ಸ್ನೇಹಜೀವಿ ಅವಿನಾಶ್
ಸ್ನೇಹಜೀವಿ ಅವಿನಾಶ್
ಸದ್ದುಗದ್ದಲವಿಲ್ಲದೆ ಅಪಾರವಾದ ಕನ್ನಡ ಕೆಲಸ ಮಾಡುತ್ತಿರುವ ಕೆಲವೊಂದು ವಿಶಿಷ್ಟರನ್ನು ನಾನು ಕಂಡಿದ್ದೇನೆ. ಅಂತಹವರಲ್ಲಿ ಅವಿನಾಶ್ ಒಬ್ಬರು.
ನವೆಂಬರ್ 5 ಅವಿನಾಶ್ ಹುಟ್ಟುಹಬ್ಬ. ಇವರು ಭದ್ರಾವತಿಯ ಮೂಲದವರು.
ಅವಿನಾಶ್ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾನು ಕಂಡು ಒಂದು ಅದ್ಭುತ ಬೆಳಕು. ನನಗೆ ತಿಳಿದ ಹಾಗೆ ಅವರು ಕಳೆದ ಒಂದೂವರೆ ದಶಕದಲ್ಲಿ ಹಲವು ಅಧ್ಯಕ್ಷರುಗಳ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪರಿಷತ್ತಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಅದಕ್ಕೆ ಸಂಬಂಧ ಪಟ್ಟ ವಿವರಗಳು, ಯಾವುದೇ ಸಭೆ- ಕಾರ್ಯಕ್ರಮದ ಆಯೋಜನೆಯ ಸಂವಹನ ಇವುಗಳೆಲ್ಲವನ್ನೂ ಒಂದಿಷ್ಟೂ ತಪ್ಪಿಲ್ಲದೆ ಸುವ್ಯವಸ್ಥಿತವಾಗಿ ನಿರ್ವಹಿಸುವ ಅಸಾಮಾನ್ಯ ಸಾಮರ್ಥ್ಯಶಾಲಿ. ಅಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾವಾರು ಪ್ರತಿನಿಧಿಗಳು, ವಿವಿಧ ಸಮಿತಿಗಳ ಗಣ್ಯರು, ಸಭೆಯ ಅತಿಥಿಗಳು ಇತ್ಯಾದಿಗಳೆಲ್ಲರಿಗೆ ಬೇಕಿದ್ದ ವಿವರಗಳು, ದಾಖಲೆಗಳು, ಇತ್ಯಾದಿಗಳನ್ನು ಅವರು ಸಂಯಮಿಯಾಗಿ ನಗುನಗುತ್ತ ಟೈಪಿಸಿ ತಪ್ಪಿಲ್ಲದಂತೆ ಅವರು ಒದಗಿಸುವ ರೀತಿ ಅಚ್ಚರಿ ಹುಟ್ಟಿಸುವಂತದ್ದು.
ಮತ್ತೊಂದು ವಿಶೇಷವೆಂದರೆ ಕೆಲವು ವಯಸ್ಸಾದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಭಾಷಣವನ್ನು ಮಾಡಲು ಅನುವಾಗುವ ಹಾಗೆ ಅವರ ಮಾತುಗಳನ್ನು ಆಲಿಸಿ ಬರೆದುಕೊಂಡು ಅವರಿಗೆ ಭಾಷಣವನ್ನು ಸಿದ್ಧಪಡಿಸಿಕೊಟ್ಟವರು ಅವಿನಾಶ್.
ಅವಿನಾಶ್ ಉತ್ತಮವಾಗಿ ಕವಿತೆ ಮತ್ತು ಲೇಖನ ಬರೆಯುತ್ತಾರೆ. ಅವರದ್ದು ಸದಾ ಕನ್ನಡ ಪರ ಕಾಳಜಿ, ಯಾವುದೇ ದುರಭ್ಯಾಸಗಳ ಸೋಂಕಿಲ್ಲದ ಶುದ್ಧ ಹವ್ಯಾಸಗಳು. ಚಿತ್ರ ವಿಚಿತ್ರ ಜನರ ಜೊತೆ ವ್ಯವಹರಿಸುವಾಗಲೂ ಒಂದಿನಿತೂ ಬೇಸರ ತೋರದೆ ತಮ್ಮ ಕೆಲಸವನ್ನು ಹಗಲಿರುಳು ನಿಷ್ಠೆಯಿಂದ ಮಾಡುತ್ತಾ ಎಲ್ಲರೊಂದಿಗೆ ಸ್ನೇಹಭಾವದಲ್ಲಿದ್ದು ಎಲ್ಲ ವರ್ಗದ, ಎಲ್ಲ ಅವಧಿಯ ಜನರಿಂದಲೂ ಗೌರವ ಪಡೆದಿರುವ ಅಪೂರ್ವ ಅಜಾತಶತ್ರು.
ಶ್ರೇಷ್ಠ ಬಿರುದುಗಳನ್ನು ವೇದಿಕೆಗಳಲ್ಲಿ ಪಡೆಯುವವರು ಆ ಬಿರುದುಗಳಿಗೆ ಹೇಗೆ ಜೀವಿಸುತ್ತಾರೆ ಎಂಬುದು ಸಾರ್ವಜನಿಕವಾಗಿ ಗುಟ್ಟಾಗಿರುವುದಿಲ್ಲ. ಆದರೆ ತಮ್ಮನ್ನು ತಾವೇ ಸ್ನೇಹಜೀವಿ ಎಂದು ಕರೆದುಕೊಂಡು ಅದಕ್ಕೆ ಅನ್ವರ್ಥವಾಗಿ ಶುದ್ಧವಾಗಿ ಬಾಳುವ ಸ್ನೇಹಜೀವಿ ಅವಿನಾಶ್ ಅಂತಹವರು ನಿಜಕ್ಕೂ ಅಪರೂಪ.
ಆತ್ಮೀಯರಾದ ಸ್ನೇಹಜೀವಿ ಅವಿನಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಿಮ್ಮ ಸ್ನೇಹವಂತೂ ನನ್ನ ಭಾಗ್ಯಗಳಲ್ಲೊಂದು.
Happy birthday Avinash 🌷🌷🌷
ಕಾಮೆಂಟ್ಗಳು