೆ ಚೆನ್ನಾಗಿ ಆಡುವ ಆಟಗಾರರಿಗೂ ರೆಸ್ಟ್ ನೀಡಿ ಹೊಸ ಹುಡುಗರಿಗೆ ಅವಕಾಶ ನೀಡಲಾಯಿತು.  ರೆಸ್ಟ್ ಪಡೆದವರು ಹೊಸ ಉತ್ಸಾಹದಿಂದ ಬಂದರು. ಪೆಟ್ಟು ತಿಂದಿದ್ದವರು ತಮಗೇನೂ ಆಗೇ ಇಲ್ಲ ಎನ್ನುವಂತೆ ಪುನಃ ಹೊಸ ಹುಡುಗರಂತೆ ಅರಳಿ ನಿಂತರು.
ಭಾರತ ತಂಡ ಮೂರೂ ಬಗೆಯ ಕ್ರಿಕೆಟ್ನಲ್ಲಿ ನಂಬರ್ ಒನ್ ಆಯಿತು. ಕಳೆದ ವಿಶ್ವಕಪ್ನಲ್ಲಿ  ಮೊದಲ ಹತ್ತೂ ಪಂದ್ಯಗಳಲ್ಲಿ ಭಾರತ ತಂಡ ಗೆದ್ದಿತ್ತು.  ಆದರೂ ಆಸ್ಟ್ರೇಲಿಯಾ ತಂಡ ಫೈನಲ್ನಲ್ಲಿ ಆಡಿದ ರೀತಿ  ಪ್ರೊಫೆಷನಲ್ ಅನಿಸಿ ನಮ್ಮಲ್ಲೇನೊ ಕೊರತೆ ಇದೆ ಎಂದು ತಿಳಿಸಿಕೊಟ್ಟಿತು.  ಮುಂದೆ ಇಪ್ಪತ್ತು ಓವರುಗಳ ವಿಶ್ವಕಪ್ ಪಂದ್ಯಾವಳಿಯಲ್ಲಿ ದ್ರಾವಿಡ್ ಅಂದರೆ ಏನು ಎಂದು ತೋರುವಂತೆ ಭಾರತೀಯ ತಂಡ ಮನಮೋಹಕವಾಗಿ ಗೆಲುವು ಸಾಧಿಸಿಯೇಬಿಟ್ಟಿತು. ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೆ ಈ ಜಯಭೇರಿಯ ಜೊತೆಗೆ ವಿದಾಯ ಹೇಳಿದರು.  

ರಾಹುಲ್ ದ್ರಾವಿಡ್ ನಂತರದ ಭಾರತೀಯ ಕ್ರಿಕೆಟ್ ಪುನಃ ಅಸ್ತವ್ಯಸ್ತವಾಗಿದೆ.  ರಾಹುಲ್ ದ್ರಾವಿಡ್ ಸದಾ ಭಾರತೀಯ ಕ್ರಿಕೆಟ್ ನಡೆಸುವದು ಸಾಧ್ಯವಿಲ್ಲ.  ಅವರಿಗೂ ಶಾಂತ ಬದುಕು ಬೇಕು. 

ಆದರೆ ರಾಹುಲ್ ದ್ರಾವಿಡ್ ಅಂತಹ ಆಟಗಾರ ನಮ್ಮ ಯುವಜನರಿಗೆ ಸ್ಪೂರ್ತಿಯಾಗಲಿ ಅಂತಹ ಶ್ರೇಷ್ಠ ವ್ಯಕ್ತಿತ್ವದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ನಮ್ಮಲ್ಲಿ ಮುಂದೂ ಹೆಚ್ಚು ಹೆಚ್ಚು ಉದಯಿಸಲಿ.  ಅಂತಹ ವಾತಾವರಣ ಸೃಷ್ಟಿಯಾಗಲಿ ಎಂಬುದು ನಮ್ಮೆಲ್ಲರ ಆಶಯ.  
   
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು  ರಾಹುಲ್ ದ್ರಾವಿಡ್ ಅವರೆ.  ನಿಮ್ಮ ಜೀವನದಲ್ಲಿ ಸುಖ ಸಂತೋಷಗಳು ನಿರಂತರವಾಗಿರಲಿ.

On the birth day of Greatest gentleman of cricket, the wall, the one and only Rahul Dravid Sir 🙏

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ