ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಷೇಕ್ ಅಲಿ


 ಬಿ. ಷೇಕ್ ಅಲಿ 

ಪ್ರೊ. ಬಿ. ಷೇಕ್ ಅಲಿ ಇತಿಹಾಸ ತಜ್ಞರಾಗಿ, ಶಿಕ್ಷಣ ತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದರು. 

ಷೇಕ್ ಅಲಿ ಅವರು ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದಲ್ಲಿ 1925ರ ವರ್ಷದಲ್ಲಿ ಜನಿಸಿದರು.   ತಂದೆ ಗುಲಾಂ ಮುಹಿಯುದ್ದೀನ್.  ತಾಯಿ ಕುಲ್ಸುಮ್ ಬೀ.  ಷೇಕ್ ಅಲಿ ಅವರು 1945ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಆನರ್ಸ್ ಪದವಿಯನ್ನು ಪಡೆದರು.  1954ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಹಾಗೂ 1960ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು. 

ಬಿ. ಷೇಕ್ ಅಲಿ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು.  ಮುಂದೆ ಅವರು ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.  ಕನ್ನಡ, ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ  ಪ್ರೊ. ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. 

ಷೇಕ್ ಅಲಿಯವರು ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಪ್ರತಿಷ್ಠಿತ ಕರ್ನಾಟಕದ ಇತಿಹಾಸದ ಏಳು ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದರು.  ಅವರು ಡಾ. ಜಾಕಿರ್ ಹುಸೇನ್ ಮೆಮೊರಿಯಲ್ ಟ್ರಸ್ಟ್, ಇಂಡಿಯನ್ ಹಿಸ್ಟಾರಿಕಲ್ ರಿಕಾರ್ಡ್ಸ್ ಕಮಿಷನ್ ಮುಂತಾದವುಗಳ ಸದಸ್ಯರಾಗಿ, ಆಲ್-ಅಮೀನ್ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಷೇಕ್ ಅಲಿಯವರು ಪ್ರಾಚೀನ ಕರ್ನಾಟಕದ ಐತಿಹಾಸಿಕ ಅಧ್ಯಯನಗಳಿಗೆ ಕೊಡುಗೆಗಳನ್ನು ನೀಡಿದ್ದರು. ಗಂಗರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದ್ದ ಅವರು, ಗಂಗರು ದಕ್ಷಿಣ ಕರ್ನಾಟಕದ ಮೂಲದವರು ಮತ್ತು ಅವರ ಪೂರ್ವಜರು ಕರ್ನಾಟಕದ ದಕ್ಷಿಣ ಜಿಲ್ಲೆಗಳ ಕಡೆಯವರು ಎಂಬ ವಾದವನ್ನು ಬೆಂಬಲಿಸಿದ್ದರು. ಆರಂಭದಲ್ಲಿ ಗಂಗರು ಜೈನರಾಗಿದ್ದರು ಎಂಬ ಅಂಶವನ್ನು ಅವರು ಅನುಮೋದಿಸಲಿಲ್ಲ. ಅಲಿ ಅವರು ತಮ್ಮ ಅನೇಕ ಕೃತಿಗಳಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಇತಿಹಾಸವನ್ನು ದಾಖಲಿಸಿದ್ದಾರೆ.

‘ಹಿಸ್ಟರಿ: ಇಟ್ಸ್‌‌ ಥಿಯರಿ ಆಂಡ್‌ ಮೆಥಡ್‌’,  ‘ಹಿಸ್ಟರಿ ಆಫ್‌ ದಿ ವೆಸ್ಟರ್ನ್‌‌ ಗಂಗಾಸ್ ‌(ಕಾಂಪ್ರೆಹೆನ್ಸಿವ್‌ ಹಿಸ್ಟರಿ ಆಫ್‌ ಕರ್ನಾಟಕ- 1 ನೇ ಸಂಪುಟ’), ಗೋವಾ ವಿನ್ಸ್ ಫ್ರೀಡಂ: ರಿಫ್ಲೆಕ್ಷನ್ಸ್ ಅಂಡ್ ರಿಮಿನಿಸೆನ್ಸ್’, ‘ಟೀಪು ಸುಲ್ತಾನ್; ಎ ಗ್ರೇಟ್‌ ಮಾರ್ಟರ್ ‌‌(ಸಂಪಾದನೆ), ‘ಟೀಪು ಸುಲ್ತಾನ್’, ‘ಬ್ರಿಟೀಷ್ ರಿಲೇಷನ್ಸ್‌ ವಿತ್‌ ಹೈದರ್‌ ಅಲಿ’, ‘ಎ ಗ್ರೇಟ್‌ ಟೀಚರ್‌‌’, ‘ಇಸ್ಲಾಂ, ಎ ಕಲ್ಚರ್‌ ಓರಿಯಂಟೇಷನ್’ ಮುಂತಾದವು ಷೇಕ್ ಅಲಿ ಅವರ ಕೃತಿಗಳಲ್ಲಿ ಸೇರಿವೆ. 

ಪ್ರೊ. ಷೇಕ್ ಅಲಿಯವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯ ಹಂಪಿಯ ಗೌರವ ಡಿ.ಲಿಟ್ ಮುಂತಾದ ಅನೇಕ ಗೌರವಗಳು ಸಂದಿದ್ದವು. 

ಪ್ರೊ. ಬಿ. ಷೇಕ್ ಅಲಿ 2022ರ ಸೆಪ್ಟೆಂಬರ್ 1ರಂದು ಈ ಲೋಕವನ್ನಗಲಿದರು.

On Rememberance day of Prof. B. Sheikh Ali 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ