ವಿ. ಶಾಂತಾ
ವಿ. ಶಾಂತಾ
ಮಹಾನ್ ಮಾನವತಾವಾದಿ ವೈದ್ಯರಾಗಿದ್ದ ಡಾ. ವಿ.ಶಾಂತಾ ಅವರು ಕ್ಯಾನ್ಸರ್ ರೋಗ ಪರಿಹಾರ ತಜ್ಞೆ (oncologist) ಆಗಿ, ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿ ಮನುಕುಲಕ್ಕೆ ಅಪಾರ ಸೇವೆ ಸಲ್ಲಿಸಿದವರು.
ಡಾ. ಶಾಂತಾ ಅವರು ಜನಸಾಮಾನ್ಯರಿಗೆ ಆರ್ಥಿಕ ಹೊರೆ ಆಗದಂತೆ, ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯು ಲಭ್ಯವಾಗುವಂತೆ ಮಾಡುವಲ್ಲಿ ಶ್ರಮವಹಿಸಿದರು. ಕ್ಯಾನ್ಸರ್ ರೋಗಿಗಳ ಆರೈಕೆ, ರೋಗದ ಅಧ್ಯಯನ, ಅದರ ತಡೆಗಟ್ಟುವಿಕೆ, ಚಿಕಿತ್ಸೆ ಕುರಿತು ಸಂಶೋಧನೆ, ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆಂಕೊಲಾಜಿಯ ವಿವಿಧ ಉಪವಿಭಾಗಗಳಲ್ಲಿ ತಜ್ಞರು ಮತ್ತು ವಿಜ್ಞಾನಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡರು.
ಶಾಂತಾ ಅವರು 1927ರ ಮಾರ್ಚ್ 11 ರಂದು ಚೆನ್ನೈನ ಮೈಲಾಪುರ್‌ನಲ್ಲಿ ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತರಾದ ಚಿಕ್ಕ ತಾತ (grand uncle) ಸರ್ ಸಿ. ವಿ. ರಾಮನ್ ಮತ್ತು ಚಿಕ್ಕಪ್ಪನವರಾದ ಸುಬ್ರಹ್ಮಣ್ಯ ಚಂದ್ರಶೇಖರ್ ಅವರನ್ನು ಒಳಗೊಂಡ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರು. ಅವರು ನ್ಯಾಷನಲ್ ಗರ್ಲ್ಸ್ ಹೈಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪಡೆದರು. 12 ನೇ ಕಿರಿಯ ವಯಸ್ಸಿನಲ್ಲೇ ಅವರಲ್ಲಿ ವೈದ್ಯೆಯಾಗಿ ಜನಸೇವೆ ಮಾಡುವ ಹಂಬಲ ಮೂಡಿತ್ತು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಪೂರ್ವ ವೈದ್ಯಕೀಯ ಅಧ್ಯಯನವನ್ನು ಮಾಡಿದ ಅವರು 1949ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್., 1952ರಲ್ಲಿ ಡಿ. ಜಿ.ಓ ಮತ್ತು 1955ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ. ಪದವಿಗಳನ್ನು ಗಳಿಸಿದರು.
1954ರಲ್ಲಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರು ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದಾಗ, ಶಾಂತಾ ಅವರು ತಮ್ಮ ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ.) ಮುಗಿಸಿದ್ದರು. ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅವರಿಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯ ಹುದ್ದೆ ಲಭಿಸಿತ್ತು. ಆದರೆ ಶಾಂತಾ ಅವರು ತಮ್ಮ ಕುಟುಂಬ ಮತ್ತು ಆಪ್ತ ಬಂಧುಗಳ ಅಸಮಾಧಾನಗಳ ನಡುವೆ ಸಂಬಳವೇ ಇಲ್ಲದಿದ್ದಾಗಿಯೂ ಕ್ಯಾನ್ಸರ್ ಇನ್ಸ್ಟಿಟ್ಯೂಟ್‍ನಲ್ಲಿ ಸೇವೆಗೆ ನಿಂತರು.
ಅಂದಿನ ದಿನದಲ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಕೇವಲ 12 ಹಾಸಿಗೆಗಳ ಒಂದು ಸಣ್ಣ ಕಾಟೇಜ್ ಆಸ್ಪತ್ರೆಯಾಗಿ ಆರಂಭಗೊಂಡಿತು. ಅಲ್ಲಿದ್ದದ್ದು ಕನಿಷ್ಠ ಉಪಕರಣಗಳು ಮತ್ತು ಕೇವಲ ಇಬ್ಬರು ವೈದ್ಯರು. ಒಬ್ಬರು ಶಾಂತಾ ಹಾಗೂ ಮತ್ತೊಬ್ಬರು ಕೃಷ್ಣಮೂರ್ತಿ. ಮೊದಲ ಮೂರು ವರ್ಷಗಳ ಕಾಲ ಅವರು ಸಂಬಳವಿಲ್ಲದೆ ಗೌರವ ಸಿಬ್ಬಂದಿಯಾಗಿ ಕೆಲಸ ಮಾಡಿದರು. ನಂತರದಲ್ಲಿ ಸಂಸ್ಥೆಯು ಅವರಿಗೆ ತಿಂಗಳಿಗೆ ರೂ.200 ಮಾಸಿಕ ವೇತನ ಮತ್ತು ಕ್ಯಾಂಪಸ್‌ನಲ್ಲಿ ವಸತಿ ನೀಡಿತು. 13 ಏಪ್ರಿಲ್ 1955 ರಂದು ಕ್ಯಾಂಪಸ್‌ಗೆ ಬಂದ ಅವರು 19 ಜನವರಿ 2021 ರಂದು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾಗುವವರೆಗೂ, 66 ವರ್ಷಗಳ ಕಾಲ ಅಲ್ಲಿಯೇ ಇದ್ದರು.
ಡಾ. ಶಾಂತಾ ಅವರು ತಮ್ಮ 60 ವರ್ಷಗಳಿಗೂ ಮೀರಿದ ತಮ್ಮ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. 1980 - 1997ರ ಅವಧಿಯಲ್ಲಿ ಸಂಸ್ಥೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದರು. ರೋಗಿಗಳ ಆರೈಕೆಯ ಗುಣಮಟ್ಟದ ಬಗ್ಗೆ ಅವರು ಆಪ್ತ ಕಾಳಜಿ ವಹಿಸಿದ್ದರು. ವೈದ್ಯರ ಪಾತ್ರವು ಚಿಕಿತ್ಸೆ ನೀಡುವುದನ್ನೂ ಮೀರಿದ್ದು, ಅಲ್ಲಿ ಮಾನವೀಯ ಕಾಳಜಿ ಅತ್ಯಂತ ಮುಖ್ಯವಾದದ್ದು ಎಂದು ನಂಬಿ ನಡೆದಿದ್ದರು. ಹೀಗಾಗಿ ಅವರು ಚಿಕಿತ್ಸೆಯನ್ನು ಮೀರಿದ ಹಲವಾರು ನೀತಿ ಸಂಹಿತೆಗಳನ್ನು ಅಭಿವೃದ್ಧಿಪಡಿಸಿ ರೋಗಿಗಳ ಸಮಗ್ರ ಆರೈಕೆಗಳಿಗೆ ಅಗತ್ಯದ ಮಾನವೀಯ ಸಂವೇದನಾಶೀಲ ವಾತಾವರಣವನ್ನು ನಿರ್ಮಿಸಿದ್ದರು. ರೋಗಿಗಳ ಆರೈಕೆ ಮತ್ತು ರೋಗದ ಅಧ್ಯಯನದ ಜೊತೆಗೆ, ಅವರು ಇನ್ಸ್ಟಿಟ್ಯೂಟ್ನಲ್ಲಿ ತಜ್ಞರು ಮತ್ತು ವಿಜ್ಞಾನಿಗಳ ತಂಡವನ್ನು ಬೆಳೆಸುವತ್ತ ಗಮನ ಹರಿಸಿದರು. ಅವರು ಕ್ಯಾನ್ಸರ್‌ನ ಆರಂಭಿಕ ಪತ್ತೆ ಮತ್ತು ರೋಗದ ಬಗ್ಗೆ ಸಾರ್ವಜನಿಕರಲ್ಲಿದ್ದ ಗ್ರಹಿಕೆಯನ್ನು ಬದಲಾಯಿಸುವ ಅಗತ್ಯತೆಯ ಪ್ರತಿಪಾದಕರಾಗಿದ್ದರು. ವಿಶೇಷವಾಗಿ ರೋಗಕ್ಕೆ ಸಂಬಂಧಿಸಿದಂತೆ ತೀವ್ರ ಭಯ ಮತ್ತು ಹತಾಶ ಭಾವಗಳು ಮೂಡದಂತಹ ತಿಳಿಯಾದ ವಾತಾವರಣ ನಿರ್ಮಾಣಕ್ಕೆ ಅವರು ಆದ್ಯತೆ ನೀಡಿದ್ದರು.
ಡಾ. ಶಾಂತಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಸಲಹಾ ಸಮಿತಿಯೂ ಸೇರಿದಂತೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ಕುರಿತಾದ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ತಮಿಳುನಾಡು ರಾಜ್ಯ ಆರೋಗ್ಯ ಯೋಜನಾ ಆಯೋಗದ ಸದಸ್ಯರಾಗಿದ್ದರು.
ನ್ಯಾಶನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್‌ನ ಚುನಾಯಿತ ಫೆಲೊ ಆಗಿದ್ದ ಡಾ. ಶಾಂತಾ ಅವರಿಗೆ 1986ರಲ್ಲಿ ಪದ್ಮಶ್ರೀ ಪ್ರಶಸ್ತಿ, 2006ರಲ್ಲಿ ಪದ್ಮಭೂಷಣ ಮತ್ತು 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಸಂದಿದ್ದವು. 2005 ರಲ್ಲಿ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತ್ತು. ಆ ಪ್ರಶಸ್ತಿಯನ್ನು ಅವರು ತಮ್ಮ ಸಂಸ್ಥೆಗೆ ಅರ್ಪಿಸಿದ್ದರು.
ಮಹಾನ್ ಮಾನವತಾ ಮುಖಿ ವೈದ್ಯರಾಗಿದ್ದ ಡಾ. ಶಾಂತಾ ಅವರು 93 ನೇ ವಯಸ್ಸಿನಲ್ಲಿ 2021ರ ಜನವರಿ 19ರಂದು ನಿಧನರಾದರು.
On the birth anniversary of great oncologist who dedicated her entire life for the service of mankind Dr. V. Shantha
ಕಾಮೆಂಟ್‌ಗಳು