ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣನೆಲ್ಲಿಹ ತೋರಮ್ಮಾ



 ಕೃಷ್ಣನೆಲ್ಲಿಹ ತೋರಮ್ಮಾ ಅಮ್ಮಾ , 
ಕೃಷ್ಣನೆಲ್ಲಿಹ ತೋರಮ್ಮಾ !!


ಮಣ್ಣು ತಿಂದನೆಂದು ಬಾಯಿ ತೆರೆಸಲು 
ಭೂಮಂಡಲವನೇ ಕಂಡಳಂತೆ ಅವರಮ್ಮ !
ಆ ಕೃಷ್ಣನೆಲ್ಲಿಹ ತೋರಮ್ಮಾ ಅಮ್ಮಾ...
ಚೆಲ್ಲು ಚೆಲ್ಲಾಟದಲೆ ಹರುಷದ ಮಳೆಗರೆವನಂತೆ 
ನಿಷ್ಕಲ್ಮಶದಾನಂದದ ರುಚಿ ತೋರುವನಂತೆ ! 
ಆ ಕೃಷ್ಣನೆಲ್ಲಿಹ ತೋರಮ್ಮಾ ಅಮ್ಮಾ ....

ದುಷ್ಟರ ಸಂಹರಿಸಿ ಶಿಷ್ಟರ ರಕ್ಷಿಪನಂತೆ 
ಕಷ್ಟ ಕಾಲದಲಿ ಕರೆಯೆ ನಿಷ್ಠೆಯಲಿ ಬಂದು ಸಲಹುವನಂತೆ ! 
ಆ ಕೃಷ್ಣನೆಲ್ಲಿಹ ತೋರಮ್ಮ ಅಮ್ಮಾ ...‌

ಅಕ್ಕರೆಯಲಿ ಕರೆಯಲು ಚಕ್ಕನೆ ಪಕ್ಕಕೆ  ಬರುವನಂತೆ 
ಸಕ್ಕರೆ ಸವಿ ನಗೆ ಹರಿಸುವನಂತೆ ! 
ಆ ಕೃಷ್ಣನೆಲ್ಲಿಹ ತೋರಮ್ಮ ಅಮ್ಮಾ...

ರಾಧೆಯು  ಮನದಲಿ ನೆನದೊಡನೆ ಬರುವನಂತೆ 
ತೆಕ್ಕನೆ ಮನ ಮೈ ಮರೆಸಿ ಪಕ್ಕದಲೆ ಪ್ರೇಮದಿ ತೋರುವನಂತೆ ! 
ಆ ಕೃಷ್ಣನೆಲ್ಲಿಹ ತೋರಮ್ಮ ಅಮ್ಮಾ ....

ಕಂದಾ ,
ಭಕುತಿಯಲಿ ಪ್ರೇಮದಲಿ 
ಮೊರೆಯಿಡಲು ಕೃಷ್ಣನಲಿ 
ಆಗುವೆ ನೀನೆ ರಾಧೆ ಕ್ಷಣದಲಿ 
ಆದೊಡನೆ ಬರುವನು ಕೃಷ್ಣ ಬಳಿಯಲಿ .
ರಾಧೆ ಕೃಷ್ಣರೊಂದಾಗಿರಲು 
ನೀನೆ ಕೃಷ್ಣನು ನಿಜದಲಿ ,
ಕಂದಾ 
ನೀನೆ ಕೃಷ್ಣನು ನಿಜದಲಿ.

ಸಾಹಿತ್ಯ: ಸಂಪಿಗೆ ತೋಂಟದಾರ್ಯ
Thontadarya Sampige

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ