ಪರಮಹಂಸ ಯೋಗಾನಂದ
ಪರಮಹಂಸ ಯೋಗಾನಂದ
ಪರಮಹಂಸ ಯೋಗಾನಂದರು
On the birth anniversary of Paramahamsa Yogananda
ಪರಮಹಂಸ ಯೋಗಾನಂದರು 'ಕ್ರಿಯಾಯೋಗ' ಎಂಬ ಪ್ರಸಿದ್ಧ ಯೋಗವನ್ನು ಪ್ರಸ್ತುತಪಡಿಸಿ ಲೋಕದೆಲ್ಲೆಡೆ ಪ್ರಸಿದ್ಧರಾದವರು
1979ರ ಮಧ್ಯದಲ್ಲಿ ಬೆಂಗಳೂರಿಗೆ ಕೆಲಸ ಹುಡುಕಿ ಬಂದ ನನಗೆ ಮೊದಲು ಸಿಕ್ಕ ಒಂದು ನೂರು ರೂಪಾಯಿ ಕೆಲಸ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿದ್ದ ಒಂದು ಆಡಿಟರ್ ಕಚೇರಿಯಲ್ಲಿ. ಅದಾದ ನಂತರ ಕೂಡ ನನಗೆ ಸಿಕ್ಕ ಕೆಲಸ ಎಂ.ಜಿ. ರಸ್ತೆಯ ಆಸು ಪಾಸಿನಲ್ಲೇ ಇತ್ತು. ಅಲ್ಲಿನ ಹಲವು ಪುಸ್ತಕ ಅಂಗಡಿಗಳ ಮುಂದೆ ಅಲೆದಾಗಲೆಲ್ಲ ಒಂದು ಪುಸ್ತಕ ಪದೇ ಪದೇ ಕಣ್ಣಿಗೆ ಬೀಳುತ್ತಿತ್ತು. ಬ್ಲೂಮೂನ್ ಚಿತ್ರಮಂದಿರದ ಆವರಣದಲ್ಲಿ, ಈ ಪುಸ್ತಕ ಆ ಗಾಜಿನ ಬೀರುವಲ್ಲಿ ಅದೆಷ್ಟು ಭದ್ರವಾಗಿತ್ತೋ! ಬಹಳ ವರ್ಷ ನನ್ನ ಕಣ್ಣಿಗೆ ಬಿದ್ದಿದೆ. ಅಂದಿನ ದಿನದಲ್ಲಿ ಕನ್ನಡದಲ್ಲಿ ಓದಿದ ಹಲವು ಪುಸ್ತಕ ಬಿಟ್ಟರೆ, ಅಂತಹ ಓದಿನ ಹವ್ಯಾಸ ಕೂಡ ನನ್ನಲ್ಲಿರಲಿಲ್ಲ.
ಸುಮಾರು 2000ದ ವರ್ಷದ ಆಸುಪಾಸಿನಲ್ಲಿ, ಒಮ್ಮೆ ಯಾವುದೋ ಮಾತಿನಲ್ಲಿ ಯಾರೋ ಆ ಪುಸ್ತಕ ಪ್ರಸ್ತಾಪ ಮಾಡಿದ್ದು ಕಿವಿಗೆ ಬಿತ್ತು. ಅಷ್ಟು ವರ್ಷ ಕಣ್ಣಿಗೆ ಬಿದ್ದ ಆ ಪುಸ್ತಕ ಕೊನೆಗೂ ನನ್ನ ಕೈ ಸೇರಿ ಓದುವ ಸೌಭಾಗ್ಯ ಮೂಡಿಬಂತು. ಆ ಪುಸ್ತಕ “ಪರಮಹಂಸ ಯೋಗಾನಂದ ವಿರಚಿತ ‘ಯೋಗಿಯ ಆತ್ಮಕಥೆ’ ಎಂದು ಕನ್ನಡದಲ್ಲಿ ಕೂಡ ಇರುವ ‘Autobiography of Yogi’ “.
ಪರಮಹಂಸ ಯೋಗಾನಂದರ ಒಂದು ಮಾತನ್ನು ನಾನು ಹೀಗೆ ಅರ್ಥ ಮಾಡಿಕೊಂಡಿದ್ದೇನೆ. “ದೇವರು ನಮಗೆ ಒಳ್ಳೆಯದನ್ನೂ ಮಾಡುವುದಿಲ್ಲ, ಕೆಟ್ಟದ್ದನ್ನೂ ಮಾಡುವುದಿಲ್ಲ. ಅವೆರಡನ್ನೂ ನಮ್ಮ ವಾತಾವರಣದಲ್ಲಿರಿಸಿದ್ದಾನಷ್ಟೇ. ನಾವು ಯಾವುದನ್ನು ಆಕರ್ಷಿಸಬೇಕೆಂಬುದು ನಮ್ಮ ವೈಯಕ್ತಿಕ ಶಕ್ತಿಗೆ ಸೇರಿದ ವಿಚಾರ”. ಈ ವಿಚಾರಕ್ಕೆ ತಾದ್ಯಾತ್ಮ ಮೂಡಿಸುವ ಘಟನೆ ಒಂದು ನೆನಪಾಯಿತು. ಇದು ನಡೆದದ್ದು ನಾ ಈ ಪುಸ್ತಕವನ್ನು ಓದಿದ 12 ವರ್ಷದ ಹಿಂದೆ.
1989ರಲ್ಲಿ ಎಂಬತ್ತರ ವಯಸ್ಸಿನ ನಮ್ಮ ತಂದೆ ತಮ್ಮ ಕೊನೆಯ ದಿನಗಳಲ್ಲಿರುವುದು ನಮಗೆಲ್ಲ ವೇದ್ಯವಾಗಿತ್ತು. ಈ ಕುರಿತು ಮಾತನಾಡುತ್ತಿದ್ದ ನಮ್ಮ ಲಹರಿಯಲ್ಲಿ, ಅಣ್ಣ ಒಂದು ಮಾತು ಹೇಳಿದ. “ನಮ್ಮ ಬದುಕಿನಲ್ಲಿ ಎಲ್ಲ ತರಹದ ಕ್ರಿಮಿಗಳೂ ನಮ್ಮ ಸುತ್ತಲೂ ಸನಿಹದಲ್ಲೇ ವಾತಾವರಣದಲ್ಲಿ ಸುತ್ತುತ್ತಿರುತ್ತವೆ. ನಾವು ದೈಹಿಕವಾಗಿ ದುರ್ಬಲತೆ ಪಡೆದಿದ್ದೇ ತಡ, ತಕ್ಷಣ ನಮ್ಮೊಳಗೆ ಬಂದು ಕೂರುತ್ತವೆ!”. ಇದು ಕೇವಲ “ದೈಹಿಕ”ಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ನಮ್ಮ ಮನಸ್ಸು ಮತ್ತು ಎಲ್ಲ ರೀತಿಯ ಐಹಿಕಕ್ಕೂ ಸಂಬಂಧಿಸಿದ್ದು ಎಂದು ಗಾಢವಾಗಿ ನನಗೆ ಅನಿಸಲು ಪ್ರಾರಂಭವಾಯಿತು.
ಪರಮಹಂಸ ಯೋಗಾನಂದರು 1893ರ ಜನವರಿ 5ರಂದು ಜನಿಸಿದರು. ಅವರು ಬೆಳೆದದ್ದು ಮುಕುಂದ ಲಾಲ್ ಘೋಶ್ ಎಂಬ ಹೆಸರಿನಿಂದ. ಹುಟ್ಟಿದ್ದು ಬಂಗಾಳಿ ಕುಟುಂಬದಲ್ಲಿ. ಅದೇನು ಪುಣ್ಯ ಭೂಮಿಯೋ ಆ ಬಂಗಾಳ. ಎಂತೆಂತಹ ಅಧ್ಯಾತ್ಮ-ವೈಜ್ಞಾನಿಕ ಚಿಂತಕ ಮಹಾಶಯರನ್ನು ಆ ನಾಡು ಕಂಡಿದೆ. ರಾಮಕೃಷ್ಣ ಪರಮಹಂಸ - ವಿವೆಕಾನಂದ ಪರಂಪರೆ, ಜಗದೀಶ್ ಚಂದ್ರ ಬೋಸ್, ಸತ್ಯೇಂದ್ರ ನಾಥ ಬೋಸ್ ಅವರಂತಹ ಅಧ್ಯಾತ್ಮ ಬೆರೆತ ವಿಜ್ಞಾನಿ, ಠಾಗೂರರು, ಮದನ ಮೋಹನ ಮಾಳವೀಯ, ಬಂಕಿಮ ಚಂದ್ರ, ಸುಭಾಷ್ ಚಂದ್ರ ಬೋಸ್ ಹೀಗೆ ಬಹಳಷ್ಟು.
ಮುಕುಂದನ ತಂದೆ ತಾಯಿಯರು ‘ಯೋಗಿ ಲಹಿರಿ ಮಹಾಶಯ’ರ ಕುರಿತ ಶ್ರದ್ಧಾವಂತರು. ಮಗುವನ್ನು ಕಂಡ ಲಹಿರಿ ಮಹಾಶಯರು ಹೇಳಿದರಂತೆ ಈತ ಮಹಾನ್ ಸಾಧಕನಾಗುತ್ತಾನೆ. ಮುಂದೆ ಬೆಳೆಯುತ್ತಿದ್ದ ಈ ಹುಡುಗ ಯುಕ್ತೇಶ್ವರ ಗಿರಿ ಎಂಬ ತಪಸ್ವಿಗಳಿಗೆ ಆಕರ್ಷಿತನಾದ. ಅವರಾದರೋ ಈತ ಹೀಗೆ ಹೀಗೇ ಮಾಡುತ್ತಾನೆ ಎಂದು ಮುಂದೆಂದೋ ನಡೆಯುವುದನ್ನು ಕಣ್ಣಿಗೆ ಕಂಡಂತೆ ವರ್ಣಿಸುವವರು. ಅವರ ಗುರುಗಳು ಸಾವೆಂಬುದನ್ನೇ ಕಾಣರು ಎಂಬಂತೆ ವರ್ಣಿತರಾಗಿ ಹಲವು ಶತಮಾನಗಳಿಂದ ಜೀವಿಸುತ್ತಿರುವವರು ಎಂದು ಪುಸ್ತಕದಲ್ಲಿ ಹೇಳಲಾಗಿರುವ ಬಾಬಾಜಿ ಅವರು. ಅವರೇ ಮುಂದೆ ಪರಮಹಂಸ ಯೋಗಾನಂದರು ಲೋಕ ವಿಖ್ಯಾತವಾಗಿಸಿದ “ಕ್ರಿಯಾ” ಯೋಗದ ಜನಕರು ಎಂಬ ಮಾತು ಕೂಡ ಅಲ್ಲಲ್ಲಿ ನಮೂದಿತಗೊಂಡಿದೆ. ಎಷ್ಟು ಬೇಕೊ ಅಷ್ಟು ಶಾಲಾ ಕಾಲೇಜಿಗೆ ಹೋದ ಈ ಮುಕುಂದ, ಯುಕ್ತೇಶ್ವರರ ಬಳಿಯೇ ಹೆಚ್ಚು ಸಮಯ ಕಳೆದ.
ಹಲವಾರು ಯೋಗಿಗಳ, ವಿಸ್ಮಯಗಳ, ನಿರಾಹಾರಿ ಯೋಗಿನಿ ಮುಂತಾದವರ ಬೆಡಗಿನ, ಸ್ವಲ್ಪವೂ ಅಸಹಜ ಎಂದು ಭಾವ ಹುಟ್ಟಿಸದಂತಹ ವಾತಾವರಣದಲ್ಲಿ ಬಣ್ಣಿತವಾಗಿರುವ ಹಲವು ಘಟನೆಗಳಲ್ಲಿ, ಪರಮಹಂಸ ಯೋಗಾನಂದರ ಆತ್ಮಕತೆ ಅವರ ಸಿದ್ಧಿಯ ಪೂರ್ವಾನಕ ಕತೆ ಎಂಬಂತೆ ಬಣ್ಣಿತವಾಗಿದೆ. ಒಂದು ಕಾದಂಬರಿಯಂತೆ ಓದಿದರೂ ಕೂಡ ನಮ್ಮನ್ನು ತೀವ್ರವಾಗಿ ಹಿಡಿದಿಡುವ ಶಕ್ತಿ ಹೊಂದಿರುವ ಬರಹವಿದು.
ಮುಂದೆ ಮುಕುಂದನಾಗಿದ್ದ ಹುಡುಗ ಬೆಳೆದು ಯೋಗಾನಂದರಾಗಿ ಒಂದು ವಿದ್ಯಾಲಯವನ್ನು ರಾಂಚಿಯಲ್ಲಿ ಪ್ರಾರಂಭಿಸಿದರು. ಇದರ ಹೆಸರು “How To Live School”. ಇಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ಯೋಗ ಮತ್ತು ಅಧ್ಯಾತ್ಮದ ಅವಶ್ಯಕ ಬದುಕಿನ ಪಾಠಗಳನ್ನು ಕಲಿಸುವ ವಿಶಿಷ್ಟ ಮಾದರಿಯ ಶಿಕ್ಷಣವನ್ನು ಪರಮಹಂಸ ಯೋಗಾನಂದರು ಸೃಜಿಸಿದರು. ಅಂದಿನ ಮಹಾರಾಜ ಕಾಸಿಂಬಜಾರ್ ಅವರು ಯೋಗಾನಂದರ ಧ್ಯೇಯೋದ್ದೇಶದಿಂದ ಪ್ರಭಾವಿತರಾಗಿ ಈ ಶಾಲೆಯನ್ನು ನಡೆಸಲು ತನ್ನ ಬೇಸಿಗೆಯ ಅರಮನೆಯನ್ನೇ ಕೊಟ್ಟರು. ಆ ಶಾಲೆಯನ್ನು ನೋಡಲಿಚ್ಚಿಸಿದ ಮಹಾತ್ಮ ಗಾಂಧಿಯವರು ಅಲ್ಲಿಗೆ ಆಗಮಿಸಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಸ್ಮಯ ಸಂತೋಷಗಳನ್ನು ವ್ಯಕ್ತಪಡಿಸಿದರು.
ಮುಂದೆ ಪರಮಹಂಸ ಯೋಗಾನಂದರು ಅಮೇರಿಕದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನಕ್ಕೆ ಭಾಷಣಕಾರರಾಗಿ ಆಹ್ವಾನಿತರಾದರು. ಅಲ್ಲಿಗೆ ತೆರಳಿದ ಅವರು, ಗುರು ಯುಕ್ತೇಶ್ವರರು ಮತ್ತು ಅವರಿಗೆ ದರ್ಶನ ನೀಡಿದ ಬಾಬಾಜಿ ಅವರು ಭವಿಷ್ಯ ಹೇಳಿದಂತೆ ಹಲವಾರು ಸುಸಜ್ಜಿತ ಯೋಗ ಶಿಕ್ಷಣ ಕೇಂದ್ರಗಳನ್ನು ತೆರೆದರು. “ಕ್ರಿಯಾ ಯೋಗ”ವನ್ನು ಪ್ರಧಾನವಾಗಿ ಪ್ರಸ್ತುತ ಪಡಿಸಿದ ಅವರ ಕಾರ್ಯಕ್ರಮಗಳು ಹೇರಳವಾಗಿ ಜನಪ್ರಿಯಗೊಂಡವು. ಅವೆಲ್ಲ ಅವರಿಗೆ ಗುರುಕೃಪೆಯೋ ಎನ್ನುವಂತೆ ಸುಲಲಿತವಾಗಿ ಆದಂತೆ ತೋರುತ್ತದೆ. ಮಧ್ಯೆ ಒಮ್ಮೆ ಭಾರತಕ್ಕೆ ಹಿಂದಿರುಗಿ, ಯುಕ್ತೆಶ್ವರರ ದೇಹ ತ್ಯಾಗದ ಸಂದರ್ಭವೋ ಎಂಬಂತೆ ಆ ಸಮಯದಲ್ಲಿ ಕೂಡ ಇದ್ದು, ಇಲ್ಲೂ ಅವರ ಮಹತ್ವದ ಕ್ರಿಯಾ ಯೋಗ ಮತ್ತು ಅಧ್ಯಾತ್ಮದ ಕುರಿತಾದ ಕೆಲಸವನ್ನು ಸಾಕಷ್ಟು ಪ್ರಜ್ವಲಿಸಿದರು. ಅವರು ಮಹಾತ್ಮ ಗಾಂಧೀಜಿ, ಸಿ.ವಿ.ರಾಮನ್ ಅಂತಹ ಮಹನೀಯರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರೆಂಬ ಉಲ್ಲೇಖಗಳಿವೆ.
ಅಮೇರಿಕದ ಹಲವೆಡೆಗಳಲ್ಲಿ ನಡೆಯುತ್ತಿದ್ದ ಪರಮಹಂಸ ಯೋಗಾನಂದರ ಭಾಷಣಗಳು ಕಿಕ್ಕಿರಿದ ಸಂದಣಿಯಿಂದ ತುಂಬಿರುತ್ತಿದ್ದವು. ಮುಂದೆ ಅವರು ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಆತ್ಮಚರಿತ್ರೆ ಮತ್ತು ಇನ್ನಿತರ ಬರಹಗಳಿಗೆ ಮೀಸಲಿಟ್ಟರು. ಭಗವದ್ಗೀತೆ ಮತ್ತು ಕ್ರಿಸ್ತನ ಕುರಿತು ಬರೆದ ಅವರ ಪುಸ್ತಕಗಳು ಅಪಾರ ಮನ್ನಣೆ ಗಳಿಸಿವೆ. ಅವರ ‘ಯೋಗಿಯ ಆತ್ಮಕತೆ – Autobiography of Yogi’ ಪ್ರಕಟವಾಗಿದ್ದು 1946ರಲ್ಲಿ. ಆ ಪುಸ್ತಕ ಇಂದು ಕೂಡ ತನ್ನ ಅಪರಿಮಿತ ಜನಮನ್ನಣೆ ಉಳಿಸಿಕೊಂಡು ಬೆಳೆಯುತ್ತಿರುವುದು ಸರ್ವವೇದ್ಯ. ಪರಮಹಂಸ ಯೋಗಾನಂದರು 1952ರ ಮಾರ್ಚ್ 7ರಂದು ನಿರ್ವಾಣರಾದರು.
ಸುಮಾರು ಎರಡು ದಶಕದ ಹಿಂದೆ ನಾನು ಓದಿದ ಆ ಪುಸ್ತಕದಲ್ಲಿ ಮರೆಯದ ಮಾತೊಂದಿದೆ “ದೇವರೆ ನೀನು ನನಗೆ ದಯಪಾಲಿಸಿರುವ ಭಕ್ತಿಯೆಂಬ ಪ್ರೀತಿಯ ಬೆಳಕನ್ನು ಈ ಲೋಕದಲ್ಲಿ ಸಮರ್ಥವಾಗಿ ಹಂಚುವ ಶಕ್ತಿಯನ್ನು ನನಗೆ ದಯಪಾಲಿಸು”. ಈ ಮಾತು “ಪ್ರೀತಿಯ ಪ್ರವರ್ತಕ ಈ ಯೋಗಾನಂದ ಎಂದು ಬಣ್ಣಿಸಿರುವ ಅವರ ಗುರು ಯುಕ್ತೆಶ್ವರರ ಮಾತನ್ನು ನಿತ್ಯ ಅಣುರಣಿಸುತ್ತಿವೆ.” ನಮ್ಮ ನಾಡಿನ ಯೋಗ ಸಂಸ್ಕೃತಿಯನ್ನೂ ಪ್ರೀತಿಯ ಬೆಳಕನ್ನೂ ವಿಶ್ವದೆಲ್ಲೆಡೆ ಹಂಚಿರುವ ಈ ಮಹಾನ್ ಗುರುವನ್ನು, ನಮಗೂ ಒಂದಷ್ಟು ಕೃಪೆ ಮಾಡೋಣವಾಗಲಿ ಎಂಬ ಆಶಯಪೂರ್ವಕವಾಗಿ ನಮಿಸೋಣ.
On the birth anniversary of Paramahamsa Yogananda
ಕಾಮೆಂಟ್‌ಗಳು