ಅಲಮೇಲು ಅಯ್ಯಂಗಾರ್
ಅಲಮೇಲು ಅಯ್ಯಂಗಾರ್
ಪುತಿನ ಅವರ ಸುಪತ್ರಿಯಾದ ಅಲಮೇಲು ಅಯ್ಯಂಗಾರ್ ಅವರು ಅಮೆರಿಕದಲ್ಲಿದ್ದರೂ ಕನ್ನಡ ಸೇವೆಯಲ್ಲಿ ಜನಪ್ರಿಯರು.
ಜನವರಿ 11, ಅಲಮೇಲು ಅವರ ಜನ್ಮದಿನ. ಅವರು ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರದಲ್ಲಿ. 5 ಜನ ಅಕ್ಕಂದಿರು, ಒಬ್ಬ ಅಣ್ಣ, ಒಬ್ಬ ತಂಗಿ ಸೇರಿದ ಎಂಟು ಮಕ್ಕಳ ತುಂಬು ಕುಟುಂಬ. ತಂದೆಯವರನ್ನು 'ಅಣ್ಣ' ಎಂದೇ ಕರೆಯುತ್ತಿದ್ದರು . ಬಾಲ್ಯದಲ್ಲಿ ಮೇಲುಕೋಟೆಯಲ್ಲಿ ಅಜ್ಜಿಯ ಬಳಿ 7 ವರ್ಷದಿಂದ 11 ರವರೆಗೆ ಕಳೆದ 4 ವರ್ಷಗಳು ಇವರಿಗೆ ತುಂಬಾ ಮೆಚ್ಚಿನದಾಗಿತ್ತು. ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಅಲೆದಾಡಿದ್ದು, ಕೆರೆಕೊಳಗಳಲ್ಲಿ ಈಜಾಡಿದ್ದು, ದೇವಸ್ಥಾನಗಳ ಉತ್ಸವಗಳಲ್ಲಿ ಹಾಡಿ ನೃತ್ಯ ಮಾಡುತ್ತಿದ್ದುದು, ಪಾಠಶಾಲೆಯಲ್ಲಿ ಸಂಸ್ಕೃತ ಕಲಿತದ್ದು, ಧನುರ್ಮಾಸದ ಚಳಿಯಲ್ಲಿ ನಡುಗುತ್ತ ಸಹಪಾಠಿಗಳೊಡನೆ ಬೆಳಗಿನಜಾವದಲ್ಲಿ ಸುಪ್ರಭಾತವನ್ನು ಹೇಳುತ್ತಾ ಊರು ಸುತ್ತ ಪ್ರದಕ್ಷಿಣೆ ಮಾಡುತ್ತಿದ್ದದ್ದು, ಎಪ್ಪತ್ತರ ಹರೆಯದಲ್ಲಿದ್ದ ಅಜ್ಜಿಗೆ ಕನ್ನಡ ಓದಿ ಬರೆಯುವುದನ್ನು ಹೇಳಿಕೊಟ್ಟು ಅವರಿಂದ “ಗುರು“ ಎಂದು ಕರೆಸಿಕೊಂಡಿದ್ದು ಇವರ ಸವಿನೆನಪುಗಳಲ್ಲಿವೆ.
ಅಲಮೇಲು ಅವರಿಗೆ ಓದಿಗಿಂತ ಹೆಚ್ಚಾಗಿ ಇತರ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿಯಿತ್ತು. ಅಂತರ ಶಾಲಾ ಚರ್ಚಾಸ್ಪರ್ಧೆ, ಸುಗಮ ಸಂಗೀತ, ನಾಟಕಗಳ ಸ್ಪರ್ಧೆ ಎಲ್ಲದರಲ್ಲೂ ಮುಂದಾಗಿ ನುಗ್ಗುತ್ತಿದ್ದರು. ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್, ಹುಡುಗಿಯರ ಸರ್ಕಾರ ಪ್ರೌಢಶಾಲೆ, ಬೆಂಗಳೂರಿನ ಮಹಾರಾಣಿ ಕಾಲೇಜು, ಮೈಸೂರಿನ ಮಾನಸ ಗಂಗೋತ್ರಿಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು.
ಅಲಮೇಲು ಅವರು ಓದಿನ ದಿನಗಳಲ್ಲಿ ಗುರು ಕಮಲಾ ಹಂಪನಾ ಅವರ ಒತ್ತಾಸೆಯ ಮೇರೆಗೆ ಕಾಲೇಜಿನಲ್ಲಿ ಕನ್ನಡಕ್ಕಾಗಿ ಹೋರಾಟ ನಡೆಸಿದ್ದರು. ತಂದೆ ಪುತಿನ ಮತ್ತು ತೀನಂಶ್ರಿಯವರ ಮಾರ್ಗದರ್ಶನದಲ್ಲಿ, ಕಮಲಾ ಹಂಪನಾ ಮತ್ತು ಇತರ ಕನ್ನಡ ಅಧ್ಯಾಪಕರ ಬೆಂಬಲದಿಂದ
ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳೊಡನೆ ಸತತವಾಗಿ ಹೋರಾಡಿ ಕೊನೆಗೂ ಕನ್ನಡಕ್ಕೆ ಸಲ್ಲಬೇಕಾಗಿದ್ದ ಗೌರವವನ್ನು ದೊರೆಕಿಸುವುದರಲ್ಲಿ ಯಶಸ್ವಿಯಾದರು.
ಅಲಮೇಲು ಅವರು ಎಂ.ಎ ಪದವಿ ದೊರೆತನಂತರ “ಜ್ಞಾನಗಂಗೋತ್ರಿ” ಮಕ್ಕಳ ವಿಶ್ವಕೋಶದಲ್ಲಿ ಪ್ರೊ. ನಿರಂಜನ , ಪ್ರೊ. ಎಲ್.ಎಸ್ ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಉಪಸಂಪಾದಕರಾಗಿ 2 ವರ್ಷಗಳ ಕಾಲ ಕೆಲಸ ಮಾಡಿದರು. ಅನಂತರ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿ 2 ವರ್ಷ ಕೆಲಸ ಮಾಡಿದರು. ಆಕಾಶವಾಣಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಯಜಮಾನರಿಗೆ ಹೈದರಾಬಾದಿಗೆ ವರ್ಗವಾದದ್ದರಿಂದ 1972 ರಿಂದ 79 ರವರೆಗೆ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದರು. ಅಲ್ಲೂ ಕನ್ನಡ ನಾಟಕಗಳ ಪ್ರದರ್ಶನ, ಆಕಾಶವಾಣಿ ಕನ್ನಡ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದರು. ಸುಧಾ,ಪ್ರಜಾವಾಣಿ, ಪ್ರಜಾಮತ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಬಂಧಗಳು, ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು.
1979ರಿಂದ ಅಮೆರಿಕದ ನೆಲ ಅಲಮೇಲು ಅಯ್ಯಂಗಾರ್ ಅವರ ಕನ್ನಡ ಕಾರ್ಯಕ್ಷೇತ್ರವಾಯಿತು. ಅಮೆರಿಕದಲ್ಲಿನ ಕನ್ನಡಿಗರು ಅಲಮೇಲು ಅವರ ಸಾಮರ್ಥ್ಯ ಕಂಡು ಅವರಿಗೆ ಅನೇಕ ರೀತಿಯ ಮುಂದಾಳತ್ವದ ಗೌರವ ವಹಿಸಿದರು. ಚಿನ್ಮಯ ಮಿಷನ್ ಅವರು ನಡೆಸುತ್ತಿದ್ದ ಬಾಲವಿಹಾರದಲ್ಲಿ ಕನ್ನಡ ಭಾಷೆಯನ್ನು ಕಲಿಸಲು ಅನುಮತಿ ಪಡೆದುಕೊಂಡು ಪಾಠ ಹೇಳಲಾರಂಭಿಸಿದರು. ಉತ್ತರ ಕ್ಯಾಲಿಫೋರ್ನಿಯ ಕನ್ನಡ ಸಂಘದ ಅಧ್ಯಕ್ಷರಾಗಿ ಮತ್ತು ನಾವಿಕ ಸಂಘಟನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರು ರಚಿಸಿದ ನಾಟಕಗಳು ಜನಪ್ರಿಯ ರಂಗಪ್ರಯೋಗಗಳಾದವು. ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ರಂಗದ ಮೇಲೆ ನಿರ್ದೇಶಿಸಿದರು ಮತ್ತು ಅಭಿನಯಿಸಿದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಕನ್ನಡದ ಸೂಪರ್ ಹಿಟ್ ಸಿನಿಮಾ, "ಅಮೇರಿಕಾ, ಅಮೇರಿಕಾ" ಚಿತ್ರಣಕ್ಕೆ ಇವರ ಸಹಕಾರ ಮಹತ್ವದ್ದು. ನಾಗತಿಹಳ್ಳಿಯವರ ಮತ್ತೊಂದು ಚಿತ್ರ "ನನ್ನ ಪ್ರೀತಿಯ ಹುಡುಗಿ" ಸಿನಿಮಾದ ಕಥೆ ಮತ್ತು ಸಂಭಾಷಣೆಯಲ್ಲಿ ಭಾಗವಹಿಸಿದರು. ಕಿರುತೆರೆಯ ಧಾರವಾಹಿಯಲ್ಲಿ ವಿಜಯಕಾಶಿ, ಪವಿತ್ರ ಲೋಕೇಶ್, ಅಭಿನಯ ಮುಂತಾದ ಪ್ರಸಿದ್ಧ ಕಲಾವಿದರೊಡನೆ ಅಭಿನಯಿಸಿದರು.
ಅಲಮೇಲು ಅಯ್ಯಂಗಾರ್ ಅವರ ಹಲವಾರು ಬರಹಗಳು ಕನ್ನಡದ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಇವರ ಸಂದರ್ಶನಗಳು ಪ್ರಸಾರವಾಗಿವೆ. ಇವರು ರಚಿಸಿರುವ ನಾಟಕಗಳಲ್ಲಿ ಅಪ್ಟುಡೇಟ್ ಅಂಬುಜಮ್ಮ, ಮದುವೇರೀ ಮದುವೆ, ಹೈಟೆಕ್ ಹಯವದನಾಚಾರ್, ಆಂಟಪ್ರನ್ಯೂರ್ ಆಂಡಾಳಮ್ಮ, ನಳಪಾಕ, ಸಾಮರಸ್ಯಕ್ಕೊಂದು ಸಲಹೆ, ನಾಣಿಯ ಪೀಕಲಾಟ, ಕುಜದೋಷವೋ ಶುಕ್ರದೆಸೆಯೋ, ದೇಸಿ ಡೈಲಾಮ, ವೆಂಕಜ್ಜಿ ವರ್ಸಸ್ ಜೇಮ್ಸ್ ಬಾಂಡ್ , ನಂಜುಂಡ ಶ್ರೀನಿವಾಸ, ಮೂರ್ತಿಯ ಹುಡುಗಾಟ, ಮಿಕ್ಸೆಡ್ ಮೆಲೋಡೀಸ್, ಅಯ್ಯೋ ನಮಗ್ಯಾಕೆ ಬಿಡಿ, ಹೈಟೆಕ್ ಹಯವದನಾಚಾರ್ ಮುಂತಾದವುಗಳು ಸೇರಿವೆ. ಇವುಗಳಲ್ಲಿ ಬಹಳಷ್ಟು ನಾಟಕಗಳು ಅನಿವಾಸಿ ಭಾರತೀಯರ ಜೀವನದ ಬಗ್ಗೆ ಇರುವುದರಿಂದ ಅಮೆರಿಕದಲ್ಲಿ ಬಹು ಜನಪ್ರಿಯವಾಗಿವೆ.
ಅಲಮೇಲು ಅಯ್ಯಂಗಾರ್ ಅವರ ನಿರ್ದೇಶನದ 'ಜಯಜಯ ವಿಜಯೀ ರಘುರಾಮ' ಪುತಿನ ಅವರ 5 ಗೀತ ರೂಪಕಗಳ ಮೇಲೆ ಆಧಾರಿತ ಸಂಪೂರ್ಣ ರಾಮಾಯಣ ನೃತ್ಯರೂಪಕದಲ್ಲಿ 125 ಕಲಾವಿದರು ಭಾಗವಹಿಸಿದ್ದರು. 17 ಜನ ಸಂಗೀತ ವಿದ್ವಾಂಸರ ವಾದ್ಯವೃಂದ ನೃತ್ಯರೂಪಕಕ್ಕೆ ಸುಮಧುರ ಮಾಧುರ್ಯ ಜೋಡಿಸಿತ್ತು. 1800 ಜನ ಹಿಡಿಸುವ ಸಭಾಂಗಣ ಪ್ರದರ್ಶನಕ್ಕೆ ಎರಡು ವಾರಗಳಿರುವಾಗಲೇ ಮೊದಲ ಪ್ರದರ್ಶನದ ಟಿಕೆಟ್ಟುಗಳೆಲ್ಲ ಮಾರಾಟವಾಗಿ ದಾಖಲೆ ಸ್ಥಾಪಿಸಿತ್ತು. 2013 ರಲ್ಲಿ "ಒನ್ ಸ್ಕೂಲ್ ಅಟ್ ಆ ಟೈಮ್ " ಎಂಬ ಸಂಸ್ಥೆಯ ಸಹಾಯಾರ್ಥ ಪ್ರದರ್ಶನದಲ್ಲಿ $40,000 ದಷ್ಟು ಧನಸಂಗ್ರಹ ಮಾಡಿ ಭಾರತದ ಬಡ ಶಾಲೆಗಳ ದುರಸ್ಥಿಗಾಗಿ ಕಳಿಸಿದರು. ಇದಲ್ಲದೆ ತಮ್ಮ ತಂದೆವರ ಗೀತರೂಪಕಗಳಾದ ಗೋಕುಲ ನಿರ್ಗಮನ, ಹರಿಣಾಭಿಸರಣ, ಶ್ರೀರಾಮ ಪಟ್ಟಾಭಿಷೇಕ, ಜಯ ಜಯ ವಿಜಯೀ ರಘುರಾಮ ಮುಂತಾದವನ್ನು ನೃತ್ಯರೂಪಕಗಳಾಗಿ ಸಮರ್ಪಿಸಿ ಜನಪ್ರಿಯಗೊಳಿಸಿ ಅನೇಕ ಧರ್ಮಾರ್ಥ ಸಂಸ್ಥೆಗಳಿಗೆ ನಿಧಿಸಂಗ್ರಹಣ ಮಾಡಿಕೊಟ್ಟಿದ್ದಾರೆ.
ಅಲಮೇಲು ಅವರಿಗೆ ನಾಟಕಗಳಲ್ಲದೆ, ಕಥೆ, ಕವಿತೆ, ಪ್ರಬಂಧ, ವೈಚಾರಿಕ ಲೇಖನಗಳು, ಸಂಗೀತ, ನೃತ್ಯ ಎಲ್ಲದರಲ್ಲೂ ಆಸಕ್ತಿ ಇದೆ. ಹಲವಾರು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಸ, ಊರು ಸುತ್ತುವುದೆಂದರೆ ಇವರಿಗೆ ಬಹಳ ಇಷ್ಟ. ಬೆಟ್ಟಗುಡ್ಡಗಳನ್ನು ಹತ್ತುವುದು, ಈಜುವುದು, ತೋಟಗಾರಿಕೆ, ಇವೆಲ್ಲ ಇವರ ಪ್ರಿಯವಾದ ಹವ್ಯಾಸಗಳು. ವಿಶ್ವದಾದ್ಯಂತ ಪ್ರವಾಸ, ಮತ್ತು ಪರ್ವತಗಳಲ್ಲಿ ಚಾರಣ ಮಾಡಿದ್ದಾರೆ. ಕನ್ನಡವನ್ನು ವ್ಯಾಪಿಸುವ ಕೆಲಸದಲ್ಲಂತೂ ಇವರ ಮನ ಸದಾ ತಲ್ಲೀನ.
ಅಲಮೇಲು ಅಯ್ಯಂಗಾರ್ ಅವರ ಪ್ರೀತಿ, ಪ್ರೋತ್ಸಾಹ ಮಾರ್ಗದರ್ಶನಗಳ ಭಾಗ್ಯ ನನ್ನಂತಹವರಿಗೂ ಸಿಗುತ್ತಿದೆ. ಪೂಜ್ಯರಾದ ಅಲಮೇಲು ಅಯ್ಯಂಗಾರ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ನಮಸ್ಕಾರ.
Happy birthday Alamelu Iyengar 🌷🙏🌷
ಕಾಮೆಂಟ್‌ಗಳು