ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಂಗಿರಂಗ ಶ್ರೀರಂಗ


 

ಭಂಗಿರಂಗ ಶ್ರೀರಂಗ
ಲೇಖನ: ಎನ್. ಎಸ್. ಶ್ರೀಧರಮೂರ್ತಿ Sreedhara Murthy

ಗೀತ ರಚನೆಕಾರ  ಶ್ರೀರಂಗ  ಅವರು ಭಂಗಿರಂಗ   ಎಂಬ  ಹೆಸರಿನಂದ  ಪ್ರಸಿದ್ಧರಾಗಿದ್ದವರು.  ಇಂದು ಅವರ ಸಂಸ್ಮರಣೆ ದಿನ.    

ನಂಜುಂಡಿ  ಕಲ್ಯಾಣ  ಚಿತ್ರದ ‘ಒಳಗೆ ಸೇರಿದರೆ ಗುಂಡು’  ಎನ್ನುವ  ಗುಂಡಿನ  ಹಾಡಿನಿಂದ ಪ್ರಸಿದ್ಧರಾಗಿದ್ದರಿಂದ   ಅವರ  ಬಳಿ  ಅದೇ ಮಾದರಿಯ  ಹಾಡುಗಳನ್ನೇ  ಹೆಚ್ಚಿನವರು  ಬರೆಸಲು  ಆರಂಭಿಸಿದರು. ‘ಗಜಪತಿ  ಗರ್ವ ಭಂಗ’  ಚಿತ್ರದ  ‘ಜಟಕಾ ಕುದುರೆ ಹತ್ತಿ’, ಆದಿತ್ಯ  ಚಿತ್ರದ  ‘ರಂಭೆ ನೀ ವಯ್ಯಾರದ ಗೊಂಬೆ’, 'ಅಪ್ಪು’ ಚಿತ್ರದ  ‘ಬಾರೆ ಬಾರೆ ಕಲ್ಯಾಣ ಮಂಟಪಕೆ’, 'ಅಭಿ’  ಚಿತ್ರದ  ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’  ಮೊದಲಾದ   ಗೀತೆಗಳು ಜನಪ್ರಿಯವಾಗಿ  ಅವರನ್ನು  ಆ  ಮಾದರಿಗೇ  ಸಿಕ್ಕಿಸಿ  ಬಿಟ್ಟವು. ಆದರೆ  ಶ್ರೀರಂಗ  ಅವರು  ‘ಮದುಡಿದ ತಾವರೆ ಅರಳಿತು’ ಚಿತ್ರಕ್ಕೆ   ‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’  ಎನ್ನುವ  ಸುಂದರ ಗೀತೆಯನ್ನು  ಬರೆದಿದ್ದಾರೆ ಎನ್ನುವುದು ಬಹಳ  ಜನಕ್ಕೆ  ಗೊತ್ತಿಲ್ಲ. 

ಶ್ರೀರಂಗ, ಭಂಗಿರಂಗ, ಅನಾಮಿಕ, ತಪಸ್ವಿ, ರಂಗಪ್ರಿಯ ಹೀಗೆ  ಹಲವು  ಹತ್ತು  ಹೆಸರುಗಳಿಂದ  ಅವರು  ಬರೆಯುತ್ತಿದ್ದ  ಕಾರಣ  ಅವರ  ರಚನೆಗಳು  ಯಾವುದು ಎಂಬುದು  ಅನೇಕರಿಗೆ  ಗೊಂದಲ  ಉಂಟು  ಮಾಡಿತು. ಸ್ವತ:  ಅವರೇ  ಈ  ವಿಷಯದಲ್ಲಿ  ನಿರ್ಲಿಪ್ತರಾಗಿ  ಇದ್ದು  ಬಿಟ್ಟಿದ್ದರು. 

ಗೀತ ರಚನೆಕಾರ  ಎಂಬ   ಹೆಸರನ್ನು  ಪಡೆದಿದ್ದರೂ  ಶ್ರೀರಂಗ  ಅವರ  ನಿಜವಾದ   ಆಸಕ್ತಿ  ಇದ್ದಿದ್ದು  ರಂಗಭೂಮಿಯ  ಕಡೆಗೆ. ವೃತ್ತಿ ರಂಗಭೂಮಿಯಿಂದ  ತಮ್ಮ  ಬದುಕನ್ನು  ಆರಂಭಿಸಿದರೂ  ಅಮೆಚೂರ್  ರಂಗಭೂಮಿಯತ್ತ  ಅವರು ಆಸಕ್ತರಾದರು.  ಎರಡರ  ನಡುವಿನ  ಹವ್ಯಾಸಿ  ರಂಗಭೂಮಿಯನ್ನು  ಹುಟ್ಟು  ಹಾಕುವಲ್ಲಿ  ಅವರು  ಶ್ರಮಿಸಿದರು.. ‘ರಣಧೀರ ಕಂಠೀರವ’, 'ದಿವ್ಯದರ್ಶನ’, ‘ ರೊಟ್ಟಿಋಣ’   ಮೊದಲಾದ   ಅವರ  ನಾಟಕಗಳು  ಕುತೂಹಕಲಕರವಾಗಿವೆ. ಶ್ರೀರಂಗ ಎಂಬ ಹೆಸರಿನ  ಖ್ಯಾತ ನಾಟಕಕಾರರು  ಇದ್ದಿದ್ದರಿಂದ  ‘ರಂಗಪ್ರಿಯ’  ಎಂಬ ಹೆಸರನ್ನು  ಅವರು ನಾಟಕಗಳನ್ನು ಬರೆಯುವಲ್ಲಿ ಬಳಸಿ ಕೊಂಡರು.   ಎನ್.ಎಸ್.ರಾವ್  ಅವರು  ಬರೆದ  ಬಹುತೇಕ  ನಾಟಕಗಳಿಗೆ  ವಸ್ತುಗಳನ್ನು ಒದಗಿಸುತ್ತಿದ್ದವರು ಶ್ರೀರಂಗ ಅವರೇ.

'ಭೂಲೋಕದಲ್ಲಿ ಯಮರಾಜ’, 'ಬಿಸಿಲು ಬೆಳದಿಂಗಳು’, 'ಮನ ಮೆಚ್ಚಿದ ಸೊಸೆ’, 'ಅಶೋಕ ಚಕ್ರ’, 'ಅಂಜದ ಗಂಡು’, 'ಕಿಂದರಿ ಜೋಗಿ’, 'ಪ್ರೇಮ ಪರೀಕ್ಷೆ’  ಮೊದಲಾದ  ಚಿತ್ರಗಳ ಸಾಹಿತ್ಯ ವಿಭಾಗದಲ್ಲಿ ಕೂಡ  ಶ್ರೀರಂಗ ಅವರು ಕಾರ್ಯ ನಿರ್ವಹಿಸಿದ್ದರು. 

ಶ್ರೀರಂಗರ  ನಿಜವಾದ  ಮುಖ  ಎಂದರೆ  ತಂತ್ರ ಮಾರ್ಗದಲ್ಲಿನ  ಅವರ  ಸಾಧನೆ. ಅವರು  ಸ್ವತ:  ಸಾಧಕರು. ಅಘೋರಿಗಳ  ಜೊತೆ  ಒಡನಾಡಿದ್ದವರು. ನಾನು  ಅವರನ್ನು ಭೇಟಿ  ಮಾಡಿದ್ದಾಗಲೆಲ್ಲೆ   ಒಮ್ಮೆ  ಕೂಡ  ಅವರು  ಸಿನಿಮಾ ಕುರಿತು  ಮಾತನಾಡಿದ್ದು  ನೆನಪಿಲ್ಲ. ತಂತ್ರ ಮಾರ್ಗದ  ಸ್ವರೂಪ  ಸಾಧ್ಯತೆಗಳ   ಕುರಿತೇ  ಮಾತನಾಡುತ್ತಿದ್ದರು. ವಜ್ರೋಲಿ ಕುರಿತು  ಅಪಾರ  ಮಾಹಿತಿಯನ್ನು  ನನಗೆ  ನೀಡಿದವರು  ಅವರೇ.. ಕುಂಡಲಿನಿಯನ್ನು  ಅವರು  ಸಾಧಿಸಿದ್ದರು. ಕೆಲವು ಅತೀಂದ್ರಿಯ ಶಕ್ತಿಗಳನ್ನು  ಕೂಡ  ಅವರು  ಪ್ರದರ್ಶಿಸಿದ್ದು ಇದೆ. ಜ್ಯೋತಿಷದಲ್ಲಿ  ಕೂಡ   ಅವರಿಗೆ  ಅಪಾರ  ಆಸಕ್ತಿ. ಅದರಲ್ಲಿಯೂ  ನಾಡಿವಿದ್ಯೆಯನ್ನು  ಅವರು  ಚೆನ್ನಾಗಿ  ಅರಿತಿದ್ದರು. ಬಹಳಷ್ಟನ್ನು  ಸಾಧಿಸಿಯೂ  ಶ್ರೀರಂಗ  ತೆರೆ ಮರೆಯಲ್ಲಿಯೇ  ಉಳಿದರು.  

ಶ್ರೀರಂಗ ಅವರು 2021ರ ಮೇ 10ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.  ಯಾರೊಡೆನೆಯೂ  ಹೆಚ್ಚು  ಬೆರೆಯದ  ಅವರು  ಚಿತ್ರರಂಗದಂತಹ  ಕ್ಷೇತ್ರದಲ್ಲಿ ಇದ್ದರೂ ‘ಅನಾಮಿಕ’ರಾಗಿಯೇ  ಉಳಿದರು.  ಅವರ  ಕೊನೆಯ  ದಿನಗಳು  ಕಷ್ಟದ್ದಾಗಿದ್ದವು. 
ನನಗೆ  ಹೊಸ  ಲೋಕವನ್ನು  ಪರಿಚಯ  ಮಾಡಿದ್ದಂತಹ, ಕಾಣದ ಲೋಕದ  ಅನುಭೂತಿಯನ್ನು ಆ   ಚೇತನಕ್ಕೆ ಪ್ರಣಾಮಗಳು.

(ಈ ಲೇಖನವನ್ನು ನೀಡಿದ ಎನ್. ಎಸ್. ಶ್ರೀಧರಮೂರ್ತಿ ಅವರಿಗೆ ಕೃತಜ್ಞನಾಗಿದ್ದೇನೆ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ