ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೇಮವೆಂಬ ಸಂಜೀವಿನಿ


ಪ್ರೇಮವೆಂಬ ಸಂಜೀವಿನಿ
Love is the solution


ಲವ್ ಅಂದರೇನು, ಅದು ಹೇಗಿದೆ ಗೊತ್ತೇನು; ಲವ್ ಅಂದರೆ ಯಾರೂ ಬಿಡಿಸದ ಬಂಧನ; ಪಂಚಮ ವೇದ ಪ್ರೇಮದ ನಾದ; ಓ ಪ್ರೇಮ ನೀನೆಷ್ಟು ಸುಂದರ; ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ; ರಾಧಾ ಮಾಧವ ವಿನೋದಹಾಸ; ಓಂಕಾರದೆ ಕಂಡೆ ಪ್ರೇಮ ನಾದವ; ಪ್ರೇಮವಿದೆ ಮನದೆ ನಗುತ ಹೂವಾದೆ; ನನ್ನಲ್ಲೂ ನಿನ್ನಲ್ಲೂ ಒಂದಾದ ಪ್ರೇಮ ಮುಂಜಾನೆ ಮಂಜಂತೆ; ನಿನ್ನ ಪ್ರೇಮಜ್ವಾಲೆ ಸೋಕೆ ನನ್ನ ಮೇಲೆ ಕರಗಿ ಕರಗಿ ನೀರಾದೆ ನಾನು;  ಹೀಗೆ ಅನೇಕ ಚಿತ್ರ ಗೀತೆಗಳು ನೆನಪಾಗುತ್ತೆ.  ಬಹುಶಃ ನಮ್ಮಲ್ಲಿ ಪ್ರೇಮವೆಂಬ ಕಲ್ಪನೆಯೇ ಸಿನೀಮಯ.

ಪ್ರೀತಿ, ಒಲುಮೆ, ಪ್ರೇಮ ಅದೆಲ್ಲ ಅದೆಷ್ಟೆಷ್ಟೋ ಕತೆಗಳಲ್ಲಿ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಓದಿದ್ದೇವೆ.  ಆದ್ರೂ ಇದರಂಥ ಅರ್ಥ ಆಗದಿರುವ ವಿಚಾರ ಮತ್ತೊಂದಿಲ್ಲ. ಎಲ್ಲರೂ ಬಯಸುವ ಆದರೂ ಹೊರಮುಖಿಯಾಗಿ ಅದನ್ನು ಅಪರಾಧವೆನ್ನುವ, ಯಾವುದಾದರೂ ವಿಷಯ ಲೋಕದಲ್ಲಿದ್ದರೆ ಅದು ಪ್ರೇಮ.  

ಇಂಗ್ಲಿಷಿನಲ್ಲಿ ಲವ್ ಅನ್ನೋದಕ್ಕೆ ಪ್ರೀತಿ, ಪ್ರೇಮ, ಒಲುಮೆ ಹೀಗೆ ಹಲವು ಪದ. ಶಬ್ದಕೋಶ ಇವನ್ನು ಹಲವು ರೀತಿಯಲ್ಲಿ ವಿಂಗಡಿಸಿ ಹಲವು ಸಂದರ್ಭಗಳಿಗೆ ಅನ್ವಯಿಸುತ್ತದೆ.  ಬಹಳ ಜನ ನಿಘಂಟುಗಳು ಜೊತೆ ಇದ್ರೆ ಬರೀಬಹುದು ಅಂತ ನಂಬಿ, ಈ ಆಪ್ಗಳು ಆಟೋ ಟ್ರಾನ್ಸಲೇಷನ್ ಮಾಡೋಕಿಂತ ಕೆಟ್ಟದಾಗಿ ಬಹುಭಾಷಾ ಸಂಯೋಗವನ್ನು ತಮಗೆ ಅನ್ವಯಿಸಿಕೊಳ್ಳುತ್ತಿರುವ ಜೀವನವನ್ನು ನಡೆಸ್ತಾ ಇದಾರೆ.  ಪ್ರೇಮರಾಹಿತ್ಯದ ಯಾಂತ್ರಿಕ ಬಳಕೆ 'ಪ್ರೇಮ' ಎಂಬ ಪದದ ಬಳಕೆಯಲ್ಲಿ ಎದ್ದು ಕಾಣುವಂತಿದೆ.

ಇತ್ತೀಚೆಗೆ ಸ್ನೇಹಗಳಲ್ಲಿ 'ಐ ಲವ್ ಯು' ಅಂದ್ರೆ ಅಂಥ ಗಂಭೀರ ವಿಚಾರ ಅಲ್ಲ.  ನಾವು ಹಿಂದೆ ವಟಾರದಲ್ಲಿ ಇದ್ದಾಗ ನಾವು ಅಡ್ತಾ ಇದ್ದ ಸಂದರ್ಭದಲ್ಲಿ ನನಗಿಂತ ಕಿರಿಯ ಹುಡುಗಿ 'ಲವ್ ಆಲ್ ಗೇಮ್' ಅಂತ ಕೂಗಿದಳು ಅಂತ ಒಂದು ಅಜ್ಜಿ "ಏನೇ ಇದು ಲವ್ವು ಗಿವ್ವು" ಅಂತ ಹೇಳಿ ಅದು ವಟಾರದ ಹಲವು ಮನೆಗಳ ವ್ಯಾಜ್ಯಕ್ಕೆ ಕಾರಣವಾಗಿತ್ತು".  “ಐ ಲವ್ ಯು ಅಂದ್ರೆ" ಕೆಲವರು ಅಣ್ಣನ ತರಹ, ತಂಗಿ ತರಹ, ಅಮ್ಮನ ತರಹ, ಅಪ್ಪನ ತರಹ, ಅಜ್ಜಿ ತರಹ, ಪ್ರೆಂಡ್ ತರಹ ಅಂತ ಸಮಜಾಯಿಷಿ ಕೊಡ್ತಾರೆ, ಕೊಡ್ತಾನೇ ... ಇರ್ತಾರೆ. ಅವರು ಕೊಡುವ  ವಿವರಣೆ ಎಷ್ಟೊಂದು ಅಂದರೆ "ತಮ್ಮಲ್ಲಿ ಆ ಕುರಿತು ಸಂದೇಹ ಇದೆ ಅಂತ ಮತ್ತೊಬ್ಬರಿಗೆ ಸಂದೇಹವೇ ಉಳಿಯದಿರುವಷ್ಟು!"

ಕೆಲವರು ತುಂಬಾ ಬುದ್ಧಿವಂತರಿರ್ತಾರಂತೆ; ಕೆಲವರು ತುಂಬಾ ಸುಸಂಸ್ಕೃತರು ಇರ್ತಾರಂತೆ; ಕೆಲವರು ಒಂದು ಕ್ಷಣಾನೂ ವೇಸ್ಟ್ ಮಾಡೋಲ್ವಂತೆ; ಅವರಿಗೆ ಈ ಪ್ರೇಮದ ವಿಚಾರ ತಲೆಗೇ ಹೋಗಲ್ವಂತೆ.  ಅವರು ಸಭ್ಯಸ್ಥರಂತೆ.  ಹಾಗಿರುವವರು ಇದಾರಾ? ದೊಡ್ಡ ನಮಸ್ಕಾರ.  ಸಭ್ಯಸ್ಥರಾಗಿಲ್ಲದಿದ್ರೂ ಸಭ್ಯಸ್ಥ ಮುಖವನ್ನು ಲೋಕದೆದುರಿಗೆ ಪ್ರದರ್ಶನಕ್ಕಿಡುವ ರೀತಿಯೇ ಇಂದಿನ ವಿಶ್ವದ ಅತಿ ದೊಡ್ಡ ದುರಂತ.

ಹೆಣ್ಣು ಗಂಡುಗಳಲ್ಲಿನ ಪರಸ್ಪರ ಅಕರ್ಷಣೆ ಒಂದೇ ಕಾರಣಕ್ಕೆ ಎಂದು ಹೇಳುವುದಕ್ಕಾಗುವುದಿಲ್ಲ.  ನನಗೆ ಅದು ಕೇವಲ ವಯಸ್ಸಿಗೆ ಸಂಬಂಧಿಸಿದ್ದು ಎಂದೂ ಅನಿಸುವುದಿಲ್ಲ.   ಕಾಮದ ಪ್ರೇರಣೆಗಳು ಜೀವಗಳಲ್ಲಿ ಸಂಯೋಗದ ಅವಶ್ಯಕತೆ ಹುಟ್ಟಿಸುತ್ತವೆ ನಿಜ.  ಆದರೆ, ಬದುಕಿನಲ್ಲಿನ ಸಕ್ರಿಯ ಚಟುವಟಿಕೆಗಳಲ್ಲಿನ ಆಸಕ್ತಿಗಳು, ಜೀವಿಗಳನ್ನು ಸದಾ ಕಾಮದ ಬಯಕೆಯಲ್ಲಿಯೇ ಉಳಿಯುವ ಅಪಾಯವನ್ನು ತಡೆದು,  ಮನಕ್ಕೆ ಸಂತೃಪ್ತಿ ತರುವ ಹಲವು ಆಶಯಗಳ ಕಡೆಗೆ ಹೊರಳುವಂತೆ ಮಾಡುತ್ತವೆ. 

ಹೀಗಿದ್ದರೂ ಗಂಡಿಗೆ ತಾನು ಮಾಡುವ ಕ್ರಿಯೆ, ತನ್ನ ಚರ್ಯೆ ಮತ್ತು ತನ್ನ ಹಾವಭಾವ ತನ್ನನ್ನು ಆಕರ್ಷಿಸಿದ ಹೆಣ್ಣುಗಳ ಮೆಚ್ಚುಗೆಯ ಹಿಂದೆ ಓಡುತ್ತದೆ.  ಅದೇ ರೀತಿ ಹೆಣ್ಣಲ್ಲಿ ಕೂಡಾ ಅಂಥ ಆಶಯ ಇದ್ದೀತು.  ಆದರೆ ಒಂದು ಗಂಡಿನಲ್ಲಿ ಮೂಡುವ ಒಂದು ಹೆಣ್ಣಿನ ಕುರಿತಾದ ಆಕರ್ಷಕ ಭಾವ, ಆ ಹೆಣ್ಣಿನಲ್ಲಿ ಇದೇ ಗಂಡಿನಲ್ಲಿ ಮೂಡಿರಲೇಬೇಕು ಅಂತಿಲ್ಲ.  ಅದೇ ರೀತಿ ಒಂದು ಹೆಣ್ಣಿನಲ್ಲಿ ಮೂಡುವ ಗಂಡಿನ ಕುರಿತಾದ ಆಕರ್ಷಕ ಭಾವ,  ಆ ಗಂಡಿನಲ್ಲಿ ಈ ಹೆಣ್ಣಿನ ಕುರಿತಾಗಿ ಮೂಡದಿರಬಹುದು.‍ ಕೆಲಮೊಮ್ಮೆ ಪಾರಸ್ಪರಿಕವಾಗಿ ಅದು ಸಾಧ್ಯವಾದಾಗ ಪ್ರೇಮ, ಸಂಬಂಧ, ಪ್ರಣಯ, ವಿವಾಹ ಇತ್ಯಾದಿಯ ಸಂಭವಗಳು ನಡೆಯುತ್ತವೆ. ಇವುಗಳಲ್ಲಿ ಸಹ ಪ್ರೇಮದ ಹರಿವು ತಾತ್ಕಾಲಿಕ ಮಾತ್ರಾ. 

ಈ ಆಕರ್ಷಣೆ ಎಂಬುದಕ್ಕೆ ಕೊನೆ ಇದೆಯೆ? ಈ ಆಕರ್ಷಿಸಬೇಕು ಎಂಬ ಭಾವ,  ಕಾಲದಿಂದ ಕಾಲಕ್ಕೆ ಜೀವಿಗಳಲ್ಲಿ ಹರಿಯುವ ಜೀವಂತಿಕೆಯ, ಚೈತನ್ಯದ ಪ್ರವಹಿನಿ ಅಲ್ಲವೇ? ಆದರೂ ಸಂಪ್ರದಾಯಸ್ಥ ಮನಸ್ಸುಗಳು ಈ ಕುರಿತು ತಪ್ಪಿತಸ್ಥ ಮನೋಭಾವನೆಯಿಂದ ಆತಂಕ ಪಡುತ್ತವೆ. ತಿರಸ್ಕಾರಕ್ಕೊಳಗಾದರೆ ಎಂದು ನೋವನುಭವಿಸುತ್ತವೆ.  ಯಾರೋ ನಿರ್ಬಂಧಿಸುತ್ತಿದ್ದಾರೆ ಎಂದು ಅಸಹನೆಗೊಳ್ಳುತ್ತವೆ.   ಇದು ಕೌಟುಂಬಿಕ ಹಂದರವನ್ನು ಮತ್ತು ಸಮಾಜದ ಒಂದು ಸಮತೋಲನವನ್ನು ಅಸ್ಥಿರಗೊಳ್ಳುವಂತೆ ಮಾಡುತ್ತದೆಯೇ ಎಂಬಂತಹ ಅನೇಕ ಪ್ರಶ್ನೆಗಳನ್ನು ನಿರಂತರ ಹುಟ್ಟುಹಾಕುತ್ತ ಬಂದಿವೆ.

ಎಲ್ಲಕ್ಕಿಂತ ದೊಡ್ಡ ದುರಂತ ಎಂದರೆ ಸಂಸಾರದ ಸಂಬಂಧಗಳಲ್ಲಿ ಇಂದಿನ ಯುಗ ಹಲವು ತಲ್ಲಣಗಳನ್ನು ಸೃಷ್ಟಿಸಿವೆ.  ಗಂಡು ಹೆಣ್ಣು ಇಬ್ಬರೂ ಹೊರಗೆ ಹೋಗಿ ದುಡಿಯುತ್ತಾರೆ.  ದುಡಿಯುವಾಗ, ದುಡಿಯದಿದ್ದಾಗ, ಸಾಮಾಜಿಕ ಸಂಪರ್ಕಗಳಲ್ಲಿದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿದ್ದಾಗ ಹೀಗೆ ಸಾಮೂಹಿಕವಾಗಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರ ನಡುವಣ ಸಂಪರ್ಕಗಳು ಅನಿವಾರ್ಯ.  ಇಲ್ಲಿ ಮನಸ್ಸುಗಳು ಆಕರ್ಷಾಣಾ ರಾಹಿತ್ಯದಲ್ಲಿ  ಇರುತ್ತದೆ ಎಂದು ಹೇಳಲಾಗುವುದಿಲ್ಲ.  ಅನಾರೋಗ್ಯಕರ ಮನಸ್ಸುಗಳು ಸದಾ ಸಂದೇಹಿಸುತ್ತವೆ.  ತಮ್ಮ ಮನಸ್ಸು ಆಕರ್ಷಣೆಗೆ ಒಳಗಾಗುವುದನ್ನು ನೆನೆದು,  ತನ್ನ ಜೀವನ ಸಂಗಾತಿಯೂ ಹಾಗೆಯೇ ಆಕರ್ಷಣೆಗೆ ಸಿಲುಕಿರಬಹುದು ಎಂಬ ಸಂದೇಹದಲ್ಲಿ ನರಳುತ್ತವೆ. ಜೀವನ ಸಂಗಾತಿಯ ನಡೆಯನ್ನು ಪ್ರಶ್ನಿಸುವ, ಸಂಗಾತಿಯ ಆತ್ಮಸ್ವಾತಂತ್ರ್ಯವನ್ನು ಕಸಿದು ನಿರ್ಬಂಧಿಸುವ ಹೀನತೆಗೆ ಇಳಿದು ಬದುಕನ್ನು ಅಸೌಖ್ಯಕರ ವಾತಾವರಣಕ್ಕಿಳಿಸುತ್ತವೆ.

ಒಂದಕ್ಕಿಂತ ಹೆಚ್ಚು ತಲೆಮಾರುಗಳಲ್ಲಿನ ಮನೆಗಳಲ್ಲಿ ಹಲವು ಅಹಂಗಳ ಅಸ್ತಿತ್ವಗಳು, ಮನೆಯಲ್ಲಿನ ಯುವ ದಂಪತಿಗಳು ಆಪ್ತವಾಗಿರುವುದನ್ನು ಸಹಿಸದಷ್ಟು ರೋಗಗ್ರಸ್ಥವಾಗಿರುತ್ತವೆ. ಒಂದೆಡೆ ಕೆಲಸ ಮಾಡುತ್ತಿರುವ ಗಂಡು ಹೆಣ್ಣು ಒಂದೆಡೆ  ಸೇರಿ ಮಾತಾಡುವುದನ್ನೂ ಅನೇಕ ಸಹೋದ್ಯೋಗಿ ಬಳಗಗಳು ಕೀಳು ಭಾವಗಳಲ್ಲಿ ಚಿತ್ರಿಸಿ ಕತೆಯಾಡುತ್ತವೆ. 

ಗಂಡು ಹೆಣ್ಣುಗಳಲ್ಲಿ ಉತ್ತಮ ಗುಣಗಳ ಆಕರ್ಷಣೆ ಎಂಬುದು ಪಾರಸ್ಪರಿಕ ಅಭಿಮಾನಕ್ಕೆ, ಉತ್ತಮ ರೀತಿಯ ಸಾಮಾಜಿಕ ಸೌಹಾರ್ದ ನಡವಳಿಕೆಗಳಿಗೆ ಬೇಕಾದ ಉತ್ತಮ ಸಾಂಸ್ಕೃತಿಕ ಇಂಧನ.  ಪಾರಸ್ಪರಿಕ ಮೆಚ್ಚುಗೆಯ ಅಂಶಗಳೇ ವ್ಯಕ್ತಿಗಳನ್ನಾಗಲಿ, ಸಮಾಜವನ್ನಾಗಲಿ ಅನೈತಿಕತೆಗೆ ದೂಡುತ್ತವೆ ಎಂಬ ಸಣ್ಣ ಮನಸ್ಸಿನಿಂದ ವ್ಯಕ್ತಿತ್ವ ಮತ್ತು ಸಮಾಜಗಳೆರಡೂ ವಿಶಾಲತೆಯತ್ತ ಬೆಳೆಯಬೇಕು.

ಇಲ್ಲಿ ಯಾರೂ, ಯಾವುದನ್ನೂ ಸಿನೀಮಯ ಕಲ್ಪನೆಗಳಿಂದ ಕುಟುಂಬದಲ್ಲಾಗಲಿ, ಪಾರಸ್ಪರಿಕ ಸ್ನೇಹಗಳಲ್ಲಾಗಲಿ, ಸಮಾಜದಲ್ಲಾಗಲಿ, ವಿಶ್ವದಲ್ಲಾಗಲಿ, ಧಾರ್ಮಿಕವಾಗಿಯಾಗಲಿ,  "ನಿರ್ಬಂಧಗಳ ರೂಪದಲ್ಲಿ ಅಥವಾ ಒತ್ತಾಯಗಳ ರೂಪದಲ್ಲಿ" ಹೇರುವಂತಾಗಬಾರದು.  

ಪ್ರೇಮಿಸುವುದು ಅಂದರೆ ನಮಗೆ ಇಷ್ಟವಾಗುವುದರಿಂದ ಆಕರ್ಷಿತರಾಗುವುದು.  ಇದು ಗಂಡಿನಲ್ಲಾಗಲಿ, ಹೆಣ್ಣಿನಲ್ಲಾಗಲಿ ಇರುವ ಮತ್ತು ಇರಲೇಬೇಕಾದ ಸ್ವಾತಂತ್ರ್ಯ.   ಆಕರ್ಷಣೆ ಅನೈತಿಕವಲ್ಲ.  ಒತ್ತಾಯ ಅನೈತಿಕ.  ಪ್ರೇಮಿಸು ಎಂಬ ಒತ್ತಾಯ ಅನೈತಿಕ. ಪ್ರೇಮಿಸಬೇಡ ಎಂದು ಒತ್ತಾಯಿಸುವುದೂ ಅನೈತಿಕವೇ.  ಪ್ರೇಮವೆ ಬಾಳಿನ ದೊಡ್ಡ ಶಕ್ತಿ.

ಪ್ರೇಮರಾಹಿತ್ಯವೇ ಲೋಕದಲ್ಲಿನ ದೊಡ್ಡ ಕಾಯಿಲೆ.  ಪ್ರೇಮರಾಹಿತ್ಯ ಬಹುತೇಕ ಜನರನ್ನು ಮಾನಸಿಕ ರೋಗಿಗಳನ್ನಾಗಿ ಪರಿವರ್ತಿಸುತ್ತಿದೆ. ನೆನಪಲ್ಲಿಡೋಣ, ಪ್ರೇಮ ಎಂಬುದು ಪದವಲ್ಲ.  ಪ್ರೇಮ ಎಂಬುದು ಆಕರ್ಷಣೆ ಮಾತ್ರವಲ್ಲ. ಅದು ಸಿಗುತ್ತೆ ಅಂತ ನಂಬಿ ಪ್ರೇಮದಲ್ಲಿದ್ದೇವೆ ಎಂದು ಭ್ರಮಿಸುತ್ತಿರುವವರೆಲ್ಲ ಎಲ್ಲೋ ತಾವು ಮೋಸ ಹೋಗುತ್ತಿದ್ದೇವೆ, ತಪ್ಪು ಮಾಡುತ್ತಿದ್ದೇವೆ ಇತ್ಯಾದಿ ಭಯ - ಸಂದೇಹಗಳನ್ನೇ ಪ್ರೇಮ ಎಂದುಕೊಂಡಿರುತ್ತಾರೆ. ಪ್ರೇಮ ಎಂಬುದು ನಮ್ಮಲ್ಲಿ ಅರಳಬೇಕು.  ನಾವೇ ಪ್ರೇಮವಾಗಬೇಕು.  ಪ್ರೇಮವೆಂಬುದು ಆತ್ಮ ಸ್ವಾತಂತ್ರ್ಯ.  ನಮ್ಮಲ್ಲಿಲ್ಲದಿರುವುದನ್ನ ನಾವು ಯಾರಿಗೂ ಕೊಡಲಾರೆವು. 

ನಮ್ಮ ಹೃದಯಗಳು ಪ್ರೇಮದಿಂದರಳಲಿ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ