ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಹ್ಲಾದರಾವ್


ಅ. ನಾ.  ಪ್ರಹ್ಲಾದರಾವ್


ಅ. ನಾ.  ಪ್ರಹ್ಲಾದರಾವ್
Happy birthday A N Prahlad Rao Sir

ಅ. ನಾ. ಪ್ರಹ್ಲಾದರಾವ್ ಪ್ರಸಿದ್ಧ ಬರಹಗಾರರು ಮತ್ತು ಪದಬಂಧ ಕ್ಷೇತ್ರದಲ್ಲಿ ದೇಶದಲ್ಲೇ ದಾಖಲೆಯ ಕೆಲಸ ಮಾಡುತ್ತಿರುವ ಸಾಧಕರು. 

ಪ್ರಹ್ಲಾದರಾವ್ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ 1953ರ ಜುಲೈ 24ರಂದು ಜನಿಸಿದರು. ತಂದೆ ಎ. ಆರ್. ನಾರಾಯಣರಾವ್.  ತಾಯಿ ಕಾವೇರಮ್ಮ. ಅಬ್ಬಣಿ, ಬೆಂಗಳೂರು, ಕೋಲಾರದಲ್ಲಿ ವ್ಯಾಸಂಗ ಮುಗಿಸಿ, ವಿಜ್ಞಾನ ಪದವೀಧರರಾದರು. ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಗಳಿಸಿದರು. 

ಪ್ರಹ್ಲಾದರಾವ್ 1975ರಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಕೋಲಾರದಿಂದ ಪ್ರಕಟಗೊಳ್ಳುವ ಕೋಲಾರಪತ್ರಿಕೆ ದೈನಿಕದಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಕೋಲಾರದಿಂದ ಪ್ರಕಟಗೊಳ್ಳುತ್ತಿರುವ ಹೊನ್ನುಡಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ (1979) ಮೂರು ವರ್ಷ ಕಾಲ ಆ ಪತ್ರಿಕೆಯನ್ನು ಮುನ್ನೆಡೆಸಿದರು. 1983ರಲ್ಲಿ ವಾರ್ತಾ ಇಲಾಖೆಗೆ ಸೇರ್ಪಡೆಗೊಂಡು, ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಕಾರ್ಯನಿರ್ವಹಿಸಿದರು. 1988ರಿಂದ 1990ರವರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಹಾಯಕ ಸಂಪರ್ಕ ಅಧಿಕಾರಿಯಾಗಿ, 1990ರಲ್ಲಿ ಹಾಸನ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಕಛೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. 1992ರಿಂದ 1996ರವರೆಗೆ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡಿದರು. 1996ರಿಂದ 2000ದ ವರೆವಿಗೂ ಮಂಡ್ಯ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2000ದಿಂದ 2003ರ ವರೆವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 2003ರಿಂದ ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಸುದ್ದಿ ಶಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2004ರ ನವೆಂಬರಿನಿಂದ 2011ರ ಆಗಸ್ಟ್ ತಿಂಗಳವರೆಗೆ ಸುಮಾರು ಏಳು ವರ್ಷಗಳ ಕಾಲ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಂದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2013ರಲ್ಲಿ ರಾಮನಗರ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿ, 2013ರ ಜುಲೈ ತಿಂಗಳಾಂತ್ಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. 2014ರಿಂದ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬಿ.ಎಂ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯಸರ್ಕಾರದ ಹಲವಾರು ಸಚಿವ‍ ಖಾತೆಗಳಿಗೆ ಪತ್ರಿಕಾ ಸಂಪರ್ಕಾಧಿಕಾರಿಗಳಾಗಿ ಸಹಾ ಇವರ ಸೇವೆ ಸಲ್ಲುತ್ತಿದೆ.

ಪ್ರಹ್ಲಾದರಾವ್ 1984ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿ 50,000ಕ್ಕೂ ಹೆಚ್ಚು ಪದಬಂಧಗಳನ್ನು ರಚಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಬಹುತೇಕ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗೊಳ್ಳುವ ನಿತ್ಯ ಪದಬಂಧಗಳಲ್ಲಿ ಬಹುಪಾಲು ಪ್ರಹ್ಲಾದರಾವ್ ಅವರದೆ ಆಗಿದೆ. ದಿನ ಪತ್ರಿಕೆಗಳ ಪುರವಣಿಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಇವರ ವೈವಿಧ್ಯಪೂರ್ಣ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಮಾನ್ಯ ಬಂಧಗಳೊಂದಿಗೆ, ಸಿನಿಮಾ, ಸಾಹಿತ್ಯ, ಅಪರಾಧ, ವಿಜ್ಞಾನ, ಪುರಾಣ, ತಿಂಡಿ-ತಿನಿಸು, ಕ್ರೀಡೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪದಬಂಧಗಳನ್ನು ಇವರು ರಚಿಸಿದ್ದಾರೆ. ಇದಕ್ಕಾಗಿ ಪ್ರಹ್ಲಾದ್ ಅವರು ಸುಮಾರು 15 ಲಕ್ಷಕ್ಕೂ ಮಿಗಿಲಾದ ಸುಳುಹುಗಳನ್ನು ಬರೆದಿದ್ದಾರೆ.

ಪ್ರಹ್ಲಾದರಾವ್ ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. 'ಅರಗಿಣಿ' ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರತಂದಿರುವ ಬೃಹತ್ ಕೃತಿ ಬೆಂಗಳೂರು ದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾ ಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತಾ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕ ವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ 'ನಂದೂಸ್ಪೀಕ್ಸ್' ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, ರೂಪತಾರ, ಸುಧಾ, ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ 'ಜಾನಪದಜಂಗಮ'ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.  ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ 'ಕನ್ನಡ ಚಲನಚಿತ್ರ: ದಲಿತ ಸಂವೇದನೆ' ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್‍ನಲ್ಲಿ ಅನೇಕ ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ 'ಅಮ್ಮ ಪಂಡರಿಬಾಯಿ' ಹಾಗೂ 'ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ' ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಅಭಿನಂದನ ಗ್ರಂಥ 'ನಿಸಾರ್ ನಿಮಗಿದೋ ನಮನ' ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೈ.ಎಸ್.ಗುಂಡಪ್ಪನವರ ಸ್ಮರಣ ಸಂಚಿಕೆ ಸೇರಿದಂತೆ ಹಲವಾರು ಸ್ಮರಣ ಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

2005ರ ಜುಲೈನಲ್ಲಿ ಡಾ.ರಾಜಕುಮಾರ್ ಅಭಿನಯದ ಐವತ್ತು ವರ್ಷಗಳ ಚಿನ್ನದ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲಿ ಏರ್ಪಡಿಸಿದ್ದ 'ಸಾರ್ಥಕ ಸುವರ್ಣ' ಸಮಾರಂಭದಲ್ಲಿ ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಪ್ರಹ್ಲಾದರಾವ್  ರಚಿಸಿದ 'ಬಂಗಾರದ ಮನುಷ್ಯ' ಕೃತಿ ಬಿಡುಗಡೆಗೊಂಡಿತು. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ 115 ಮಂದಿ ಮಹಾನುಭಾವರ ಪರಿಚಯ ಲೇಖನಗಳನ್ನೊಳಗೊಂಡ 'ಬೆಳ್ಳಿತೆರೆ ಬೆಳಗಿದವರು' ಕೃತಿ 2007ರ ಮೇ ತಿಂಗಳಿನಲ್ಲಿ ಲೋಕಾರ್ಪಣೆಗೊಂಡಿತು. 

ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಪ್ರಹ್ಲಾದರಾವ್ ರಚಿಸಿದ ಪದಬಂಧಗಳ 5 ಪುಸ್ತಕಗಳು 2008ರಲ್ಲಿ ಬಿಡುಗಡೆಗೊಂಡಿತು. 2008ರ ಮೇ ತಿಂಗಳಿನಲ್ಲಿ 'ಬಂಗಾರದ ಮನುಷ್ಯ' ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ಕನ್ನಡ ಸಂಘ 'ಬೃಂದಾವನ'ದಲ್ಲಿ ಲೋಕಾರ್ಪಣೆಗೊಂಡಿತು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ವಜ್ರಮಹೋತ್ಸವ ಅಂಗವಾಗಿ ಡಾ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಹೊರ ತಂದ 75 ಪುಸ್ತಕಗಳಲ್ಲಿ ಪ್ರಹ್ಲಾದರಾವ್ ಅವರು ಡಾ. ರಾಜಕುಮಾರ್ ಹಾಗೂ ಕರಿಬಸಯ್ಯನವರ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ. ಅ.ನಾ. ಪ್ರಹ್ಲಾದರಾವ್ ರಚಿಸಿದ ಭಾವಗೀತೆಗಳ ಸಾಂದ್ರಿಕೆ 'ವಸಂತ ಮಲ್ಲಿಕಾ' 2009ರಲ್ಲಿ ಬಿಡುಗಡೆಗೊಂಡಿತು. ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿರುವ ಈ ಗೀತೆಗಳನ್ನು ಅಮೆರಿಕದಲ್ಲಿ ನೆಲೆಸಿರುವ ಗಾಯಕಿ ಶ್ರೀಮತಿ ವಸಂತ ಶಶಿ ಹಾಡಿದ್ದಾರೆ.  ಹಿರಿಯ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಅವರು ತಮ್ಮ ಆಡಳಿತ ಅನುಭವಗಳನ್ನು ಕುರಿತು ರಚಿಸಿದ "ಜೈತ್ರಯಾತ್ರೆ" ಪುಸ್ತಕವನ್ನು ಕನ್ನಡದಲ್ಲಿ ಅ.ನಾ.ಪ್ರಹ್ಲಾದರಾವ್ ಸಿದ್ಧಗೊಳಿಸಿದ್ದಾರೆ. ಪದಲೋಕ ಮತ್ತು ಪದಕ್ರೀಡೆ 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೆರಡು ಪದಬಂಧ ಪುಸ್ತಕಗಳು. ಪ್ರಹ್ಲಾದರಾವ್ ಅವರು ರಚಿಸಿದ ಡಾ. ರಾಜಕುಮಾರ್ ಅವರನ್ನು ಕುರಿತು 2013ರ ಅಕ್ಟೋಬರ್ ತಿಂಗಳಿನಲ್ಲಿ ಮೂಡಿಸಿದ ಮತ್ತೊಂದು ಸ್ವಾರಸ್ಯಕರ ಸಂಗತಿಗಳ ಪುಸ್ತಕ 'ಪ್ರಾಣಪದಕ' . ಇದು ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ನೆನಪಿನಾಳದಲ್ಲಿನ ಡಾ. ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ ಕೃತಿಯಾಗಿದೆ. 'ನನ್ನ ದಾರಿ ವಿಭಿನ್ನ ದಾರಿ - ರಜನಿಕಾಂತ್' ಎಂಬುದು ಪ್ರಹ್ಲಾದರಾವ್ ರಚಿತ ಮತ್ತೊಂದು ಜನಪ್ರಿಯ ಕೃತಿ.  ಇದು ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ರಚಿತಗೊಂಡಿದೆ.  ರಾಷ್ಟ್ರೋತ್ಥಾನ ಪರಿಷತ್ತು 2014ರಲ್ಲಿ ಹೊರ ತಂದ 50 ಹೊತ್ತಿಗೆಗಳ 'ಭಾರತ ಭಾರತಿ' ಪುಸ್ತಕಮಾಲೆಯಲ್ಲಿ ಅ.ನಾ.ಪ್ರಹ್ಲಾದರಾವ್ ಅವರು 20ನೆಯ ಶತಮಾನದ 30-40ರ ದಶಕದಲ್ಲಿ ಹಿಂದಿ ಹಾಗೂ ಮರಾಠಿ ಚಲನಚಿತ್ರರಂಗದಲ್ಲಿ ಪ್ರಖ್ಯಾತಿಗೊಂಡಿದ್ದ ನಟಿ ಕನ್ನಡತಿ ಶಾಂತಾ ಹುಬ್ಳೀಕರ್ ಅವರನ್ನು ಕುರಿತಂತೆ ಕಿರು ಪುಸ್ತಕ ರಚಿಸಿದ್ಧಾರೆ. ಕನ್ನಡದ ಮೇರು ನಿರ್ದೇಶಕ, ನಿರ್ಮಾಪಕ, ನಟ ಬಿ.ಆರ್. ಪಂತುಲು ಅವರನ್ನು ಕುರಿತಂತೆ ಪ್ರಹ್ಲಾದರಾವ್ ರಚಿಸಿರುವ 'ದಣಿವಿಲ್ಲದ ಧಣಿ' ಪುಸ್ತಕವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದೆ. ಈ ಕೃತಿಗಳಲ್ಲದೆ ಅನೇಕ ತೆರನಾದ ಪದಬಂಧ ಕೃತಿಗಳು ಮತ್ತು ಇತರ ಕೃತಿಗಳು ಪ್ರಹ್ಲಾದರಾವ್ ಅವರಿಂದ ನಿರಂತರ ಮೂಡಿಬರುತ್ತಿವೆ. ಡಿ. ಕೆ. ರವಿ ದುರಂತ ಕಥೆ 'ನಗ್ನಸತ್ಯ' ಇವರ ಅನುವಾದಿತ ಕೃತಿ. 

ಪ್ರಹ್ಲಾದರಾವ್ ಅವರಿಗೆ ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ 'ಪ್ರಜಾರತ್ನ' 'ಪದಬಂಧ ಬ್ರಹ್ಮ', 'ಪದಬಂಧ ಸಾಮ್ರಾಟ್', ಮುಂತಾದ ಬಿರುದುಗಳನ್ನು ನೀಡಿವೆ. 'ವಿಶ್ವೇಶ್ವರಯ್ಯ ಪ್ರಶಸ್ತಿ', 'ಕರುನಾಡ ಭೂಷಣ', 'ಕರ್ನಾಟಕ ವಿಭೂಷಣ' ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ 'ಆರ್ಯಭಟ', 'ಕೆಂಪೇಗೌಡ ಪ್ರಶಸ್ತಿ', 'ಶ್ರೀಕಣ್ವಶ್ರೀ', 'ಶಿಂಷಾಶ್ರೀ', 'ಬೆಂಗಳೂರು ರತ್ನ', 'ಹಂಸರತ್ನ' ಮುಂತಾದ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಹಲವಾರು ವರ್ಷಗಳು ನಿರಂತರವಾಗಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಪದಬಂಧ ಸೃಷ್ಟಿಗಾಗಿ ಇವರ ಹೆಸರು ದಾಖಲಾದ ಗೌರವ ಸಂದಿದೆ. 

A. N. Prahlad Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ