ಜಿ. ಎನ್. ಲಕ್ಮಣ ಪೈ
ಜಿ. ಎನ್. ಲಕ್ಮಣ ಪೈ
ಜಿ. ಎನ್. ಲಕ್ಮಣ ಪೈ ಶಿಶುಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರು.
ಗುರುಪುರ ನರಸಿಂಹ ಲಕ್ಷ್ಮಣ ಪೈ ಮಂಗಳೂರು ತಾಲ್ಲೂಕಿನ ಮರಕಡ ಎಂಬಲ್ಲಿ 1904ರ ಮೇ 11ರಂದು ಜನಿಸಿದರು. ತಂದೆ ನರಸಿಂಹ ಪೈ. ತಾಯಿ ರುಕ್ಮಿಣಿಯಮ್ಮ. ಇವರ ಪ್ರಾರಂಭಿಕ ಶಿಕ್ಷಣ ಪುತ್ತೂರಿನಲ್ಲಿ ಆಯಿತು. ಹೈಸ್ಕೂಲಿಗೆ ಸೇರಿದ್ದು ಮಂಗಳೂರಿನಲ್ಲಿ. ಉಗ್ರಾಣ ಮಂಗೇಶರಾಯರು ಇವರ ಉಪಾಧ್ಯಾಯರಾಗಿದ್ದರು.
ಉಪಾಧ್ಯಾಯರ ಪದ್ಯಗಳಾದ ರಂಗ ಹಿತ್ತಲಲ್ಲಿ ಆಡು, ಅಮ್ಮ ಆಡುತೇನೆ ನೋಡು ಮುಂತಾದ ರಚನೆಗಳನ್ನು ಓದುತ್ತಾ ಹೋದಂತೆಲ್ಲಾ ಸಾಹಿತ್ಯದ ಬಗ್ಗೆ ವಿಶೇಷ ಒಲವು ಬೆಳೆದು, ಲಕ್ಷ್ಮಣ ಪೈ ಅವರು, ತಾವೂ ಪದ್ಯಗಳನ್ನು ರಚಿಸತೊಡಗಿದರು.
ಲಕ್ಷ್ಮಣ ಪೈ ಅವರು ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದ ನಂತರ ಪುತ್ತೂರಿನ ಸ್ಥಳೀಯ ಬ್ಯಾಂಕೊಂದರಲ್ಲಿ ಏಜೆಂಟರಾಗಿ ಕೆಲಸಕ್ಕೆ ಸೇರಿದರಾದರೂ ಬ್ಯಾಂಕ್ ದಿವಾಳಿಯಾದಾಗ ನಿರುದ್ಯೋಗಿಯಾಗಿ ಕಷ್ಟ ಅನುಭವಿಸಬೇಕಾಯಿತು. ನಂತರ ಸೇಲ್ಸ್ ಟ್ಯಾಕ್ಸ್ ಪ್ರ್ಯಾಕ್ಟೀಷನರಾಗಿ ಜೀವನ ಸಾಗಿಸತೊಡಗಿದರು. ಇಂಟರ್ಮೀಡಿಯೆಟ್ ಓದುತ್ತಿದ್ದಾಗಲೇ ಹಲವಾರು ಪದ್ಯಗಳನ್ನು ರಚಿಸಿದ್ದು ಅವುಗಳು ‘ಸ್ವದೇಶಾಭಿಮಾನ’ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಇವರ ಸಾಹಿತ್ಯ ಬೆಳವಣಿಗೆಗೆ ಪ್ರಭಾವ ಬೀರಿದ ಇತರ ಸಾಹಿತಿಗಳೆಂದರೆ ಪಂಜೆಮಂಗೇಶರಾಯರು ಹಾಗೂ ಎಂ.ಎನ್. ಕಾಮತರು. ಗೋವಿಂದ ಪೈ, ಬಿ.ಎಂ.ಶ್ರೀ, ರಾಜರತ್ನಂ ಮುಂತಾದವರೊಡನೆ ಇವರಿಗೆ ಆತ್ಮೀಯ ಒಡನಾಟವಿತ್ತು.
ಲಕ್ಷ್ಮಣ ಪೈ ಅವರದು ಬಡತನದ ಬಾಳಾದರೂ ಪುಸ್ತಕ ಖರೀದಿಸುವುದನ್ನು ನಿಲ್ಲಿಸುತ್ತಿರಲಿಲ್ಲ. ಕನ್ನಡ ಪದ್ಯರತ್ನಾವಳಿ, ಕೀರ್ತಿನಾಂಜಲಿ, ಶಿಶಿರುಗೀತಮಾಲೆ, ಅಭಿನಯ ಗೀತಮಂಜರಿ, ದಸರೆಯ ಕಾಣಿಕೆ, ಅಭಿನಯ ಗೀತಾವಳಿ ಮುಂತಾದ ಕವನ ಸಂಕಲನಗಳನ್ನೂ ಪ್ರಕಟಿಸಿದ್ದರು.ಇವರ ಪ್ರಸಿದ್ಧ 'ಮಂಗನ ಮದುವೆ' ಪದ್ಯ ಹೀಗಿದೆ:
ಬಿಸಿಲೂ ಮಳೆಯೂ ಕೂಡಿದವು
ಧಗೆಯನು ತಂಪು ಮಾಡಿದವು
ಕೋತಿಯು ಮಾಡಿತು ತುಂಟತನ
ಕೋಳಿಯು ಮಾಡಿತು ಮೂರ್ಖತನ
ಕೋತಿಗು ಕೋಳಿಗು ನೆಂಟತನ
ಮಾಡಲು ಬೇಕೆಂಬುವ ಹದನ
ಮೃಗಗಳು ಖಗಗಳು ಚರ್ಚಿಸುತ
ಮದುವೆಗೆ ಮಾಡಿದರಣಿ ನಗುತ
ಮಂಗಗೆ ಪಂಚೆಯನುಡಿಸಿದರು
ರಂಗಿನ ಅಂಗಿಯ ಹಾಕಿದರು
ಸಿಂಗರದೊಡವೆಯ ತೊಡಿಸಿದರು.
"ಲಾಗಾ ಹಾಕೋ ಮಂಗಣ್ಣ!
ಥೈ ಥೈ ಕುಣಿಯೋ ತಿಮ್ಮಣ್ಣ!
ಮದುವಣಿಗನು ನೀ ಹೌದಣ್ಣಾ.
ಮೃಗವದು ಹಕ್ಕಿಯ ವರಿಸುವುದು
ನಿನ್ನಿಂ ಮೊದಲಾದುದು ಇಂದು.
ನೀನೇ ದಾರಿಯ ತೋರಿಸಿದೆ
ನೀನೆ ಸುಧಾಕರನೆನ್ನಿಸಿದೆ".
ಎಂದು ವಿನೋದದಿ ಆಡಿದರು
ಚಂದದ ಪದಗಳ ಹಾಡಿದರು.
ಕೋಳಿಗೆ ಸೀರೆಯನುಡಿಸಿದರು
ಚಿನ್ನದೊಡವೆಗಳ ತೊಡಿಸಿದರು.
"ಕೊಕ್‍ಕೊಕ್ ಕೋ ಕೋ
ಮಂಗನ ರಾಣಿಯು ನೀನಿನ್ನು
ಬಗ್ಗಿಸುವೇಕೆ ತಲೆಯನ್ನು?
ಕಂಕಿಸುವೇತಕೆ ನಡೆಯನ್ನು?
ಬಿಡು ಬಿಡು ಲಜ್ಜೆಯ ಹೂಮಾಲೆ
ಕಪಿವರನಿಗೆ ಹಾಕೆಲೆ ಬಾಲೆ!"
ಎನ್ನುತ ಚೇಷ್ಟೆಯ ಮಾಡಿದರು
ಹಿಗ್ಗುತ ನಲಿನಲಿದಾಡಿದರು.
ಸಂಭ್ರಮದೊಳಾಯಿತು ಮದುವೆ
ಮರ್ಕಟ ಕುಕ್ಕಟರಾ ಮದುವೆ.
ಇದಲ್ಲದೆ ತೋಳ ಕುರಿಮರಿಯು, ಸ್ವರ್ಗನರಕ, ಮುಂತಾದ ಪದ್ಯಗಳು ಅಂದಿನ ಮಕ್ಕಳ ನಾಲಗೆಯಲ್ಲಿ ಹರಿದಾಡುತ್ತಿದ್ದವು.
'ದಾಮಾಜಿ ಪಂತ' ಕನ್ನಡನಾಟಕ, 'ಸತ್ಯವಾನ ಸಾವಿತ್ರಿ' ಕೊಂಕಣಿನಾಟಕ, 'ರಮಣ ಮಹರ್ಷಿ ಉಪದೇಶಗಳು’ ಅನುವಾದ ಕೃತಿ ಮುಂತಾದವು ಇವರ ಇತರ ಕೃತಿಗಳಲ್ಲಿ ಸೇರಿದ್ದವು.
ಲಕ್ಷ್ಮಣ ಪೈ ಅವರು ಸಂಗೀತಗಾರರಾಗಿದ್ದುದರಿಂದ ‘ಮಂಗನ ಮದುವೆ’ ಮತ್ತು ‘ತೋಳ ಕುರಿಮರಿ’ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಅಂದಿನ ಸಮಕಾಲೀನರು ಕೇಳಿ ಆನಂದ ಪಟ್ಟಿದ್ದರು.
ಲಕ್ಷ್ಮಣ ಪೈ ಅವರು 1975ರ ಜುಲೈ 28ರಂದು ನಿಧನರಾದರು
Our great poet G. N. Lakshman Pai
ಕಾಮೆಂಟ್‌ಗಳು