ಆರ್. ಎನ್. ಪದ್ಮನಾಭ
ಆರ್. ಎನ್. ಪದ್ಮನಾಭ
ನಮ್ಮ ಆರ್. ಎನ್. ಪದ್ಮನಾಭ ಸಾರ್ ನಾನು ವೃತ್ತಿಗೆ ಬಂದ ದಿನಗಳಲ್ಲಿ ನಮಗೆ ಅಧಿಕಾರಿಗಳಾಗಿದ್ದವರು.
ರುದ್ರಪಟ್ನ ಪದ್ಮನಾಭ ಅವರ ಜನ್ಮದಿನ 1940ರ ಸೆಪ್ಟೆಂಬರ್ 3.
ಕಷ್ಟಪಟ್ಟು ಓದಿ ಮೇಲೆ ಬಂದ ಪದ್ಮನಾಭ ಅವರು ಎಚ್‍ಎಮ್‍ಟಿ ಕೈಗಡಿಯಾರದ ಕಾರ್ಖಾನೆಗಳ ಪರಿಧಿಯಲ್ಲಿನ ಬೆಂಗಳೂರು, ಕಾಶ್ಮೀರದ ಶ್ರೀನಗರ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ, ನಮ್ಮ ಯುಗದಲ್ಲಿ ಕೈಗಡಿಯಾರ ಮಾರುಕಟ್ಟೆ ವಿಭಾಗದ ಲೆಕ್ಕಪತ್ರ ವಿಭಾಗಗಳಲ್ಲಿ ಹಿರಿಯ ಅಧಿಕಾರಿಗಳಾಗಿ, ವ್ಯವಸ್ಥಾಪಕರಾಗಿದ್ದವರು.
ಸಮಸ್ತ ಭಾರತದಲ್ಲಿ ಎಲ್ಲೆಡೆ ವ್ಯಾಪಿಸಿದ್ದ ಕೈಗಡಿಯಾರ ಮಾರಾಟ ಕಚೇರಿಗಳ ಮಾರಾಟ, ಖರ್ಚು - ವೆಚ್ಚ - ತೆರಿಗೆ ಇತ್ಯಾದಿ ವಿವರಗಳನ್ನು ಬೆಂಗಳೂರಿಗೆ ತರಿಸಿ ಅದರ ಸಮಸ್ತ ಲೆಕ್ಕಪತ್ರಗಳ ನಿರ್ವಹಣೆ, ಹಣ ವಸೂಲಿ, ಉತ್ಪಾದನಾ ಘಟಕಗಳಿಗೆ ಹಣ ಪೂರೈಕೆ, ಸಿಬ್ಬಂದಿ ವ್ಯವಸ್ಥೆ, ಆಡಿಟ್ ಇತ್ಯಾದಿಗಳ ಹೊಣೆ ಇತ್ಯಾದಿ ಎಲ್ಲವನ್ನೂ ಕಂಪ್ಯೂಟರ್ ಇನ್ನೂ ಇಲ್ಲದ ಅಂದಿನ ಯುಗದಲ್ಲಿ ನಡೆಸುವುದು ಸುಲಭವಿರಲಿಲ್ಲ. ಮುಂದೆ ಕಂಪ್ಯೂಟರ್ ಯುಗ ಕಾಲಿಟ್ಟಾಗಲೂ ಅದಕ್ಕೆ ಬೇಕಾದಂತೆ ವ್ಯವಸ್ಥೆಗಳನ್ನು ಹುಡುಕುವುದು, ಬೇಕಾದ ತರದಲ್ಲಿ ಮಾಹಿತಿ ವ್ಯವಸ್ಥೆಗೊಳಿಸುವುದು ಮುಂತಾದ ಎಲ್ಲವೂ ಅಪಾರ ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ಅವಲಂಬಿಸಿರುತ್ತಿತ್ತು. ಇವೆಲ್ಲವನ್ನೂ ಯೋಜಿಸಿ ನಡೆಸಿ, ಬೆಳಗ್ಗೆ ಏಳಾಗುತ್ತಿದ್ದಂತೆ ಆಫೀಸು ತಲುಪಿ ರಾತ್ರಿ ಹೊತ್ತು ಗೊತ್ತಿಲ್ಲದವರೆಗೆ, ವಾರಾಂತ್ಯದ ಅರಿವೂ ಇಲ್ಲದ ಹಾಗೆ ದುಡಿಯುತ್ತಿದ್ದ ಅಸಾಮಾನ್ಯ ಜೀವಿ ಪದ್ಮನಾಭ. ತಾವು ದುಡಿಯುತ್ತಿದ್ದುದೇ ಅಲ್ಲದೆ ಇಡೀ ತಮ್ಮ ತಂಡವನ್ನು ಹಾಗೆ ದುಡಿಯುವಂತೆ ನಾಯಕತ್ವ ನಿರ್ವಹಿಸಿದವರು ಪದ್ಮನಾಭ ಅವರು.
ಹೀಗೆ ತಾನೂ ಹಗಲಿರುಳು ದುಡಿದು ತನ್ನ ತಂಡವನ್ನು ಅದಕ್ಕೆ ಪ್ರೇರಿಸಿ ನಡೆಸುತ್ತಿದ್ದ ಪದ್ಮನಾಭ ಅವರು ನಡೆಸುತ್ತಿದ್ದ ಆ ದಿನಗಳನ್ನು ನೆನೆದರೆ ಅಚ್ಚರಿ ಎನಿಸುತ್ತದೆ. ಜೊತೆಗೆ ನಮಗೆ ಅಂದಿನ ದಿನಗಳಲ್ಲಿ ಹೀಗೆ ದುಡಿಯಲು ಮಾರ್ಗದರ್ಶನ ಸಿಕ್ಕ ಕಾರಣದಿಂದಲೇ ನಮಗೆ ಕೆಲಸ ಕಲಿಯುವುದು ಸಾಧ್ಯವಾಯಿತು ಮಾತ್ರವಲ್ಲ, ಮುಂದೆ ನಾನು ಮುಂದೆ ನಾಲ್ಕು ದಶಕಗಳನ್ನು ಮೀರಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಹುದ್ದೆಯ ಯಾವುದೇ ಸವಾಲು ಕೂಡಾ ದೊಡ್ಡದೆನಿಸಲಿಲ್ಲ. ನನಗೆ ಹಾಗೆ ಯಾವುದಾದರೂ ಕೆಲಸ ಸವಾಲು ಅನಿಸಿದಾಗ ಅಂದಿನ ದಿನಗಳಲ್ಲಿ ಪದ್ಮನಾಭ ಅಂತಹ ಹಿರಿಯರ ಮಾರ್ಗದರ್ಶನದಿಂದ ರೂಢಿಸಿಕೊಂಡ ಪದ್ಧತಿಗಳು ನೆನಪಾಗುತ್ತಿತ್ತು.
ಎಲ್ಲರಿಗೂ ಪದ್ಮನಾಭ ಅವರಂತಹ ಶಿಸ್ತಿನ ಸಿಪಾಯಿಗಳು ಮಾರ್ಗದರ್ಶಕರಾಗಿ ಸಿಗುವುದಿಲ್ಲ. ಆದರೆ ನಮಗೆ ಅಂತಹ ಅದೃಷ್ಟ ಲಭಿಸಿತ್ತು.
ಈಗ ನಮ್ಮ ಆರ್. ಎನ್. ಪದ್ಮನಾಭ ಸಾರ್ ಅವರಿಗೆ 85 ವರ್ಷ. ಈಗಲೂ ಬಸ್ ಹಿಡಿದು, ಒಂದಷ್ಟು ನಡೆದು, ಬೆಳಗ್ಗೆ ಎಲ್ಲರಿಗಿಂತ ಮೊದಲು ತಾವು ಕೆಲಸ ಮಾಡುವ ಕಚೇರಿ ತಲುಪಿ ಕೆಲಸ ಮಾಡುತ್ತಾರೆ. ಬಹುಶಃ ತಮ್ಮ ಕೆಲಸದಲ್ಲೇ ಆತ್ಮ ಸಂತೋಷ ಕಂಡುಕೊಂಡ ಅಪೂರ್ವ ಜೀವಿ ಪದ್ಮನಾಭ. ಹೀಗಾಗಿ ಅವರಿಗೆ ದುಡಿಯದೆ ಇರಲು ಸಾಧ್ಯವೇ ಇಲ್ಲ. ಸಮಾಜ ಸೇವೆಯಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ.
ನನಗಂತೂ ಒಂದು ಪದವಿ ಎಂದು ಪಡೆದಾಗ ವೃತ್ತಿ ಅಂದರೇನು, ಕೆಲಸ ಅಂದರೆ ಏನು, ಆಫೀಸಿನಲ್ಲಿ ಪೆನ್ನು, ಪೆನ್ಸಿಲ್ಲು, ರಬ್ಬರು, ಹಾಳೆ, ಸ್ಕೇಲು, ಕ್ಯಾಲ್ಕುಲೇಟರ್, ಫೋನು ಇತ್ಯಾದಿ ಯಾವುದನ್ನು ಹೇಗೆ ಬಳಸಬೇಕು ಅಂತ ಗೊತ್ತಿರಲಿಲ್ಲ. ನನ್ನಂತಹ ಮೊದ್ದುಗಳಿಗೆಲ್ಲ ಕೆಲಸ ಹೇಳಿಕೊಟ್ಟು, ನಮಗೆ ಬದುಕಿನ ದಾರಿ ತೋರಿದ ಇಂತಹ ಹಿರಿಯರ ಪರಿಶ್ರಮಕ್ಕೆ ಏನೆನ್ನುವುದು.
ಪದ್ಮನಾಭ ಸಾರ್, 'ಟೀಚರ್ಸ್ ಡೇ'ಗೆ ಎರಡು ದಿನ ಮೊದಲೇ ನಿಮ್ಮ ಹುಟ್ಟು ಹಬ್ಬ. ನನಗೆ ಯಾವುದೇ ಗುರುಗಳನ್ನು ನೆನೆಯುವಾಗ ಮೊದಲು ನೀವು ನೆನಪಾಗುತ್ತೀರಿ. ನೀವು ನನಗೆ ವೃತ್ತಿ ಬದುಕಿನ ಅಮೂಲ್ಯ ಗುರು.
ಪದ್ಮನಾಭ ಸಾರ್ ನಿಮ್ಮ ಹಿರಿತನದ ಬದುಕು ಸದಾ ಸುಖ, ಸೌಖ್ಯ, ನೆಮ್ಮದಿಗಳಿಂದಿರಲಿ. ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday to my Guru Rudrapatna Padmanabha Sir 🌷🙏🌷
ಕಾಮೆಂಟ್‌ಗಳು