ಮಾಲಿನಿ ಮಲ್ಯ
ಮಾಲಿನಿ ಮಲ್ಯ
ಪ್ರಖ್ಯಾತ ಬರಹಗಾರ್ತಿ ಮತ್ತು ಡಾ. ಶಿವರಾಮ ಕಾರಂತರ ಅಗಾಧತೆಗೆ ಅಕ್ಷರರೂಪಿಯಾಗಿದ್ದ ಮಾಲಿನಿ ಮಲ್ಯ ನಿಧನರಾಗಿದ್ದಾರೆ. ಅವರಿಗೆ 72 ವರ್ಷವಾಗಿತ್ತು.
ಮಾಲಿನಿ ಮಲ್ಯ 1951ರ ಜೂನ್ 29ರಂದು ಜನಿಸಿದರು. ಮಾಲಿನಿ ಮಲ್ಯ ಅವಿವಾಹಿತರಾಗಿದ್ದರು. ಕೆಲ ಕಾಲದಿಂದ ಅನಾರೋಗ್ಯದಿಂದ್ದ ಮಾಲಿನಿ ಮಲ್ಯ ಅವರು ಸುಮಾರು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಸಂಬಂಧಿಕರೊಬ್ಬರ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.
ಉಡುಪಿಯಲ್ಲಿ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದ ಕೋಟದ ಮಾಲಿನಿ ಮಲ್ಯ ಅವರನ್ನು ಕುಟುಂಬದ ಸ್ನೇಹಿತರೊಬ್ಬರು ಕಾರಂತರು ಬರೆಯುತಿದ್ದ ಕಾದಂಬರಿಯನ್ನು ಶೀಘ್ರಲಿಪಿಯಲ್ಲಿ ಬರೆದು ಬೆರಳಚ್ಚು ಮಾಡಲು ನೇಮಿಸಿದ್ದರು. ಹೀಗೆ ಕಾರಂತರ ಸಂಪರ್ಕಕ್ಕೆ ಬಂದ ಮಾಲಿನಿ ಮಲ್ಯ ಕೊನೆಯ ವರೆಗೂ ಅವರ ಆಪ್ತಸಹಾಯಕಿಯಾಗಿ ಕಾರ್ಯನಿರ್ವಹಿಸಿದ್ದರು. ಸ್ವಯಂ ಲೇಖಕಿಯೂ ಆಗಿದ್ದ ಮಾಲಿನಿ ಮಲ್ಯ, ಅವರು ಸ್ವಂತ ಕೃತಿಗಳನ್ನೂ ಮೂಡಿಸಿದ್ದಲ್ಲದೆ ಕಾರಂತರ ಕುರಿತಾಗಿ 'ನಾ ಕಂಡ ಕಾರಂತರು' ಸೇರಿದಂತೆ ಅನೇಕ ಕೃತಿ ಪ್ರಕಟಿಸಿದ್ದರು. ಕಾರಂತರ ಅನೇಕ ಚಿಂತನೆಗಳನ್ನು ಹಲವಾರು ರೂಪಗಳಲ್ಲಿ ಸಂಕಲನ ಮಾಡಿ ಹೊರತಂದಿದ್ದರು. ಶಿವರಾಮ ಕಾರಂತ ಕೈಪಿಡಿ, ಶಿವರಾಮ ಕಾರಂತರ ಲೇಖನ ಸಂಪುಟಗಳು, ಚಿಣ್ಣರ ಲೋಕದಲ್ಲಿ ಕಾರಂತರು, ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲಪ್ರಪಂಚ-3 ಮುಂತಾದವು ಇವುಗಳಲ್ಲಿ ಸೇರಿವೆ.
'ಬಾಳಿಗೊಂದು ಉತ್ತರ' ಎಂಬುದು ಮಾಲಿನಿ ಮಲ್ಯ ಅವರ ಆತ್ಮಕಥನ. ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ) ಮುಂತಾದವು ಮಾಲಿನಿ ಅವರ ಸ್ವತಂತ್ರ ಕೃತಿಗಳಲ್ಲಿ ಸೇರಿವೆ.
ಮಾಲಿನಿ ಮಲ್ಯ ಅವರು ಕಾರಂತರ ನಿಧನದ ನಂತರ ಅವರು ಕೊನೆಯ ದಿನಗಳಲ್ಲಿ ವಾಸವಾಗಿದ್ದ ಸಾಲಿಗ್ರಾಮದ ಮನೆಯನ್ನು ಕಾರಂತರ ವಸ್ತುಸಂಗ್ರಹಾಲಯವನ್ನಾಗಿ ಮಾಡಿ ಅದರಲ್ಲಿ ಕಾರಂತರು ಬಳಸುತಿದ್ದ ವಸ್ತುಗಳು, ಅವರ ಸಾಹಿತ್ಯ ಹಾಗೂ ಸಾಹಿತ್ಯೇತರ ವಸ್ತುಗಳನ್ನು ಸಂರಕ್ಷಿಸಿ ಆಸಕ್ತರಿಗೆ ಅವುಗಳನ್ನು ವಿವರಣೆಯೊಂದಿಗೆ ತೋರಿಸುತಿದ್ದರು. ಕಾರಂತರ ಎಲ್ಲಾ ಕೃತಿಗಳ ಹಕ್ಕುಸಾಮ್ಯ ಹೊಂದಿದ್ದ ಅವರು ಕಾರಂತರ ಕೃತಿಗಳನ್ನು ಮರುಮುದ್ರಿಸಿ ನಿರಂತರವಾಗಿ ಓದುಗರಿಗೆ ಲಭ್ಯವಾಗುವಲ್ಲಿ ಶ್ರಮಿಸಿದ್ದರು. ಡಾ.ಶಿವರಾಮ ಕಾರಂತ ಪತಿಷ್ಠಾನವನ್ನು ಸ್ಥಾಪಿಸಿದ್ದರು.
ಮಾಲಿನಿ ಮಲ್ಯ ಅವರಿಗೆ ಬೆಂಗಳೂರಿನ ಶಾಶ್ವತಿ ಸಂಸ್ಥೆಯಿಂದ ’ಸದೋದಿತ ಸಾಹಿತ್ಯ ಪ್ರಶಸ್ತಿ’ ಸಂದಿತ್ತು. ಅಗಲಿದ ಕರ್ಮಯೋಗಿಣಿಗೆ ನಮನ.
ಮಾಲಿನಿ ಮಲ್ಯ 2023ರ ಮಾರ್ಚ್ 28ರಂದು ನಿಧನರಾದರು.
Respects to departed soul writer Malini Mallya
ಕಾಮೆಂಟ್‌ಗಳು